Thursday, 12th December 2024

ಸರ್ವಧರ್ಮ ಸದ್ಭಾವನಾ ಸಮಾರಂಭ: ಭಾವೈಕ್ಯತಾ ಪ್ರಶಸ್ತಿ ಪ್ರದಾನ

ಕೊಲ್ಹಾರ: ಮೌಢ್ಯ, ಕಂದಾಚಾರಗಳನ್ನು ಹೊಡೆದೋಡಿಸಿ ಸರ್ವರನ್ನು ಸಮಾನವಾಗಿ ಕಾಣುವುದೇ ಪ್ರತಿ ಧರ್ಮದ ನೈಜ ತತ್ವವಾಗಿದೆ ಎಂದು ಯರನಾಳ ವಿರಕ್ತಮಠದ ಗುರುಸಂಗನಬಸವ ಮಹಾಸ್ವಾಮಿಜಿಗಳು ಹೇಳಿದರು.

ಪಟ್ಟಣದಲ್ಲಿ ಗುರುವಾರ 20 ನೇ ಶತಮಾನದ ಸೂಫಿ ಸಂತ ಗುರು ಅಲಹಾಜ್ ಶಾಹ ಮಹಮ್ಮದ್ ಅಬ್ದುಲ್ ಗಫಾರ್ ಖಾದ್ರಿ ಅವರ ಉರುಸಿನ ನಿಮಿತ್ಯ ಜರುಗಿದ ಸರ್ವಧರ್ಮ ಸದ್ಭಾವನಾ ಸಮಾರಂಭ ಹಾಗೂ ಭಾವೈಕ್ಯತಾ ಪ್ರಶಸ್ತಿ ಪ್ರದಾನ ಸಮಾರಂಭದ ಸಾನಿಧ್ಯ ವಹಿಸಿಕೊಂಡು ಆಶಿರ್ವಚನ ನೀಡಿ ದರು. ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು ಬದುಕು ಸಾಗಿಸಬೇಕು. ರಾಜಕೀಯದ ಕುತಂತ್ರದಿಂದ ಪ್ರಸ್ತುತ ವಾತಾವರಣ ಜಟಿಲವಾಗುತ್ತಿದೆ ಮುಗ್ಧ ಜನರ ಆಮಿಷಕ್ಕೆ ಬಲಿಯಾಗದೆ, ಒತ್ತಡಗಳಿಗೆ ಒಳಗಾಗದೇ ಪ್ರೇರಣಾದಾಯಕ ಬದುಕು ಸಾಗಿಸಬೇಕು ಎಂದು ಅವರು ಹೇಳಿದರು.

ಬೇಲೂರು ಹಾಗೂ ಕೊಲ್ಹಾರ ಹಿರೇಮಠದ ಪ್ರಭುಕುಮಾರ ಶಿವಾಚಾರ್ಯರುರು ಮಾತನಾಡುತ್ತಾ ಮನುಕುಲದ ಏಳ್ಗೆ ಬಯಸುವುದೇ ಸರ್ವಧರ್ಮಗಳ ಮೂಲ ಉದ್ದೇಶವಾಗಿದೆ, ಸಂತರ, ಶರಣರ, ಸೂಫಿಗಳ ನಾಡಾಗಿರುವ ಈ ಭಾರತ ದೇಶ ಸರ್ವರನ್ನು ತನ್ನ ಮಡಿಲಲ್ಲಿಟ್ಟುಕೊಂಡು ಸಲುಹುತಿದೆ ಎಂದರು. ಪಟ್ಟಣದಲ್ಲಿ ಮುಸ್ಲಿಂ ಧರ್ಮಗುರುಗಳಾಗಿ ಪ್ರಸಿದ್ಧಿ ಪಡೆದಿರುವ ಡಾ.ಬಕ್ತೀಯಾರ್ ಖಾನ್ ಪಠಾಣ ಭಾವೈಕ್ಯತಾ ಸಮಾವೇಶ ಹಮ್ಮಿಕೊಂಡು ನಾಡಿಗೆ ಭಾವೈಕ್ಯತೆಯ ಸಂದೇಶ ಸಾರುತ್ತಿದ್ದಾರೆ ಅವರ ಕಾರ್ಯ ಶ್ಲಾಘನೀಯ ಎಂದರು.

ಮಾಜಿ ಸಚಿವ ಎಸ್.ಕೆ ಬೆಳ್ಳುಬ್ಬಿ ಮಾತನಾಡಿ ಸಾವಿರಾರು ವರ್ಷಗಳ ಇತಿಹಾಸ ಪರಂಪರೆ ಹೊಂದಿರುವ ಭಾರತ ದೇಶದಲ್ಲಿ ಸರ್ವ ಧರ್ಮಗಳು ಪರಸ್ಪರ ಸಹೋದರತ್ವದಿಂದ ಬೆಸೆದುಕೊಂಡಿವೆ. ಸಂತ ಶರಣರ ಸೂಫಿಗಳ ಸಮಾಗಮವೇ ಈ ಭವ್ಯ ಭಾರತ ಸರ್ವರು ದೇಶದ ಚರಿತ್ರೆಯನ್ನ ಮಹತ್ವವನ್ನ ಅರಿಯಬೇಕಿದೆ. ದೇಶದ ವಿಷಯದಲ್ಲಿ ತಪ್ಪು ಯಾರೇ ಮಾಡಿರಲಿ ಅದನ್ನು ತೀಕ್ಷ್ಣವಾಗಿ ಖಂಡಿಸಬೇಕು ಎಂದರು.

