Monday, 25th November 2024

ಕಾಮಕಾಂಡ ದೃಶ್ಯ ಲೀಕ್‌: ಕನಕಪುರದ ಲಿಂಕ್‌

ವಿಶ್ವವಾಣಿ ವಿಶೇಷ

ರಮೇಶ್‌ರನ್ನು ಖೆಡ್ಡಾಗೆ ಕೆಡವಿದ್ದು ದೊಡ್ಡವರು ಪ್ರಭಾವಿ ನಾಯಕರ ಬೆಂಬಲದಿಂದ ಸಿಡಿ ಬಿಡುಗಡೆ

ಬೆಂಗಳೂರು: ರಮೇಶ್ ಜಾರಕಿಹೊಳಿ ರಾಸಲೀಲೆ ಪ್ರಕರಣ ನಡೆದಿದ್ದು, ಸಂತ್ರಸ್ತೆ ಎಲ್ಲರೂ ಬೇರೆ ಬೇರೆ ಕಡೆ ಇದ್ದರೂ, ಸಿಡಿ
ಬಿಡುಗಡೆ ಮಾತ್ರ ಕನಕಪುರ ಮೂಲದ ದಿನೇಶ್ ಕಲ್ಲಹಳ್ಳಿ ಕಡೆಯಿಂದಲೇ ಆಗಿದ್ದು ಏಕೆ ಎಂಬ ಚರ್ಚೆಯೊಂದು ಇದೀಗ
ಚರ್ಚೆ ಮಾಡುತ್ತಿದೆ.

ರಮೇಶ್ ಜಾರಕಿಹೊಳಿ ಮತ್ತು ಯುವತಿಯ ನಡುವಿನ ರಾಸಲೀಲೆ ಪ್ರಕರಣ ದೆಹಲಿಯ ಕರ್ನಾಟಕ ಭವನದಲ್ಲಿ ನಡೆದಿದೆ ಎಂದು ಹೇಳಲಾಗುತ್ತಿದೆ. ಜತೆಗೆ, ಆಕೆ ಬೆಳಗಾವಿ ಮೂಲದ ಯುವತಿಯೇ ಆಗಿದ್ದು, ಆಕೆಯ ಪೋಷಕರು ಬೆಳಗಾವಿಯಲ್ಲಿಯೇ ವಾಸವಾಗಿ ದ್ದಾರೆ ಎಂಬ ಮಾತುಗಳು ಕೇಳಿಬಂದಿವೆ. ಆದರೆ, ರಾಸಲೀಲೆಯ ವಿಡಿಯೊ ಬಿಡುಗಡೆ ಮಾಡುವ ಸಂಬಂಧ ರಾಮನಗರ ಜಿಲ್ಲೆಯ ಕನಕಪುರ ಮೂಲದ ಸಾಮಾಜಿಕ ಹೋರಾಟಗಾರ ದಿನೇಶ್ ಕಲ್ಲಹಳ್ಳಿ ಮೊರೆ ಹೋಗಿದ್ದು ಏಕೆ ಎಂಬ ಅನುಮಾನ ಕಾಡುತ್ತಿದೆ.

ಮೈತ್ರಿ ಸರಕಾರ ಪತನದ ನಂತರ ಜಾರಕಿಹೊಳಿ ನಡೆದುಕೊಂಡ ರೀತಿ ರಾಮನಗರ ಮೂಲದ ಪ್ರಭಾವಿ ರಾಜಕಾರಣಿಗಳಿಗೆ ಆಕ್ರೋಶ ತರಿಸಿತ್ತು. ರಮೇಶ್ ಮೇಲೆ ಸೇಡು ತೀರಿಸಿಕೊಳ್ಳುವ ನಿಟ್ಟಿನಲ್ಲಿ ರಾಮನಗರ ಮೂಲದ ಇಬ್ಬರು ಪ್ರಭಾವಿ ರಾಜಕೀಯ ನಾಯಕರು ಕಾಯುತ್ತಿದ್ದರು. ಇದೀಗ ಇಂತಹದ್ದೊಂದು ಸಿ.ಡಿ ಬಿಡುಗಡೆಗೆ ಸಜ್ಜಾಗುತ್ತಿದೆ ಎಂಬುದು ತಿಳಿಯುತ್ತಿದ್ದಂತೆ, ಅವರ ಬೆನ್ನಿಗೆ ನಿಂತು ಸಿ.ಡಿ ಬಿಡುಗಡೆ ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆ ಮೂಲಕ ರಮೇಶ್ ಜಾರಕಿಹೊಳಿ ಅವರ ರಾಜೀನಾಮೆ ಕೊಡಿಸುವಲ್ಲಿ ಸಫಲರಾಗಿದ್ದಾರೆ.

