Friday, 22nd November 2024

ಕೃಷ್ಣರಾಜಪೇಟೆ ತಾಲ್ಲೂಕಿನಲ್ಲಿ ಶಾಂತಿಯುತ ಮತದಾನ

ಕೆ.ಆರ್‌.ಪೇಟೆ: ಕೃಷ್ಣರಾಜಪೇಟೆ ತಾಲ್ಲೂಕಿನ 33 ಗ್ರಾಮ ಪಂಚಾಯಿತಿಗಳ 587 ಸದಸ್ಯರ ಆಯ್ಕೆಗಾಗಿ ನಡೆದ ಗ್ರಾಮ ಪಂಚಾ ಯತಿ ಚುನಾವಣೆಯು ಯಾವುದೇ ಗಲಾಟೆ ಗದ್ದಲಗಳಿಲ್ಲದೇ ಶಾಂತಿಯುತವಾಗಿ ನಡೆಯಿತು.

ರಂಗನಾಥಪುರ ಕ್ರಾಸ್ ಗ್ರಾಮ ಪಂಚಾಯತಿಗೆ ಸೇರಿದ ಬಿಲ್ಲೇನಹಳ್ಳಿ ಗ್ರಾಮದಲ್ಲಿ ತಾಲ್ಲೂಕು ಪಂಚಾಯತಿ ಸದಸ್ಯ ದಿನೇಶ್ ಬೆಂಬಲಿಗರು ಹಾಗೂ ಬಿಜೆಪಿ ಬೆಂಬಲಿತ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದು ಕೈಕೈ ಮಿಲಾ ಯಿಸುವ ವೇಳೆಗೆ ಸರಿಯಾಗಿ ಪೋಲಿಸರ ಮಧ್ಯಪ್ರದೇಶದಿಂದಾಗಿ ಗಲಾಟೆ ಯನ್ನು ನಿಯಂತ್ರಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದ ಘಟನೆಯನ್ನು ಹೊರತು ಪಡಿಸಿದರೆ ಬೇರೆ ಯಾವುದೇ ಗಲಾಟೆಗಳು ನಡೆದ ಬಗ್ಗೆ ವರದಿಯಾಗಿಲ್ಲ…

ಕೆ.ಆರ್.ಪೇಟೆ ತಾಲ್ಲೂಕಿನ ಹಿರಿಯ ರಾಜಕೀಯ ಮುತ್ಸದ್ಧಿ ಮಾಜಿಸ್ಪೀಕರ್ ಕೃಷ್ಣ ತಮ್ಮ ಧರ್ಮಪತ್ನಿ ಇಂದ್ರಮ್ಮ ಅವರ ಸಮೇತ ವಾಗಿ ಸಂತೇಬಾಚಹಳ್ಳಿ ಹೋಬಳಿಯ ಸೋಮೇನಹಳ್ಳಿ ಮತಗಟ್ಟೆಯಲ್ಲಿ ಮತ ಚಲಾಯಿಸಿದರೆ ಮಾಜಿಶಾಸಕ ಬಿ.ಪ್ರಕಾಶ್ ತಮ್ಮ ಪತ್ನಿ ಜಿ.ಪಂ ಮಾಜಿ ಸದಸ್ಯೆ ಹೇಮಾ ಅವರೊಂದಿಗೆ ಬೊಮ್ಮೇನಹಳ್ಳಿಯ ಮತಗಟ್ಟೆಯಲ್ಲಿ ಹಾಗೂ ಜಿಲ್ಲಾ ಪಂಚಾಯತಿ ಸದಸ್ಯರಾದ ಬಿ.ಎಲ್.ದೇವ ರಾಜು ಬಂಡಿಹೊಳೆ ಮತಗಟ್ಟೆಯಲ್ಲಿ, ಹೆಚ್.ಟಿ.ಮಂಜು ಹರಳಹಳ್ಳಿ ಮತಗಟ್ಟೆಯಲ್ಲಿ ಹಾಗೂ ಜಿಪಂ ಮಾಜಿ ಉಪಾಧ್ಯಕ್ಷರಾದ ಕಿಕ್ಕೇರಿ ಪ್ರಭಾಕರ್ ಕಿಕ್ಕೇರಿಯಲ್ಲಿ ಎಸ್.ಅಂಬರೀಶ್ ಶೀಳನೆರೆಯಲ್ಲಿ ತಮ್ಮ ಮತದಾನದ ಹಕ್ಕನ್ನು ಚಲಾಯಿಸಿ ದರು.

ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ನಾರಾಯಣಗೌಡ ಮತ್ತು ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ಕೆ.ಆರ್.ಪೇಟೆ ಪಟ್ಟಣದ ನಿವಾಸಿಗಳಾಗಿದ್ದು ಪುರಸಭೆಯಲ್ಲಿ ಮತದಾನದ ಹಕ್ಕನ್ನು ಹೊಂದಿರುವುದರಿಂದ ಗ್ರಾಮ ಪಂಚಾಯತಿ ಚುನಾವಣೆ ಯಲ್ಲಿ ಮತ ಚಲಾಯಿಸಲಿಲ್ಲ.

ಬೆಳಿಗ್ಗೆ 10 ಗಂಟೆಯವರೆಗೂ ಮಂದಗತಿಯಲ್ಲಿ ಆರಂಭವಾದ ಮತದಾನ ಪ್ರಕ್ರಿಯೆ ಮಧ್ಯಾಹ್ನದ ನಂತರ ಮತದಾನ ಪ್ರಕ್ರಿಯೆ ಚುರುಕಾಗಿ ನಡೆಯಿತು. ತಹಶೀಲ್ದಾರ್ ಎಂ.ಶಿವಮೂರ್ತಿ, ಸರ್ಕಲ್ ಇನ್ಸ್ ಪೆಕ್ಟರ್ ದೀಪಕ್, ನಾಗಮಂಗಲ ಡಿ.ವೈ.ಎಸ್.ಪಿ ನವೀನ್ ಕುಮಾರ್ ಗ್ರಾಮ ಪಂಚಾಯತಿ ಚುನಾವಣೆಯ ನೇತೃತ್ವ ವಹಿಸಿದ್ದರು.