ಹುಬ್ಬಳ್ಳಿ: ”ರಾಜ್ಯ ಸರ್ಕಾರ ಆರ್ಥಿಕ, ಬೌದ್ಧಿಕವಾಗಿ ದಿವಾಳಿಯಾಗಿದೆ. ಸರ್ಕಾರದ ಬೊಕ್ಕಸ ಬರಿದಾಗಿದೆ. ಗುಣಮಟ್ಟದ ಔಷಧಿ ಖರೀದಿ ಮಾಡಲೂ ದುಡ್ಡಿಲ್ಲ. ಕಳಪೆ ಔಷಧಿ ಪೂರೈಕೆ ಕಂಪೆನಿಗಳಿಂದ ಖರೀದಿಸುತ್ತಿದೆʼʼ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಗಂಭೀರ ಆರೋಪ ಮಾಡಿದರು.
ಹುಬ್ಬಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಿಯೇ ಲಭ್ಯವಿಲ್ಲ. ವೈದ್ಯರು ಹೊರಗಡೆ ತರಲು ಚೀಟಿ ಬರೆದು ಕೊಡುತ್ತಿದ್ದಾರೆ. ರಾಜ್ಯವನ್ನು ಇಂಥ ಅವಸ್ಥೆಗೆ ತಂದಿಟ್ಟಿದೆ ಈ ಕಾಂಗ್ರೆಸ್ ಸರ್ಕಾರʼʼ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಘಟನೆ ಕರ್ನಾಟಕದಲ್ಲಿನ ಕಾಂಗ್ರೆಸ್ ಸರ್ಕಾರದ ಬೇಜವಾಬ್ದಾರಿತನವನ್ನು ಪ್ರತಿಬಿಂಬಿಸುತ್ತದೆ. ಭ್ರಷ್ಟಾಚಾರ, ಹಗರಣಗಳು ಅತಿರೇಕಕ್ಕೆ ಹೋಗಿ ರಾಜ್ಯ ಸರ್ಕಾರಕ್ಕೆ ಆಸ್ಪತ್ರೆಗಳಿಗೆ ಔಷಧಗಳನ್ನು ಖರೀದಿಸುವುದಕ್ಕೂ ಹಣವಿಲ್ಲವಾಗಿದೆ. ರಾಜ್ಯ ಸರ್ಕಾರ ಹಾಗೂ ರಾಜ್ಯ ಆರೋಗ್ಯ ಸಚಿವರು ಹೊಣೆಗಾರಿಕೆ ಹೊರುವುದನ್ನು ಬಿಟ್ಟು ಡ್ರಗ್ ಕಂಟ್ರೋಲರ್ ಅನ್ನು ವಜಾ… pic.twitter.com/Sls06W57UQ
— Pralhad Joshi (@JoshiPralhad) December 8, 2024
ಗುಣಮಟ್ಟದ ಔಷಧಿ ಖರೀದಿಸಲು ಹಣವಿಲ್ಲ
ʼʼಗುಣಮಟ್ಟದ ಕಂಪೆನಿಗಳಿಂದ ಔಷಧಿ ಖರೀದಿಸಲು ರಾಜ್ಯ ಸರ್ಕಾರದ ಬಳಿ ಹಣವಿಲ್ಲ. ಹಾಗಾಗಿ ಸಿಕ್ಕ ಸಿಕ್ಕ ಕಂಪೆನಿಗಳಿಂದ ಔಷಧಿ ಖರೀದಿಸುತ್ತಿದ್ದಾರೆ. ಅದರ ಪರಿಣಾಮದಿಂದಲೇ ಬಳ್ಳಾರಿಯಲ್ಲಿ ಬಾಣಂತಿಯರ ಸಾವು ಸಂಭವಿಸಿದೆʼʼ ಎಂದು ಅವರು ಕಿಡಿ ಕಾರಿದರು.
