ಬೆಂಗಳೂರು: ಹೊಸ ವರ್ಷದಿಂದ ಹೊಸ ಬದುಕು ಕಟ್ಟಿಕೊಳ್ಳಲು ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆಳತಿ ಪವಿತ್ರಾ ಗೌಡ (Pavithra Gowda) ಸಜ್ಜಾಗಿದ್ದಾರೆ. ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ ಜೈಲು ಸೇರಿದ್ದ ಪವಿತ್ರಾ ಗೌಡ ಸುಮಾರು 6 ತಿಂಗಳ ನಂತರ ರಿಲೀಸ್ ಆಗಿದ್ದು, ಮತ್ತೆ ತಮ್ಮ ಒಡೆತನದ ಫ್ಯಾಷನ್ ಡಿಸೈನ್ ಶೋರೂಂ ಆಗಿರುವ ರೆಡ್ ಕಾರ್ಪೆಟ್ ಶಾಪ್ ರೀ ಓಪನ್ ಮಾಡಲು ಸಿದ್ದತೆ ನಡೆಸಿದ್ದಾರೆ. ಬೆಂಗಳೂರಿನ ಅರ್.ಅರ್. ನಗರದಲ್ಲಿ ರೆಡ್ ಕಾರ್ಪೆಟ್ ಶೋರೂಂ ಇದ್ದು, ಪವಿತ್ರಾ ಈಗಾಗಲೇ ಬಟ್ಟೆ ಅಂಗಡಿಗೆ ರಾ ಮೇಟಿರಿಯಲ್ ಖರೀದಿಯಲ್ಲಿ ತೊಡಗಿದ್ದಾರೆ.
ಮಾತ್ರವಲ್ಲ ಹೊಸ ವರ್ಷದ ಮೊದಲ ದಿನ ಅರ್.ಅರ್. ನಗರದ ತಮ್ಮ ಮನೆಯಲ್ಲಿ ಅವರು ಪೂಜೆ ಮಾಡಿಸಿದ್ದಾರೆ. ಧನುರ್ಮಾಸ ಮುಗಿದ ನಂತರ ರೆಡ್ ಕಾರ್ಪೆಟ್ ರೀ ಓಪನ್ ಮಾಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಅಂದರೆ ಜನವರಿ 15ರಿಂದ ರೆಡ್ ಕಾರ್ಪೆಟ್‌ನಲ್ಲಿ ಹಿಂದಿನಂತೆ ಕಾರ್ಯ ನಿರ್ವಹಿಸಲಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ1 ಆರೋಪಿಯಾಗಿ ಪವಿತ್ರಾ ಅವರು ಜೈಲು ಸೇರಿದ ನಂತರ ಅವರ ಗೆಳತಿ ಸಮತಾ ಕೆಲವು ತಿಂಗಳ ಕಾಲ ರೆಡ್ ಕಾರ್ಪೆಟ್ ಶೋರೂಂ ಮುನ್ನಡೆಸುತ್ತಿದ್ದರು. ಆದರೆ ಕಳೆದ ಅಕ್ಟೋಬರ್‌ನಿಂದ ಶೋರೋಂ ಕಂಪ್ಲೀಟ್ ಮುಚ್ಚಿದೆ. ಇದೀಗ ಜಾಮೀನು ಮೂಲಕ ಹೊರಗೆ ಬಂದಿರುವ ಪವಿತ್ರ ಗೌಡ ರೆಡ್ ಕಾರ್ಪೆಟ್ ಶಾಪ್ ಪುನರಾರಂಭಿಸುವ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ.