ಮುಂಬೈ ಅವಮಾನಕ್ಕೆ ಸೇಡು?: ಮೈತ್ರಿ ಸರಕಾರದ 17 ಶಾಸಕರು ಮುಂಬೈನಲ್ಲಿ ಬೀಡುಬಿಟ್ಟಾಗ ಅಲ್ಲಿ ತೆರಳಿ ಇಡೀ ದಿನ ಮಳೆಯಲ್ಲಿ ನಿಂತು ಅವರ ಮನವೊಲಿಕೆಗೆ ಪ್ರಯತ್ನ ನಡೆಸಿದ್ದ ನಾಯಕರೊಬ್ಬರು, ರಮೇಶ್ ವಿರುದ್ಧ ಸೇಡಿಗಾಗಿ ಕಾಯುತ್ತಿದ್ದರು. ಮುಂಬೈನಲ್ಲಿ ರಮೇಶ್ ಜಾರಕಿಹೊಳಿ ನಾಯಕತ್ವದಲ್ಲಿದ್ದ ಶಾಸಕರು, ಅವರ ಭೇಟಿಗೆ ಸಿದ್ಧವಿರಲಿಲ್ಲ. ಹಿಂದೆ ಕಾಂಗ್ರೆಸ್ ‌ನಲ್ಲಿದ್ದಾ ಗಲೂ ಆ ನಾಯಕರ ವಿರುದ್ಧ ಆಗಾಗ ಕುದಿಯುತ್ತಲೇ ಇದ್ದ ರಮೇಶ್, ಅವರಿಗೆ ಅವಮಾನ ಮಾಡಿದ್ದರು. ಭೇಟಿಗೆ ಅವಕಾಶ ಸಿಗದೆ ಮುಂಬೈ ಪೊಲೀಸರು ಬಂಧಿಸಿ ನಂತರ ಬಿಡುಗಡೆ ಮಾಡಿದ್ದರು. ಇದನ್ನೆಲ್ಲ ಮನಸ್ಸಿನಲ್ಲಿಟ್ಟುಕೊಂಡಿದ್ದ ಆ ಪ್ರಭಾವಿ ನಾಯಕ, ರಮೇಶ್ ಜಾರಕಿಹೊಳಿ ವಿರುದ್ಧ ಇಂತಹದ್ದೊಂದು ಆರೋಪ ಬಂದೊಡನೆ ಸಂತ್ರಸ್ತರ ಬೆನ್ನಿಗೆ ನಿಂತಿದ್ದಾರೆ. ಹೀಗಾಗಿಯೇ, ಅವರು ಧೈರ್ಯದಿಂದ ಸಿ.ಡಿ ಬಿಡುಗಡೆಗೆ ಮುಂದಾಗಿದ್ದಾರೆ ಎನ್ನಲಾಗುತ್ತಿದೆ.

