Monday, 23rd December 2024

Road Accident: ಬೆಂಗಳೂರು- ಚೆನ್ನೈ ಹೈವೆಯಲ್ಲಿ ಬಸ್ಸಿಗೆ ಲಾರಿ ಡಿಕ್ಕಿ, 10 ಮಂದಿಗೆ ಗಾಯ

road accident

ಬೆಂಗಳೂರು: ಬೆಂಗಳೂರು-ಚೆನ್ನೈ ರಾಷ್ಟ್ರೀಯ ಹೆದ್ದಾರಿಯ (Bengaluru- Chennai Highway) ತಾಂಡಾಲಂ ಬಳಿ ಖಾಸಗಿ ಬಸ್ಸು ಹಾಗೂ ಲಾರಿಯ ನಡುವೆ ಅಪಘಾತ (Road Accident) ಸಂಭವಿಸಿದೆ. ಟಾರಸ್ ಲಾರಿ ಡಿಕ್ಕಿ ಹೊಡೆದ ಪರಿಣಾಮ ಖಾಸಗಿ ಸಂಸ್ಥೆಯ ಬಸ್ ಪಲ್ಟಿಯಾಗಿದ್ದು, ಅಪಘಾತದಲ್ಲಿ 10ಕ್ಕೂ ಹೆಚ್ಚು ಮಂದಿಗೆ ತೀವ್ರ ಗಾಯಗಳಾಗಿವೆ.

ಖಾಸಗಿ ಸಂಸ್ಥೆಯ ಬಸ್ ಯೂ ಟರ್ನ್ ಮಾಡಲು ಮುಂದಾದಾಗ ಹಿಂದಿನಿಂದ ವೇಗವಾಗಿ ಬಂದ ಟಾರಸ್ ಲಾರಿ ಬಸ್‌ಗೆ ಡಿಕ್ಕಿ ಹೊಡೆದಿದೆ. ಈ ವೇಳೆ ಬಸ್ ಪಲ್ಟಿಯಾಗಿ ಈ ದುರಂತ ಸಂಭವಿಸಿದೆ. ಅಪಘಾತದಲ್ಲಿ ಬಸ್ ಮತ್ತು ಲಾರಿಯ ಮುಂಭಾಗವೂ ನಜ್ಜುಗುಜ್ಜಾಗಿದೆ. ಜೊತೆಗೆ ಚೆನ್ನೈನಿಂದ ಬೆಂಗಳೂರು ಕಡೆಗೆ ತೆರಳುತ್ತಿದ್ದ ಇನ್ನೋವಾ ಕಾರಿಗೂ ಖಾಸಗಿ ಬಸ್ ಡಿಕ್ಕಿ ಹೊಡೆದಿದೆ.

ಈ ದುರ್ಘಟನೆಯಲ್ಲಿ ಬಸ್ ಚಾಲಕ ಸೇರಿದಂತೆ 9 ಮಂದಿಗೆ ಗಂಭೀರ ಗಾಯಗಳಾಗಿವೆ. ರಸ್ತೆ ದಾಟುತ್ತಿದ್ದ ಪಾದಚಾರಿಯೊಬ್ಬರಿಗೆ ಕಾಲು ಮುರಿತವಾಗಿದ್ದು, ಲಾರಿ ಚಾಲಕ ವಾಹನದ ಮುಂಭಾಗದ ಕ್ಯಾಬಿನ್‌ನಲ್ಲಿ ಸಿಲುಕಿಕೊಂಡಿದ್ದ. ಸ್ಥಳೀಯರು ಆತನನ್ನು ಹೊರಗೆಳೆದಿದ್ದಾರೆ.

ವಿಚಾರ ತಿಳಿದ ಕೂಡಲೇ ಸ್ಥಳಕ್ಕಾಗಮಿಸಿದ ಪೊಲೀಸರು ರಕ್ಷಣಾ ಕಾರ್ಯಾಚರಣೆ ನಡೆಸಿದ್ದು, ಜೆಸಿಬಿ ಬಳಸಿ ಲಾರಿ ಚಾಲಕನನ್ನು ರಕ್ಷಿಸಿದ್ದಾರೆ. ಅಂತೆಯೇ ಗಾಯಗೊಂಡ ಎಲ್ಲ ವ್ಯಕ್ತಿಗಳನ್ನು ಚಿಕಿತ್ಸೆಗಾಗಿ ಶ್ರೀಪೆರಂಬದೂರು ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಮುಂಜಾನೆ ಸಂಭವಿಸಿದ ಅಪಘಾತ ಬೆಂಗಳೂರು-ಚೆನ್ನೈ ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ರಾಫಿಕ್‌ಗೆ ಅಡಚಣೆಯನ್ನು ಉಂಟುಮಾಡಿತು. ನಂತರ ಪೊಲೀಸರು ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಇದನ್ನೂ ಓದಿ: Road Accident: ಭೀಕರ ರಸ್ತೆ ಅಪಘಾತ, ಇಬ್ಬರು ವಿದ್ಯಾರ್ಥಿಗಳ ದುರ್ಮರಣ