ಬೆಂಗಳೂರು: ಕರ್ನಾಟಕದ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಮತ್ತು ಐಪಿಎಸ್ ಅಧಿಕಾರಿ ಡಿ.ರೂಪಾ ಅವರ ಜಗಳ ಸದ್ಯಕ್ಕೆ ಬಗೆಹರಿಯುವ ಲಕ್ಷಣ ಕಂಡು ಬರುತ್ತಿಲ್ಲ. ಸುಪ್ರೀಂ ಕೋರ್ಟ್ (Supreme Court)ನಲ್ಲಿಯೂ ಇಬ್ಬರು ಜಗಳ ಬಗೆಹರಿದಿಲ್ಲ. ಹೀಗಾಗಿ ನೀವು ಇನ್ನು ಇಲ್ಲಿ ಬರುವುದು ಬೇಡ. ಪುನಃ ಹೈಕೋರ್ಟ್‌ಗೆ ಹೋಗಿ ಅಲ್ಲಿಯೇ ನ್ಯಾಯ ಪಂಚಾಯಿತಿ ಮಾಡಿಕೊಳ್ಳುವಂತೆ ಸುಪ್ರೀಂ ಕೋರ್ಟ್ ವಾಪಸ್ ಕಳುಹಿಸಿದೆ (Roopa V/S Rohini Sindhuri).
ಕಳೆದ ವರ್ಷ ಐಪಿಎಸ್ ಅಧಿಕಾರಿ ಡಿ. ರೂಪಾ ಅವರು ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರದ್ದೆನ್ನಲಾದ ಕೆಲವು ಅಶ್ಲೀಲವೆನಿಸುವ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ಕೆಟ್ಟ ಆರೋಪಗಳನ್ನು ಮಾಡಿದ್ದರು. ಹೀಗಾಗಿ ರೋಹಿಣಿ ಸಿಂಧೂರಿ ಅವರು ಕೋರ್ಟ್ ಮೆಟ್ಟಿಲೇರಿ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು.
ಸರ್ಕಾರದ ಮಟ್ಟದಲ್ಲಿ ಇಬ್ಬರ ಜಗಳವನ್ನು ನಿಲ್ಲಿಸಲು ಪ್ರಯತ್ನ ಮಾಡಲಾಯಿತಾದರೂ ಇಬ್ಬರೂ ರಾಜಿಗೆ ತರಾರಿರಲಿಲ್ಲ. ವಿವಾದ ಹೈಕೋರ್ಟ್ ಮೆಟ್ಟಿಲೇರಿತು. ಅಲ್ಲಿ ಅಧಿಕಾರಿ ಡಿ. ರೂಪಾ ಅವರು ಮಧ್ಯಸ್ಥಿಕೆ ಮೂಲಕ ಕೇಸ್ ಇತ್ಯರ್ಥಪಡಿಸಿಕೊಳ್ಳಲು ಸಿದ್ಧರಿರುವುದಾಗಿ ತಿಳಿಸಿದ್ದರು. ಆದರೆ ರೋಹಿಣಿ ಸಿಂಧೂರಿ ಅವರು ಇದಕ್ಕೆ ಒಪ್ಪಲಿಲ್ಲ. ಇದರಿಂದ ಇವರಿಬ್ಬರ ಪ್ರಕರಣ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಗುರುವಾರ (ನ. 7) ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ಮಾಡಿದಾಗಲೂ ಇಬ್ಬರೂ ಜಗಳ ಇತ್ಯರ್ಥಪಡಿಸಿಕೊಳ್ಳಲು ಸಿದ್ಧರಿರಲಿಲ್ಲ. ಹೀಗಾಗಿ ನೀವು ಪುನಃ ಹೈಕೋರ್ಟ್‌ಗೆ ಹೋಗಿ ಅಲ್ಲಿಯೇ ನಿಮ್ಮ ಜಗಳ ಬಗೆಹರಿಸಿಕೊಳ್ಳುವಂತೆ ಉಚ್ಛ ನ್ಯಾಯಾಲಯ ವಾಪಸ್ ಕಳುಹಿಸಿದೆ. ಹೀಗಾಗಿ ರೋಹಿಣಿ ಸಿಂಧೂರಿ ದಾಖಲಿಸಿದ್ದ ಮಾನನಷ್ಟ ಮೊಕದ್ದಮೆ ರದ್ದುಗೊಳಿಸುವಂತೆ ಸಲ್ಲಿಸಿದ್ದ ಅರ್ಜಿಯನ್ನು ಡಿ.ರೂಪ ತಮ್ಮ ಅರ್ಜಿ ಹಿಂಪಡೆದುಕೊಂಡಿದ್ದಾರೆ.
ಇಂದೇನಾಯ್ತು?
