Thursday, 26th December 2024

PMSGMBY: ಪ್ರಧಾನಮಂತ್ರಿ ಸೂರ್ಯ ಘರ್‌‌ ಯೋಜನೆಗೆ ರಾಜ್ಯದಲ್ಲಿ 5.14 ಲಕ್ಷ ನೋಂದಣಿ

PMSGMBY

ಬೆಂಗಳೂರು: ಪ್ರಧಾನಮಂತ್ರಿ ಸೂರ್ಯ ಘರ್ ಯೋಜನೆಗೆ ರಾಜ್ಯಾದ್ಯಂತ 5,14,000 ನೋಂದಣಿಯಾಗಿದ್ದು ಈ ಪೈಕಿ 1,17,000 ಅರ್ಜಿಗಳು ಸ್ವೀಕೃತವಾಗಿವೆ ಎಂದು ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ ಬೀಳಗಿ ತಿಳಿಸಿದ್ದಾರೆ. ಪ್ರಧಾನಮಂತ್ರಿ ಸೂರ್ಯ ಘರ್‌ ಮುಫ್ತ್ ಬಿಜ್ಲಿ ಯೋಜನೆಯ (PMSGMBY) ಪರಿಣಾಮಕಾರಿ ಅನುಷ್ಠಾನಕ್ಕಾಗಿ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ಹೂಡಿಯಲ್ಲಿರುವ ಕೆಪಿಟಿಸಿಎಲ್‌ನ ಮಾನವ ಸಂಪನ್ಮೂಲ ಕೇಂದ್ರದಲ್ಲಿ ಶನಿವಾರ ಆಯೋಜಿಸಿದ್ದ ಒಂದು ದಿನದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಪಿಎಂ ಸೂರ್ಯ ಘರ್‌ ಯೋಜನೆಗೆ ಈವರೆಗೆ 5.14 ಲಕ್ಷ ನೋಂದಣಿಯಾಗಿದ್ದು, ಈ ಪೈಕಿ ಸುಮಾರು 1,17,000 ಅರ್ಜಿಗಳು ಸ್ವೀಕೃತವಾಗಿವೆ. ಈ ಯೋಜನೆಯನ್ನು ಕಾರ್ಯಗತಗೊಳಿಸಲು, ಎಂಎನ್‌ಆರ್‌ ಇ ಪೋರ್ಟಲ್‌ನಲ್ಲಿ 353 ಖಾಸಗಿ ಏಜೆನ್ಸಿಗಳು ನೋಂದಾಯಿಸಿಕೊಂಡಿವೆ ಎಂದು ಅವರು ತಿಳಿಸಿದರು.

ಈ ಸುದ್ದಿಯನ್ನೂ ಓದಿ | Karnataka Bank Recruitment 2024: ಕರ್ಣಾಟಕ ಬ್ಯಾಂಕ್‌ನಲ್ಲಿದೆ ಉದ್ಯೋಗಾವಕಾಶ; ಅರ್ಜಿ ಸಲ್ಲಿಕೆಗೆ ನಾಳೆಯೇ ಕೊನೆಯ ದಿನ

ರಾಜ್ಯಾದ್ಯಂತ ಮನೆಗಳಲ್ಲಿ ಸೌರಶಕ್ತಿಯ ಬಳಕೆಯನ್ನು ಉತ್ತೇಜಿಸಲು ಇಂಧನ ಸಚಿವ ಕೆ.ಜೆ. ಜಾರ್ಜ್ ಅವರ ಸಮರ್ಥ ನಾಯಕತ್ವದಲ್ಲಿ ಯೋಜನೆಯನ್ನು ಉತ್ತೇಜಿಸುವ ಗುರಿ ಹೊಂದಿದ್ದೇವೆ. ಈ ಮೂಲಕ ಸಾಂಪ್ರದಾಯಿಕ ಇಂಧನ ಮೂಲಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಸಾಧ್ಯವಾಗುತ್ತದೆ ಮತ್ತು ನವೀಕರಿಸಬಹುದಾದ ಇಂಧನದ ರಾಷ್ಟ್ರೀಯ ಗುರಿ ಸಾಧಿಸಲು ಕೊಡುಗೆ ನೀಡುತ್ತೇವೆ ಎಂದು‌ ಅವರು ಹೇಳಿದರು.

