Thursday, 21st November 2024

Pralhad Joshi: ಸುಳ್ಳು ಹೇಳೋದ್ರಲ್ಲಿ ಕಾಂಗ್ರೆಸ್ಸಿಗರು ನಿಸ್ಸೀಮರು; ಪ್ರಲ್ಹಾದ್‌ ಜೋಶಿ

Pralhad Joshi

ಸಂಡೂರು: ಸುಳ್ಳು ಹೇಳೋದರಲ್ಲಿ ಕಾಂಗ್ರೆಸ್ಸಿಗರೇ ನಿಸ್ಸೀಮರು. ಅಷ್ಟು ಸತ್ಯವಂತರಾಗಿದ್ದರೆ ಗ್ಯಾರಂಟಿ ಯೋಜನೆಗಳ (Guarantee Schemes) ಬಗ್ಗೆ ರಾಜ್ಯ ಸರ್ಕಾರ (State Government) ಶ್ವೇತ ಪತ್ರ ಹೊರಡಿಸಲಿ ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ (Pralhad Joshi) ಸವಾಲು ಹಾಕಿದರು. ಸಂಡೂರು ವಿಧಾನಸಭಾ ಕ್ಷೇತ್ರದ ತೋರಣಗಲ್‌ನಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯ ಸರ್ಕಾರದ್ದು ಎಲ್ಲಾ ಬೋಗಸ್ ಗ್ಯಾರೆಂಟಿಗಳು ಎಂದು ಅವರು ಆರೋಪಿಸಿದರು.

ಈ ಸರ್ಕಾರ ಒಂದೆಡೆ ಕೊಟ್ಟು, ಮತ್ತೊಂದಲ್ಲಿ ಅದರ ಹತ್ತರಷ್ಟು ಕಿತ್ತುಕೊಳ್ಳುತ್ತಿದೆ. ಪೆಟ್ರೋಲ್, ಡೀಸೆಲ್, ಬಸ್ ಪ್ರಯಾಣ ದರ, ವಿದ್ಯುತ್ ದರ, ಹಾಲಿನ ದರ, ಮುದ್ರಾಂಕ ಶುಲ್ಕ, ನೋಂದಣಿ ಶುಲ್ಕ, ರೈತರ ಪಹಣಿ ಶುಲ್ಕ ಹೀಗೆ ಎಲ್ಲದರಲ್ಲೂ ಬೆಲೆ ಏರಿಕೆ ಹೊರೆ ಹೊರಿಸಿದೆ ಎಂದು ಆರೋಪಿಸಿದರು.

ಈ ಸುದ್ದಿಯನ್ನೂ ಓದಿ | S Jaishankar: ಜೈಶಂಕರ್‌ ಸಂದರ್ಶನ ಪ್ರಸಾರ ಮಾಡಿದ್ದ ಆಸ್ಟ್ರೇಲಿಯಾ ಮಾಧ್ಯಮ ನಿರ್ಬಂಧಿಸಿದ ಕೆನಡಾಕ್ಕೆ ಚಾಟಿ ಬೀಸಿದ ಭಾರತ

ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳು ಎಲ್ಲೆಷ್ಟು ಜನರಿಗೆ ತಲುಪಿವೆ? ಅದರ ಆದಾಯದ ಮೂಲ, ವೆಚ್ಚ, ಸಮಗ್ರ ಮಾಹಿತಿಯುಳ್ಳ ಶ್ವೇತ ಪತ್ರ ಹೊರಡಿಸಲಿ ಮೊದಲು ಎಂದು ಸಚಿವ ಜೋಶಿ ಆಗ್ರಹಿಸಿದರು. ಗೃಹಲಕ್ಷ್ಮಿ ಹಣ ಎಷ್ಟು ಜನರಿಗೆ ತಲುಪಿದೆ? ಇದರಲ್ಲಿ ತಾರತಮ್ಯ ತೋರಲಾಗಿದೆ. ಶಕ್ತಿ ಯೋಜನೆ ಕೊಟ್ಟರೆ ಪೆಟ್ರೋಲ್, ಡೀಸೆಲ್, ಪ್ರಯಾಣ ದರ ಹೆಚ್ಚಿಸಿದ್ದಾರೆ. ಫ್ರೀ ವಿದ್ಯುತ್ ಘೋಷಿಸಿದಂತೆ ಇಲ್ಲ. ಅಲ್ಲದೇ, 3 ರೂ. ಯುನಿಟ್ ಇದ್ದ ವಿದ್ಯುತ್ ಶುಲ್ಕ ಈಗ 7.50 ರೂ.ಗೆ ಹೆಚ್ಚಿಸಿದ್ದಾರೆ. ಯುವನಿಧಿ ಒಬ್ಬರಿಗೂ ಇಲ್ಲ, ಹತ್ತರಲ್ಲೊಬ್ಬರಿಗೂ ತಲುಪಿಲ್ಲ. 2023-24 ರ ಎಷ್ಟು ಪದವೀಧರರಿಗೆ ಯುವ ನಿಧಿ ಕೊಟ್ಟಿದ್ದೀರಿ? ಎಂದು ಪ್ರಶ್ನಿಸಿದ ಸಚಿವ ಜೋಶಿ, ಕಾಂಗ್ರೆಸ್ ಪಕ್ಷದ್ದು ಬರೀ ಬೋಗಸ್ ಗ್ಯಾರೆಂಟಿಗಳು ಎಂದು ದೂರಿದರು.

