ಬೆಂಗಳೂರು: ಸರ್ಕಾರಿ ಆಸ್ಪತ್ರೆಗಳಲ್ಲಿ ಬಾಣಂತಿಯರು ಹಾಗೂ ಮಕ್ಕಳು ಸಾಯುತ್ತಿರುವಾಗ ಕಾಂಗ್ರೆಸ್ 20 ಕೋಟಿ ರೂ. ಖರ್ಚು ಮಾಡಿ ಸಮಾವೇಶ ಮಾಡಿದೆ. ಮಕ್ಕಳನ್ನು ಉಳಿಸದೆ ನೂರು ಸಮಾವೇಶ ಮಾಡಿದರೂ ಸರ್ಕಾರಕ್ಕೆ ಜನರ ಶಾಪ ತಟ್ಟದೆ ಇರುವುದಿಲ್ಲ ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ್ (R Ashok) ಆಕ್ರೋಶ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಆರೋಗ್ಯ ಇಲಾಖೆ ಅನಾರೋಗ್ಯ ಇಲಾಖೆಯಾಗಿ ಬದಲಾಗಿದೆ. ಬಳ್ಳಾರಿ ಆಸ್ಪತ್ರೆಯಲ್ಲಿ ಐವಿ ದ್ರಾವಣದಿಂದಾಗಿ ತಾಯಂದಿರು ಮೃತಪಟ್ಟಿದ್ದಾರೆ. ನಾನು ಹೋಗಿ ಎಚ್ಚರಿಕೆ ನೀಡಿದ ನಂತರವೂ ತಾಯಂದಿರು ಮೃತಪಟ್ಟಿದ್ದಾರೆ. ಹತ್ತು ತಿಂಗಳಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ 111 ನವಜಾತ ಶಿಶುಗಳು ಹಾಗೂ ಎಂಟು ತಿಂಗಳಲ್ಲಿ ಸುಮಾರು 28 ಬಾಣಂತಿಯರು ಸಾವನ್ನಪ್ಪಿದ್ದಾರೆ. ಮಹಿಳೆಯರಿಗೆ 2 ಸಾವಿರ ರೂ. ನೀಡುವ ಬದಲು ತಾಯಂದಿರ ಸಾವಿಗೆ ನ್ಯಾಯ ಕೊಡಿ ಎಂದು ಆಗ್ರಹಿಸಿದರು.
ಈ ಸುದ್ದಿಯನ್ನೂ ಓದಿ | Interest Rate: ಫೆಬ್ರವರಿಯಲ್ಲಿ ನಿಮ್ಮ ಗೃಹ ಸಾಲ ಬಡ್ಡಿ ಇಳಿಕೆ? ಆರ್‌ಬಿಐನಿಂದ ಸಿಆರ್‌ಆರ್ ಕಟ್
ಕೋವಿಡ್ ಸಮಯದಲ್ಲಿ ರಾಹುಲ್ ಗಾಂಧಿ, ಡಿ.ಕೆ. ಶಿವಕುಮಾರ್ ಹಾಗೂ ಸಿದ್ದರಾಮಯ್ಯ, ಜನರ ಬಳಿಗೆ ಹೋಗಿ ಟವೆಲ್‌ನಲ್ಲಿ ಕಣ್ಣೀರು ಒರೆಸಿಕೊಂಡರು. ಈಗ ತಾಯಂದಿರು ಮೃತಪಟ್ಟಿರುವಾಗ ಜನಕಲ್ಯಾಣ ಸಮಾವೇಶ ಮಾಡಿದ್ದಾರೆ. ಆ ಸಮಾವೇಶದಲ್ಲಿ ರಾಜಕೀಯ ಮಾತಾಡುವುದು ಬಿಟ್ಟರೆ, ಜನರ ಪರವಾಗಿ ಮಾತಾಡಿಲ್ಲ. 28 ಔಷಧಿಗಳು ಕಳಪೆ ಎಂದ ಮೇಲೂ ಅದೇ ಕಂಪನಿಯಿಂದ ಔಷಧಿ ಖರೀದಿಸಲಾಗಿದೆ. ಮಕ್ಕಳನ್ನು ಉಳಿಸುವ ಕೆಲಸ ಮಾಡದೆ ನೂರು ಸಮಾವೇಶ ಮಾಡಿದರೂ ಶಾಪ ಹಾಗೂ ಪಾಪ ತಟ್ಟಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸಾವಿನ ಹೊಣೆಯನ್ನು ಹೊತ್ತು ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು
ಮುಖ್ಯಮಂತ್ರಿ ಸಿದ್ದರಾಮಯ್ಯ ಸಭೆ ಮಾಡಿದ ನಂತರವೂ ತಾಯಂದಿರು ಸಾಯುತ್ತಿದ್ದಾರೆ ಎಂದು ಮುಖ್ಯಮಂತ್ರಿಗೆ ಸರ್ಕಾರದಲ್ಲಿ ಹಿಡಿತವಿಲ್ಲ ಎಂದರ್ಥ. ಈ ಸಾವಿನ ಹೊಣೆಯನ್ನು ಹೊತ್ತು ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು. ಕಾಂಗ್ರೆಸ್ ನಾಯಕರು ಜನರ ಹಿತ ಕಡೆಗಣಿಸಿ ವಿರೋಧ ಪಕ್ಷಗಳನ್ನು ಬಗ್ಗುಬಡಿಯುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ದೂರಿದರು.
ಈ ಸುದ್ದಿಯನ್ನೂ ಓದಿ | PMSGMBY: ಸೂರ್ಯ ಘರ್ ಯೋಜನೆ; ಐದೇ ನಿಮಿಷದಲ್ಲಿ ಅರ್ಜಿ ಸಲ್ಲಿಸಿ!
ಈ ಕುರಿತು ಲೋಕಾಯುಕ್ತಕ್ಕೆ ಪತ್ರ
ನಾನು ಈಗಾಗಲೇ ಲೋಕಾಯುಕ್ತ ತನಿಖೆಗೆ ಆಗ್ರಹಿಸಿದ್ದೇನೆ. ಈ ಕುರಿತು ಲೋಕಾಯುಕ್ತಕ್ಕೆ ಪತ್ರ ಕೂಡ ಬರೆಯುತ್ತೇನೆ. ಇದನ್ನು ವಿಧಾನಸಭೆಯಲ್ಲಿ ಪ್ರಸ್ತಾಪ ಮಾಡದೆ ಬಿಡುವುದಿಲ್ಲ. ಸಿಎಂ ಸಿದ್ದರಾಮಯ್ಯ ಸಂತ್ರಸ್ತ ಕುಟುಂಬಗಳಿಗೆ ಸಾಂತ್ವನ ಹೇಳುವ ಕೆಲಸ ಮಾಡಿಲ್ಲ. ಜಿಡಿಪಿಯಲ್ಲಿ ನಂಬರ್ 1 ಎನ್ನುವ ಸಿಎಂ ಸಿದ್ದರಾಮಯ್ಯ ಬಾಣಂತಿಯರ ಸಾವಿನಲ್ಲೂ ನಂಬರ್ 1 ಎಂದು ಹೇಳಲಿ ಎಂದರು.