ಶಾಸಕಿ ಜತೆಗೆ ರಮೇಶ್ ಗುಪ್ತ್: ಈ ನಡುವೆ ರಮೇಶ್ ಅವರ ಈ ಸ್ಥಿತಿಗೆ ಹಿಂದೆ ಒಬ್ಬ ಶಾಸಕಿ ಜತೆಗಿನ ಸಂಬಂಧವೂ ಕಾರಣ ಎಂದು ಹೇಳಲಾಗುತ್ತಿದೆ. ಆಕೆಯೊಂದಿಗಿನ ಸಂಬಂಧವೇ ಪ್ರಭಾವಿ ನಾಯಕರ ಮೇಲೆ ದ್ವೇಷ ಬೆಳೆಸಿಕೊಳ್ಳಲು ಕಾರಣವಾಗಿತ್ತು. ಈ ದ್ವೇಷ ಮುಂದುವರಿದು, ಅವರ ವಿರುದ್ಧ ಆಗಾಗ ಕತ್ತಿ ಮಸೆಯುತ್ತಲೇ ಇದ್ದರು. ಇದು ಮುಂದೆ ರಾಜಕೀಯ ದ್ವೇಷಕ್ಕೂ ಕಾರಣ ವಾಗಿತ್ತು. ಮೈತ್ರಿ ಸರಕಾರ ಪತನಗೊಳಿಸಿ, ಅಧಿಕಾರಕ್ಕೆ ಬಂದಾಗ ಆ ನಾಯಕರದ್ದೇ ಖಾತೆಬೇಕೆಂದು ಪಟ್ಟು ಹಿಡಿದಿದ್ದು, ಅವರ ಮನೆಯ ಆಸುಪಾಸಿನಲ್ಲೇ ಜಿದ್ದಿಗೆ ಬಿದ್ದು ಕೋಟ್ಯಂತರ ರುಪಾಯಿ ನೀಡಿ ಬಂಗಲೆ ಖರೀದಿಸಿದ್ದು ಸೇರಿದಂತೆ ಇತರ ವಿಚಾರಗಳಲ್ಲಿ
ಹೋರಾಟಕ್ಕಿಳಿದಿದ್ದರ ಪರಿಣಾಮ ಈ ಸಿ.ಡಿ ಪ್ರಕರಣದಲ್ಲಿ ಆ ಸೇಡನ್ನು ತೀರಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

ಸಿ.ಪಿ.ಯೋಗೀಶ್ವರ್ ಮೇಲಿನ ಪ್ರೀತಿಗೂ ಸಿಟ್ಟು: ಮೈತ್ರಿ ಸರಕಾರ ಪತನಗೊಳಿಸಿದ ಸಂಬಂಧ ಮತ್ತೊಂದು ಪ್ರಾದೇಶಿಕ ಪಕ್ಷದ
ನಾಯಕರಿಗೂ ರಮೇಶ್ ಮೇಲೆ ಸಿಟ್ಟಿತ್ತು. ಜತೆಗೆ ಸಿ.ಪಿ ಯೋಗೀಶ್ವರ್ ಗೆ ಮಂತ್ರಿ ಸ್ಥಾನ ಕೊಡಿಸುವ ಸಂಬಂಧ ಹೈಕಮಾಂಡ್ ಜತೆಗೆ ರಮೇಶ್ ನಡೆದುಕೊಂಡ ರೀತಿ ಮತ್ತಷ್ಟು ಸಿಟ್ಟು ಹೆಚ್ಚಿಸಿತ್ತು. ಈ ಎಲ್ಲ ಬೆಳವಣಿಗೆಗಳ ಬಗ್ಗೆ ಬೇಸತ್ತಿದ್ದ ಅವರು ಅವಕಾಶಕ್ಕಾಗಿ ಕಾಯುತ್ತಿದ್ದು, ಸಿಡಿ ಪ್ರಕರಣದ ಮಾಹಿತಿ ಪಡೆಯುತ್ತಲೇ ಅವರ ಬೆನ್ನಿಗೆ ನಿಂತು ಸಿ.ಡಿ ಬಿಡುಗಡೆ ಮಾಡುವಂತೆ ಸಲಹೆ ನೀಡಿದರು.

ಸರಕಾರದ ತಮ್ಮ ಆಪ್ತ ಅಧಿಕಾರಿಗಳ ಮೂಲಕ ಕೆಲ ಮಾಹಿತಿಗಳನ್ನು ಸಂಗ್ರಹಿಸಿ, ದೂರುದಾರನಿಗೆ ನೀಡುವಲ್ಲಿ, ಸಂಸ್ತ್ರಸ್ಥೆಗೆ ಧೈರ್ಯ ತುಂಬುವಲ್ಲಿ ಪ್ರಭಾವಿ ನಾಯಕರು ಪಾತ್ರವಹಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಸಂತ್ರಸ್ತೆಗಾಗಿ ಶೋಧ
ರಮೇಶ್ ಜಾರಕಿಹೊಳಿ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣ ಸಂಬಂಧ ಸಂತ್ರಸ್ತೆಯ ಪತ್ತೆ ಕಾರ್ಯವನ್ನು ಕಬ್ಬನ್ ಪಾರ್ಕ್
ಪೊಲೀಸರು ಚುರುಕುಗೊಳಿಸಿದ್ದಾರೆ. ಮಾಹಿತಿ ಆಧರಿಸಿ ಯುವತಿಗಾಗಿ ನಗರದ ಪಿಜಿಗಳಲ್ಲಿ ಹುಡುಕಾಟ ನಡೆಸಿದರೂ ಆಕೆ
ಪತ್ತೆಯಾಗಿಲ್ಲ.

