Thursday, 28th November 2024

ರಸ್ತೆಯನ್ನೇ ನುಂಗಿದ ಭೂದಾಹಿಗಳು !

30 ವರ್ಷಗಳಿಂದ ಕಾಣದ ದಾರಿ

ತನಿಖೆ ನಡೆಸಿ ಶೀಘ್ರವೇ ರಸ್ತೆ ನಿರ್ಮಿಸಲು ಆಗ್ರ

ವಿಶೇಷ ವರದಿ: ಟಿ.ಚಂದ್ರಶೇಖರ

ರಬಕವಿ-ಬನಹಟ್ಟಿ: ಖಾಸಗಿ ವ್ಯಕ್ತಿಗಳಿಂದ 30 ವರ್ಷಗಳ ಹಿಂದೆ ಆದ ಪ್ರಮಾದದಿಂದ ಇದೀಗ ಹಲವಾರು ಮನೆಗಳಿಗೆ ಕಂಟಕ ವಾಗಿದೆ. ಇನ್ನೂ ಕೆಲ ಕುಟುಂಬಗಳು ಅನಧೀಕೃತವಾಗಿ ಕಾಂಪೌಂಡ್ ಗೋಡೆ ನಿರ್ಮಿಸಿಕೊಂಡು ಪ್ರಮುಖ ರಸ್ತೆಯೊಂದನ್ನೇ ನುಂಗಿದ ಘಟನೆ ರಬಕವಿ-ಬನಹಟ್ಟಿ ನಗರಸಭೆ ವ್ಯಾಪ್ತಿಯಲ್ಲಿ ನಡೆದಿದೆ.

ಬನಹಟ್ಟಿಯ ಲಕ್ಷ್ಮೀ ನಗರದ ವಾರ್ಡ್ ನಂ.4 ರಲ್ಲಿ ಬರುವ ಲೇಔಟ್‌ಗೆ ಸಂಬಂಧಿಸಿದಂತೆ ಈಗಾಗಲೇ ಕಟ್ಟಡಗಳು ತಲೆ ಎತ್ತಿವೆ. ಕೆಲ ನಿವಾಸಿಗಳು ಬಡಾವಣೆಗಾಗಿ ಇರುವ 12 ಮೀ. ರಸ್ತೆಯನ್ನೇ ಅತಿಕ್ರಮಿಸಿಕೊಂಡು ಕಟ್ಟಡ ನಿರ್ಮಿಸಿಕೊಂಡಿದ್ದರೆ, ಇನ್ನೂ ಕೆಲವರು ಕಾಂಪೌಂಡ್ ನಿರ್ಮಿಸಿಕೊಂಡು ಸ್ವಂತಕ್ಕೆ ಉಪಯೋಗಿಸುತ್ತಿದ್ದರೂ ಭೂಮಾಪನಾ ಇಲಾಖೆ, ಪ್ರಾಧಿಕಾರ ಹಾಗು ನಗರ ಸಭೆಯು ನಮಗೇನೂ ಸಂಬಂಧವಿಲ್ಲವೆಂಬಂತೆ ಕೈಕಟ್ಟಿ ಕುಳಿತಿರುವುದು ಮುಜುಗರಕ್ಕೀಡಾಗಿದೆ.

ಕೆಸರೆರಚಾಟ: ನಗರಸಭೆ ಅಥವಾ ಭೂಮಾಪನಾ ಇಲಾಖೆಗೆ ಈ ಪ್ರಕರಣಕ್ಕೆಂದು ತೆರಳಿದರೆ ಇಲಾಖೆಗಳಿಗೆ ಪತ್ರ ಬರೆಯ ಲಾಗಿದ್ದು, ಯಾವ ರೀತಿ ಉತ್ತರ ಬರುತ್ತದೆ ಕಾದು ನೋಡಬೇಕು. ಅಲ್ಲಿಯವರೆಗೂ ಏನೂ ಮಾಡಲು ಸಾಧ್ಯವಿಲ್ಲವೆನ್ನುವ ಉತ್ತರ ಎಲ್ಲೆಡೆಯಾಗಿದೆ. ಇಷ್ಟೊಂದು ನಿರ್ಲಕ್ಷ್ಯದಿಂದ ಕಾರ್ಯನಿರ್ವಹಿಸುತ್ತಿರುವ ಸರಕಾರಿ ಇಲಾಖೆಗಳ ವಿರುದ್ಧ ಜನ ರೊಚ್ಚಿಗೆದ್ದಿದ್ದು, ಸರಕಾರದ ವಿರುದ್ಧ ಹೋರಾಟ ನಡೆಸಲಾಗುವದೆಂದು ತಿಳಿಸಿದ್ದಾರೆ.

