Tuesday, 26th November 2024

Pavagada News: ಅನೈತಿಕ ಚಟುವಟಿಕೆ ತಾಣವಾದ 13 ಕೋಟಿ ವೆಚ್ಚದ ಸರ್ಕಾರಿ ಶಾಲಾ ಕಟ್ಟಡ; ಪಾಳು ಬಿದ್ದು ಶಿಕ್ಷಣ ಕೇಂದ್ರವಾಗುವ ಕನಸು ಭಗ್ನ!

Pavagada News

ಪಾವಗಡ: ರಾಜಕೀಯ ಮೇಲಾಟದಿಂದಾಗಿ 13 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಸರ್ಕಾರಿ ಶಾಲಾ ಕಟ್ಟಡ (Adarsha Vidyalaya) ಸದ್ಯ ಅನೈತಿಕ ಚಟುವಟಿಕೆಗಳ ತಾಣವಾಗಿದ್ದು, ಬೆಲೆ ಬಾಳುವ ವಸ್ತುಗಳು ನಾಪತ್ತೆಯಾಗುತ್ತಿವೆ. ಇನ್ನು ಕಟ್ಟಡದ ಒಳಭಾಗದಲ್ಲಿ ಗಿಡಗಂಟಿಗಳು ಆಳುದ್ದ ಬೆಳೆದು ಕಾಡು ಪ್ರಾಣಿಗಳ ಅವಾಸಸ್ಥಾನವಾಗಿ ಮಾರ್ಪಟ್ಟಿದೆ. ಆದರೂ ತಾತ್ಕಾಲಿಕವಾಗಿ ಸರ್ಕಾರಿ ಕಟ್ಟಡದಲ್ಲಿರುವ ಶಾಲೆಯನ್ನು ಸ್ಥಳಾಂತರ ಮಾಡಲು ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿರುವುದರಿಂದ ವಿದ್ಯಾ ದೇಗುಲವಾಗಬೇಕಿದ್ದ ಕಟ್ಟಡ ಇದೀಗ ಪಾಳುಬಿದ್ದಿದೆ.

ನೂತನ ಶಾಲಾ ಕಟ್ಟಣ ಅನೈತಿಕ ಚಟುವಟಿಕೆಗಳಿಗೆ ತಾಣವಾಗಿದೆ ಎಂದು ಗ್ರಾಮಸ್ಥರು ದೂರು ನೀಡಿದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಮಧುಗಿರಿ ಉಪವಿಭಾಗಾಧಿಕಾರಿ ಶಿವಪ್ಪ ಗೋಟೋರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪಾವಗಡ ತಾಲೂಕಿನ ಅರಸೀಕೆರೆ ಗ್ರಾಮದಲ್ಲಿ 8 ವರ್ಷಗಳ ಹಿಂದೆ ಆದರ್ಶ ವಿದ್ಯಾಲಯಕ್ಕಾಗಿ 13 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿದ್ದು, ಇದುವರೆಗೂ ಪಾವಗಡ ನಗರದಲ್ಲಿನ ಕಟ್ಟಡದಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ ಸ್ಥಳಾಂತರಗೊಳ್ಳದೆ ಆದರ್ಶ ವಿದ್ಯಾಲಯ ಕಟ್ಟಡ ಅನೈತಿಕ ಚಟುವಟಿಕೆಗಳ ತಾಣವಾಗಿ, ಬಾಗಿಲು, ಕಿಟಕಿಗಳು ಗೆದ್ದಲು ಹಿಡಿದು ಹಾಳಾಗಿವೆ.

ಬೆಲೆ ಬಾಳುವ ವಸ್ತುಗಳು ಕಳುವಾಗಿದ್ದು, ಕಟ್ಟಡದ ಒಳಭಾಗದಲ್ಲಿ ಗಿಡಗಂಟಿಗಳು ಆಳುದ್ದ ಬೆಳೆದು ಕಾಡು ಪ್ರಾಣಿಗಳ ಅವಾಸಸ್ಥಾನವಾಗಿ ಮಾರ್ಪಟ್ಟಿದೆ. ಕಿಟಕಿ ಗಾಜು, ಫ್ಯಾನ್ ಇನ್ನಿತರೆ ಬೆಲೆ ಬಾಳುವ ವಸ್ತುಗಳು ನಾಪತ್ತೆಯಾಗಿವೆ ಎಂಬುದು ನಾಗರಿಕರ ದೂರಾಗಿದೆ.