ಯುವತಿ ಆರ್.ಟಿ. ನಗರದಲ್ಲಿ ವಾಸಿಸುವ ಗುಮಾನಿ ಮೇರೆಗೆ 40ಕ್ಕೂ ಹೆಚ್ಚು ಮಹಿಳಾ ಪೊಲೀಸರು ಆರ್‌ಟಿ ನಗರ ಸುತ್ತಮುತ್ತ ಪಿಜಿಗಳಲ್ಲಿ ಹುಡುಕಾಟ ನಡೆಸಿದ್ದರು. ಇದುವರೆಗೂ ಯುವತಿ ಮೊಬೈಲ್ ನಂಬರ್ ಸಹ ಪೊಲೀಸರಿಗೆ ಸಿಕ್ಕಿಲ್ಲ. ಸಂತ್ರಸ್ತ ಯುವತಿಯು ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಎರಡು ದಿನ ಕಳೆದರೂ ಪೊಲೀಸರು ಇನ್ನೂ ಎಫ್‌ಐಆರ್ ದಾಖಲಿಸಿಕೊಂಡಿಲ್ಲ. ಇದಕ್ಕೆ ಪ್ರಮುಖ ಕಾರಣ ದೂರಿನಲ್ಲಿರುವ ಅಪೂರ್ಣ ಹಾಗೂ ಸಂತ್ರಸ್ತೆ ಬಗ್ಗೆ ಮಾಹಿತಿ ಇಲ್ಲದಿರುವುದು ತನಿಖೆಗೆ ಹಿನ್ನೆಡೆಯಾಗಿದೆ.

ವಿಚಾರಣೆಗೆ ಹಾಜರಾಗದ ದಿನೇಶ್ ಕಲ್ಲಳ್ಳಿ
ದಿನೇಶ್ ಕಲ್ಲಹಳ್ಳಿಗೆ ಸಂತ್ರಸ್ತೆ ಹಾಗೂ ಘಟನೆ ಬಗ್ಗೆ ಹೆಚ್ಚಿನ ಮಾಹಿತಿ ನೀಡಲು ಗುರುವಾರ ಬೆಳಗ್ಗೆ 11ಕ್ಕೆ ಹಾಜರಾಗುವಂತೆ ಕಬ್ಬನ್ ಪಾರ್ಕ್ ಇನ್ಸ್‌ಪೆಕ್ಟರ್ ಮಾರುತಿ ಅವರು ನೋಟಿಸ್ ನೀಡಿದ್ದರು. ಆದರೆ ಪೊಲೀಸರ ನೋಟಿಸ್ ಸ್ವೀಕರಿಸಿದ ದಿನೇಶ್ ಕಲ್ಲಹಳ್ಳಿ ಅವರು, ವಿಚಾರಣೆಗೆ ಬರಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಮಾ. 9ರಂದು ಬರುತ್ತೇನೆ ಎಂದು ಪೊಲೀಸ್ ಅಧಿಕಾರಿಗೆ ಪತ್ರ ಬರೆದಿದ್ದಾರೆ. ನನಗೆ ಜೀವ ಬೆದರಿಕೆ ಇರುವ ಹಿನ್ನೆಲೆ ಸೂಕ್ತ ಭದ್ರತೆ ಬೇಕಾಗಿದೆ. ಭದ್ರತೆ ನೀಡಿದರೆ ವಿಚಾರಣೆ ಹಾಜರಾಗುವುದಾಗಿ ತಿಳಿಸಿದ್ದಾರೆ.