ಇವೆಲ್ಲದರ ಕುರಿತು ತನಿಖೆ ನಡೆಸಿ ಶೀಘ್ರವೇ ರಸ್ತೆ ನಿರ್ಮಿಸಬೇಕು. ಈಗಾಗಲೇ ಹಲವು ವರ್ಷಗಳಿಂದ ಹೋರಾಟ ನಡೆಸ ಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಬಡಾವಣೆ ಮುಂಭಾಗದ ರಸ್ತೆೆಯಲ್ಲಿ ಅಥವಾ ಸಂಬಂಧಿಸಿದ ಇಲಾಖೆಗಳ ಮುಂದೆ ಧರಣಿ ನಡೆಸಲಾಗುವದೆಂದು ವೀರಭದ್ರ ಕುಳ್ಳಿ ಹಾಗು ಕಲ್ಲಪ್ಪ ಕರಲಟ್ಟಿ ಸ್ಪಷ್ಟಪಡಿಸಿದ್ದಾರೆ.

ದಾಖಲೆಗಳೇ ಅದಲು-ಬದಲು
ಸರಕಾರ ಮಟ್ಟದಲ್ಲಿಯೇ ಇಂತಹ ಲೋಪದೋಷಗಳಿದ್ದರೆ ಸಾರ್ವಜನಿಕರಾದರೂ ಏನು ಮಾಡಬೇಕು? ನಗರ ಯೋಜನಾ
ಪ್ರಾಧಿಕಾರದಲ್ಲಿ ರಸ್ತೆಯೆಂದು ನಮೂದಾಗಿದ್ದರೆ, ಭೂಮಾಪನಾ ಇಲಾಖೆಯಲ್ಲಿ ನಿವೇಶನಗಳನ್ನು ಗುರುತಿಸಿದ್ದಾರೆ. ಅತಿಕ್ರಮಣ ತೆರವಿಗಾಗಿ ಸ್ಥಳೀಯರಾದ ವೀರಭದ್ರಪ್ಪ ಕುಳ್ಳಿ ಹಾಗು ಕಲ್ಲಪ್ಪ ಕರಲಟ್ಟಿ ಸೇರಿದಂತೆ ಅನೇಕರು ಸರಕಾರಿ ಇಲಾಖೆಗಳಿಗೆ ಅಲೆದು ಸುಸ್ತಾಗಿದ್ದಾರೆ.

ಪ್ರಭಾವಿಗಳಿಂದ ನಿರ್ಲಕ್ಷ್ಯ
ರಸ್ತೆ ನುಂಗಿದ ಭೂದಾಹಿಗಳಲ್ಲಿ ಪ್ರಭಾವಿ ರಾಜಕಾರಣಿಗಳ ಹೆಸರು ಕೇಳಿ ಬರುತ್ತಿರುವ ಹಿನ್ನೆಲೆ ತೆರವು ಕಾರ್ಯಾಚರಣೆಗೆ ತೀವ್ರ
ಹಿನ್ನೆಡೆಯುಂಟಾಗಲು ಕಾರಣವೆನ್ನಲಾಗಿದೆ. ಅತಿಕ್ರಮಣ ಮಾಡಿಕೊಂಡಿರುವ ರಸ್ತೆಯ ಮಧ್ಯ ಕಿರಿದಾದ ರಸ್ತೆಯಿದ್ದು, ಈ ಭಾಗದ ಸಾವಿರಾರು ಕುಟುಂಬಗಳಿಗೆ ಬೃಹದಾಕಾರದ ರಸ್ತೆ ನಿರ್ಮಿಸಬೇಕಿತ್ತು. ಅವೆಲ್ಲವನ್ನೂ ಖಾಸಗಿ ವ್ಯಕ್ತಿಗಳು ವಶಪಡಿಸಿಕೊಂಡಿರುವ ಹಿನ್ನೆಲೆ ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿದೆ.