ಮಂಗಳೂರು: ಜ್ಯೂಸ್‌ನಲ್ಲಿ ಅಮಲು ಪದಾರ್ಥ ಬೆರೆಸಿ ಯುವತಿಯ ಮೇಲೆ ಅತ್ಯಾಚಾರ (Physical Abuse) ಮಾಡಿರುವ ಘಟನೆ ಮಂಗಳೂರಿನಲ್ಲಿ (Mangaluru crime news) ನಡೆದಿದೆ. ಆರೋಪಿ ಶಫೀನ್ ಎಂಬಾತ ಪರಾರಿಯಾಗಿದ್ದು, ಆತನಿಗಾಗಿ ಪೊಲೀಸರು ಹುಡುಕುತ್ತಿದ್ದಾರೆ.
ಮಂಗಳೂರು ನಗರದ ಕೊಡಿಯಾಲ್ ಬೈಲ್‌ನ ಅಪಾರ್ಟ್‌ಮೆಂಟ್‌ವೊಂದರಲ್ಲಿ ಮೂರು ತಿಂಗಳ ಹಿಂದೆ ಈ ಘಟನೆ ನಡೆದಿತ್ತು. ಈ ಬಗ್ಗೆ ಕದ್ರಿ ಪೊಲೀಸ್ ಠಾಣೆಗೆ ಯುವತಿ ಶುಕ್ರವಾರ ದೂರು ನೀಡಿದ್ದಾಳೆ. ಮಂಗಳೂರಿನ ದೇರಳಕಟ್ಟೆಯ ಶಫೀನ್ ಎಂಬ ಯುವಕನ ವಿರುದ್ಧ ಯುವತಿ ಅತ್ಯಾಚಾರ ಆರೋಪ ಮಾಡಿದ್ದಾಳೆ. ಕಳೆದ ಆಗಸ್ಟ್ 8ರಂದು ತನ್ನ ಮನೆಯಲ್ಲಿಯೇ ಶಫೀನ್ ಅತ್ಯಾಚಾರ ಮಾಡಿದ್ದಾನೆ ಎಂದು ಯುವತಿ ತನ್ನ ದೂರಿನಲ್ಲಿ ತಿಳಿಸಿದ್ದಾಳೆ.
ಮನೆಯ ಫ್ರಿಡ್ಜ್ ಹಾಳಾಗಿದ್ದರಿಂದ ಯುವತಿ ಶಫೀನ್‌ಗೆ ಕರೆ ಮಾಡಿದ್ದಳು. ಈ ವೇಳೆ ಶಫೀನ್ ಮೆಕಾನಿಕ್ ಕರೆದುಕೊಂಡು ಹೋಗಿ ಯುವತಿ ಮನೆಯ ಫ್ರಿಡ್ಜ್ ರಿಪೇರಿ ಮಾಡಿಸಿದ್ದ. ಮೆಕಾನಿಕ್ ಅನ್ನು ಮನೆಯ ಹೊರಗೆ ಬಿಟ್ಟು ಬರುವ ವೇಳೆ ಯುವತಿಗೆ ಶಫೀನ್ ಜ್ಯೂಸ್ ತಂದುಕೊಟ್ಟಿದ್ದ. ಈತ ತಂದುಕೊಟ್ಟಿದ್ದ ಜ್ಯೂಸ್‌ನಲ್ಲಿ ಅಮಲು ಪದಾರ್ಥ ಮಿಕ್ಸ್ ಮಾಡಲಾಗಿತ್ತು. ಆ ಬಳಿಕ ಈತ ನನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಯುವತಿ ಆರೋಪ ಮಾಡಿದ್ದಾಳೆ. ಅತ್ಯಾಚಾರದ ಬಳಿಕ ಇದರ ವಿಡಿಯೋ ಮಾಡಿದ್ದ ಶಫೀನ್ ಅದನ್ನು ವೈರಲ್ ಮಾಡುವ ಬೆದರಿಕೆ ಒಡ್ಡಿದ್ದ ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಾಳೆ.
ಜುಲೈ 21ರಂದು ಸಂತ್ರಸ್ತ ಯುವತಿಗೆ ಶಫೀನ್ ಮೊದಲ ಬಾರಿಗೆ ಪರಿಚಯವಾಗಿದ್ದ. ಕದ್ರಿ ರಸ್ತೆಯಲ್ಲಿ ಯುವತಿಯ ಕಾರು ಕೆಟ್ಟಿದ್ದ ವೇಳೆ ಶಫೀನ್ ನೆರವಿಗೆ ಬಂದಿದ್ದ. ಯುವತಿ ಮಂಗಳೂರಿನ ಅಪಾರ್ಟ್‌ಮೆಂಟ್‌ನಲ್ಲಿ ಒಬ್ಬಂಟಿಯಾಗಿ ವಾಸವಿದ್ದಾರೆ. ಯುವತಿಯನ್ನು ಬ್ಲ್ಯಾಕ್‌ಮೇಲ್ ಮಾಡಿ ಆರೋಪಿ ಆಕೆಯ ಕಾರನ್ನು ಕೂಡ ಎಗರಿಸಿದ್ದಾನೆ. ಹೀಗಾಗಿ ಅನುಮಾನ ಬಂದು ಆಗಸ್ಟ್ 25ರಂದು ವಿಳಾಸ ಹುಡುಕಿ ದೇರಳಕಟ್ಟೆಯ ಆತನ ಮನೆಗೆ ಯುವತಿ ತೆರಳಿದ್ದಳು. ಶಫೀನ್ ಬಗ್ಗೆ ಮನೆಯಲ್ಲಿ ವಿಚಾರಿಸಿದಾಗ, ಆತನ ಮನೆಯವರಿಂದಲೂ ಕೊಲೆ ಬೆದರಿಕೆ ಬಂದಿದೆ. ಶಫೀನ್ ಅಣ್ಣ ಮೊಹಮ್ಮದ್ ಶಿಯಬ್ ಕೂಡ ಅತ್ಯಾಚಾರಕ್ಕೆ ಯತ್ನಿಸಿದ್ದ. ಕೊಲೆ ಬೆದರಿಕೆ ಕೂಡ ಒಡ್ಡಿದ್ದ. ಆಗಸ್ಟ್ 27ರಂದು ಆರೋಪಿ ಶಫೀನ್ ಯುವತಿಯ ಮನೆಗೆ ನುಗ್ಗಿ ಹಣ ಕಳವು ಮಾಡಿರುವ ಬಗ್ಗೆಯೂ ದೂರು ದಾಖಲಾಗಿದೆ. ಕದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: Madhya Pradesh: ಪ್ರಾಂಶುಪಾಲರನ್ನು ಗುಂಡಿಕ್ಕಿ ಕೊಂದ 12ನೇ ತರಗತಿ ವಿದ್ಯಾರ್ಥಿ!