Thursday, 28th November 2024

ಮೀಸಲು ಹೋರಾಟಕ್ಕೆ ಬ್ರೇಕ್‌: ಸಿಎಂ ಹೊಸ ಅಸ್ತ್ರ

ವಿಶೇಷ ವರದಿ: ಶಿವಕುಮಾರ್ ಬೆಳ್ಳಿತಟ್ಟೆ

ಒಬಿಸಿ ಮೀಸಲಿಗಾಗಿ ಮಠಾಧೀಶರು ಬೀದಿಗೆ ಬಿಜೆಪಿ ವರಿಷ್ಠರಿಗೆ ಎಚ್ಚರಿಸುವ ತಂತ್ರವೂ ಹೌದು

ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ ‘ಸರಪಳಿ ಮಾದರಿ’ ಮೀಸಲು ಬೇಡಿಕೆಗಳ ಸರಣಿ ಹೋರಾಟಗಳಿಗೆ ಬ್ರೇಕ್ ಹಾಕಲು ಸಿಎಂ ಯಡಿಯೂರಪ್ಪ ಹೊಸ ಅಸ್ತ್ರ ಸಿದ್ಧಪಡಿಸಿದ್ದಾರೆ. ಈ ಅಸ್ತ್ರದ ಪ್ರಥಮ ಪ್ರಯೋಗ ಫೆಬ್ರವರಿ 13ರಂದು ಬೆಂಗಳೂರಿನಲ್ಲಿ ನಡೆಯಲಿದ್ದು, ಇದರ ಫಲಾಫಲ ಪರಿಶೀಲಿಸಿದ ನಂತರ ಎರಡನೇ ಅಸ್ತ್ರಗಳು ಸಿದ್ಧವಾಗಲಿವೆ ಎನ್ನಲಾಗಿದೆ.

ಕಳೆದ ಒಂದು ತಿಂಗಳಿನಿಂದ ಮೀಸಲು ಸೌಲಭ್ಯಕ್ಕಾಗಿ ಎಲ್ಲ ಪ್ರಬಲ ಸಮಾಜಗಳೂ ಬೀದಿಗಿಳಿದಿದ್ದು, ಇದು ಸರಕಾರವನ್ನು ಒಂದು ರೀತಿ ಇಕ್ಕಟ್ಟಿಗೆ ಸಿಲುಕಿರುವುದಂತೂ ನಿಜ. ಇಲ್ಲಿ ಎಸ್‌ಟಿ ಸಮುದಾಯಗಳು ಮೀಸಲು ಪ್ರಮಾಣ ಏರಿಸಬೇಕೆಂಬ ಬೇಡಿಕೆ ಇಟ್ಟರೆ, ಕುರುಬ ಸಮಾಜ ಎಸ್‌ಟಿ ಬೇಡಿಕೆ ಮುಂದಿಡುವುದು, ಪಂಚಮಸಾಲಿಗಳು 2ಎ ಬೇಡಿಕೆ ಸಲ್ಲಿಸಿದರೆ, ಇದೇ ಪ್ರವರ್ಗ ದಲ್ಲಿ ರುವ ಸಮಿತಾ ಸಮಾಜದವರು ಪ್ರತ್ಯೇಕ ಪ್ರವರ್ಗ ಕೇಳುವ ಸರಪಳಿ ಮಾದರಿ ಹೋರಾಟಗಳು ನಡೆದಿವೆ.

