Saturday, 28th December 2024

Road Accident: ಕಾರಿನ ಮೇಲೆ ಲಾರಿ ಮಗುಚಿ ಬಿದ್ದು 6 ಮಂದಿ ಸಾವು

Road Accident

ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದ ತಾಳೇಕೆರೆ ಗ್ರಾಮದ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಶನಿವಾರ (ಡಿ. 21) ಭೀಕರ ಅಪಘಾತ ಸಂಭವಿಸಿದ್ದು, 6 ಜನರು ಮೃತಪಟ್ಟಿದ್ದಾರೆ. ಚಾಲಕನ ನಿಯಂತ್ರಣ ತಪ್ಪಿ ಲಾರಿ ಕಾರಿನ ಮೇಲೆ ಪಲ್ಟಿಯಾಗಿದ್ದು, ಕಾರಿನಲ್ಲಿದ್ದ ಇಬ್ಬರು ಮಕ್ಕಳು ಸೇರಿದಂತೆ ಒಟ್ಟು 6 ಮಂದಿ ಅಲ್ಲೇ ಅಸುನೀಗಿದ್ದಾರೆ (Road Accident).

ಅಪಘಾತದ ಬಳಿಕ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಟ್ರಾಫಿಕ್ ಜಾಮ್ ಕಂಡು ಬಂದಿದೆ. ಸುಮಾರು 1 ಕಿ.ಮೀ.ವರೆಗೆ ವಾಹನಗಳು ಸಾಲುಗಟ್ಟಿ ನಿಂತಿವೆ. ಸ್ಥಳಕ್ಕೆ ಬೆಂಗಳೂರು ಗ್ರಾಮಾಂತರ ಎಸ್‌.ಪಿ. ಸಿ.ಕೆ.ಬಾಬಾ ಸೇರಿದಂತೆ ಇತರ ಅಧಿಕಾರಿಗಳು ಪೊಲೀಸರು ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಸಾರ್ವಜನಿಕರ ನೆರವಿನಿಂದ, ಕ್ರೇನ್‌ ಮೂಲಕ ಕಾರಿನಲ್ಲಿ ಸಿಲುಕಿದ್ದ ಮೃತದೇಹಗಳನ್ನು ಹೊರತೆಗೆಯಲಾಯಿತು. ಇನ್ನು ಕಾರಿನಲ್ಲಿದ್ದವರ ಗುರುತು ಪತ್ತೆಯಾಗಿಲ್ಲ. ಈ ಬಗ್ಗೆ ತನಿಖೆ ನಡೆಲಾಗುತ್ತಿದೆ.

ಸಂಪೂರ್ಣ ಅಪ್ಪಚ್ಚಿಯಾಗಿರುವ ಕಾರು ಬೆಂಗಳೂರು ರಿಜಿಸ್ಟ್ರೇಷನ್ ಹೊಂದಿದ್ದು, ಮೃತರೆಲ್ಲ ಒಂದೇ ಕುಟುಂಬದವರು ಎನ್ನಲಾಗಿದೆ. ಇವರು ವಿಜಯಪುರ ಮೂಲದವರು ಎಂಬ ಮಾಹಿತಿ ಲಭ್ಯವಾಗಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿಯಬೇಕಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೋಲಾರದಲ್ಲಿ ಭೀಕರ ಅಪಘಾತ; ಬೊಲೆರೋ ಡಿಕ್ಕಿಯಾಗಿ ಐವರ ದುರ್ಮರಣ

ಕೋಲಾರ: ಬೊಲೆರೋ ವಾಹನ ಡಿಕ್ಕಿಯಾಗಿ ಸ್ಥಳದಲ್ಲೇ ಐವರು ದುರ್ಮರಣ ಹೊಂದಿರುವ ಘಟನೆ (Road Accident) ಜಿಲ್ಲೆಯ ಮುಳಬಾಗಿಲು ತಾಲೂಕಿನ ಎನ್. ವಡ್ಡಹಳ್ಳಿ-ಗುಡಿಪಲ್ಲಿ ಮುಖ್ಯ ರಸ್ತೆಯಲ್ಲಿ ಬುಧವಾರ (ಡಿ. 18) ನಡೆದು ರಾಜ್ಯವೇ ಬೆಚ್ಚಿ ಬಿದ್ದಿತ್ತು. ಆ ಘಟನೆ ಮಾಸುವ ಮುನ್ನ ಈ ಅವಘಡ ನಡೆದಿದೆ.

ಕೋಲಾರದಲ್ಲಿ ನಡೆದ ಅಪಘಾತದಲ್ಲಿ ಕೋನಗುಂಟೆ ಗ್ರಾಮದ ರಾಧಪ್ಪ (45), ವೆಂಕಟರಾಮಪ್ಪ (45), ವೆಂಕಟರಾಮಪ್ಪನ ಪತ್ನಿ ಅಲುವೇಲಮ್ಮ (30) ಸೇರಿ ಐವರು ಮೃತಪಟ್ಟಿದ್ದರು. ಅಪಘಾತದಲ್ಲಿ ಮತ್ತೊಬ್ಬ ವ್ಯಕ್ತಿಗೆ ಗಂಭೀರ ಗಾಯಗಳಾಗಿದ್ದು, ಆತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕೂಲಿ ಕೆಲಸ ಮುಗಿಸಿ ಮನೆಗೆ ಹೋಗುತ್ತಿದ್ದಾಗ ಈ ದುರಂತ ನಡೆದಿದೆ ಎನ್ನಲಾಗಿದೆ. ಬೈಕ್‌ಗಳಿಗೆ ಡಿಕ್ಕಿಯಾದ ಬಳಿಕ ಬೊಲೆರೋ ರಸ್ತೆಬದಿಗೆ ಉರುಳಿತ್ತು. ನಂಗಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸುದ್ದಿಯನ್ನೂ ಓದಿ: Accident: ನಿಂತಿದ್ದ ಲಾರಿಗೆ ಕ್ಯಾಂಟರ್ ಡಿಕ್ಕಿ, ಕ್ಯಾಂಟರ್ ಮುಂಭಾಗ ಸಂಪೂರ್ಣ ಜಖಂ