ತಾಲೂಕಿಗೆ ಆದರ್ಶ ಶಾಲೆ ಮುಂಜೂರು ಆದಾಗ ಇದ್ದ ಸರ್ಕಾರಿ ಕಟ್ಟಡವೊಂದರಲ್ಲಿ ತಾತ್ಕಾಲಿಕವಾಗಿ ಪ್ರಾರಂಭ ಮಾಡಲಾಗಿತ್ತು. ಅನಂತರ ನಿವೇಶನಕ್ಕಾಗಿ ಹುಡುಕಾಟ ಪ್ರಾರಂಭವಾಯಿತು 6 ಎಕರೆ ಜಾಗ ಸಿಗದೆ ಇದ್ದಾಗ ಅರಸೀಕೆರೆ ಗ್ರಾಮದವರು 13ಎಕರೆ ಜಾಗವನ್ನು ರಾಜ್ಯಪಾಲರ ಹೆಸರಿಗೆ ನೊಂದಾಯಿಸಿದ್ದಾರೆ. ಹೀಗಾಗಿ ಸರ್ಕಾರ ಆ ಜಾಗದಲ್ಲಿ ಕಟ್ಟಡ ಕಟ್ಟಲು 14 ಕೋಟಿ ಹಣ ಮಂಜೂರು ಮಾಡಿ, ಕಟ್ಟಡವೂ ನಿರ್ಮಾಣವಾದ ನಂತರ ಅಲ್ಲಿನ ಶಿಕ್ಷಕರ ಚಿತಾವಣೆಯಿಂದಾಗಿ ಮತ್ತು ನಗರದ ವಿದ್ಯಾರ್ಥಿಗಳ ಪೋಷಕರು ನ್ಯಾಯಾಲಯದ ಮೆಟ್ಟಿಲು ಏರಿ ಸ್ಥಳಾಂತರಕ್ಕೆ ತಡೆ ಆಜ್ಞೆ ತಂದರು. ತದನಂತರದಲ್ಲಿ ಹೆಚ್ಚುವರಿ ನ್ಯಾಯಾಲಯ ಮೂಲಭೂತ ಸೌಲಭ್ಯ ಇರುವೆಡೆಗೆ ಸ್ಥಳಾಂತರಿಸಬೇಕು ಎಂದು ಆದೇಶ ಮಾಡಿದ್ದರು. ಇದರಿಂದ ಸದ್ಯ ಯಾವುದೇ ಮೂಲಭೂತ ಸೌಲಭ್ಯಗಳು ಇಲ್ಲದಿರುವ ಕಟ್ಟಡಗಳಲ್ಲಿ ಶಾಲೆ ನಡೆಸಲಾಗುತ್ತಿದೆ.