ಡಿಕೆಶಿ-ಬಾಲಚಂದ್ರ ಚರ್ಚೆ
ಈ ನಡುವೆ ವಿವಿಧ ನಾಯಕರನ್ನು ಭೇಟಿ ಮಾಡುತ್ತಿರುವ ರಮೇಶ್ ಜಾರಕಿಹೊಳಿ ಸಹೋದರ ಬಾಲಚಂದ್ರ ಜಾರಕಿಹೊಳಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಸೇರಿದಂತೆ ಅನೇಕ ನಾಯಕರನ್ನು ಭೇಟಿ ಮಾಡಿದ್ದಾರೆ. ವಿಧಾನ ಸಭೆಯ ಮೊಗಸಾಲೆಯಲ್ಲಿ  ಅವರನ್ನು ಭೇಟಿ ಮಾಡಿ ಸುಮಾರು 30 ನಿಮಿಷಗಳ ಕಾಲ ಚರ್ಚೆ ನಡೆಸಿದ್ದಾರೆ. ತಮ್ಮ ಸಹೋದರನ ರಾಜೀನಾಮೆ, ಅವರ ವಿರುದ್ಧ ಬಂದಿರುವ ಆರೋಪಗಳ ಬಗ್ಗೆ ಅವರೊಂದಿಗೆ ಚರ್ಚೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನೂ ತಮ್ಮ ಸಹೋದರ
ರಾಜೀನಾಮೆಯಿಂದ ತೆರವಾಗಿರುವ ಜಲಸಂಪನ್ಮೂಲ ಇಲಾಖೆ ಖಾತೆಯನ್ನು ತಮಗೆ ನೀಡುವಂತೆ ಸಿಎಂ ಮೇಲೆ ಬಾಲಚಂದ್ರ
ಒತ್ತಡ ಹಾಕುತ್ತಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ. ಈ ಹಿನ್ನೆಲೆಯಲ್ಲಿ ಮಾಜಿ ಜಲಸಂಪನ್ಮೂಲ ಸಚಿವ ಡಿಕೆಶಿ ಭೇಟಿಯಾಗಿ ದ್ದರು ಎಂದು ಹೇಳಲಾಗುತ್ತಿದೆ.

ಖಾಸಗಿ ಚಾನಲ್‌ವೊಂದರಲ್ಲಿ ಕರಕುಶಲತೆ
ಸಿ.ಡಿ ಪ್ರಕರಣದ ಸಂಪೂರ್ಣ ವಿಡಿಯೋ, ಎಷ್ಟು ತುಣುಕನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಬೇಕು ಎಂಬ ಬಗ್ಗೆೆ ಖಾಸಗಿ
ಚಾನೆಲ್‌ವೊಂದರಲ್ಲಿ ಸಭೆ ನಡೆದಿದೆ. ಅದರ ಸಂಪೂರ್ಣ ಎಡಿಟಿಂಗ್ ಕೆಲಸ ಕೂಡ ಅಲ್ಲಿಯೇ ನಡೆದಿದೆ ಎಂದು ಹೇಳಲಾಗುತ್ತಿದೆ. ಎರಡು ಪಕ್ಷಗಳ ಪ್ರಭಾವಿ ನಾಯಕರೊಂದಿಗೆ ಸಂಪರ್ಕದಲ್ಲಿರುವ ಚಾನೆಲ್‌ನ ಮುಖ್ಯಸ್ಥರು ಈ ಕಾರ್ಯವನ್ನು ತಮ್ಮದೇ ಚಾನೆಲ್‌ನ ಎಡಿಟಿಂಗ್ ಕೊಠಡಿಯಲ್ಲಿ ಸಂಪನ್ನಗೊಳಿಸಿದರು. ನಂತರವಷ್ಟೇ ತಮ್ಮದೇ ಜಿಲ್ಲೆಯ ಸಾಮಾಜಿಕ ಕಾರ್ಯಕರ್ತನನ್ನು ಸಿ.ಡಿ ಬಿಡುಗಡೆ ಶಾಸ್ತ್ರಕ್ಕೆ ಬುಕ್ ಮಾಡಿ, ರಮೇಶ್ ಜಾರಕಿಹೊಳಿಯನ್ನು ಖೆಡ್ಡಾಗೆ ಕೆಡವುವಲ್ಲಿ ಯಶಸ್ವಿಯಾಗಿದ್ದಾರೆ.