ಬೆಂಗಳೂರು: ಮುಂದಿನ ಮಾರ್ಚ್‌ವರೆಗೆ ಪ್ರತಿ ತಿಂಗಳು 2400 ಕೋಟಿ ರೂ. ರಾಜಸ್ವ ಸಂಗ್ರಹ (Revenue Collection) ಗುರಿ ಸಾಧಿಸಲೇಬೇಕು ಎಂದು ನೋಂದಣಿ ಮತ್ತು ಮುದ್ರಾಂಕ ಇಲಾಖೆ ಅಧಿಕಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.
ನೋಂದಣಿ ಮತ್ತು ಮುದ್ರಾಂಕ ಇಲಾಖೆ 2024-25ರ ಸಾಲಿನ ರಾಜಸ್ವ ಸಂಗ್ರಹಣೆ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ನೋಂದಣಿ ಮತ್ತು ಮುದ್ರಾಂಕ ಇಲಾಖೆಯು 2024-25ರ ಸಾಲಿನಲ್ಲಿ 26000 ಕೋಟಿ ರೂ. ರಾಜಸ್ವ ಸಂಗ್ರಹ ಗುರಿ ಹೊಂದಿದ್ದು, ಅಕ್ಟೋಬರ್ ತಿಂಗಳ ಅಂತ್ಯದವರೆಗೆ 13,724 ಕೋಟಿ ರೂ. ಸಂಗ್ರಹ ಆಗಿದೆ. ಮುಂದಿನ ಮಾರ್ಚ್‌ವರೆಗೆ ಪ್ರತಿ ತಿಂಗಳು 2400 ಕೋಟಿ ರೂ. ರಾಜಸ್ವ ಸಂಗ್ರಹ ಗುರಿಯನ್ನು ಸಾಧಿಸಬೇಕು. ನೋಂದಣಿಯೇತರ ದಾಸ್ತಾವೇಜುಗಳಿಗೆ ಸರಿಯಾದ ಮುದ್ರಾಂಕ ಶುಲ್ಕವನ್ನು ಪಾವತಿಸಿಕೊoಡು ಹೆಚ್ಚಿನ ರಾಜಸ್ವ ಸಂಗ್ರಹಿಸಬೇಕು ಎಂದು ಸೂಚನೆ ನೀಡಿದರು.
2024-25ನೇ ಸಾಲಿನಲ್ಲಿ ವಾರ್ಷಿಕ ರಾಜಸ್ವ ಸoಗ್ರಹ ಗುರಿ 13000 ಕೋಟಿ ರೂ. ಆಗಿದ್ದು, ಸೆಪ್ಟೆಂಬರ್‌ವರೆಗೆ 5569 ಕೋಟಿ ರೂ. ಸಂಗ್ರಹ ಮಾಡಲಾಗಿದೆ. ಹಿಂದಿನ ಸಾಲಿಗಿಂತ ಈ ಅವಧಿಯಲ್ಲಿ 308.98 ಕೋಟಿ ರೂ. ಹೆಚ್ಚುವರಿ ರಾಜಸ್ವ ಸಂಗ್ರಹ ಆಗಿದೆ. ಮಾಸಿಕ ಗುರಿ ನಿಗದಿಪಡಿಸಿಕೊoಡು ಮಾರ್ಚ್ ಅಂತ್ಯದ ಒಳಗಾಗಿ ನಿಗದಿತ ಗುರಿ ಸಾಧಿಸಬೇಕು ಎಂದು ಸಿಎಂ ತಿಳಿಸಿದ್ದಾರೆ.