ಕೆಟ್ಟ ಮೇಲೆ ಬುದ್ಧಿ ಬಂತು
ʼʼಆರೋಗ್ಯ ಸಚಿವ ದಿನೇಶ ಗುಂಡೂರಾವ್ ಅವರಿಗೆ ಕೆಟ್ಟ ಮೇಲೆ ಬುದ್ಧಿ ಬಂದಂತಿದೆ. ಈಗ ಪ್ರಕರಣದ ಗಂಭೀರತೆ, ಸೂಕ್ಷ್ಮತೆಯನನುಈಗ ಅರಿತಿದ್ದಾರೆʼʼ ಎಂದು ಹೇಳಿದರು.
ಆರೋಗ್ಯ ಸಚಿವರ ವೈಫಲ್ಯ
ʼʼಬಳ್ಳಾರಿ ಬಾಣಂತಿಯರ ಸಾವಿನ ಪ್ರಕರಣದಲ್ಲಿ ಆರೋಗ್ಯ ಸಚಿವರು ಸಂಪೂರ್ಣ ವೈಫಲ್ಯ ಕಂಡಿದ್ದಾರೆ. ತಮ್ಮ ತಪ್ಪು ಮುಚ್ಚಿಕೊಳ್ಳಲು ಕೇಂದ್ರದತ್ತ ಬೆರಳು ತೋರುತ್ತಿದ್ದಾರೆ. ಐವಿ ದ್ರಾವಣಕ್ಕೆ ಕೇಂದ್ರ ಅನುಮತಿ ನೀಡಿದೆ ಎಂದಿದ್ದಾರೆ. ಆದರೆ ಕೇಂದ್ರದ ಅನುಮತಿ ಪಡೆಯುವಾಗ ಗುಣಮಟ್ಟದ ಔಷಧಿ ಕಳಿಸಿ ನಂತರದಲ್ಲಿ ಕಳಪೆ ಗುಣಮಟ್ಟದ್ದನ್ನು ಪೂರೈಸಿದರೆ ಯಾರು ಹೊಣೆ? ರಾಜ್ಯ ಸರ್ಕಾರ ಆಗಾಗ ತಪಾಸಣೆ ನಡೆಸಬೇಕಲ್ಲವೇ?ʼʼ ಎಂದು ಸಚಿವ ಜೋಶಿ ಪ್ರಶ್ನಿಸಿದರು.
ಬಾಣಂತಿಯರ ಸಾವು ನಾಚಿಕೆಗೇಡು
ʼʼರಾಜ್ಯದಲ್ಲಿ ಐವರು ಬಾಣಂತಿಯರ ಸಾವಿಗೆ ಕೇಂದ್ರದ ಮೇಲೆ ಗೂಬೆ ಕೂರಿಸುತ್ತಿದ್ದಾರೆ. ಮಳೆಯಾದರೂ ಕೇಂದ್ರ, ಜನಸಂಖ್ಯೆ ಜಾಸ್ತಿ ಆದ್ರೂ ಕೇಂದ್ರ ಕಾರಣ ಎನ್ನುವಂತಿದೆ ಇವರ ಮನಸ್ಥಿತಿ. ಇದು ಸರಿಯಲ್ಲ. 21ನೇ ಶತಮಾನದ ಮುಂದುವರಿದ ಮೆಡಿಕಲ್ ಸೈನ್ಸ್ ಯುಗದಲ್ಲಿ ಬಾಣಂತಿಯರ ಸಾವು ಎಂದರೆ ನಾಚಿಕೆಗೇಡಿನ ಸಂಗತಿ. ರಾಜ್ಯ ಕಾಂಗ್ರೆಸ್ ಸರ್ಕಾರ ಗಂಭೀರವಾಗಿ ಪರಿಗಣಿಸದೇ ಇರುವುದಕ್ಕೆ ನಾಚಿಕೆಯಾಗಬೇಕುʼʼ ಎಂದು ಸಚಿವ ಪ್ರಲ್ಹಾದ್ ಕಿಡಿ ಕಾರಿದರು.
ಈ ಸುದ್ದಿಯನ್ನೂ ಓದಿ: CM Siddaramaiah: ಮೃತ ಐವರು ಬಾಣಂತಿಯರ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ; ಸಂಡೂರಿನಲ್ಲಿ ಸಿಎಂ ಸಿದ್ದರಾಮಯ್ಯ ಘೋಷಣೆ