Wednesday, 4th December 2024

Puttanna Kanagal Birthday: ನಿರ್ಮಾಪಕ ಅಪ್ಪನಂತಿದ್ದರೆ, ನಿರ್ದೇಶಕ ಅಮ್ಮನಿದ್ದಂತೆ ಎಂದ ತಾರಾ

Puttanna Kanagal Birthday

ಬೆಂಗಳೂರು: ಇಲ್ಲಿ‌ ಕೆಟ್ಟ ನಿರ್ದೇಶಕರು, ಒಳ್ಳೆ ನಿರ್ದೇಶಕರು ಇಲ್ಲ. ಎಲ್ಲರೂ‌ ಒಂದಲ್ಲ ಒಂದು ರೀತಿಯಲ್ಲಿ ಪಾಠ ಹೇಳಿಕೊಟ್ಟವರೇ ಆಗಿದ್ದಾರೆ. ನನಗೆ ನಿರ್ಮಾಪಕ ಅಪ್ಪನಂತಿದ್ದರೆ, ನಿರ್ದೇಶಕ ನನಗೆ ಅಮ್ಮನಿದ್ದಂತೆ ಎಂದು ಹಿರಿಯ ನಟಿ ತಾರಾ ಅನುರಾಧ ತಿಳಿಸಿದರು. ಬೆಂಗಳೂರಿನ ಕೊಂಡಜ್ಜಿ ಬಸಪ್ಪ ಸಭಾಭವನದಲ್ಲಿ ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘ ಅಯೋಜಿಸಿದ್ದ ಭಾರತೀಯ ಚಿತ್ರರಂಗದ ದಿಗ್ಗಜ, ದಿವಂಗತ ಪುಟ್ಟಣ್ಣ ಕಣಗಾಲ್ ಅವರ ಜಯಂತಿ ಆಚರಣೆ (Puttanna Kanagal Birthday) ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ವಿಶ್ವನಾಥ್ ನೇತೃತ್ವದಲ್ಲಿ ನಿರ್ದೇಶಕರ ಸಂಘ ಉತ್ತಮ ಕೆಲಸ ಮಾಡುತ್ತಿದೆ. ನಾನು ಎಂದಿಗೂ ಸಂಘದ ಜತೆ ಇದ್ದೇನೆ ಎಂದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಕಾರ್ಯಕ್ರಮದ ಪ್ರಾರಂಭದಲ್ಲಿ ಎಲ್ಲಾ ಗಣ್ಯರು ದೀಪ ಬೆಳಗಿಸಿ, ಪುಟ್ಟಣ್ಣ ಕಣಗಾಲ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಇದೇ ಸಂದರ್ಭದಲ್ಲಿ ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘದ ಸದಸ್ಯರ ಕುಟುಂಬಸ್ಥರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಕೂಡ ಏರ್ಪಡಿಸಲಾಗಿತ್ತು. ಶಿಬಿರಕ್ಕೆ ಹಿರಿಯ ನಿರ್ದೇಶಕ ಸಾಯಿಪ್ರಕಾಶ್ ಚಾಲನೆ ನೀಡಿದರು.

ಚಲನಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷರು ಮತ್ತು ಚಲನಚಿತ್ರ ಪ್ರದರ್ಶಕರ ಸಂಘದ ಅಧ್ಯಕ್ಷ ಕೆ.ವಿ. ಚಂದ್ರಶೇಖರ್ ಮಾತನಾಡಿ, ಹಳೆಯ ಪದ್ದತಿಯನ್ನು‌ ಬದಲಾಯಿಸಲು‌ ಹೊಸ ಯುಗದಲ್ಲಿ ಆಗಲ್ಲ. ಇತ್ತೀಚಿನ ದಿನಗಳಲ್ಲಿ ನಿರ್ದೇಶಕರು, ನಿರ್ಮಾಪಕರು ಎರಡು ದಿನ ಚಿತ್ರಮಂದಿರಗಳಲ್ಲಿ ಚಿತ್ರ ಓಡಿಸಿ ನಂತರ ದೃಶ್ಯಕ್ಕೆ ಕತ್ತರಿ ಹಾಕಿ ಬರುತ್ತೇವೆ ಅಂತಾರೆ. ಆಗಲೇ ಚಿತ್ರದ ಬಗ್ಗೆ ಹೊರಗಡೆ ಬಾಯಿಯಿಂದ ಬಾಯಿಗೆ ತಲುಪಿರುತ್ತದೆ. ಅಂತಹ ಕೆಲಸ ನಂತರ ಮಾಡುವ ಬದಲು ಮೊದಲೆ ಒಂದಕ್ಕೆ ಎರಡು ಬಾರಿ ಚಿತ್ರ ನೋಡಿ ಏನು ಎಡಿಟ್ ಮಾಡಬೇಕೋ ಮಾಡಿ ಚಿತ್ರಮಂದಿರಕ್ಕೆ ಚಿತ್ರ ತನ್ನಿ ಎಂದು ನಿರ್ದೇಶಕರಿಗೆ ಸಲಹೆ ನೀಡಿದರು.

