Sunday, 15th December 2024

HD Kumaraswamy: ಇವಿ ಚಾರ್ಜಿಂಗ್ ಪ್ರೋತ್ಸಾಹಕ್ಕೆ 10,900 ಕೋಟಿ ರೂ.: ಎಚ್‌.ಡಿ. ಕುಮಾರಸ್ವಾಮಿ

HD Kumaraswamy

ನವದೆಹಲಿ: ವಾಹನ ಮಾಲಿನ್ಯ ಪ್ರಮಾಣವನ್ನು ಗಣನೀಯವಾಗಿ ತಗ್ಗಿಸುವ ಹಿನ್ನೆಲೆಯಲ್ಲಿ ಕಳೆದ ಅಕ್ಟೋಬರ್ 1ರಿಂದ ಜಾರಿಗೆ ಬಂದಿರುವ ಪಿಎಂ ಇ-ಡ್ರೈವ್‌ (PM E-DRIVE) ಯೋಜನೆಯು ಹೆಚ್ಚು ಪರಿಣಾಮಕಾರಿ ಎಂದು ಕೇಂದ್ರದ ಭಾರೀ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವ ಎಚ್.ಡಿ. ಕುಮಾರಸ್ವಾಮಿ (HD Kumaraswamy) ಪ್ರತಿಪಾದಿಸಿದರು. ನವದೆಹಲಿಯಲ್ಲಿ ‘ಫೈನಾನ್ಶಿಯಲ್ ಟೈಮ್ಸ್’ ಪತ್ರಿಕೆ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಎಲೆಕ್ಟ್ರಿಕ್ ವಾಹನಗಳ ಬಳಕೆ ಉತ್ತೇಜಿಸುವುದರ ಜತೆಗೆ ಇವಿ ಚಾರ್ಜಿಂಗ್ ಮೂಲಸೌಕರ್ಯವನ್ನು ಪ್ರೋತ್ಸಾಹಿಸಲು ರೂ. 10,900 ಕೋಟಿಗಳ ಯೋಜನೆ ರೂಪಿಸಲಾಗಿದೆ. ಎರಡು ವರ್ಷಗಳ ಅವಧಿಯಲ್ಲಿ ಇದನ್ನು ಅನುಷ್ಠಾನಗೊಳಿಸಲಾಗುವುದು ಎಂದರು.

ಈ ಸುದ್ದಿಯನ್ನೂ ಓದಿ | Pralhad Joshi: ಹರಿಯಾಣ, ಜಮ್ಮು-ಕಾಶ್ಮೀರ ಫಲಿತಾಂಶ ಮೋದಿ ಸಮರ್ಥ ನಾಯಕತ್ವಕ್ಕೆ ನಿದರ್ಶನ ಎಂದ ಜೋಶಿ

ಈ ಯೋಜನೆಯ ಮೂಲಕ ವಾಹನ ಮಾಲಿನ್ಯವನ್ನು ಶೂನ್ಯ ಮಟ್ಟಕ್ಕೆ ತರಲು ಸಾಮೂಹಿಕ ಸಾರಿಗೆಯಲ್ಲಿ ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಉತ್ತೇಜಿಸಲಾಗುವುದು ಹಾಗೂ ಅದಕ್ಕೆ ಪೂರಕವಾದ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ದೊಡ್ಡ ಮಟ್ಟದ ಪ್ರಯತ್ನ ನಡೆಸಲಾಗಿದೆ. ಪ್ರಧಾನಿ ಮೋದಿ ಅವರು ಈ ಯೋಜನೆಗೆ ಆದ್ಯತೆಯ ಮೇರೆಗೆ ಉತ್ತೇಜನ ಕೊಡುತ್ತಿದ್ದಾರೆ ಎಂದು ಸಚಿವರು ತಿಳಿಸಿದರು.

ಮುಂದಿನ ಐದು ವರ್ಷಗಳಲ್ಲಿ ಇವಿ ವಾಹನಗಳ ಮೂಲಸೌಕರ್ಯಕ್ಕೆ ದೊಡ್ಡ ಮಟ್ಟದ ಹಣಕಾಸಿನ ಬೆಂಬಲ ಕೊಡಲಾಗುತ್ತಿದೆ. ಮೂಲಸೌಕರ್ಯ ಸೃಷ್ಟಿ ಮತ್ತು ಸುಧಾರಣೆಗಾಗಿ ಈ ವರ್ಷದ ಬಜೆಟ್‌ನಲ್ಲಿ ಜಿಡಿಪಿಯ ಶೇ.3.4ರಷ್ಟು, ಅಂದರೆ ರೂ. 11,11,111 ಕೋಟಿ ಮೊತ್ತವನ್ನು ಮೀಸಲಿಡಲಾಗಿದೆ ಎಂದು ಕೇಂದ್ರ ಸಚಿವರು ಹೇಳಿದರು.

ಉಕ್ಕಿನ ಕ್ಷೇತ್ರದಲ್ಲಿಯೂ ವಾಯು ಮಾಲಿನ್ಯವನ್ನು ಗಣನೀಯ ಮಟ್ಟಕ್ಕೆ ತಗ್ಗಿಸುವ ನಿಟ್ಟಿನಲ್ಲಿ ಉಕ್ಕು ಸಚಿವಾಲಯದ ವತಿಯಿಂದ ಸಮರೋಪಾದಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಇಂಗಾಲದ ಹೊರಸೂಸುವಿಕೆಯಲ್ಲಿ ಉಕ್ಕು ಉದ್ಯಮದ ಪಾಲು 10-12% ರಷ್ಟಿದ್ದು, ಅದನ್ನು ಬಹುತೇಕ ತಡೆಯುವ ನಿಟ್ಟಿನಲ್ಲಿ ನಾವು ಕಾರ್ಯೋನ್ಮುಖರಾಗುದ್ದೇವೆ. ಹೀಗಾಗಿ ಇಂಗಾಲೀಕರಣ ರಹಿತ ಉಕ್ಕಿನ ಸ್ಥಾವರಗಳ ನಿರ್ಮಾಣಕ್ಕೆ ಒತ್ತು ಕೊಡಲಾಗುತ್ತಿದೆ ಎಂದು ಅವರು ಹೇಳಿದರು.

ಈ ಸುದ್ದಿಯನ್ನೂ ಓದಿ | Tumkur Dasara: ತುಮಕೂರಿನಲ್ಲಿ ದಸರಾ ಸಂಭ್ರಮ; ಅಂಬಾರಿ ಹೊರಲಿದೆ ಲಕ್ಷ್ಮಿ!

ಈ ಸಂದರ್ಭದಲ್ಲಿ ‘ಫೈನಾನ್ಶಿಯಲ್ ಟೈಮ್ಸ್’ ಪತ್ರಿಕೆಯ ದಕ್ಷಿಣ ಏಷ್ಯಾ ಬ್ಯೂರೋ ಮುಖ್ಯಸ್ಥ ಜಾನ್ ರೀಡ್ ಉಪಸ್ಥಿತರಿದ್ದರು.