Tuesday, 26th November 2024

Pralhad Joshi: ಸಂವಿಧಾನ ರಚನೆಕಾರರನ್ನು ಅವಮಾನಿಸಿದವರೇ ಇಂದು ಸಂವಿಧಾನದ ಬಗ್ಗೆ ಮಾತನಾಡುತ್ತಾರೆ: ಪ್ರಲ್ಹಾದ್‌ ಜೋಶಿ ವ್ಯಂಗ್ಯ

Pralhad Joshi

ನವದೆಹಲಿ: ಸಂವಿಧಾನದಿಂದಲೇ ದೇಶದ ಪ್ರಗತಿ ಸಾಧ್ಯವಾಗಿದೆ. ಆದರೆ, ಇಂಥ ಸಂವಿಧಾನ ರಚನೆಕಾರರನ್ನೇ ಹಿಂದೆ ಅವಮಾನಿಸಿದರು ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ (Pralhad Joshi) ವಿಷಾದಿಸಿದರು. ನವದೆಹಲಿಯಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಭಾರತದ ಅಭಿವೃದ್ಧಿ ಮತ್ತು ಹಿಂದುಳಿದವರ ಕಲ್ಯಾಣಕ್ಕಾಗಿ ಡಾ.ಬಿ.ಆರ್. ಅಂಬೇಡ್ಕರ್ ಸಂವಿಧಾನದ ಮೂಲಕ ಬಹು ದೊಡ್ಡ ಕೊಡುಗೆ ನೀಡಿದ್ದಾರೆ ಎಂದು ಬಣ್ಣಿಸಿದರು.

ಹಿಂದೆ ಸಂವಿಧಾನ ರಚನೆಕಾರರನ್ನು ಅವಮಾನಿಸಿದವರೇ ಇಂದು ಸಂವಿಧಾನದ ಬಗ್ಗೆ ಮಾತನಾಡುತ್ತಾರೆ. ಅಭಿವೃದ್ಧಿಯ ಹರಿಕಾರ ಅಂಬೇಡ್ಕರ್ ಅವರಿಗೆ ಆಂತರ್ಯದಲ್ಲಿ ಗೌರವ ಕೊಡದೇ ಹೋದರು ಎಂದು ಅಂದಿನ ಕಾಂಗ್ರೆಸ್ ನಾಯಕರ ಬಗ್ಗೆ ಬೇಸರ ವ್ಯಕ್ತಪಡಿಸಿದರು.

ಈ ಸುದ್ದಿಯನ್ನೂ ಓದಿ | Job Guide: ಎಸ್ಸೆಸ್ಸೆಲ್ಸಿ, ಡಿಪ್ಲೊಮಾ ವಿದ್ಯಾರ್ಹತೆ ಹೊಂದಿದ್ದೀರಾ? Mazagon Dockನಲ್ಲಿದೆ 234 ಹುದ್ದೆ; ಅರ್ಜಿ ಸಲ್ಲಿಸುವ ವಿಧಾನ ಇಲ್ಲಿದೆ

ಅಂಬೇಡ್ಕರ್ ಅವರನ್ನು ಚುನಾವಣೆಯಲ್ಲಿ ಸೋಲಿಸಿದರು. ಅಲ್ಲದೇ, ಭಾರತ ರತ್ನವನ್ನೂ ಕೊಡದೇ ಅವಮಾನಿಸಿದರು. ಆದರೆ ಈಗ ಹೋದಲ್ಲಿ-ಬಂದಲ್ಲಿ ಸಂವಿಧಾನವನ್ನು ಪ್ರಸ್ತಾಪಿಸುತ್ತಾರೆ ಎಂದು ಜೋಶಿ ಟೀಕಿಸಿದರು.

ಸಂವಿಧಾನ ದಿನ ಆಚರಣೆ ಮೋದಿ ಅವರ ಆಶಯ

ಭಾರತೀಯ ಸಂವಿಧಾನ ಅಂಬೇಡ್ಕರ್ ಅವರು ದೇಶಕ್ಕೆ ನೀಡಿದ ಅದ್ಬುತ ಕೊಡುಗೆ ಎಂಬುದನ್ನು ಅರಿತು ಪ್ರಧಾನಿ ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬಂದ ನಂತರ ಈ ದಿನವನ್ನು ಸಂವಿಧಾನ ದಿನವನ್ನಾಗಿ ಆಚರಿಸಲು ಆಶಯ ವ್ಯಕ್ತಪಡಿಸಿ ಆ ನಿಟ್ಟಿನಲ್ಲಿ ಹೆಜ್ಜೆಯಿಟ್ಟರು ಎಂದು ಹೇಳಿದರು.

ಜಮ್ಮು ಕಾಶ್ಮೀರ ಇತಿಹಾಸದಲ್ಲೇ ಪ್ರಥಮ

ಜಮ್ಮು ಮತ್ತು ಕಾಶ್ಮೀರ ಇತಿಹಾಸದಲ್ಲಿ ಇದೇ ಮೊದಲ ಬಾರಿ ಸಂವಿಧಾನ ದಿನ ಆಚರಿಸಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಪರಿಶ್ರಮದಿಂದ ಇದು ಸಾಧ್ಯವಾಗಿದೆ ಎಂದು ಸಚಿವ ಜೋಶಿ ಪ್ರತಿಪಾದಿಸಿದರು.

ಅಂದು ಸಂವಿಧಾನವನ್ನು ದುರ್ಬಲಗೊಳಿಸಲು ಪ್ರಯತ್ನಿಸಿ ಪದೇ ಪದೇ ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಅವಮಾನಿಸಿದರೇ ಹೊರತು ಅವರನ್ನು ಗೌರವದಿಂದ ನಡೆಸಿಕೊಳ್ಳದೇ ಹೋದರು ಎಂದು ವಿಷಾದಿಸಿದರು.

ಈ ಸುದ್ದಿಯನ್ನೂ ಓದಿ | KPSC Recruitment 2024: 750 ಭೂ ಮಾಪಕರ ಹುದ್ದೆ ಭರ್ತಿಗೆ ಅರ್ಜಿ ಆಹ್ವಾನಿಸಿದ KPSC; ಹೀಗೆ ಅಪ್ಲೈ ಮಾಡಿ

ಅವಮಾನ ಮರೆಯಲಸಾಧ್ಯ

ಭಾರತೀಯರಿಗೆ ಸಂವಿಧಾನ ನೀಡಿದ ಸ್ವಾತಂತ್ರ್ಯವನ್ನು ಮೊಟಕುಗೊಳಿಸಿದ್ದು ಗಾಂಧಿ-ನೆಹರು ಕುಟುಂಬ. ಈ ಸಂವಿಧಾನ ವಿರೋಧಿ ಕುಟುಂಬ ಸಂವಿಧಾನಕ್ಕೆ ಮಾಡಿದ ಅಪಚಾರ ಹಾಗೂ ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಮಾಡಿದ ಅವಮಾನವನ್ನು ಭಾರತೀಯರು ಎಂದೆಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಆರೋಪಿಸಿದರು.