Thursday, 24th October 2024

Renuka Swamy Murder Case: ರೇಣುಕಾ ಸ್ವಾಮಿ ಪತ್ನಿಗೆ ಗಂಡು ಮಗು ಜನನ

renuka swamy wife

ಚಿತ್ರದುರ್ಗ: ಬೆಂಗಳೂರಿನಲ್ಲಿ ನಟ ದರ್ಶನ್‌ (Actor Darshan) ಗ್ಯಾಂಗ್‌ನಿಂದ ಕೊಲೆಯಾದ ಚಿತ್ರದುರ್ಗದ (Chitradurga news) ರೇಣುಕಾ ಸ್ವಾಮಿಯ (Renuka Swamy Murder Case) ಪತ್ನಿಗೆ ಗಂಡು ಮಗು ಜನಿಸಿದೆ. ರೇಣುಕಾ ಸ್ವಾಮಿ ಸಾವಿಗೀಡಾದಾಗ ಅವರು ಐದು ತಿಂಗಳ ಗರ್ಭಿಣಿ ಆಗಿದ್ದರು.

ಚಿತ್ರದುರ್ಗ ನಗರದ ಖಾಸಗಿ ಆಸ್ಪತ್ರೆಯಲ್ಲಿ ರೇಣುಕಾ ಸ್ವಾಮಿ ಪತ್ನಿ ಸಹನಾಗೆ ಹೆರಿಗೆ ಆಗಿದೆ. ತಾಯಿ- ಮಗು ಆರೋಗ್ಯವಾಗಿದ್ದಾರೆ ಎಂದು ತಿಳಿದುಬಂದಿದೆ. ರೇಣುಕಾ ಸ್ವಾಮಿ ಹತ್ಯೆ ನಡೆದು ನಾಲ್ಕು ತಿಂಗಳು ಕಳೆದಿದೆ. ಪ್ರಕರಣ ಕೋರ್ಟ್ ಅಂಗಳದಲ್ಲಿ ಇದೆ. ಪ್ರಮುಖ ಆರೋಪಿ ದರ್ಶನ್‌ ಬಳ್ಳಾರಿ ಜೈಲಿನಲ್ಲಿ ಹಾಗೂ ಪವಿತ್ರಾ ಗೌಡ ಮತ್ತಿತರರು ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದು, ನಿನ್ನೆ ಇವರಿಬ್ಬರ ಜಾಮೀನು ತಿರಸ್ಕೃತಗೊಂಡಿತ್ತು.

ರೇಣುಕಾ ಸ್ವಾಮಿ ಕೊಲೆಯ ಬಳಿಕ ಆತನ ಕುಟುಂಬ ಮಾಧ್ಯಮಗಳ ಮುಂದೆಯೂ ಕಣ್ಣೀರಿಡುತ್ತ ಬಂದಿದೆ. ‘ಮಗ ಕೈ ಮುಗಿದು ಕೇಳಿಕೊಂಡಾಗ ಅವರು ಬಿಟ್ಟುಬಿಡಬೇಕಿತ್ತು’ ಎಂದು ತಂದೆ-ತಾಯಿ ಕಣ್ಣೀರು ಹಾಕಿದ್ದರು. ನೊಂದಿದ್ದ ಕುಟುಂಬಕ್ಕೆ ಖುಷಿಪಡುವಂಥ ಸುದ್ದಿ ಇದಾಗಿದೆ. ಅನುಕಂಪದ ಆಧಾರದಲ್ಲಿ ರೇಣುಕಾಸ್ವಾಮಿ ಪತ್ನಿಗೆ ಕೆಲಸ ನೀಡಬೇಕು ಎಂಬ ಬೇಡಿಕೆಯೂ ಇದೆ.

ಜಾಮೀನಿಗಾಗಿ ಹೈಕೋರ್ಟ್‌ ಮೊರೆ ಹೋದ ದರ್ಶನ್‌

ಬೆಂಗಳೂರು: ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ (Renuka Swamy murder Case) ಪ್ರಕರಣದ ಆರೋಪಿ ನಟ ದರ್ಶನ್‌ಗೆ (Actor Darshan) ನಗರದ ಸೆಷನ್ಸ್‌ ನ್ಯಾಯಾಲಯ ಜಾಮೀನು (Bail) ತಿರಸ್ಕರಿಸಿದ ಬೆನ್ನಲ್ಲೇ ಜಾಮೀನು ಕೋರಿ ಹೈಕೋರ್ಟ್‌ (Karnataka High Court) ಮೆಟ್ಟಿಲೇರಿದ್ದಾರೆ.

ದರ್ಶನ್‌ ಪರ ವಕಾಲತ್ತು ವಹಿಸಿರುವ ಹೈಕೋರ್ಟ್‌ ವಕೀಲ ಎಸ್‌.ಸುನಿಲ್‌ಕುಮಾರ್‌, ಮಂಗಳವಾರ ಮಧ್ಯಾಹ್ನ ಹೈಕೋರ್ಟ್‌ ಫೈಲಿಂಗ್‌ ವಿಭಾಗಕ್ಕೆ ಜಾಮೀನು ಅರ್ಜಿಯನ್ನು ಸಲ್ಲಿಸಿದರು. 300 ಪುಟಗಳಿಗೂ ಅಧಿಕ ದಸ್ತಾವೇಜು ಹೊಂದಿರುವ ಈ ಅರ್ಜಿಗೆ ಸದ್ಯ ಎಫ್‌ಆರ್‌ ನಂಬರ್‌ ನೀಡಲಾಗಿದ್ದು ಅದರ ಕ್ರಿಮಿನಲ್‌ ಅರ್ಜಿ ಸಂಖ್ಯೆ ಇನ್ನಷ್ಟೇ ನಮೂದಾಗಬೇಕಿದೆ. ನಂತರವೇ ಅದು ನ್ಯಾಯಪೀಠದ ಮುಂದೆ ಬರಲಿದೆ ಅಥವಾ ಅವರ ಪರ ವಕೀಲರು ಮೆಮೊ ಸಲ್ಲಿಕೆಯ ಮೂಲಕ ತುರ್ತು ವಿಚಾರಣೆಗೆ ಕೈಗೆತ್ತಿಕೊಳ್ಳುವಂತೆ ಸೂಕ್ತ ನ್ಯಾಯಪೀಠದಲ್ಲಿ ಮನವಿ ಮಾಡಲಿದ್ದಾರೆ.

ದರ್ಶನ್‌ ಮತ್ತು ಸಂಗಡಿಗರು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು 57ನೇ ಸಿಸಿಎಚ್‌ ನ್ಯಾಯಾಲಯವು ಸೋಮವಾರ ವಜಾಗೊಳಿಸಿತ್ತು. ಆರೋಪಿ ದರ್ಶನ್‌, ರೇಣುಕಸ್ವಾಮಿ ಹಲ್ಲೆ ಹಾಗೂ ಹತ್ಯೆ ವೇಳೆ ಘಟನಾ ಸ್ಥಳದಲ್ಲಿದ್ದರು ಎಂಬುದಕ್ಕೆ ಸಿಡಿಆರ್‌ ಸಾಕ್ಷ್ಯ ಇದೆ. ದರ್ಶನ್‌ ಡಿಎನ್‌ಎ ಪರೀಕ್ಷೆಯಿಂದ ಘಟನಾ ಸ್ಥಳದಲ್ಲಿ ಇದ್ದರು ಎಂಬುದು ಪತ್ತೆಯಾಗಿದೆ. ಸಾಕ್ಷ್ಯ ನಾಶಪಡಿಸುವ ಸಾಧ್ಯತೆಯಿದೆ. ಹೀಗಾಗಿ ಆರೋಪಿಗಳಿಗೆ ಜಾಮೀನು ಮಂಜೂರು ಮಾಡಬಾರದು ಎಂದು ಸರ್ಕಾರಿ ವಿಶೇಷ ಅಭಿಯೋಜಕರು ಕೋರ್ಟ್‌ನಲ್ಲಿ ವಾದಿಸಿದ್ದರು. ಈ ಎಲ್ಲ ಅಂಶಗಳನ್ನು ಮಾನ್ಯ ಮಾಡಿದ ಕೋರ್ಟ್‌ ಆರೋಪಿಗಳ ಜಾಮೀನು ಅರ್ಜಿಯನ್ನು ವಜಾಗೊಳಿಸಿತ್ತು.

ಇದನ್ನೂ ಓದಿ: Renuka swamy Murder Case: ರೇಣುಕಾಸ್ವಾಮಿ ಕೊಲೆ ಆರೋಪಿ ಮತ್ತೆ ಬೆಂಗಳೂರು ಜೈಲಿಗೆ ಶಿಫ್ಟ್‌; ದರ್ಶನ್‌ಗೆ ಬಳ್ಳಾರಿಯೇ ಗತಿ