ಇದೇ ರೀತಿ ಒಕ್ಕಲಿಗರೂ ಮೀಸಲು ಹೆಚ್ಚಿಸುವ ಬೇಡಿಕೆ ಇಟ್ಟಿದ್ದು, ಇದರ ಮಧ್ಯೆ, ಪರಿಶಿಷ್ಟ ಜಾತಿಯಲ್ಲೇ ಪ್ರತ್ಯೇಕ ಮೀಸಲು
ಬೇಡಿಕೆಯ ನ್ಯಾ.ಸದಾಶಿವ ಆಯೋಗ ವರದಿ ಜಾರಿಗೆ ಒತ್ತಾಯಿಸುವ ಮಾದಿಗ ಸಮಾಜದ ಹೋರಾಟ ಕೂಡ ಆರಂಭವಾಗಿದೆ. ಈ ಸಂಕಷ್ಟದಿಂದ ಹೊರಬರಲು ಯಡಿಯೂರಪ್ಪ ಅವರು ತಮ್ಮದೇ ಸಮಾಜದ ಮೀಸಲು ಹೋರಾಟದ ಅಸ್ತ್ರಗಳನ್ನು
ಪ್ರಯೋಗಿಸಲಿದ್ದಾರೆ. ಅದೇ ವೀರಶೈವ ಲಿಂಗಾಯತ ಸಮುದಾಯದ ಎಲ್ಲ ಉಪ ಪಂಗಡಗಳಿಗೆ ಒಬಿಸಿ ಮೀಸಲು ನೀಡಬೇಕೆಂಬ ಬೇಡಿಕೆ ಆಸ್ತ್ರ. ಇದು ಬರೀ ಮೀಸಲು ಹೋರಾಟ ನಡೆಸುತ್ತಿರುವ ಸಮಾಜಗಳಿಗೆ ಮಾತ್ರವಲ್ಲ. ತಮ್ಮ ನೇತೃತ್ವದ ಸರಕಾರವನ್ನು ಅಲುಗಾಡಿಸಲು ಯತ್ನಿಸಿದರೆ ಪರಿಣಾಮ ಎದುರಿಸಬೇಕಾಗುತ್ತದೆ ಎನ್ನುವ ಎಚ್ಚರಿಕೆ ಸಂದೇಶವನ್ನೂ ರವಾನಿಸಲು
ಯತ್ನಿಸ ಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಏನಿದು ಹೋರಾಟ, ಹಿಂದೆ ಯಾರಿದ್ದಾರೆ?: ರಾಜ್ಯದಲ್ಲಿರುವ ಗುರು ಮತ್ತು ವಿರಕ್ತ ಪರಂಪರೆಗಳ ಎಲ್ಲ ಮಠಗಳಿಗೂ ಸೇರಿದ
ಸುಮಾರು 500ಕ್ಕೂ ಹೆಚ್ಚು ಮಠಾಧೀಶರು ಫೆ.13ರಂದು ಬೆಂಗಳೂರಿನ ವಿಜಯನಗರದ ಬಸವೇಶ್ವರ ಸುಜ್ಞಾನ ಮಂಟಪದಲ್ಲಿ ಸಮಾವೇಶಗೊಳ್ಳಲಿದ್ದಾರೆ. ರಾಷ್ಟ್ರೀಯ ವೀರಶೈವ ಲಿಂಗಾಯತ ಮಠಾಧೀಶರ ಒಕ್ಕೂಟ ಹೆಸರಿನಲ್ಲಿ ಸೇರುವ ಸಮಾವೇಶದಲ್ಲಿ ಶ್ರೀಶೈಲ ಮಠದ ಡಾ.ಚನ್ನಸಿದ್ದರಾಮ ಪಂಡಿತಾರಾಧ್ಯ ಸ್ವಾಮಿ, ಹೊಸಪೇಟೆಯ ಕೊಟ್ಟೂರು ಬಸವೇಶ್ವರ ಸ್ವಾಮಿ, ಸಿದ್ಧಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮಿ, ಉಜ್ಜಯನಿ ಪೀಠದ ಸಿದ್ಧಲಿಂಗ ಶಿವಾಚಾರ್ಯ ಸ್ವಾಮಿ, ಸುತ್ತೂರು ಮಠದ ಶಿವಕುಮಾರಸ್ವಾಮಿ ಸೇರಿದಂತೆ ನೂರಾರು ಮಠಾಧೀಶರು ಭಾಗವಹಿಸಲಿದ್ದಾರೆ. ಇವರೆಲ್ಲರೂ ವೀರಶೈವ ಲಿಂಗಾಯತ ಸಮುದಾಯದ ಉಪ ಜಾತಿ ಗಳನ್ನೆಲ್ಲ ಒಬಿಸಿಗೆ ಸೇರಿಸಬೇಕೆಂದು ಸರಕಾರದ ಮುಂದೆ ಬೇಡಿಕೆ ಮಂಡಿಸುವ ಮೂಲಕ ಬಿಜೆಪಿಯ ಕೇಂದ್ರ ನಾಯಕರಿಗೆ ಅನೇಕ ರೀತಿಯ ಸಂದೇಶಗಳನ್ನು ರವಾನಿಸುವ ಪ್ರಯತ್ನ ಮಾಡಲಿದ್ದಾರೆ ಎನ್ನಲಾಗಿದೆ. ಹಾಗೆಯೇ ಇತರ ಮೀಸಲು ಹೋರಾಟ ಗಳಿಗೆ ಮಂಕು ಕವಿಯುವಂತೆ ಮಾಡುವ ಪ್ರಯತ್ನವೂ ಇದರ ಹಿಂದೆ ಇದೆ ಎಂದು ಹೇಳಲಾಗಿದೆ.