ಸಭೆಯಲ್ಲಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದ ರಾಜು, ಮುಖ್ಯ ಕಾರ್ಯದರ್ಶಿ ಡಾ ಶಾಲಿನಿ ರಜನೀಶ್, ಅಪರ ಮುಖ್ಯ ಕಾರ್ಯದರ್ಶಿ ಎಲ್ ಅತೀಕ್, ಸಾರಿಗೆ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಈ ಸುದ್ದಿಯನ್ನೂ ಓದಿ | HD Kumaraswamy: ಅವಹೇಳನಕಾರಿ ಟೀಕೆಗಳಿಗೆ ಚನ್ನಪಟ್ಟಣ ಫಲಿತಾಂಶದ ಬಳಿಕ ಉತ್ತರಿಸುತ್ತೇನೆ ಎಂದ ಕುಮಾರಸ್ವಾಮಿ
ನೇಮಕಾತಿ ಸ್ಥಗಿತಗೊಂಡಿಲ್ಲ, ಚಾಲ್ತಿಯಲ್ಲಿರೋ ನೇಮಕ ಪ್ರಕ್ರಿಯೆಗಳು ಮುಂದುವರಿಯಲಿವೆ: ಸಿಎಂ ಸ್ಪಷ್ಟನೆ
ಬೆಂಗಳೂರು: ನೇಮಕಾತಿ ಸ್ಥಗಿತದ ಬಗ್ಗೆ ಕೆಲವು ಪತ್ರಿಕೆಗಳಲ್ಲಿ ಪ್ರಕಟಗೊಂಡಿರುವ ಸುದ್ದಿ ಉದ್ಯೋಗಾಕಾಂಕ್ಷಿಗಳಲ್ಲಿ ಗೊಂದಲಕ್ಕೆ ಕಾರಣವಾಗಿರುವುದು ನನ್ನ ಗಮನಕ್ಕೆ ಬಂದಿದೆ. ಈಗಾಗಲೇ ಪ್ರಕಟಗೊಂಡಿರುವ ನೇಮಕಾತಿ ಅಧಿಸೂಚನೆಗಳಿಗೆ ಸಂಬಂಧಿಸಿದಂತೆ ಅರ್ಜಿ ಸಲ್ಲಿಸಿ, ಪರೀಕ್ಷೆಗೆ ತಯಾರಿ ನಡೆಸುತ್ತಿರುವವರು ಯಾವುದೇ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ. ಚಾಲ್ತಿಯಲ್ಲಿರುವ ನೇಮಕ ಪ್ರಕ್ರಿಯೆಗಳು ಮುಂದುವರಿಯಲಿವೆ. ಹೊಸ ನೇಮಕಾತಿ ಪ್ರಕ್ರಿಯೆಗಳಿಗೆ ಸಂಬಂಧಿಸಿದಂತೆ ಮಾತ್ರ ಸಂಪುಟದಲ್ಲಿ ನಿರ್ಣಯ ಕೈಗೊಂಡಿದ್ದು, ಸರ್ಕಾರವು ಎಲ್ಲಾ ನೇಮಕಾತಿಗಳನ್ನು (Govt Recruitment) ಸ್ಥಗಿತಗೊಳಿಸಿಲ್ಲ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ಪರಿಶಿಷ್ಟ ಜಾತಿಗಳಿಗೆ ಒಳ ಮೀಸಲಾತಿ ಜಾರಿ ಮಾಡುವ ಬಗ್ಗೆ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದ ಆಯೋಗವು ವರದಿ ಸಲ್ಲಿಸಲು ಮೂರು ತಿಂಗಳ ಸಮಯ ನಿಗದಿ ಪಡಿಸಿರುವ ಹಿನ್ನೆಲೆಯಲ್ಲಿ ಅಲ್ಲಿಯವರೆಗೆ ಎಲ್ಲಾ ನೇಮಕಾತಿಗಳನ್ನು ಮುಂದೂಡುವುದಾಗಿ ಕಾನೂನು ಸಚಿವ ಎಚ್.ಕೆ.ಪಾಟೀಲ್ ಸೋಮವಾರ ತಿಳಿಸಿದ್ದರು. ಸರ್ಕಾರದ ನಿರ್ಧಾರ ಉದ್ಯೋಗಾಕಾಂಕ್ಷಿಗಳಲ್ಲಿ ಗೊಂದಲಕ್ಕೆ ಕಾರಣವಾದ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ಸಿಎಂ ಸಿದ್ದರಾಮಯ್ಯ ಅವರು, ಪರಿಶಿಷ್ಟ ಜಾತಿಗಳಿಗೆ ಒಳಮೀಸಲಾತಿ ನೀಡುವ ನಿರ್ಣಯವನ್ನು ನೆನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಕೈಗೊಂಡಿದ್ದೇವೆ. ಮೀಸಲಾತಿಯ ಹಂಚಿಕೆ, ಸುಪ್ರೀಂ ಕೋರ್ಟ್‌ನ ಆದೇಶ ಪಾಲನೆ ಹಾಗೂ ಇನ್ನಿತರೆ ವಿಷಯಗಳಲ್ಲಿ ಸೂಕ್ತ ನಿರ್ಣಯಗಳನ್ನು ಕೈಗೊಳ್ಳಲು ಅನುಕೂಲವಾಗಲಿ ಎಂಬ ಉದ್ದೇಶದಿಂದ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದ ಏಕಸದಸ್ಯ ಆಯೋಗ ರಚನೆಗೆ ತೀರ್ಮಾನಿಸಲಾಗಿದೆ.
