ಬೆಂಗಳೂರು: ಬೆನ್ನು ನೋವಿಗೆ ಸರ್ಜರಿ (Surgery) ಆಗಬೇಕು ಎಂಬ ನೆಪ ಹೇಳಿ ಜೈಲಿನಿಂದ ಜಾಮೀನು (Bail) ಪಡೆದು ಹೊರಬಿದ್ದು, ಬಳಿಕ ಸರ್ಜರಿ ಮಾಡಿಸಿಕೊಳ್ಳದೆ ನಟ ದರ್ಶನ್ (Actor Darshan) ವಂಚಿಸಿದ್ದಾರೆ ಎಂಬ ಆಧಾರದಲ್ಲಿ ಜಾಮೀನು ಹಿಂಡೆಯಲು ಆಗ್ರಹಿಸಿ ಸುಪ್ರೀಂ ಕೋರ್ಟ್ (Supreme Court) ಮೊರೆ ಹೋಗಲು ಪೊಲೀಸರು ನಿರ್ಧರಿಸಿದ್ದಾರೆ.
ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿ ದರ್ಶನ್ ಅವರಿಗೆ ನ್ಯಾಯಾಲಯದಿಂದ ಪೂರ್ಣ ಜಾಮೀನು ದೊರೆತಿದೆ. ಆದರೆ ಪೊಲೀಸರು ಈ ಜಾಮೀನು ವಿರುದ್ಧ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ಮುಂದಾಗಿದ್ದಾರೆ. ದರ್ಶನ್ ಅವರು ಅನಾರೋಗ್ಯದ ನೆಪದಲ್ಲಿ ಮಧ್ಯಂತರ ಜಾಮೀನು ಪಡೆದಿದ್ದರು ಮತ್ತು ಸರ್ಜರಿ ಮಾಡಿಸಿಕೊಂಡಿಲ್ಲ ಎಂಬುದನ್ನು ಪೊಲೀಸರು ಪ್ರಮುಖವಾಗಿ ಪ್ರಸ್ತಾಪಿಸಲಿದ್ದಾರೆ.
ರೇಣುಕಾ ಸ್ವಾಮಿ ಕೊಲೆ ಕೇಸ್ನಲ್ಲಿ ಆರೋಪಿ ದರ್ಶನ್ ಅವರಿಗೆ ಆರು ತಿಂಗಳ ಬಳಿಕ ಕೋರ್ಟ್ನಿಂದ ಪೂರ್ಣಪ್ರಮಾಣದ ಜಾಮೀನು ಸಿಕ್ಕಿದೆ. ಇಷ್ಟು ದಿನಗಳ ಕಾಲ ಜೈಲು ಹಾಗೂ ಆಸ್ಪತ್ರೆಯಲ್ಲಿ ಕಾಲ ಕಳೆದು ಸುಸ್ತಾಗಿದ್ದ ದರ್ಶನ್ ಈಗ ಮನೆಯಲ್ಲಿ ಸಮಯ ಕಳೆಯುತ್ತಿದ್ದಾರೆ. ಬೆಂಗಳೂರಿನ ಹೊಸಕೆರೆಹಳ್ಳಿಯಲ್ಲಿರುವ ವಿಜಯಲಕ್ಷ್ಮೀ ಅವರ ನಿವಾಸದಲ್ಲಿ ದರ್ಶನ್ ಇದ್ದಾರೆ. ಈ ಮಧ್ಯೆ ದರ್ಶನ್ ಹಾಗೂ ಅವರ ಗ್ಯಾಂಗ್ ವಿರುದ್ಧ ಸುಪ್ರೀಂಕೋರ್ಟ್ ಮೊರೆ ಹೋಗಲು ಬೆಂಗಳೂರು ಪೊಲೀಸರು ಸಿದ್ಧತೆ ಮಾಡಿಕೊಂಡಿದ್ದಾರೆ.
