Friday, 22nd November 2024

R Ashok: ನಾನು ರಾಜೀನಾಮೆ ಕೊಡಲು ಸಿದ್ಧ, ಸಿಎಂ ಸಚಿವ ಸಂಪುಟ ಕೊಡುತ್ತದೆಯೇ: ಆರ್‌. ಅಶೋಕ್‌

R Ashok

ಬೆಂಗಳೂರು: ನನ್ನನ್ನು ಭೂ ಕಬಳಿಕೆದಾರ ಎಂದು ಕರೆದಿರುವ ಕಾಂಗ್ರೆಸ್‌ನ (Congress) ನಾಲ್ಕು ಸಚಿವರು ನೈತಿಕತೆಯ ಪ್ರಶ್ನೆ ಎತ್ತಿದ್ದಾರೆ. ಆದರೆ ಇದೇ ಕಾಂಗ್ರೆಸ್‌ನ ಕೇಂದ್ರ ಸರ್ಕಾರ ಅಂದು ನೇಮಿಸಿದ್ದ ರಾಜ್ಯಪಾಲರು ಮತ್ತು ಘನ ನ್ಯಾಯಾಲಯ ನಾನು ತಪ್ಪಿತಸ್ಥ ಅಲ್ಲ ಎಂದು ಅಭಿಪ್ರಾಯಪಟ್ಟಿದೆ. ಆದರೂ ಕಾಂಗ್ರೆಸ್‌ ಪಕ್ಷ ನ್ಯಾಯಾಲಯಕ್ಕಿಂತ ದೊಡ್ಡದಾಗಲು ಯತ್ನಿಸಿ ತೀರ್ಪು ನೀಡಲು ಮುಂದಾಗಿದೆ ಎಂದು ಪ್ರತಿಪಕ್ಷ ನಾಯಕ ಆರ್‌. ಅಶೋಕ್‌ (R Ashok) ಹೇಳಿದ್ದಾರೆ.

ತಮ್ಮ ಮೇಲಿನ ಆರೋಪ ಕುರಿತು ಆರ್‌. ಅಶೋಕ್‌ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟನೆ ನೀಡಿ ಮಾತನಾಡಿ, ಕಾಂಗ್ರೆಸ್‌ ಸರ್ಕಾರದ ನಾಲ್ವರು ಸಚಿವರು ನನ್ನ ಬಗ್ಗೆ ಕಳಂಕ ಸೃಷ್ಟಿಸಲು ಹಳೆಯ ಪ್ರಕರಣದ ಬಗ್ಗೆ ಮಾತನಾಡಿದ್ದಾರೆ. ಇದರಲ್ಲಿ ನೈತಿಕತೆಯ ಪ್ರಶ್ನೆ ಎತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮುಡಾ ಹಗರಣದಲ್ಲಿ ಅರಿಶಿನ-ಕುಂಕುಮದ ಮೂಲಕ ಭೂಮಿ ಬಂದಿದೆ. ಆದರೆ ನಾನು ಹಣ ಕೊಟ್ಟು ಭೂಮಿ ಖರೀದಿ ಮಾಡಿದ್ದೇನೆ. ಈ ಪ್ರಕರಣದ ಬಗ್ಗೆ ಆರೋಪ ಬಂದಾಗ ರಾಜ್ಯದಲ್ಲಿ ಕಾಂಗ್ರೆಸ್‌ನ ಕೇಂದ್ರ ಸರ್ಕಾರವೇ ನೇಮಿಸಿದ ರಾಜ್ಯಪಾಲ ಹಂಸರಾಜ್‌ ಭಾರಧ್ವಾಜ್‌ ಇದ್ದರು. ಅವರು ಕೂಡ ಈ ಪ್ರಕರಣವನ್ನು ತನಿಖೆಗೆ ವಹಿಸಿಲ್ಲ. ಅಷ್ಟೇ ಅಲ್ಲದೆ ನ್ಯಾಯಾಲಯ ಕೂಡ ಇದರ ವಿರುದ್ಧ ತನಿಖೆ ಮಾಡಿಸಲು ಮುಂದಾಗಲಿಲ್ಲ. ರಾಜ್ಯಪಾಲರು ಹಾಗೂ ನ್ಯಾಯಾಲಯವೇ ನಾನು ತಪ್ಪಿತಸ್ಥ ಅಲ್ಲ ಎಂದು ಅಭಿಪ್ರಾಯಪಟ್ಟರೆ, ಕಾಂಗ್ರೆಸ್‌ ಪಕ್ಷ ಮಾತ್ರ ಇದರಲ್ಲಿ ತೀರ್ಪು ನೀಡಲು ಮುಂದಾಗಿದೆ. ಅಂದರೆ ಕಾಂಗ್ರೆಸ್‌ ಪಕ್ಷ ತನ್ನನ್ನು ನ್ಯಾಯಾಲಯಕ್ಕಿಂತ ದೊಡ್ಡದು ಎಂದುಕೊಂಡಿದೆ ಎಂದು ವ್ಯಂಗ್ಯವಾಡಿದರು.