ಹಿರಿಯ ನಟ ಶ್ರೀನಿವಾಸ್ ಮೂರ್ತಿ, ಹಿರಿಯ ಕಲಾವಿದ ಶಿವಕುಮಾರ್, ನಟಿ ಶ್ರೀ ರಕ್ಷಾ ಶಿವಕುಮಾರ್, ಚಲನಚಿತ್ರ ಪತ್ರಕರ್ತರ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಬಾಡೂರು, ಪುಟ್ಟಣ ಕಣಗಾಲ್ ಪ್ರತಿಷ್ಠಾನದ ಅಧ್ಯಕ್ಷ ಸುಂದರೇಶ್, ವಾಣಿಜ್ಯ ಮಂಡಳಿಯ ಉಪಾಧ್ಯಕ್ಷ ನರಸಿಂಹಲು, ಸಂಕಲನಕಾರರ ಸಂಘದ ಅಧ್ಯಕ್ಷ ಕೆಂಪರಾಜು, ಛಾಯಾಗ್ರಾಹಕರ ಸಂಘದ ಅಧ್ಯಕ್ಷ ಜೆ.ಜಿ. ಕೃಷ್ಣ, ನಿರ್ಮಾಪಕರ ಸಂಘದ ಕಾರ್ಯದರ್ಶಿ ಪ್ರವೀಣ್, ಚಲನಚಿತ್ರ ನಿರ್ದೇಶಕ ಶಶಿಕಾಂತ್ ಗಟ್ಟಿ, ವೈಧ್ಯಾಧಿಕಾರಿಗಳಾದ ಭುಜಬಲಿ, ಜಯಶೇಖರ್ ಕಾರ್ಯಕ್ರಮದಲ್ಲಿ ಮಾತನಾಡಿದರು.

ಈ ಸುದ್ದಿಯನ್ನೂ ಓದಿ | Max Movie: ಕಿಚ್ಚ ಸುದೀಪ್ ಅಭಿನಯದ ಬಹು ನಿರೀಕ್ಷಿತ ʼಮ್ಯಾಕ್ಸ್ʼ ಸಿನಿಮಾ ಡಿ. 25ಕ್ಕೆ ಬಿಡುಗಡೆ

ಕಾರ್ಯಕ್ರಮದ ಪ್ರಾರಂಭದಲ್ಲಿ ಎಲ್ಲಾ ಗಣ್ಯರು ದೀಪ ಬೆಳಗಿಸಿ, ಪುಟ್ಟಣ್ಣನವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ನಂತರ ಪುಟ್ಟಣ್ಣ ಕಣಗಾಲ್ ಅವರ ಪುತ್ರಿ ರಾಜೇಶ್ವರಿ ಅವರನ್ನು ಸನ್ಮಾನಿಸಲಾಯಿತು.
ಬಳಿಕ ಪುಟ್ಟಣ್ಣ ಅವರ ನೆನಪಿಗಾಗಿ ‘ನಾಗರಹಾವು’ ಚಿತ್ರವನ್ನು ಪ್ರದರ್ಶಿಸಲಾಯಿತು. ಸಂಘದ ಉಪಾಧ್ಯಕ್ಷ ಜೋಸೈಮನ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಸೆಬಾಸ್ಟಿನ್ ಡೇವಿಡ್ ಸ್ವಾಗತಿಸಿದರು. ಸಂಘದ ಅಧ್ಯಕ್ಷ ಎನ್ನಾರ್ ಕೆ. ವಿಶ್ವನಾಥ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪಾಧ್ಯಕ್ಷ ಜಗದೀಶ್ ಕೊಪ್ಪ ವಂದಿಸಿದರು. ಈ ವೇಳೆ ಸಂಘದ ಖಜಾಂಚಿ ಆದಿತ್ಯ ಚಿಕ್ಕಣ್ಣ, ಜಂಟಿ ಕಾರ್ಯದರ್ಶಿ ಮಳವಳ್ಳಿ ಸಾಯಿಕೃಷ್ಣ, ಕಾರ್ಯಕಾರಿ ಸಮಿತಿ ಸದಸ್ಯರುಗಳಾದ ಮರಡಿಹಳ್ಳಿ ನಾಗಚಂದ್ರ, ಟಾಪ್ ಸ್ಟಾರ್ ರೇಣು ಕುಮಾರ್, ಎಸ್ ಆರ್ ಪ್ರಮೋದ್, ಅನುತೇಜಾ ಮತ್ತು ನಟರಾಜ್ ಹಾಗೂ ಇತರರಿದ್ದರು.