ಈ ಆಯೋಗಕ್ಕೆ ವರದಿ ಸಲ್ಲಿಸಲು ಮೂರು ತಿಂಗಳ ಸಮಯ ನಿಗದಿ ಪಡಿಸಲಾಗಿದ್ದು, ವರದಿ ಸಲ್ಲಿಕೆಯಾಗುವವರೆಗೆ ರಾಜ್ಯ ಸಿವಿಲ್ ಸೇವೆಗಳಲ್ಲಿನ ಮೀಸಲಾತಿ ಅನ್ವಯವಾಗುವ ವೃಂದಗಳ ಹುದ್ದೆಗಳಿಗೆ ನೇರ ನೇಮಕಾತಿ ಮಾಡಲು ಹೊಸದಾಗಿ ಯಾವುದೇ ಅಧಿಸೂಚನೆಯನ್ನು ಹೊರಡಿಸಬಾರದು ಎಂಬ ನಿರ್ಧಾರಕ್ಕೆ ಬರಲಾಗಿದೆ.
ಈ ವಿಚಾರವನ್ನು ನೆನ್ನೆಯ ಸಚಿವ ಸಂಪುಟ ಸಭೆಯ ನಂತರ ಮಾಧ್ಯಮಗಳಿಗೆ ಸಂಕ್ಷಿಪ್ತವಾಗಿ ವಿವರಿಸಲಾಗಿದೆ. ಆದಾಗ್ಯೂ, ಕೆಲವು ಪತ್ರಿಕೆಗಳಲ್ಲಿ ಪ್ರಕಟಗೊಂಡಿರುವ ಸುದ್ದಿ ಉದ್ಯೋಗಾಕಾಂಕ್ಷಿಗಳಲ್ಲಿ ಗೊಂದಲಕ್ಕೆ ಕಾರಣವಾಗಿರುವುದು ನನ್ನ ಗಮನಕ್ಕೆ ಬಂದಿರುತ್ತದೆ. ಈಗಾಗಲೇ ಪ್ರಕಟಗೊಂಡಿರುವ ನೇಮಕಾತಿ ಅಧಿಸೂಚನೆಗಳಿಗೆ ಸಂಬಂಧಿಸಿದಂತೆ ಅರ್ಜಿ ಸಲ್ಲಿಸಿ, ಪರೀಕ್ಷೆಗೆ ತಯಾರಿ ನಡೆಸುತ್ತಿರುವವರು ಯಾವುದೇ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ. ಚಾಲ್ತಿಯಲ್ಲಿರುವ ನೇಮಕ ಪ್ರಕ್ರಿಯೆಗಳು ಮುಂದುವರಿಯಲಿವೆ. ಹೊಸ ನೇಮಕಾತಿ ಪ್ರಕ್ರಿಯೆಗಳಿಗೆ ಸಂಬಂಧಿಸಿದಂತೆ ಸೀಮಿತವಾಗಿ ಸಂಪುಟದಲ್ಲಿ ನಿರ್ಣಯ ಕೈಗೊಂಡಿದ್ದು, ಸರ್ಕಾರವು ಎಲ್ಲಾ ನೇಮಕಾತಿಗಳನ್ನು ಸ್ಥಗಿತಗೊಳಿಸಿಲ್ಲ ಎಂಬುದನ್ನು ಈ ಮೂಲಕ ಸ್ಪಷ್ಟಪಡಿಸುತ್ತಿದ್ದೇನೆ ಎಂದು ಸಿಎಂ ತಿಳಿಸಿದ್ದಾರೆ.