ಪಾಳು ಬಿದ್ದ ಸುಸಜ್ಜಿತ ಕಟ್ಟಡ
ಸ್ಥಳೀಯವಾಗಿ ಕೆಲಸ ಮಾಡುವ ಶಿಕ್ಷಕರ ಚಿತಾವಣೆ ಮತ್ತು ರಾಜಕಾರಣಿಗಳ ಮೇಲಾಟದಲ್ಲಿ 13 ಕೋಟಿವೆಚ್ಚದಲ್ಲಿ ನಿರ್ಮಾಣಗೊಂಡಿರುವ ಸುಸಜ್ಜಿತ ಕಟ್ಟಡ ಪಾಳು ಬಿದ್ದಿದ್ದು, ಶಿಕ್ಷಣ ಕೇಂದ್ರವಾಗಿ ಬೆಳೆಯಬೇಕಾಗಿದ್ದ ಅರಸೀಕೆರೆ ಗ್ರಾಮದ ಕನಸು ಭಗ್ನವಾಗಿದೆ. ಇದಲ್ಲದೆ ಇದೇ ಜಾಗದಲ್ಲಿ ಆರ್‌ಎಂಎಸ್‌ಸಿ ಶಾಲೆಯ ಕಟ್ಟಡವನ್ನು ಕಟ್ಟಿದ್ದು, ಈ ಶಾಲೆಯೂ ಸ್ಥಳಾಂತರವಾಗದೆ ಪಾವಗಡ ನಗರದಲ್ಲಿ ಕಸ್ತೂರಿ ಭಾ ಶಾಲೆಯಲ್ಲೇ ಅದರ ಪೀಠೋಪಕರಣಗಳು ಹುಳು ತಿನ್ನುತ್ತಾ ಬಿದ್ದಿವೆ.

ಮಕ್ಕಳು ಮೂಲಭೂತ ಸೌಲಭ್ಯವಿಲ್ಲದೆ ಇದ್ದರೂ ಅನಿವಾರ್ಯವಾಗಿ ಉಳಿದುಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ. ಹೀಗಾಗಿ ಪಾವಗಡ ತಾಲೂಕಿನ ಅದರ್ಶಶಾಲೆಗೆ ಗ್ರಹಣ ಹಿಡಿದ ಶಾಲೆಯಾಗಿ ಮಾರ್ಪಟ್ಟಿದೆ. ಈಗಲಾದರೂ ಚುನಾಯಿತ ಪ್ರತಿನಿಧಿಗಳು ಆಸಕ್ತಿ ವಹಿಸಿ ಶಾಲೆ ಸ್ಥಳಾಂತರ ಮಾಡುವ ಮೂಲಕ ಕಟ್ಟಡದ ಸದುಪಯೋಗ ಪಡಿಸಿಕೊಳ್ಳುವ ಮೂಲಕ. ಗ್ರಾಮೀಣ ಮಕ್ಕಳಿಗೆ ಆದರ್ಶಶಾಲೆಯಲ್ಲಿ ಓದುವ ಕನಸನ್ನು ನನಸಾಗಿಸಬೇಕು ಎಂಬುದೇ ಸ್ಥಳೀಯರ ನಿರೀಕ್ಷೆಯಾಗಿದೆ.

ಮಧುಗಿರಿ ಉಪವಿಭಾಗಾಧಿಕಾರಿ ಶಿವಪ್ಪ ಗೋಟೋರಿ ಅವರು ಪಾವಗಡ ನಗರದಲ್ಲಿ ಶಾಲೆ ನಡೆಯುತ್ತಿರುವ ಸ್ಥಳಕ್ಕೆ ಮತ್ತು ಅರಸೀಕೆರೆ ಗ್ರಾಮದಲ್ಲಿ ನಿರ್ಮಾಣಗೊಂಡಿರುವ ಕಟ್ಟಡವನ್ನು ವೀಕ್ಷಿಸಿ ಜಿಲ್ಲಾಧಿಕಾರಿಗಳ ಗಮನಕ್ಕೆ ತರುತ್ತೇನೆ ಎಂದು ತಿಳಿಸಿದ್ದಾರೆ. ಈ ವೇಳೆ ಮಧುಗಿರಿ ಡಿ.ಡಿ.ಪಿ.ಐ. ಗಿರಿಜಮ್ಮ, ತಹಸೀಲ್ದಾರ್ ವರದರಾಜೆ, ಕ್ಷೇತ್ರ ಶಿಕ್ಷಣಾಧಿಕಾರಿ ಇಂದಿರಮ್ಮ, ಅರಸೀಕೆರೆ ಗ್ರಾಮಸ್ಥರು ತಿಪ್ಪೆಸ್ವಾಮಿ ಇತರರು ಇದ್ದರು.

(ವರದಿ: ಇಮ್ರಾನ್ ಉಲ್ಲಾ ಪಾವಗಡ)