ಬೆಂಗಳೂರು: ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ (Praveen Nettaru murder) ಪ್ರಕರಣದ ತನಿಖೆಯ ಭಾಗವಾಗಿ ಎನ್ಐಎ ಅಧಿಕಾರಿಗಳು (NIA raid) ಕರ್ನಾಟಕ ಮತ್ತು ತಮಿಳುನಾಡಿನ 16 ಕಡೆ ದಾಳಿ ನಡೆಸಿದ್ದಾರೆ.
ದಾಳಿಯ ಸಂದರ್ಭದಲ್ಲಿ ಡಿಜಿಟಲ್ ಸಾಧನಗಳು ಮತ್ತು ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಕರ್ನಾಟಕ, ತಮಿಳುನಾಡುಗಳಲ್ಲಿ 16 ಕಡೆ ನಿನ್ನೆ ಎನ್ಐಎ ದಾಳಿ ನಡೆಸಿತ್ತು. ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಆರೋಪಿಗಳು, ಶಂಕಾಸ್ಪದ ವ್ಯಕ್ತಿಗಳು, ಆರೋಪಿಗಳ ಸಹಚರರಿಗೆ ಸಂಬಂಧಿಸಿದ ಸ್ಥಳಗಳ ಮೇಲೆ ನಡೆದಿದ್ದ ದಾಳಿಯಲ್ಲಿ ಕೆಲವು ಡಿಜಿಟಲ್ ಸಾಧನಗಳು, ದಾಖಲೆಗಳನ್ನು ಜಪ್ತಿ ಮಾಡಲಾಗಿದೆ.
2022ರ ಜು.22ರಂದು ದುಷ್ಕರ್ಮಿಗಳು ಪ್ರವೀಣ್ ನೆಟ್ಟಾರು ಹತ್ಯೆ ಮಾಡಿದ್ದರು. ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದಲ್ಲಿ ಈವರೆಗೆ 19 ಜನರನ್ನು ಬಂಧಿಸಲಾಗಿದೆ. ಒಟ್ಟು 23 ಜನರ ವಿರುದ್ಧ ಎನ್ಐಎ ಅಧಿಕಾರಿಗಳ ತಂಡ ಚಾರ್ಜ್ಶೀಟ್ ಸಲ್ಲಿಸಿದೆ. ತಲೆಮರೆಸಿಕೊಂಡಿರುವ 7 ಆರೋಪಿಗಳಿಗೆ ಎನ್ಐಎ ನ್ಯಾಯಾಲಯ ಜಾಮೀನು ರಹಿತ ವಾರೆಂಟ್ ಹೊರಡಿಸಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆಯ ಸಿದ್ದೀಕ್, ನಾಪತ್ತೆಯಾಗಿರುವ ಮೂವರು ಆರೋಪಿಗಳಲ್ಲಿ ಒಬ್ಬನಾಗಿದ್ದಾನೆ. ಅಬೂಬಕ್ಕರ್ ಸಿದ್ಧೀಕ್ ಪತ್ನಿಯ ಸಹೋದರ ಕೆಯ್ಯೂರಿನ ಉಮ್ಮರ್ ಮನೆ ಮೇಲೆ ಕೂಡ ಬೆಂಗಳೂರಿನಿಂದ ಬಂದಿದ್ದ ಎನ್ಐಎ ಅಧಿಕಾರಿಗಳ ತಂಡ ದಾಳಿ ಮಾಡಿದೆ. ಸಿದ್ದೀಕ್ ಪತ್ತೆಗೂ ಎನ್ಐಎ ಎರಡು ಲಕ್ಷ ರೂ. ಬಹುಮಾನ ಘೋಷಿಸಿದೆ. ಹಲವು ಬಾರಿ ಸಿದ್ದಿಕ್ ಮನೆಗೂ ನೋಟಿಸ್ ನೀಡಲಾಗಿತ್ತು. ಇದೀಗ ಮತ್ತೆ ಮನೆಗೆ ದಾಳಿ ನಡೆಸಿ ಪರಿಶೀಲನೆ ಮಾಡಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ಪಡಂಗಡಿಯಲ್ಲಿರುವ ಆರೋಪಿ ನೌಷಾದ್ ಮನೆ ಮೇಲೆ NIA ಅಧಿಕಾರಿಗಳು ದಾಳಿ ಮಾಡಿದ್ದು, ದಾಳಿ ವಿಚಾರ ತಿಳಿದು ಮನೆ ಲಾಕ್ ಮಾಡಿ ಕುಟುಂಬ ಪರಾರಿ ಆಗಿದೆ. ನೌಷಾದ್ ಪತ್ತೆಗೂ ಎನ್ಐಎ 2 ಲಕ್ಷ ರೂ. ರಿವಾರ್ಡ್ ಘೋಷಿಸಿತ್ತು. ದಾಳಿಗೂ ಮುನ್ನವೇ ಒಬ್ಬಾತ ದಾಖಲೆ ಸಮೇತ ವಸ್ತುಗಳನ್ನು ತಗೆದುಕೊಂಡು ಹೋಗಿದ್ದುದು ತಿಳಿದುಬಂದಿದೆ. ದಾಳಿ ಮಾಡಿದ ಅಧಿಕಾರಿಗಳು ನೌಷಾದ್ ತಾಯಿ ಮತ್ತು ತಂಗಿಯನ್ನು ಮೊಬೈಲ್ ಲೋಕೆಷನ್ ಆಧಾರದಲ್ಲಿ ಪತ್ತೆ ಹಚ್ಚಿದ್ದಾರೆ. ನೌಷಾದ್ ಮನೆಯ ಬೀಗ ತೆಗೆಸಿ ಪರಿಶೀಲನೆ ಮಾಡಿದ್ದಾರೆ.