80 ಸಾವಿರ ಕೋಟಿ ರೂ. ಸಾಲದ ಹೊರೆ

ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದ ಒಂದೂವರೆ ವರ್ಷದಲ್ಲಿ 70-80 ಸಾವಿರ ಕೋಟಿ ರೂಪಾಯಿ ಸಾಲದ ಹೊರೆ ಹೊತ್ತಿದೆ. ಅಗತ್ಯ ವಸ್ತುಗಳ ಬೆಲೆ ಹೆಚ್ಚಳ ಮೂಲಕ ಅದನ್ನು ಸರಿದೂಗಿಸಲು ಹೆಣಗಾಡುತ್ತಿದೆ ಎಂದು ಅವರು ಆರೋಪಿಸಿದರು.

ಜಗತ್ತಿನಲ್ಲೇ ಅತ್ಯಂತ ಸುಸ್ಥಿರ ಆರ್ಥಿಕತೆ ಭಾರತದ್ದು

ಜಗತ್ತಿನಲ್ಲೇ ಅತ್ಯಂತ ಸುಸ್ಥಿರ ಆರ್ಥಿಕತೆ ಭಾರತದ್ದು. 17 ಬಾರಿ ಬಜೆಟ್ ಮಂಡಿಸಿದ್ದಾಗಿ ಹೇಳಿಕೊಳ್ಳುವ ಸಿಎಂ ಸಿದ್ದರಾಮಯ್ಯ ದೇಶದ ಆರ್ಥಿಕತೆ ಬಗ್ಗೆ ಹುಂಬತನದಿಂದ ಮಾತನಾಡುತ್ತಾರೆ ಎಂದು ಟೀಕಿಸಿದ ಜೋಶಿ ಅವರು, ಜಗತ್ತಿನಲ್ಲೇ ಭಾರತದ ಆರ್ಥಿಕತೆ ಅತ್ಯಂತ ಸುಸ್ಥಿರವಾಗಿದೆ. ಕೋವಿಡ್ ಬಳಿಕ ಎಲ್ಲಾ ದೇಶಗಳು ಆರ್ಥಿಕ ಜರ್ಝರಿತ ಕಂಡರೆ ಭಾರತ ಶಕ್ತಿಶಾಲಿ ರಾಷ್ಟ್ರವಾಗಿ ಹೊರ ಹೊಮ್ಮಿದೆ. ಭಾರತ 700 ಮಿಲಿಯನ್ ಡಾಲರ್ ವಿದೇಶಿ ವಿನಿಮಯ ದಾಖಲಿಸಿದೆ. 75 ವರ್ಷದ ಇತಿಹಾಸದಲ್ಲಿ ಇದು ದಾಖಲೆಯಾಗಿದೆ ಎಂದು ತಿಳಿಸಿದರು.

ರಾಜ್ಯ ಕಾಂಗ್ರೆಸ್ ಸರ್ಕಾರ ಸಂಪೂರ್ಣ ಭ್ರಷ್ಟಾಚಾರ, ಹಗರಣಗಳಲ್ಲಿ ಮುಳುಗಿದೆ

ರಾಜ್ಯ ಕಾಂಗ್ರೆಸ್ ಸರ್ಕಾರ ಸಂಪೂರ್ಣ ಭ್ರಷ್ಟಾಚಾರ, ಹಗರಣಗಳಲ್ಲಿ ಮುಳುಗಿದೆ. ಮುಡಾ, ವಾಲ್ಮೀಕಿ ಹಗರಣ, ಬೋಗಸ್ ಗ್ಯಾರೆಂಟಿಗಳಿಂದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ರಾಜ್ಯವನ್ನು ಆರ್ಥಿಕ ದಿವಾಳಿತನದತ್ತ ಕೊಂಡೊಯ್ಯುತ್ತಿದೆ ಎಂದು ಸಚಿವ ಪ್ರಲ್ಹಾದ್‌ ಜೋಶಿ ಹರಿಹಾಯ್ದರು.

ಈ ಸುದ್ದಿಯನ್ನೂ ಓದಿ | Jog Falls: ಜೋಗ ಜಲಪಾತದ ಬಳಿ ರೋಪ್‌ವೇ, ಪಂಚತಾರಾ ಹೋಟೆಲ್: ಅರಣ್ಯ ಇಲಾಖೆ ಒಪ್ಪಿಗೆ

ಈ ವೇಳೆ ಕೇಂದ್ರದ ರೈಲ್ವೆ ರಾಜ್ಯ ಖಾತೆ ಸಚಿವ ವಿ. ಸೋಮಣ್ಣ, ಮಾಜಿ ಸಂಸದ ಪ್ರತಾಪ ಸಿಂಹ, ಡಾ. ಅಶ್ವಥ್ ನಾರಾಯಣ ಮತ್ತಿತರ ಪ್ರಮುಖರಿದ್ದರು.