Monday, 16th December 2024

Pradeep Eshwar: ʼನಮ್ಮ ಊರಿಗೆ ನಮ್ಮ ಶಾಸಕರುʼ ಕಾರ್ಯಕ್ರಮ; ಪ್ರದೀಪ್ ಈಶ್ವರ್‌ಗೆ ಬೆನ್ನುತಟ್ಟಿ ಭೇಷ್ ಎಂದ ಸಿಎಂ

Pradeep Eshwar

ಚಿಕ್ಕಬಳ್ಳಾಪುರ: ಕ್ಷೇತ್ರದಲ್ಲಿ ಮನೆಮನೆಗೆ ತೆರಳಿ ಜನರ ಸಮಸ್ಯೆಗಳನ್ನು ಆಲಿಸಿ, ಸ್ಥಳದಲ್ಲೇ ಪರಿಹರಿಸಲು ಶಾಸಕ ಪ್ರದೀಪ್‌ ಈಶ್ವರ್‌ ಅವರು ಹಮ್ಮಿಕೊಂಡಿರುವ ʼನಮ್ಮ ಊರಿಗೆ ನಮ್ಮ ಶಾಸಕರುʼ ಕಾರ್ಯಕ್ರಮಕ್ಕೆ ಸಿಎಂ ಸಿದ್ದರಾಮಯ್ಯ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಕಾರ್ಯಕ್ರಮ ಇನ್ನಷ್ಟು ಜನರನ್ನು ತಲುಪುವ ಮೂಲಕ ಜನರ ಜೀವನಮಟ್ಟ ಸುಧಾರಿಸಲು ನೆರವಾಗಲಿ ಎಂದು ಶಾಸಕ ಪ್ರದೀಪ್ ಈಶ್ವರ್ (Pradeep Eshwar) ಅವರ ವಿನೂತನ ಪ್ರಯತ್ನಕ್ಕೆ ಸಿಎಂ (CM Siddaramaiah) ಬೆನ್ನುತಟ್ಟಿ ಶುಭ ಹಾರೈಸಿದ್ದಾರೆ.

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ಸಿಎಂ ಸಿದ್ದರಾಮಯ್ಯ ಅವರು, ತಾಲೂಕು ಮಟ್ಟದ ಅಧಿಕಾರಿಗಳ ತಂಡಕಟ್ಟಿಕೊಂಡು, ಗ್ರಾಮಗಳಿಗೆ ತೆರಳಿ ಜನರ ಅಹವಾಲುಗಳನ್ನು ಆಲಿಸಿ, ಸ್ಥಳದಲ್ಲೇ ಅಥವಾ ಕಾಲಮಿತಿಯಲ್ಲಿ ಅದನ್ನು ಪರಿಹರಿಸುವ ಕಾರ್ಯ ಕೈಗೆತ್ತಿಕೊಂಡಿರುವ ಶಾಸಕ ಪ್ರದೀಪ್ ಈಶ್ವರ್ ಅವರ ವಿನೂತನ ಪ್ರಯತ್ನಕ್ಕೆ ಬೆನ್ನುತಟ್ಟಿ ಶುಭ ಹಾರೈಸಿದೆ. ಇಂತಹ ಜನಪರವಾದ ಕಾರ್ಯಗಳಿಗೆ ನನ್ನ ಹಾಗೂ ನಮ್ಮ ಸರ್ಕಾರದ ಬೆಂಬಲ ಸದಾಕಾಲ ಇರಲಿದೆ ಎಂಬ ವಿಶ್ವಾಸವನ್ನು ಅವರಲ್ಲಿ ತುಂಬಿದ್ದೇನೆ.

ʼನಮ್ಮ ಊರಿಗೆ ನಮ್ಮ ಶಾಸಕರುʼ ಕಾರ್ಯಕ್ರಮದ ಯಶಸ್ಸಿಗಾಗಿ ಶಾಸಕರಾದ ಪ್ರದೀಪ್ ಈಶ್ವರ್ ಅವರ ಹೆಗಲಿಗೆ ಹೆಗಲಾಗಿ ದುಡಿಯುತ್ತಿರುವ ಚಿಕ್ಕಬಳ್ಳಾಪುರ ತಹಸೀಲ್ದಾರ್ ಅನಿಲ್, ತಾಲೂಕಿನ ಕಾರ್ಯನಿರ್ವಾಹಕ ಅಧಿಕಾರಿ ಮಂಜುನಾಥ್, ಮಂಚೇನಹಳ್ಳಿ ತಹಸೀಲ್ದಾರ್ ದೀಪ್ತಿ ಹಾಗೂ ಕಾರ್ಯನಿರ್ವಾಹಕ ಅಧಿಕಾರಿ ಹೊನ್ನಯ್ಯ ಅವರ ಶ್ರಮ ಕೂಡ ಶ್ಲಾಘನೀಯ.

