ಬೆಂಗಳೂರು: ಭತ್ತ ಮತ್ತು ತೊಗರಿ ಖರೀದಿ ಕೇಂದ್ರಗಳನ್ನು ತೆರೆದು ರೈತರಿಗೆ ನೆರವಾಗಬೇಕೆಂದು ರಾಜ್ಯ ಸರ್ಕಾರವನ್ನು ಆಗ್ರಹಿಸಿರುವ ಪ್ರತಿಪಕ್ಷ ನಾಯಕ ಆರ್.ಅಶೋಕ್ (R Ashok), ಸರ್ಕಾರ ಕೂಡಲೇ ಈ ಕ್ರಮ ಕೈಗೊಳ್ಳದಿದ್ದರೆ ರೈತ ಸಂಪರ್ಕ ಕೇಂದ್ರಗಳಿಗೆ ಬೀಗ ಜಡಿದು ಪ್ರತಿಭಟಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಭತ್ತ ಮತ್ತು ತೊಗರಿ ಖರೀದಿ ಕೇಂದ್ರಗಳನ್ನು ತೆರೆಯಬೇಕೆಂದು ಹಲವಾರು ಬಾರಿ ಸರ್ಕಾರಕ್ಕೆ ಒತ್ತಾಯ ಮಾಡಿದ್ದರೂ ಅತ್ತ ಗಮನ ಹರಿಸದ ಕಾಂಗ್ರೆಸ್ ಸರ್ಕಾರ ರೈತರನ್ನು ಸಂಕಷ್ಟಕ್ಕೆ ದೂಡಿದೆ. ಇನ್ನು 24 ಗಂಟೆಯೊಳಗೆ ಭತ್ತ ಮತ್ತು ತೊಗರಿ ಖರೀದಿ ಕೇಂದ್ರಗಳನ್ನು ತೆರೆದು, ಖರೀದಿ ಆರಂಭಿಸದಿದ್ದರೆ ರೈತ ಸಂಪರ್ಕ ಕೇಂದ್ರಗಳಿಗೆ ಬೀಗ ಜಡಿದು ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.
ಈ ಸುದ್ದಿಯನ್ನೂ ಓದಿ | Bengaluru International Film Festival: ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ನಟ ಕಿಶೋರ್ ರಾಯಭಾರಿ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಡಿನ್ನರ್ ಸಭೆಗಳು, ಔತಣಕೂಟಗಳು, ರಾಜಕೀಯ ಮೇಲಾಟಗಳಲ್ಲೇ ನಿರತರಾಗಿದ್ದಾರೆ. ಈ ಕೆಲಸಗಳು ಮುಗಿದಿದ್ದರೆ ಸ್ವಲ್ಪ ರೈತರ ಸಮಸ್ಯೆಗಳತ್ತ ಗಮನ ಹರಿಸುವ ದೊಡ್ಡ ಮನಸ್ಸು ಮಾಡಬೇಕು. ಬಿಡುವು ಇಲ್ಲದಿದ್ದರೆ ಕನಿಷ್ಠ ಪಕ್ಷ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಅವರಿಗಾದರೂ, ಅವರು ಕೃಷಿ ಸಚಿವರು ಎಂಬುದನ್ನು ಒಮ್ಮೆ ನೆನಪು ಮಾಡಬೇಕು ಎಂದು ಅವರು ವ್ಯಂಗ್ಯವಾಡಿದ್ದಾರೆ.
ರೈತರ ಕಷ್ಟ ಕೇಳಲು ಸರ್ಕಾರವೇ ಇಲ್ಲದಂತಾಗಿದೆ
ಈ ದರಿದ್ರ ಸರ್ಕಾರದಲ್ಲಿ ಒಬ್ಬರು ಕುರ್ಚಿ ಉಳಿಸಿಕೊಳ್ಳಲು ತಂತ್ರ ಹೆಣೆಯುತ್ತಿದ್ದರೆ, ಇನ್ನೊಬ್ಬರು ಕುರ್ಚಿ ಕಿತ್ತುಕೊಳ್ಳಲು ಕತ್ತಿ ಮಸೆಯುತ್ತಿದ್ದಾರೆ. ಇವರಿಬ್ಬರ ನಡುವೆ ಅತಂತ್ರವಾಗಿರುವ ಸಚಿವರು ಅವರವರ ಅಸ್ತಿತ್ವ ಉಳಿಸಿಕೊಳ್ಳಲು ಡಿನ್ನರ್ ಮೀಟಿಂಗ್, ಸೀಕ್ರೆಟ್ ಸಭೆ ಮಾಡಿ ಕಾಲಹರಣ ಮಾಡುತ್ತಿದ್ದಾರೆ. ಗಂಡ ಹೆಂಡತಿ ಜಗಳದಲ್ಲಿ ಕೂಸು ಬಡವಾಯಿತು ಎಂಬಂತೆ ಇವೆಲ್ಲದರ ನಡುವೆ ರಾಜ್ಯದಲ್ಲಿ ಆಡಳಿತ ಯಂತ್ರ ಸಂಪೂರ್ಣ ಕುಸಿದು ರೈತರ ಕಷ್ಟ ಕೇಳಲು ಸರ್ಕಾರವೇ ಇಲ್ಲದಂತಾಗಿದೆ ಎಂದು ಆರ್.ಅಶೋಕ್ ಆರೋಪಿಸಿದ್ದಾರೆ.