ಅಮಾನತ್ ಬ್ಯಾಂಕಿನ ಅಧ್ಯಕ್ಷ ಸಲೀಂ ಅತ್ತಾರ ಮಾತನಾಡುತ್ತಾ ಪ್ರಸ್ತುತ ಭಾವೈಕ್ಯತೆಯ ಸಂದೇಶ ಸಾರುವುದು ಅತ್ಯಂತ ಅವಶ್ಯಕವಾಗಿದೆ ಎಂದರು.
ಭಾರತ ದೇಶ ಸರ್ವ ಧರ್ಮಿಯರನ್ನ ತನ್ನ ಮಡಿಲಲ್ಲಿಟ್ಟುಕೊಂಡು ತೂಗುತಿದೆ. ಇದು ಸಂತರ ನಾಡು, ಶರಣರ ನಾಡು ಸೂಫಿಗಳ ನಾಡು ನಾವೆಲ್ಲರು ಪರಸ್ಪರರು ಒಂದೇ ತಾಯಿಯ ಮಕ್ಕಳಂತೆ ಬದುಕಬೇಕಿದೆ ಎಂದು ಹೇಳಿದರು.

ಭಾವೈಕ್ಯತಾ ಪ್ರಶಸ್ತಿ: ಜಾನಪದ ವಿದ್ವಾಂಸ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶಂಭು ಬಳಿಗಾರ ಅನುಪಸ್ಥಿತಿಯಲ್ಲಿ ಅವರ ಧರ್ಮಪತ್ನಿ ಶ್ರೀಮತಿ ಪ್ರೇಮಾ ಶಂಭು ಬಳಿಗಾರ ಅವರಿಗೆ ಪ್ರಸಕ್ತ ವರ್ಷದ ಅಲಹಾಬಾದ್ ಮೌಲಾನಾ ಭಾವೈಕ್ಯತಾ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಸಾನಿಧ್ಯ ನಿವೃತ್ತ ಪ್ರಾಂಶುಪಾಲರಾದ ಸಯ್ಯದ ಬಹಾವೊದ್ದಿನ ಸದರಕಾಜಿ, ಅಧ್ಯಕ್ಷತೆ ಅಲ್‌ಹಾಜ ಡಾ. ಬಖ್ತಿಯಾರಖಾನ ಕಾದ್ರಿ ಉತ್ತರಾಧಿಕಾರಿಗಳು ಖಾನಕಾಯೇ ಗಪ್ಪಾರಿಯಾ, ಮಾಜಿ ಸಚಿವ ಎಸ್.ಆರ್ ಪಾಟೀಲ್, ಮಾಜಿ ಸಚಿವ ಎಸ್.ಕೆ ಬೆಳ್ಳುಬ್ಬಿ, ಸಂಶೋಧಕರಾದ ಡಾ.ಕೃಷ್ಣ ಕೋಲ್ಹಾರ ಕುಲಕರ್ಣಿ, ಉಸ್ಮಾನ್ ಪಟೇಲ್ ಖಾನ್, ಐ.ಎನ್ ತಹಸಿಲ್ದಾರ, ಸಿ.ಎಂ ಗಣಕುಮಾರ, ನಂದಬಸಪ್ಪ ಚೌಧರಿ, ಈರಣ್ಣಗೌಡ ಕೋಮಾರ, ಬಸವರಾಜ ಎಸ್. ಹಂಗರಗಿ, ಅಲ್‌ಹಾಜ ಕಾಶೀಮಸಾಬ ಗಿರಗಾಂವಿ, ಮಲ್ಲು ದೇಸಾಯಿ, ಅಲ್‌ಹಾಜ ಎಚ್.ಕೆ ಚೌದರಿ, ಎಮ್.ಎಚ್ ಕೂಡಗಿ, ಬಿ.ಡಿ ಕಲಾದಗಿ, ಹಟೇಲಸಾಬ ಕಂಕರಪೀರ, ಈರಣ್ಣ ಔರಸಂಗ, ಸಹಿತ ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಹಾಜಿ ಅಯ್ಯೂಬ್ ಖಾನ್ ಪಠಾಣ ಪ್ರಾಸ್ತಾವಿಕವಾಗಿ ಮಾತನಾಡಿದರು. ಪತ್ರಕರ್ತ ಪರಶುರಾಮ ಗಣಿ ನಿರೂಪಿಸಿರು, ಖುದಾದಖಾನ್ ಪಠಾಣ ಸ್ವಾಗತಿಸಿದರು.