ಇದುವರೆಗೆ ಸುಮಾರು 50 ಹಳ್ಳಿಗಳಿಗೆ ತೆರಳಿ ರಸ್ತೆ, ಚರಂಡಿ, ಬಸ್ ವ್ಯವಸ್ಥೆ, ವಿದ್ಯುತ್ ಸಂಪರ್ಕ, ಪಿಂಚಣಿ, ನಿವೇಶನ ಹೀಗೆ ಸಾರ್ವಜನಿಕರ ನಿತ್ಯ ಬದುಕಿಗೆ ತೊಡಕಾಗಿದ್ದ ಹಲವು ಸಮಸ್ಯೆಗಳನ್ನು ಆಲಿಸಿ, ಪರಿಹರಿಸಿದ್ದಾರೆ. ಈ ಕಾರ್ಯಕ್ರಮ ಇನ್ನಷ್ಟು ಜನರನ್ನು ತಲುಪುವ ಮೂಲಕ ಜನರ ಜೀವನಮಟ್ಟ ಸುಧಾರಿಸಲು ನೆರವಾಗಲಿ ಎಂದು ಆಶಿಸುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

ಈ ಸುದ್ದಿಯನ್ನೂ ಓದಿ | D Gukesh: ವಿಶ್ವ ಚದುರಂಗ ಚಕ್ರವರ್ತಿ ಗುಕೇಶ್‌ಗೆ ತವರಿನಲ್ಲಿ ಭವ್ಯ ಸ್ವಾಗತ

ಹಲವು ಸಮಾಜಮುಖಿ ಕಾರ್ಯ
ಭವಿಷ್ಯದ ವೈದ್ಯರನ್ನು ರೂಪಿಸಬೇಕು ಎಂಬ ದೊಡ್ಡ ಕನಸಿನೊಂದಿಗೆ ʼಪರಿಶ್ರಮ ನೀಟ್‌ ಅಕಾಡೆಮಿʼ ಸ್ಥಾಪಿಸಿ ಯಶಸ್ಸು ಕಂಡಿರುವ ಪ್ರದೀಪ್‌ ಈಶ್ವರ್‌ ಅವರು ಕಾಂಗ್ರೆಸ್‌ ಶಾಸಕರಾಗಿ ಆಯ್ಕೆಯಾದ ಬಳಿಕ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ’ಅಮ್ಮ’ ಹೆಸರಲ್ಲಿ ಉಚಿತ ಆಂಬ್ಯುಲೆನ್ಸ್‌ ಸೇವೆ ಒದಗಿಸುತ್ತಿದ್ದಾರೆ. ಇದರಿಂದ ಈವರೆಗೆ ಸಾವಿರಾರು ಮಂದಿ ಪ್ರಯೋಜನ ಯೋಜನೆಯ ಪಡೆದಿದ್ದಾರೆ. ಅನಾಥ ಮಕ್ಕಳ ಶಿಕ್ಷಣಕ್ಕಾಗಿ ಒಂದು ಲಕ್ಷ ರೂ. ಆರ್ಥಿಕ ನೆರವನ್ನು ನೀಡುವ ಹಾಗೂ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ನೆರವಾಗುವ ನಿಟ್ಟಿನಲ್ಲಿ ವೈಯಕ್ತಿಕ ಯೋಜನೆಗಳನ್ನು ಹಮ್ಮಿಕೊಂಡಿದ್ದಾರೆ. ಇನ್ನು ಪ್ರತಿವರ್ಷ ವರಮಹಾಲಕ್ಷ್ಮೀ ಹಬ್ಬಕ್ಕೆ ಮಹಿಳೆಯರಿಗೆ ಬಾಗಿನದ ರೂಪದಲ್ಲಿ ಸೀರೆ, ಅರಿಶಿಣ, ಕುಂಕುಮ ನೀಡುವುದು ಹಾಗೂ ಮಕ್ಕಳಿಗೆ ಬಟ್ಟೆ ವಿತರಿಸುವುದು ಸೇರಿ ವಿವಿಧ ರೀತಿಯ ಸಮಾಜಕಾರ್ಯಗಳನ್ನು ಮಾಡುತ್ತಿದ್ದಾರೆ.