-ಶೋಭಾ ಚೌಹಾನ್, ಪ್ರಾಂಕ್ಫರ್ಟ್, ಜರ್ಮನಿ
ಜರ್ಮನಿ: ಪ್ರಾಂಕ್ಫರ್ಟ್ನ ರೈನ್ ಮೈನ್ ಕನ್ನಡ ಸಂಘದಿಂದ ಜರ್ಮನಿಯಲ್ಲಿ ಕನ್ನಡ ರಾಜ್ಯೋತ್ಸವವನ್ನು (Rajyotsava In Germany) ವಿಜೃಂಭಣೆಯಿಂದ ಆಚರಿಸಲಾಯಿತು. ಕನ್ನಡ ರಾಜ್ಯೋತ್ಸವದ ಅಂಗವಾಗಿ 150ಕ್ಕೂ ಹೆಚ್ಚು ಕಲಾವಿದರಿಂದ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳು ಅದ್ಭುತವಾಗಿ ಮೂಡಿಬಂದವು.
ರಾಷ್ಟ್ರಕವಿ ಕುವೆಂಪು ಅವರ ಜಯ ಭಾರತ ಜನನಿಯ ತನುಜಾತೆ ಜಯಹೇ ಕರ್ನಾಟಕ ಮಾತೆ ನಾಡಗೀತೆಯೊಂದಿಗೆ ಆರಂಭವಾಯಿತು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಚಿಣ್ಣರ ಹೆಜ್ಜೆ ತಂಡದಿಂದ ಪವರ್ ಸ್ಟಾರ್ ಅಪ್ಪು ಅವರ ಹಾಡುಗಳಿಗೆ ನೃತ್ಯ, ಚಿಣ್ಣರ ಮೇಳದ ಪುಟಾಣಿಗಳು ಬಗೆಬಗೆಯ ಉಡುಗೆ ತೊಡುಗೆಗಳೊಂದಿಗೆ ವೇದಿಕೆಯಲ್ಲಿ ಎಲ್ಲರ ಗಮನ ಸೆಳೆದರು. ಇನ್ನು ಬೆಳದಿಂಗಳ ಬಾಲೆಯರು ತಂಡದಿಂದ ಆಕರ್ಷಕ ನೃತ್ಯ. ಆರ್ಎಂಕೆಎಸ್ನ ಪುಟ್ಟ ಗೆಳೆಯರು ನಟ ಶಿವರಾಜ್ ಕುಮಾರ್ ಅವರ ಹಾಡುಗಳಿಗೆ ನೃತ್ಯ ಮಾಡಿದರು. ಮಯೂರಿ ತಂಡ ಮತ್ತು ಲಯತಂಡದ ಉತ್ಸಾಹಿ ಸದಸ್ಯರಿಂದ ನೃತ್ಯ ಬಳಿಕ ಭರತನಾಟ್ಯ ನೃತ್ಯ ನೋಡುಗರನ್ನು ನಿಬ್ಬೆರಗಾಗಿಸಿತು. ಇನ್ನು ಕರ್ನಾಟಕ ಚೀರ್ಲೀಡರ್ಸ್ನ ಪುಟಾಣಿ ಮಕ್ಕಳು ಕನ್ನಡವಲ್ಲದೆ ಕರ್ನಾಟಕದಲ್ಲಿ ಮಾತನಾಡುವ ತುಳು, ಕೊಂಕಣಿ, ಕೊಡವ, ಸಂಸ್ಕೃತ ಹಾಡಿನ ತುಣುಕುಗಳಿಗೆ ಹೆಜ್ಜೆ ಹಾಕಿ ವಿವಿಧತೆಯಲ್ಲಿ ಏಕತೆಯನ್ನು ಪ್ರದರ್ಶಿಸಿದರು.
ಕನ್ನಡ ಕಲಿ ಮಕ್ಕಳಿಂದ ನವೆಂಬರ್ ಕನ್ನಡಿಗರು ಶೀರ್ಷಿಕೆಯ ಮೂಲಕ ಕನ್ನಡ ಉಳಿವಿಗಾಗಿ ಚಂದ ಎತ್ತಿ ಕಾರ್ಯಕ್ರಮ ಮಾಡುವುದಲ್ಲ, ಕನ್ನಡವನ್ನು ಹೆಚ್ಚಾಗಿ ಬಳಸಿ ನಾವು ಅದರ ಮೂಲಕ ಬೆಳೆಯಬೇಕು ಎಂಬ ಸಂದೇಶದ ಕಿರುನಾಟಕ ಮಾಡಿದರು.