ಗ್ರಿಡ್ ಸಂಪರ್ಕಿತ ಮೇಲ್ಛಾವಣಿ ಸ್ಥಾವರಗಳಿಗೆ ಕೇಂದ್ರ ಸರ್ಕಾರವು 30,000 ರೂ. ರಿಂದ 78,000 ರೂ. ವರೆಗೆ ಸಹಾಯಧನ ನೀಡುತ್ತದೆ ಮತ್ತು ಈ ಯೋಜನೆ ಅನುಷ್ಠಾನಕ್ಕೆ ಬ್ಯಾಂಕ್‌ಗಳಿಂದ ಸಾಲ ಸೌಲಭ್ಯ ಸಹ ಇರುತ್ತದೆ ಎಂದು ತಿಳಿಸಿದರು.

ಪ್ರಧಾನ ಮಂತ್ರಿ ಸೂರ್ಯ ಘರ್ ಯೋಜನೆ ಪಡೆಯಲು ಅಪಾರ್ಟ್‌ಮೆಂಟ್ ಫೆಡರೇಷನ್‌ಗಳಿಗೆ ಬ್ಯಾಂಕ್‌ಗಳಿಂದ ಸಾಲ ಪಡೆಯಲು ಇರುವ ಸಮಸ್ಯೆಗಳ ಕುರಿತು ಕಾರ್ಯಾಗಾರದಲ್ಲಿ ಅಪಾರ್ಟ್‌ಮೆಂಟ್‌ ಫೆಡರೇಷನ್‌ ಪ್ರತಿನಿಧಿಗಳು ಕಳವಳ ವ್ಯಕ್ತಪಡಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ಬೆಸ್ಕಾಂ ಎಂಡಿ, ಈ ಯೋಜನೆಯ ಸಾಲ ಸೌಲಭ್ಯದ ಬಗ್ಗೆ ಗ್ರಾಹಕರಿಗೆ ಸ್ಪಷ್ಟ ಮಾಹಿತಿ ನೀಡುವಂತೆ , ರಾಜ್ಯ ಮಟ್ಟದ ಬ್ಯಾಂಕರ್‌ಗಳ ಸಮಿತಿ (ಎಸ್‌ಎಲ್‌ಬಿಸಿ) ಪ್ರತಿನಿಧಿಗೆ ಸೂಚಿಸಿದರು.

ಪ್ರಸ್ತುತ ಬ್ಯಾಂಕ್‌ಗಳಿಂದ ಸಾಲ ಸೌಲಭ್ಯವು 65 ವರ್ಷ ವಯೋಮಿತಿಗೆ ಸೀಮಿತವಾಗಿರುತ್ತದೆ. 65 ವರ್ಷ ಮೇಲ್ಪಟ್ಟ ಗ್ರಾಹಕರು, ಸಾಲ ಸೌಲಭ್ಯವನ್ನು ಪಡೆಯಲು ಇಚ್ಛಿಸಿದಲ್ಲಿ ತಮ್ಮ ಕುಟುಂಬ ಸದಸ್ಯರನ್ನು ಜಂಟಿ ಅರ್ಜಿದಾರರನ್ನಾಗಿ ಸೇರಿಸಿ ಸಾಲವನ್ನು ಪಡೆಯಬಹುದು ಎಂದು ಎಸ್‌ಎಲ್‌ಬಿಸಿ ಪ್ರತಿನಿಧಿ ಮಾಹಿತಿ ನೀಡಿದರು.