ಈ ಸುದ್ದಿಯನ್ನೂ ಓದಿ | IndiGo Flight: ವಿಮಾನ ಹಾರಿಸಲು ನಿರಾಕರಿಸಿದ ಪೈಲಟ್; ಪುಣೆ-ಬೆಂಗಳೂರು ಇಂಡಿಗೋ ಫ್ಲೈಟ್ 5 ಗಂಟೆ ವಿಳಂಬ

ನಾನು ಆರೋಪ ಮುಕ್ತ, ಸಿದ್ದರಾಮಯ್ಯ ಅಲ್ಲ

ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮುಡಾ ಹಗರಣ ತನಿಖೆಯಾಗಬೇಕಾದ ಪ್ರಕರಣ ಎಂದು ಹೈಕೋರ್ಟ್‌ ಅಭಿಪ್ರಾಯಪಟ್ಟಿದೆ. ತೀರ್ಪು ಬಂದ ಬಳಿಕ ಮುಖ್ಯಮಂತ್ರಿಯವರು ಭಯಗೊಂಡು ನಿವೇಶನಗಳನ್ನು ಹಿಂದಿರುಗಿಸಿದ್ದಾರೆ. ಆದರೆ ನಾನು ಕೋರ್ಟ್‌ ಆದೇಶ ಬರುವ ಮುನ್ನವೇ ನಿವೇಶನ ಹಿಂದಿರುಗಿಸಿದ್ದೆ. ಕೋರ್ಟ್‌ನಲ್ಲಿ ನಾನು ಆಪಾದಿತ ಎಂದು ಹೇಳಿರಲಿಲ್ಲ. ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಕೂಡ ನನ್ನನ್ನು ಆರೋಪ ಮುಕ್ತ ಮಾಡಲಾಗಿದೆ. ಆದರೆ ಸಿಎಂ ಸಿದ್ದರಾಮಯ್ಯ ಇನ್ನೂ ಆರೋಪ ಮುಕ್ತವಾಗಿಲ್ಲ. ಈ ದೇಶದಲ್ಲಿ ಕೋರ್ಟ್‌ ದೊಡ್ಡದೋ, ಕಾಂಗ್ರೆಸ್‌ ದೊಡ್ಡದೋ ಎಂದು ಪ್ರಶ್ನೆ ಮಾಡಿದರು.