ಮಂಡ್ಯದಲ್ಲಿ ಭತ್ತ ಖರೀದಿ ಕೇಂದ್ರಗಳು ಆರಂಭವಾಗದೆ, ರೈತರು ಬೆಂಬಲ ಬೆಲೆಗಿಂತ ಕಡಿಮೆ ದರಕ್ಕೆ ದಲ್ಲಾಳಿಗಳಿಗೆ ಭತ್ತ ಮಾರಾಟ ಮಾಡುವ ಅನಿವಾರ್ಯ ಎದುರಾಗಿದೆ. ಕ್ವಿಂಟಾಲ್ ಭತ್ತಕ್ಕೆ ₹3,000 ಬೆಂಬಲ ಬೆಲೆ ನಿಗದಿಯಾಗಿದ್ದರೂ ಸರ್ಕಾರ ಭತ್ತ ಖರೀದಿ ಕೇಂದ್ರಗಳನ್ನು ತೆರೆಯದ ಕಾರಣ ದಲ್ಲಾಳಿಗಳಿಗೆ ₹1,800 ದಿಂದ ₹2,000 ಕ್ಕೆ ಮಾರಾಟ ಮಾಡಿ ರೈತರು ನಷ್ಟ ಅನುಭವಿಸುತ್ತಿದ್ದಾರೆ. ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಅವರ ತವರು ಜಿಲ್ಲೆಯಲ್ಲೇ ಈ ಗತಿಯಾದರೆ, ಇನ್ನು ಬೇರೆ ಜಿಲ್ಲೆಗಳ ಗತಿ ಏನಾಗಿರಬಹುದು ಎನ್ನುವುದನ್ನು ಹೇಳಬೇಕಿಲ್ಲ ಎಂದು ಅವರು ದೂರಿದ್ದಾರೆ.
ಈ ಸುದ್ದಿಯನ್ನೂ ಓದಿ | Karnataka Police: 11 ಡಿವೈಎಸ್‌ಪಿಗಳ ವರ್ಗಾವಣೆ ಮಾಡಿ ಸರ್ಕಾರ ಆದೇಶ
ಇದುವರೆಗೂ ರಾಜ್ಯ ಸರ್ಕಾರ ಪರಿಹಾರದ ಮಾತೇ ಆಡಿಲ್ಲ
ಕಲ್ಯಾಣ ಕರ್ನಾಟಕದ ಪ್ರಮುಖ ವಾಣಿಜ್ಯ ಬೆಳೆಯಾದ ತೊಗರಿ ಬೆಲೆ ದಿನದಿಂದ ದಿನಕ್ಕೆ ಇಳಿಕೆ ಕಾಣುತ್ತಿದ್ದು, ಸರ್ಕಾರ ಯಾವಾಗ ತೊಗರಿ ಖರೀದಿ ಕೇಂದ್ರ ತೆರೆಯಲಿದೆ ಎಂದು ರೈತರು ಕಾತರದಿಂದ ಎದುರು ನೋಡುತ್ತಿದ್ದಾರೆ. ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿ ಈ ಬಾರಿ ತೇವಾಂಶದ ಇಳಿಕೆಯಿಂದ 1.82 ಲಕ್ಷ ಹೆಕ್ಟೇರ್ ವ್ಯಾಪ್ತಿಯಲ್ಲಿ ತೊಗರಿ ಬೆಳೆಗೆ ಹಾನಿಯಾಗಿದೆ ಎಂದು ಸರ್ಕಾರಿ ದಾಖಲೆಗಳೇ ಹೇಳುತ್ತವೆ. ಆದರೆ, ಇದುವರೆಗೂ ರಾಜ್ಯ ಸರ್ಕಾರ ಪರಿಹಾರದ ಮಾತೇ ಆಡಿಲ್ಲ. ಜಿಲ್ಲೆಯ ಉಸ್ತುವಾರಿ ಸಚಿವರು ಕೂಡ ಚಕಾರ ಎತ್ತುತ್ತಿಲ್ಲ. ಒಟ್ಟಿನಲ್ಲಿ ಈ ರೈತ ವಿರೋಧಿ ಸಿಎಂ ಸಿದ್ದರಾಮಯ್ಯನವರ ಸರ್ಕಾರ ತೊಲಗುವವರೆಗೂ ನಾಡಿನ ಅನ್ನದಾತರಿಗೆ ನೆಮ್ಮದಿಯಿಲ್ಲ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ದೂರಿದ್ದಾರೆ.