ಪಿಎಂ ಸೂರ್ಯ ಘರ್‌ ಯೋಜನೆಯಡಿಯಲ್ಲಿ ಸಾಲ ಪಡೆಯಲು ಬ್ಯಾಂಕ್‌ಗಳಿಗೆ ಮೇಲಾಧಾರ ಭದ್ರತೆಯ ಅಗತ್ಯವಿರುವುದಿಲ್ಲ ಎಂದು ಬ್ಯಾಂಕರ್ಗಳ ಪ್ರತಿನಿಧಿ‌ ಗ್ರಾಹಕರ ಪ್ರಶ್ನೆಗಳಿಗೆ ಉತ್ತರಿಸಿದರು.
ಯೋಜನೆಯಡಿಯಲ್ಲಿ ಬ್ಯಾಂಕ್‌ ಸಾಲ ಪಡೆಯಲು ಅರ್ಜಿ ಸಲ್ಲಿಸಿದಾಗ, ಬ್ಯಾಂಕ್‌ಗಳು ತಮ್ಮನ್ನು ಎಂಎಸ್‌ಎಂಇ ಎಂದು ಪರಿಗಣಿಸುತ್ತಿವೆ. ಆದರೆ ಅಪಾರ್ಟ್‌ಮೆಂಟ್‌ ಫೆಡರೇಷನ್‌ಗಳು ಎಂಎಸ್‌ಎಂಇ ವ್ಯಾಪ್ತಿಗೆ ಒಳಪಡುವುದಿಲ್ಲ ಎಂದು ಅಪಾರ್ಟ್‌ಮೆಂಟ್‌ ಫೆಡರೇಷನ್‌ ಪ್ರತಿನಿಧಿಗಳು ಬೆಸ್ಕಾಂ ಎಂಡಿ ಅವರ ಗಮನ ಸೆಳೆದರು.

ಇದಕ್ಕೆ ಪ್ರತಿಕ್ರಿಯಿಸಿದ ಎಸ್‌ಎಲ್‌ಬಿಸಿ ಪ್ರತಿನಿಧಿ, ಅಪಾರ್ಟ್‌ಮೆಂಟ್‌ ಫೆಡರೇಷನ್‌ಗಳಿಗೆ ಸಾಲ ನೀಡುವ ಬಗ್ಗೆ ಎಂಎನ್‌ಆಋಇ ನಿಂದ ಸ್ಪಷ್ಟ ನಿರ್ದೇಶನ ಇಲ್ಲದಿರುವ ಕಾರಣ, ಇದಕ್ಕೆ ಸಂಬಂಧಪಟ್ಟ ಮಾರ್ಗ ಸೂಚಿಗಳನ್ನು ಹೊರಡಿಸುವಂತೆ ಎಂಎನ್‌ಆರ್‌ಇ ಯನ್ನು ಕೋರಲಾಗಿದೆ ಎಂದು ಉತ್ತರಿಸಿದರು.

ಈ ಸುದ್ದಿಯನ್ನೂ ಓದಿ | School Holidays: 2025ನೇ ಸಾಲಿನ ಶಾಲಾ ರಜಾ ದಿನಗಳ ಪಟ್ಟಿ ಇಲ್ಲಿದೆ ನೋಡಿ

ಬೆಂಗಳೂರಿನ ವಿವಿಧ ಅಪಾರ್ಟ್‌ಮೆಂಟ್‌ ಫೆಡರೇಷನ್‌ ಪ್ರತಿನಿಧಿಗಳು, ನೋಂದಾಯಿತ ಖಾಸಗಿ ಏಜೆನ್ಸಿಗಳ ಪ್ರತಿನಿಧಿಗಳು, ಎಸ್‌ಎಲ್‌ಬಿಸಿ ಪ್ರತಿನಿಧಿ, ಬೆಸ್ಕಾಂನ ತಾಂತ್ರಿಕ ನಿರ್ದೇಶಕ ರಮೇಶ್ ಹಾಗೂ ಹಿರಿಯ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.