ಕಾಂಗ್ರೆಸ್‌ ಪಕ್ಷ ಕೋರ್ಟ್‌ಗಿಂತ ದೊಡ್ಡದಲ್ಲ. ಸಚಿವರಾದ ಕೃಷ್ಣ ಭೈರೇಗೌಡರ ಕೋಲಾರದ ಆಸ್ತಿಗಳೆಲ್ಲವೂ ಕುಟುಂಬದಿಂದ ಅವರಿಗೆ ಬಂದಿದೆ. ಅದೇ ರೀತಿ ಮುನಿವೆಂಕಟಪ್ಪ ಅವರು ವಿಲ್‌ ತಯಾರಿಸಿ ಅವರ ಮಕ್ಕಳಿಗೆ ಆಸ್ತಿ ಕೊಟ್ಟಿದ್ದಾರೆ. ಆ ಕುಟುಂಬದಲ್ಲಿ ಸುಮಾರು 20 ಜನರಿದ್ದು, ನನ್ನ ಹೆಸರಿಗೆ ನೋಂದಣಿಯಾದಾಗ ಆ 20 ಜನರು ಕೂಡ ಸಹಿ ಹಾಕಿದ್ದಾರೆ. ಇದು ಹೇಗೆ ಬೇನಾಮಿಯಾಗುತ್ತದೆ? ಎಂದು ಪ್ರಶ್ನಿಸಿದರು.

1995 ರಲ್ಲಿ ಆಗಿರುವ ಪಹಣಿಯಲ್ಲಿ ಇಡೀ ಕುಟುಂಬದವರ ಹೆಸರಿದೆ. ಆದರೆ ಇದು ಬಿಡಿಎ ಭೂಮಿ ಎಂದು ಸಚಿವರು ಸುಳ್ಳು ಹೇಳಿದ್ದಾರೆ. ಇದನ್ನು ಬಿ.ಎಸ್‌. ಯಡಿಯೂರಪ್ಪ ಅಕ್ರಮವಾಗಿ ಡಿ ನೋಟಿಫೈ ಮಾಡಿದ್ದಾರೆ ಎಂದು ಕೂಡ ಸುಳ್ಳು ಆರೋಪ ಮಾಡಿದ್ದಾರೆ. ಸುಮಾರು 1 ಎಕರೆ ವ್ಯಾಪ್ತಿಯ ಈ ಜಾಗ, ಹೊರವರ್ತುಲ ರಸ್ತೆಯ ಪಕ್ಕವಿದೆ. ರಸ್ತೆಗೆ ಅಗತ್ಯವಿರುವ ಭೂಮಿ ಪಡೆದು, ಉಳಿದಿದ್ದನ್ನು ಡಿನೋಟಿಫೈ ಮಾಡಲು ತೀರ್ಮಾನಿಸಲಾಗಿತ್ತು ಎಂದೇ ಅಂದು ಸಿಎಂ ಆಗಿದ್ದ ಎಸ್‌.ಎಂ.ಕೃಷ್ಣ ಹೇಳಿದ್ದರು. ಈ ಭೂಮಿ 70:30 ಅನುಪಾತದಲ್ಲಿ ಹಂಚಿಕೆಯಾಗಿದೆ. ಅಂದರೆ 70% ಸರ್ಕಾರಕ್ಕೆ ಹಾಗೂ 30% ಮಾಲೀಕರಿಗೆ ನೀಡಲಾಗಿದೆ. ಅಂದರೆ ಬಿಡಿಎಗೆ ಹೆಚ್ಚು ಲಾಭವಾಗಿದೆ. ಉಳಿದ ಜಮೀನು ಅಗತ್ಯವಿಲ್ಲವೆಂದು ಸರ್ಕಾರವೇ ವಾಪಸ್‌ ನೀಡಿದೆ. ಬಿಡಿಎದಿಂದಲೇ ಭೂ ಮಾಲೀಕರಿಗೆ ಪತ್ರ ಬರೆದಿದ್ದು, ಅದರಂತೆ ಭೂಮಿಯನ್ನು ಬಿಟ್ಟುಕೊಡಲಾಗಿದೆ. ಇಲ್ಲಿ ಎಲ್ಲವೂ ಕಾನೂನು ಪ್ರಕಾರವೇ ನಡೆದಿದೆ. ನನ್ನ ವಿರುದ್ಧ ತನಿಖೆ ನಡೆಸಲು ಅನುಮತಿ ಕೊಡುವಂತೆ ರಾಜ್ಯಪಾಲರಾಗಿದ್ದ ಹಂಸರಾಜ್‌ ಭಾರಧ್ವಾಜ್‌ ಅವರನ್ನು ಕೋರಲಾಗಿತ್ತು. ಆದರೆ ರಾಜ್ಯಪಾಲರು ಕೂಡ ನನ್ನ ವಿರುದ್ಧ ತನಿಖೆಗೆ ಅವಕಾಶ ನೀಡಲಿಲ್ಲ. ಆದರೂ ನನ್ನನ್ನು ಕಾಂಗ್ರೆಸ್‌ ಸಚಿವರು ಭೂ ಕಬಳಿಕೆದಾರ ಎನ್ನುತ್ತಿದ್ದಾರೆ. ಕಾಂಗ್ರೆಸ್‌ನ ರಾಜ್ಯಪಾಲರಾಗಲೀ, ನ್ಯಾಯಾಲಯವಾಗಲೀ ನನ್ನನ್ನು ತಪ್ಪಿತಸ್ಥ ಎಂದು ಭಾವಿಸಿಲ್ಲ. ಆದರೆ ಈಗ ಸಿದ್ದರಾಮಯ್ಯನವರಿಗೆ ನನ್ನನ್ನು ಹೋಲಿಸಲಾಗುತ್ತಿದೆ ಎಂದರು.

