Wednesday, 4th December 2024

Pralhad Joshi: ವಿಕಲಚೇತನರ ನಿಧಿಗೆ ಕನ್ನ ಹಾಕಿದ ರಾಜ್ಯ ಕಾಂಗ್ರೆಸ್ ಸರ್ಕಾರ; ಜೋಶಿ ಆರೋಪ

Pralhad Joshi

ನವದೆಹಲಿ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ (State Congress Government) ಈಗ ಅಂಗವಿಕಲರ ನಿಧಿಯನ್ನೂ ಬಿಡುತ್ತಿಲ್ಲ. ಅದಕ್ಕೂ ಕೈ ಹಾಕಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ (Pralhad Joshi) ಆರೋಪಿಸಿದ್ದಾರೆ. ರಾಜ್ಯದ ಜನಕ್ಕೆ ಐದು ಗ್ಯಾರಂಟಿಗಳ ಆಶ್ವಾಸನೆ ಕೊಟ್ಟು ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರವೀಗ ಒಂದೊಂದೇ ಇಲಾಖೆಗಳ ಅನುದಾನವನ್ನು ಕಿತ್ತುಕೊಳ್ಳುತ್ತಿದೆ ಎಂದು ಅವರು ದೂರಿದ್ದಾರೆ.

ಸರ್ಕಾರ, ಅಂಗವಿಕಲರ ವಿವಿಧ ಯೋಜನೆಗಳಿಗೆ ಬಿಡುಗಡೆ ಮಾಡುತ್ತಿದ್ದ ಅನುದಾನವನ್ನು ಶೇ.80 ರಷ್ಟು ಕಡಿತಗೊಳಿಸಿ ವಿಕಲಚೇತನರ ನಿಧಿಗೆ ಕನ್ನ ಹಾಕಿದೆ ಎಂದು ಆರೋಪಿಸಿರುವ ಸಚಿವರು, 2023-24 ರಲ್ಲಿ 53 ಕೋಟಿ ರೂಪಾಯಿ ನೀಡುತ್ತಿದ್ದರೆ, ಈಗ ಅದನ್ನು ಕೇವಲ 10 ಕೋಟಿಗೆ ಇಳಿಸಿದೆ. ಈ ಮೂಲಕ ರಾಜ್ಯ ಕಾಂಗ್ರೆಸ್ ಸರ್ಕಾರ ದಿವ್ಯಾಂಗರನ್ನು ನಿರ್ಗತಿಕರನ್ನಾಗಿ ಮಾಡುತ್ತಿದೆ ಎಂದು ಜೋಶಿ ದೂರಿದ್ದಾರೆ.

ಈ ಸುದ್ದಿಯನ್ನೂ ಓದಿ | Air India Flight: ಅಂಡಮಾನ್- ನಿಕೋಬಾರ್‌ ಪ್ರವಾಸಕ್ಕೆ ಹೋಗುವವರಿಗೆ ಸಿಹಿ ಸುದ್ದಿ

ವಿಕಲಚೇತನರ ಸಬಲತೆಗೆ ಕೇಂದ್ರದ ಪರಿಶ್ರಮ

ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ವಿಕಲಚೇತನರ ಸಬಲತೆಗೆ ಶ್ರಮಿಸುತ್ತಿದೆ. ವಿವಿಧ ಯೋಜನೆಗಳನ್ನು ಜಾರಿಗೊಳಿಸಿ ಅವರನ್ನೂ ಸಾಮಾನ್ಯರಂತೆ ಮುಖ್ಯ ವಾಹಿನಿಗೆ ತರಲು ಪ್ರಯತ್ನಿಸಿದೆ ಎಂದು ತಿಳಿಸಿದರು.

ಮೋದಿ ಸರ್ಕಾರ ಭಾರತದಲ್ಲಿ ದಿವ್ಯಾಂಗರ ಜೀವನ ಸುಲಭವಾಗಿಸಲು ನಿರಂತರ ಶ್ರಮಿಸುತ್ತಿದ್ದರೆ, ರಾಜ್ಯ ಕಾಂಗ್ರೆಸ್ ಸರ್ಕಾರ ಅವರ ಅನುದಾನಕ್ಕೂ ಕತ್ತರಿ ಹಾಕುತ್ತಿದೆ ಎಂದು ಆರೋಪಿಸಿದ ಕೇಂದ್ರ ಸಚಿವ ಜೋಶಿ ಅವರು, ಕೇಂದ್ರ ಸರ್ಕಾರ 90ಕ್ಕೂ ಅಧಿಕ ವಿಮಾನ ನಿಲ್ದಾಣ, 700ಕ್ಕೂ ಅಧಿಕ ರೈಲು ನಿಲ್ದಾಣಗಳು ಮತ್ತು 1700ಕ್ಕು ಹೆಚ್ಚು ಸರ್ಕಾರಿ ಕಟ್ಟಡಗಳಲ್ಲಿ ದಿವ್ಯಾಂಗರಿಗೆ ಅನುಕೂಲ ಆಗುವಂತೆ ವ್ಯವಸ್ಥೆ ಕಲ್ಪಿಸಿದೆ ಎಂದು ಹೇಳಿದರು.

29 ಲಕ್ಷ ದಿವ್ಯಾಂಗರಿಗೆ ಉಪಕರಣ: 17000 ಶಿಬಿರಗಳ ಮೂಲಕ 29 ಲಕ್ಷ ದಿವ್ಯಾಂಗ ಫಲಾನುಭವಿಗಳಿಗೆ ಸಹಾಯಕ ಉಪಕರಣಗಳನ್ನು ವಿತರಿಸಲಾಗಿದೆ. ವಂದೇ ಭಾರತ್ ರೈಲುಗಳಲ್ಲಿ ಬಾಗಿಲು, ಶೌಚಾಲಯಗಳನ್ನು ದಿವ್ಯಾಂಗರಿಗಾಗಿ ಸುಧಾರಿಸಲಾಗಿದೆ ಎಂದು ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ | Book Release: ಬೆಂಗಳೂರಿನಲ್ಲಿ ಡಿ.8ರಂದು ಹರಿವು ಬುಕ್ಸ್‌ನ ಎರಡು ಪುಸ್ತಕಗಳ ಬಿಡುಗಡೆ

1.1 ಕೋಟಿ UDID ಕಾರ್ಡ್‌

ದೇಶದಲ್ಲಿ 1.1 ಕೋಟಿ UDID ಕಾರ್ಡ್‌ಗಳ ಮೂಲಕ ದಿವ್ಯಾಂಗ ಸಮುದಾಯಕ್ಕೆ ಕೇಂದ್ರದ ವಿವಿಧ ಯೋಜನೆಗಳ ಲಾಭಗಳನ್ನು ತಲುಪಿಸಲಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ʼಎಕ್ಸ್‌ʼ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.