ಬೆಂಗಳೂರು: ಕರ್ಮ ಬ್ರೋಸ್ ಪ್ರೊಡಕ್ಷನ್ಸ್ ನಿರ್ಮಾಣದ ಹಾಗೂ ದೀಪಕ್ ಮಧುವನಹಳ್ಳಿ ನಿರ್ದೇಶನದಲ್ಲಿ ʼಫಸ್ಟ್ ರ‍್ಯಾಂಕ್ ರಾಜುʼ ಖ್ಯಾತಿಯ ಗುರುನಂದನ್ (Gurunandan) ನಾಯಕನಾಗಿ ನಟಿಸಿರುವ, ಅತ್ಯಂತ ನಿರೀಕ್ಷಿತ ಸಿನಿಮಾ ʼರಾಜು ಜೇಮ್ಸ್ ಬಾಂಡ್ʼ ಚಿತ್ರದ (Raju James Bond Movie) ಬಿಡುಗಡೆ ದಿನಾಂಕ ಹೊಸವರ್ಷದ ಮೊದಲ ದಿನದಂದು ಘೋಷಣೆಯಾಗಿದೆ. ನಗುವೇ ಪ್ರಧಾನವಾಗಿರುವ ಈ ಚಿತ್ರ ಫೆಬ್ರವರಿ 14, ಪ್ರೇಮಿಗಳ ದಿನದಂದು ಅದ್ದೂರಿಯಾಗಿ ಬಿಡುಗಡೆಯಾಗಲಿದೆ. ಸದ್ಯದಲ್ಲೇ ಚಿತ್ರದ ಮನಮೋಹಕ ಹಾಡೊಂದು ಸಹ ಅನಾವರಣವಾಗಲಿದೆ.
ಮೊದಲು ಹೇಳಿದಂತೆ ಡಿಸೆಂಬರ್ 27 ರಂದು ಈ ಚಿತ್ರ ತೆರೆಗೆ ಬರಬೇಕಿತ್ತು. ಆದರೆ ʼUIʼ ಹಾಗೂ ʼಮ್ಯಾಕ್ಸ್ʼ ಚಿತ್ರಗಳು ಡಿಸೆಂಬರ್ ಅಂತ್ಯದಲ್ಲಿ ಬಿಡುಗಡೆಯಾದ ಕಾರಣ ನಮ್ಮ ಚಿತ್ರದ ಬಿಡುಗಡೆಯನ್ನು ಸ್ವಲ್ಪ ಮುಂದೆ ಹಾಕಿರುವುದಾಗಿ ತಿಳಿಸಿದ್ದ ನಿರ್ಮಾಪಕರಾದ ಮಂಜುನಾಥ್ ವಿಶ್ವಕರ್ಮ (ಲಂಡನ್) ಹಾಗೂ ಕಿರಣ್ ಭರ್ತೂರು (ಕೆನಡಾ) ಫೆಬ್ರವರಿ 14 ರಂದು ಈ ಚಿತ್ರವನ್ನು ಬಿಡುಗಡೆ ಮಾಡುತ್ತಿರುವುದಾಗಿ ಹೇಳಿದ್ದಾರೆ.
ಮನಮೋಹಕ ಕಥೆ, ಹಾಸ್ಯ, ಲಂಡನ್‌ನ ಅದ್ಭುತ ದೃಶ್ಯಗಳು ಮತ್ತು ಮಧುರವಾದ ಸಂಗೀತ ಚಿತ್ರದ ಹೈಲೆಟ್ ಆಗಿದ್ದು, ಪ್ರೇಕ್ಷಕರನ್ನು ಆಕರ್ಷಿಸುವ ಭರವಸೆಯನ್ನು ನೀಡುತ್ತಿದೆ ಎಂದು ನಿರ್ದೇಶಕರು ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ | Prize Money: ಕ್ರೀಡಾಪಟುಗಳಿಗೆ ಪ್ರೋತ್ಸಾಹಧನ; ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ
ಗುರುನಂದನ್ ಈ ಚಿತ್ರದ ನಾಯಕರಾಗಿ ನಟಿಸಿದ್ದಾರೆ. ಮೃದುಲಾ, ಸಾಧು ಕೋಕಿಲ, ಅಚ್ಯುತ್ ಕುಮಾರ್, ಚಿಕ್ಕಣ್ಣ, ರವಿಶಂಕರ್, ಜೈ ಜಗದೀಶ್ ಮುಂತಾದವರು ತಾರಾಬಳಗದಲ್ಲಿದ್ದಾರೆ.