ಈ ಸುದ್ದಿಯನ್ನೂ ಓದಿ | BSNL Offers: ಬಿಎಸ್‌ಎನ್‌ಎಲ್ ಗ್ರಾಹಕರಿಗೆ ವಿಶೇಷ ಆಫರ್: 24ಜಿಬಿ 4ಜಿ ಡೇಟಾ ಉಚಿತ

ರಾಜೀನಾಮೆ ನೀಡುತ್ತಾರೆಯೇ?

ಕಂದಾಯ ಸಚಿವ ಕೃಷ್ಣ ಬೈರೇಗೌಡರ ಬಳಿ ಅಧಿಕಾರವಿದೆ. ಎಚ್‌.ಕೆ. ಪಾಟೀಲ್‌ ಹಾಗೂ ಡಾ.ಜಿ. ಪರಮೇಶ್ವರ್‌ ಹಿರಿಯರು. ಸತೀಶ್‌ ಜಾರಕಿಹೊಳಿ ಮಾತ್ರ ಈ ಬಗ್ಗೆ ಮಾತಾಡಿಲ್ಲ. ಏಕೆಂದರೆ ಇದು ಬುರುಡೆ ಕೇಸ್‌ ಎಂದು ಅವರಿಗೂ ಗೊತ್ತಿತ್ತು. ಈ ನಾಲ್ಕು ಸಚಿವರು ನನಗೆ ಆದರ್ಶವಾಗಿದ್ದಾರೆ. ಕೃಷ್ಣ ಬೈರೇಗೌಡರು ಈ ಹಿಂದೆ ವಿಧಾನಸಭೆಯಲ್ಲಿ ಅಶೋಕ್‌ ನಮ್ಮ ಬಂಧುಗಳು ಎಂದು ಹೇಳಿದ್ದರು. ನಾನು ಕನ್ನಡ ಶಾಲೆಯಲ್ಲಿ ಓದಿದವನು. ಆದರೆ ರಾಜ್ಯಪಾಲರಿಗೆ ಇಂಗ್ಲಿಷ್‌ನಲ್ಲಿ ಪತ್ರ ಬರೆಯಬೇಕಾಗುತ್ತದೆ. ಸ್ಪೀಕರ್‌ಗೂ ಇಂಗ್ಲಿಷ್‌ನಲ್ಲೇ ಪತ್ರ ಬರೆಯಬೇಕಾಗುತ್ತದೆ. ನಾನೀಗ ಏನು ಮಾಡಬೇಕು ಹಾಗೂ ಯಾರಿಗೆ ಪತ್ರ ಬರೆಯಬೇಕೆಂದು ಕೃಷ್ಣ ಬೈರೇಗೌಡರು ತಿಳಿಸಿದರೆ ನಾನು ಹಾಗೆಯೇ ನಡೆದುಕೊಳ್ಳುತ್ತೇನೆ. ನಾನು ಯಾವುದೇ ಸಚಿವರಿಗೆ ಸವಾಲು ಹಾಕುತ್ತಿಲ್ಲ. ನನಗೆ ಯಾವುದೇ ಆಯ್ಕೆ ಇಲ್ಲ. ಈ ನಾಲ್ಕು ಸಚಿವರು ನೈತಿಕತೆಯ ಆಧಾರದಲ್ಲಿ ಏನು ಹೇಳುತ್ತಾರೋ, ಅದನ್ನೇ ಪಾಲನೆ ಮಾಡುತ್ತೇನೆ ಎಂದರು.