ಸಂದೇಶಗಳೇನು?
ಕಳೆದ ಬಾರಿ ವೀರಶೈವ ಲಿಂಗಾಯತರಿಗೆ 2ಎ ಮೀಸಲು ನೀಡುವ ಬಗ್ಗೆ ಸಚಿವ ಸಂಪುಟ ತೀರ್ಮಾನಕ್ಕೆ ಬ್ರೇಕ್ ಹಾಕಿದ್ದ ಬಿಜೆಪಿ ಹೈಕಮಾಂಡ್‌ಗೆ ತಮ್ಮ ಸಮಾಜವನ್ನು ಲಘುವಾಗಿ ಪರಿಗಣಿಸಬಾರದು ಎನ್ನುವ ಸಂದೇಶವನ್ನೂ ನೀಡಲಿದೆ. ಹಾಗೆಯೇ ನಾಯಕತ್ವ ಹೆಸರಿನಲ್ಲಿ ಯಡಿಯೂರಪ್ಪ ಅವರನ್ನು ಬದಲಿಸುವ ಸಾಹಸಕ್ಕೂ ಬಿಜೆಪಿ ಕೈ ಹಾಕಬಾರದು ಎನ್ನುವ ಸಂದೇಶ ರವಾನಿಸುವ ಯತ್ನವೂ ಆಗಬಹುದು. ಒಟ್ಟಾರೆ ಲಿಂಗಾಯತರಿಗೆ ಒಬಿಸಿ ಮೀಸಲು ಕಲ್ಪಿಸಬೇಕೆಂಬ ನೆಪದಲ್ಲಿ ಯಡಿಯೂರಪ್ಪ ಅವರ ಕೈ ಬಲಪಡಿಸುವುದು ಮತ್ತು ಅವರ ಸ್ಥಾನ ಭದ್ರಗೊಳಿಸುವ ಉದ್ದೇಶವಿದೆ ಎನ್ನಲಾಗಿದೆ.

ಕೋಟ್‌

ವೀರಶೈವ ಲಿಂಗಾಯತ ಸಮಾಜಕ್ಕಿಂತ ಮುಂದುವರಿದ ಅನೇಕ ಸಮುದಾಯಗಳಿಗೆ ಈಗಾಗಲೇ 2ಎ ಮೀಸಲು ಕಲ್ಪಿಸಲಾಗಿದೆ. ಅದಕ್ಕೆ ನಮ್ಮ ವಿರೋಧವಿಲ್ಲ. ಆದರೆ ನಮ್ಮ ಸಮಾಜದಲ್ಲಿ ಸಾಕಷ್ಟು ಬಡವರಿದ್ದಾರೆ. ಆದ್ದರಿಂದ ನಮಗೂ ಒಬಿಸಿ ನೀಡಬೇ ಕೆಂದು ನೂರಾರು ಮಠಾಧೀಶರು ಸಮಾವೇಶಗೊಂಡು ಸಂದೇಶ ನೀಡಲಿದ್ದಾರೆ.

-ಡಾ.ಬಿ.ಎಸ್.ಪರಮಶಿವಯ್ಯ, ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷ

ಪಂಚಮಸಾಲಿಗಳಿಗೆ ರಾಜ್ಯ ಸರಕಾರ 2ಎ ಮೀಸಲು ಕಲ್ಪಿಸಲಿ. ನಮ್ಮದೇನೂ ಅಭ್ಯಂತರವಿಲ್ಲ. ಆದರೆ ಒಬಿಸಿ ಪಟ್ಟಿಯಲ್ಲಿ ರಾಜ್ಯದ ವೀರಶೈವ, ಲಿಂಗಾಯತ ಸಮುದಾಯದಲ್ಲಿರುವ ಎಲ್ಲ 106 ಉಪ ಪಂಗಡಗಳನ್ನೂ ಸೇರಿಸಬೇಕೆಂದು ಹೋರಾಟ
ಮಾಡುತ್ತೇವೆ.

-ಡಾ.ಮಹಾಂತಲಿಂಗ ಶಿವಾಚಾರ್ಯಸ್ವಾಮಿ, ವಿಭೂತಿಪುರ ಮಠ