ಜೂನ್ 11ರಂದು ದರ್ಶನ್ ಕೊಲೆ ಕೇಸ್ನಲ್ಲಿ ಬಂಧನಕ್ಕೆ ಒಳಗಾದರು. ಆರಂಭದಲ್ಲಿ ಬೆಂಗಳೂರು ಜೈಲಿನಲ್ಲಿ ಇದ್ದ ಅವರು ನಂತರ ಜೈಲಿನಲ್ಲಿ ಟೀ ಪಾರ್ಟಿ ಮಾಡಿದ್ದ ಹಿನ್ನೆಲೆಯಲ್ಲಿ ಬಳ್ಳಾರಿ ಜೈಲಿಗೆ ಶಿಫ್ಟ್ ಆದರು. ಈ ವಿಚಾರದಲ್ಲಿ ಅವರ ಮೇಲೆ ಮತ್ತೊಂದು ಕೇಸ್ ದಾಖಲಾಗಿದೆ. ತನಿಖಾ ತಂಡ ಸಂಪೂರ್ಣ ಕೇಸ್ ಫೈಲ್ ಪರಿಶೀಲನೆ ನಡೆಸಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣದ ಚಾರ್ಜ್ಶೀಟ್ಗಳನ್ನು ಕನ್ನಡದಿಂದ ಇಂಗ್ಲೀಷ್ಗೆ ತರ್ಜುಮೆ ಮಾಡುವ ಕೆಲಸ ನಡೆದಿದೆ.
ಸುಮಾರು 5 ಸಾವಿರ ಪುಟಗಳ ಇಂಗ್ಲೀಷ್ ಚಾರ್ಜ್ಶೀಟ್ ತಯಾರಿ ಆಗಿದೆ. ಚಾರ್ಜ್ಶೀಟ್ ತರ್ಜುಮೆ ಮಾಡಿ ಲೀಗಲ್ ಸೆಲ್ ಟೀಂ ಜತೆ ಪರಿಶೀಲನೆ ನಡೆಸಲು ಚಿಂತಿಸಲಾಗಿದೆ. ತರ್ಜುಮೆ ವೇಳೆ ಕಂಡು ಬರುವ ಲೋಪದೋಷಗಳ ಬಗ್ಗೆ ಚರ್ಚೆ ನಡೆದು ಅದನ್ನು ತಿದ್ದುವ ಕೆಲಸ ಆಗಲಿದೆ.
ಅನಾರೋಗ್ಯದ ಕಾರಣ ಕೊಟ್ಟು ದರ್ಶನ್ ಮಧ್ಯಂತರ ಜಾಮೀನು ಪಡೆದಿದ್ದರು. ಸರ್ಜರಿ ಅಗತ್ಯ ಇದೆ ಎಂದು ಹೇಳಲಾಗಿತ್ತು. ಆದರೆ, ಯಾವುದೇ ಸರ್ಜರಿ ನಡೆಸಿಲ್ಲ. ಈ ವಿಚಾರವನ್ನು ಸುಪ್ರೀಂನಲ್ಲಿ ಹೈಲೈಟ್ ಮಾಡಲು ಚಿಂತನೆ ನಡೆಸಲಾಗಿದೆ. ಈಗ ಮೆರಿಟ್ ಆಫ್ ಕೇಸ್ ಮೇಲೆ ರೆಗ್ಯುಲರ್ ಬೇಲ್ ಕೂಡ ಮಂಜೂರಾಗಿದೆ. ಈ ಎರಡು ವಿಚಾರ ಮುಂದಿಟ್ಟುಕೊಂಡು ಸುಪ್ರೀಂ ಮೊರೆ ಹೋಗಲು ನಿರ್ಧಾರ ಮಾಡಲಾಗಿದೆ.
ಸದ್ಯ ಪೊಲೀಸ್ ಇಲಾಖೆ ಅಗತ್ಯ ಪ್ರಕ್ರಿಯೆಗಳನ್ನು ಪೂರ್ಣಗೊಳಿಸುತ್ತಿದೆ. ಇದಕ್ಕೆ ರಾಜ್ಯ ಗೃಹ ಇಲಾಖೆಯ ಒಪ್ಪಿಗೆಯ ಅಗತ್ಯವಿದೆ. ಹೀಗಾಗಿ, ಗೃಹ ಇಲಾಖೆಯಿಂದ ಒಪ್ಪಿಗೆ ಪಡೆದು ಪೊಲೀಸರು ಕೋರ್ಟ್ ಮೊರೆ ಹೋಗಲಿದ್ದಾರೆ.