ಎದೆಯಲ್ಲಿ ಯಾರಿದ್ದಾರೆಂದು ತೋರಿಸಲಿ

ನಾನು 24 ಗಂಟೆ ಗಡುವು ನೀಡುತ್ತೇನೆ. ನೈತಿಕತೆಯ ಆಧಾರದಲ್ಲಿ ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಲಿ. ಸಚಿವ ಸಂಪುಟದ ಎಲ್ಲ ಸಚಿವರು ಮುಖ್ಯಮಂತ್ರಿಗಾಗಿ ಪ್ರಾಣಕ್ಕೆ ಪ್ರಾಣ ಕೊಡುತ್ತೇವೆ, ಬಂಡೆಯಂತೆ ನಿಂತಿದ್ದೇವೆ ಎಂದು ಹೇಳಿದ್ದಾರೆ. ಆಂಜನೇಯ ಎದೆ ಬಗೆದು ಶ್ರೀರಾಮನನ್ನು ತೋರಿಸಿದಂತೆ ನಮ್ಮ ಎದೆಯಲ್ಲೂ ಸಿದ್ದರಾಮಯ್ಯ ಇದ್ದಾರೆ ಎಂಬಂತೆ ಈ ಸಚಿವರು ಹೇಳಿದ್ದಾರೆ. ಈಗ ಎಲ್ಲ ಸಚಿವರಿಗೆ ರಾಜೀನಾಮೆ ಕೊಡುವ ಅವಕಾಶವಿದೆ. ಮೊದಲು ಈ ನಾಲ್ಕು ಸಚಿವರು ಸಿದ್ದರಾಮಯ್ಯನವರಿಗಾಗಿ ರಾಜೀನಾಮೆ ನೀಡಲಿ. ಈ ಮೂಲಕ ಅವರ ಎದೆಯಲ್ಲಿ ಸಿದ್ದರಾಮಯ್ಯ ಇದ್ದಾರೆಯೇ? ಡಿ.ಕೆ. ಶಿವಕುಮಾರ್‌ ಅಥವಾ ಮಲ್ಲಿಕಾರ್ಜುನ ಖರ್ಗೆ ಇದ್ದಾರೆಯೇ ಎಂದು ಗೊತ್ತಾಗಲಿ. ಅವರೆಲ್ಲರೂ ರಾಜೀನಾಮೆ ನೀಡುವುದಾದರೆ ನಾನು ಕೂಡ ರಾಜೀನಾಮೆ ನೀಡುತ್ತೇನೆ ಎಂದರು.

ನಾನು ಎಲ್ಲೂ ವೈಯಕ್ತಿಕ ಟೀಕೆ ಮಾಡುವುದಿಲ್ಲ

ನನಗೆ ಕಳಂಕ ತರಲು ಮಾಡುತ್ತಿರುವ ಷಡ್ಯಂತ್ರ ಸರಿಯಲ್ಲ. ನಾನು ಎಲ್ಲೂ ವೈಯಕ್ತಿಕ ಟೀಕೆ ಮಾಡುವುದಿಲ್ಲ. ನೀವೇನೋ ರಾಜಕಾರಣ ಮಾಡುತ್ತೀರ, ಮನೆಯವರನ್ನು ಯಾಕೆ ತರುತ್ತೀರ ಎಂದು ಸಿದ್ದರಾಮಯ್ಯನವರ ಪತ್ನಿ ಹೇಳಿದ್ದರು. ನನಗೆ ಅದರ ಬಗ್ಗೆ ಸಹಮತವಿದೆ. ಆದ್ದರಿಂದ ನಾನು ಯಾವುದೇ ಸಚಿವರ ಕುಟುಂಬದ ವೈಯಕ್ತಿಕ ವಿಚಾರಕ್ಕೆ ಹೋಗುವುದಿಲ್ಲ. ವಿರೋಧ ಪಕ್ಷದಲ್ಲಿರುವುದರಿಂದ ನನ್ನ ಕರ್ತವ್ಯ ಮಾತ್ರ ಮಾಡುತ್ತಿದ್ದೇನೆ ಎಂದು ತಿಳಿಸಿದರು.

ಮಾಜಿ ಲೋಕಾಯಕ್ತ ಸಂತೋಷ್‌ ಹೆಗ್ಡೆ, ಮಾಜಿ ಸ್ಪೀಕರ್‌ ಕೆ.ಬಿ.ಕೋಳಿವಾಡ ಕೂಡ ಮುಖ್ಯಮಂತ್ರಿಯ ರಾಜೀನಾಮೆ ಕೇಳಿದ್ದಾರೆ. ನಿಮ್ಮ ವಿರುದ್ಧ ಆರೋಪ ಬಂದಿರುವಾಗ ಕೋರ್ಟ್‌ನಲ್ಲಿ ಪರಿಹರಿಸಿಕೊಳ್ಳಬೇಕು, ಅದನ್ನು ಬಿಟ್ಟು ವಿರೋಧ ಪಕ್ಷದವರ ಮೇಲೆ ಸೇಡು ತೀರಿಸಿಕೊಳ್ಳಲು ಮುಂದಾಗಬಾರದು. ನನಗೆ ಯಾರ ಮೇಲೂ ದ್ವೇಷದ ಭಾವನೆ ಇಲ್ಲ. ಯಾರಿಗೂ ಸವಾಲು ಹಾಕಿಲ್ಲ ಎಂದರು.

ಈ ಸುದ್ದಿಯನ್ನೂ ಓದಿ | BESCOM: ಬೆಸ್ಕಾಂ ಗ್ರಾಹಕರೇ ಗಮನಿಸಿ; ಅ.5, 6 ರಂದು ಆನ್‌ಲೈನ್‌ ಸೇವೆ ಅಲಭ್ಯ

ಹಿಂದೂ ನಿಂದನೆ ನಿಲ್ಲಿಸಿ

ವೀರ ಸಾವರ್ಕರ್‌ ಕುರಿತು ಕಾಂಗ್ರೆಸ್‌ ನಾಯಕರು ಆಪಾದನೆ ಮಾಡಬಾರದು. ಹಿಂದೂಗಳನ್ನು ಕಂಡರೆ ಕಾಂಗ್ರೆಸ್‌ಗೆ ಆಗಲ್ಲ. ಹಿಂದೂಗಳನ್ನು ನಿಂದಿಸುವ ಮನಸ್ಥಿತಿಯನ್ನು ಬದಲಿಸಿಕೊಳ್ಳಲಿ. ನೀವೆಲ್ಲ ಹಿಂದೂಗಳಾ? ನಿಮಗೆ ನಿಂದಿಸಲು ಹಿಂದೂಗಳೇ ಸಿಗುವುದೇ? ಎಂದು ಆರ್‌. ಅಶೋಕ್‌ ಪ್ರಶ್ನೆ ಮಾಡಿದರು.