ಆರ್ಎಂಕೆಎಸ್ ಬ್ಯಾಂಡ್ನ ತಂಡದಿಂದ ಕನ್ನಡದ ಸುಮಧುರ ಹಾಡುಗಳು, ಮಯೂರಿ ತಂಡದಿಂದ ನೃತ್ಯ, ಲಯತಂಡದ ಉತ್ಸಾಹಿ ಸದಸ್ಯರು ತಮ್ಮ ನೃತ್ಯದೊಂದಿಗೆ ಎಲ್ಲರ ಗಮನ ಸೆಳೆದರು.
ಮೈಸೂರಿನ ವಿದ್ವಾನ್ ಸುಮಂತ್ ಮಂಜುನಾಥ್ ಅವರು ಹಂಸಧ್ವನಿ, ಬೃಂದಾವನ ಸಾರಂಗ ರಾಗಗಳ ಪರಿಚಯಿಸಿ, ವಾತಾಪಿ ಗಣಪತಿ ಭಜೆ, ಶಂಕರ ಶಿವ ಶಂಕರ ಹಾಡುತ್ತ ಜತೆಗೆ ಪಿಟೀಲುವಾದನ, ಅವರೊಂದಿಗೆ ರಾಜೇಶ್ ಚಂಗನಾಥ್ ಮೃದಂಗ ಸಾಥ್ ಕೇಳುಗರನ್ನು ಮಂತ್ರಮುಗ್ಧವಾಗಿಸಿತು.
ಈ ಸುದ್ದಿಯನ್ನೂ ಓದಿ | December 2024: ಡಿಸೆಂಬರ್ನಲ್ಲಿ ಪ್ರತಿ ದಿನವೂ ವಿಶೇಷ; ಯಾವಾಗ, ಏನಿದೆ?
ಕನ್ನಡಕಲಿ ಆರ್ಎಂಕೆಎಸ್ನ ಒಂದು ಅವಿಭಾಜ್ಯ ಅಂಗ. ಪ್ರತಿವಾರವೂ ಆರ್ಎಂಕೆಎಸ್ನ ಸದಸ್ಯರ ಮಕ್ಕಳಿಗೆ ಕನ್ನಡ ಕಲಿಸುವ ಜವಾಬ್ದಾರಿಯುತ ಕಾರ್ಯ ನಿರ್ವಹಿಸುತ್ತಿರುವ ಕನ್ನಡಕಲಿ ಶಿಕ್ಷಕರಿಗೆ ಕಾರ್ಯಕ್ರಮದಲ್ಲಿ ಗೌರವಿಸಿ, ಸನ್ಮಾನಿಸಲಾಯಿತು. ಕಾರ್ಯಕ್ರಮದ ಉಸ್ತುವಾರಿ ವಹಿಸಿದ ಆರ್ಎಂಕೆಎಸ್ನ ಎಲ್ಲ ಕಾರ್ಯಕಾರಿ, ಸಹಕಾರ್ಯಕಾರಿ ಸದಸ್ಯರು ವೇದಿಕೆಯ ಮೇಲೆ ಆಗಮಿಸಿ ತಮ್ಮ ಎಲ್ಲ ಕಾರ್ಯಗಳಿಗೆ ಬೆಂಬಲವಾಗಿ ನಿಂತು ಕಾರ್ಯಕ್ರಮ ಇಷ್ಟು ಸುಂದರವಾಗಿ ನಡೆಯಲು ಕೈಜೋಡಿಸಿದ ಎಲ್ಲ ಸ್ವಯಂಸೇವಕರಿಗೆ ಹೃದಯಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿ, ಎಲ್ಲರ ಬೆಂಬಲ ಸದಾ ಹೀಗೆ ಮುಂದುವರೆಯಲಿ ಎಂದರು. ಸುಷ್ಮಾ ಹಾಗೂ ಅನೂಪ್ ಕಾರ್ಯಕ್ರಮ ನಿರ್ವಹಿಸಿದರು.