ಹೊಸ ವರ್ಷದಿಂದಲೇ ಪೂರ್ವ ಸಿದ್ದತೆ ನಡೆಸಿರುವ ಪವಿತ್ರಗೌಡ ಅವರು ಈಗಾಗಲೇ ಮುಚ್ಚಿದ್ದ ರೆಡ್ ಕಾರ್ಪೆಟ್ ಶಾಪ್ ಅನ್ನು ಕ್ಲೀನ್ ಮಾಡಿಸಿದ್ದಾರೆ. ತಮ್ಮ ಬಹು ದಿನಗಳ ಕನಸಾದ ರೆಡ್ ಕಾರ್ಪೆಟ್ ಶಾಪ್ ಅನ್ನು ಪವಿತ್ರಾ ಗೌಡ 2022ರಲ್ಲಿ ಆರಂಭಿಸಿದ್ದರು. ಇದಕ್ಕಾಗಿ 50 ಲಕ್ಷ ರೂ. ಬಂಡವಾಳ ಹೂಡಿಕೆ ಮಾಡಲಾಗಿದೆ.
ಇನ್ನು ಹೊಸ ವರ್ಷದಂದು ಆರ್.ಆರ್.ನಗರ ಮನೆಯ ಜತೆಗೆ ಬನಶಂಕರಿ ದೇವಸ್ಥಾನದಲ್ಲಿಯೂ ಅವರು ವಿಶೇಷ ಪೂಜೆ ಮಾಡಿಸಿದ್ದಾರೆ. ಸದ್ಯ ರಘುವನಹಳ್ಳಿಯ ಅಮ್ಮನ ಫ್ಲಾಟ್‌ನಲ್ಲಿ ವಾಸವಾಗಿದ್ದಾರೆ. ಜಾಮೀನು ಸಿಕ್ಕ ಬಳಿಕ ನೇರ
ಅಮ್ಮನ ಮನೆಗೆ ಹೋಗಿದ್ದ ಪವಿತ್ರಾ ತುಂಬಾ ದಿನಗಳ ನಂತರ ಜ. 1ರಂದು ಅರ್.ಅರ್. ನಗರದ ಮನೆಗೆ ಹೊಸ ವರ್ಷದಂದು ಭೇಟಿ ನೀಡಿದ್ದರು.
6 ತಿಂಗಳ ಹಿಂದೆ ಜೈಲು ಸೇರಿದ್ದ ದರ್ಶನ್ ಗೆಳತಿ ಪವಿತ್ರಾ ಗೌಡ ಮತ್ತು ಇತರರಿಗೆ ಡಿ.16ರಂದು ಹೈಕೋರ್ಟ್‌ನ ನ್ಯಾ. ಎಸ್.ವಿಶ್ವಜಿತ್ ಶೆಟ್ಟಿ ಅವರಿದ್ದ ಏಕಸದಸ್ಯ ಪೀಠ ಜಾಮೀನು ಮಂಜೂರು ಮಾಡಿತ್ತು. ಅವರು ಡಿ. 17ರಂದು ಬೆಳಗ್ಗೆ ಜೈಲಿನಿಂದ ಬಿಡುಗಡೆಯಾಗಿದ್ದರು. ದರ್ಶನ್ ಪರಿಚಯವಾಗುವ ಮುನ್ನ ಪವಿತ್ರಾ ಅವರು ಸಂಜಯ್ ಸಿಂಗ್ ಎಂಬುವರನ್ನು ಮದುವೆಯಾಗಿದ್ದರು. ಆದರೆ ಈಗ ಸಂಜಯ್ ಪವಿತ್ರಾ ಜತೆಗಿಲ್ಲ. ಡಿವೋರ್ಸ್ ಆಗಿದೆ. 12 ವರ್ಷಗಳ ಹಿಂದೆ ಬೆಂಗಳೂರು ತೊರೆದ ಸಂಜಯ್ ಸಿಂಗ್ ಹುಟ್ಟೂರು ಉತ್ತರ ಪ್ರದೇಶದಲ್ಲಿ ಸ್ವಂತ ಶಾಲೆ ನಡೆಸುತ್ತಿದ್ದಾರೆ.
ಈ ಸುದ್ದಿಯನ್ನೂ ಓದಿ: Pavithra Gowda: ಬರೋಬ್ಬರಿ 6 ತಿಂಗಳ ಬಳಿಕ ಜೈಲಿನಿಂದ ಪವಿತ್ರಾ ಗೌಡ ರಿಲೀಸ್