ಸುಪ್ರೀಂ ಕೋರ್ಟ್‌ನಲ್ಲಿ ಐಪಿಎಸ್ ಡಿ.ರೂಪಾ V/S ಐಎಎಸ್ ರೋಹಿಣಿ ಸಿಂಧೂರಿ ಪ್ರಕರಣದ ವಿಚಾರಣೆಯನ್ನು ನ್ಯಾಯಮೂರ್ತಿ ಅಭಯ್ ಓಕಾ ಅವರು ಕೈಗೆತ್ತಿಕೊಂಡರು. ವಿಚಾರಣೆ ವೇಳೆ ಮಧ್ಯಸ್ಥಿಕೆ ಮೂಲಕ ಪ್ರಕರಣ ಇತ್ಯರ್ಥ ಮಾಡಿಕೊಳ್ಳುವುದಾಗಿ ಡಿ. ರೂಪಾ ಪರ ವಕೀಲರು ಕೋರ್ಟ್ ಮುಂದೆ ತಿಳಿಸಿದರು. ಇದಕ್ಕೆ ರೋಹಿಣಿ ಸಿಂಧೂರಿ ಪರ ವಕೀಲರು ಪ್ರತಿಕ್ರಿಯಿಸಿ, ಡಿ.ರೂಪಾ ಅವರು ಬೇಷರತ್ ಕ್ಷಮೆಯಾಚಿಸಿದರೆ ಮಾನನಷ್ಟ ಮೊಕದ್ದಮೆಯ ಅರ್ಜಿ ವಾಪಸ್ ಪಡೆಯುವುದಾಗಿ ತಿಳಿಸಿದರು.
ಆಗ ನ್ಯಾಯಾಲಯ, ಇಬ್ಬರು ಅಧಿಕಾರಿಗಳು ಮಧ್ಯಸ್ಥಿಕೆ ಮೂಲಕ ಪ್ರಕರಣ ಇತ್ಯರ್ಥ ಮಾಡುವಂತೆ ಪ್ರಸ್ತಾಪ ಮಾಡಿತು. ಆದರೆ ಸುಪ್ರೀಂ ಕೋರ್ಟ್‌ನ ಈ ಪ್ರಸ್ತಾಪಕ್ಕೆ ರೋಹಿಣಿ ಸಿಂಧೂರಿ ಒಪ್ಪಿಕೊಳ್ಳಲಿಲ್ಲ. ಕೋರ್ಟ್‌ನಲ್ಲಿಯೇ ತೀರ್ಮಾನವಾಗಲಿ ಎಂದು ಪಟ್ಟು ಹಿಡಿದರು.
ಸುಪ್ರೀಂ ಕೋರ್ಟ್ ಮುಂದಿಟ್ಟ ಪ್ರಸ್ತಾಪವನ್ನೂ ತಿರಸ್ಕರಿಸಿದ್ದರಿಂದ ಗರಂ ಆದ ನ್ಯಾಯಮೂರ್ತಿಗಳು, ಇಬ್ಬರು ಹಿರಿಯ ಅಧಿಕಾರಿಗಳು ಹೀಗೆ ವರ್ತಿಸಬಾರದು ಎಂದು ಆಕ್ಷೇಪ ವ್ಯಕ್ತಪಡಿಸಿದರು. ಮಧ್ಯಸ್ಥಿಕೆ ಮೂಲಕ ಕ್ಷಮೆಗೆ ಒಪ್ಪದ ಹಿನ್ನೆಲೆಯಲ್ಲಿ ಅರ್ಜಿ ವಾಪಸ್ ಪಡೆದು ಹೈಕೋರ್ಟ್‌ನಲ್ಲಿ ಈ ಪ್ರಕರಣವನ್ನು ಇತ್ಯರ್ಥ ಮಾಡಿಕೊಳ್ಳುವುದಾಗಿ ಐಪಿಎಸ್ ಅಧಿಕಾರಿ ಡಿ.ರೂಪಾ ಹೇಳಿದರು. ಈ ಪ್ರಕರಣ ಇನ್ನುಮುಂದೆ ಹೈಕೋರ್ಟ್‌ನಲ್ಲಿ ಮುಂದುವರಿಯಲಿದೆ.
ಏನಿದು ಪ್ರಕರಣ?
ಡಿ.ರೂಪಾ 2023ರ ಫೆ.18 ಮತ್ತು 19ರಂದು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ನನ್ನ ವಿರುದ್ಧ ಕೀಳು ಅಭಿರುಚಿಯಿಂದ ಕೂಡಿದ ಆರೋಪ ಮಾಡಿದ್ದಾರೆ. ಆ ಆರೋಪಗಳು ನನ್ನ ವ್ಯಕ್ತಿತ್ವಕ್ಕೆ ಧಕ್ಕೆ ಉಂಟು ಮಾಡುವಂತಿವೆ. ನನ್ನ ತೇಜೋವಧೆ ಮಾಡುವ ದುರದ್ದೇಶದಿಂದಲೇ ರೂಪಾ ಈ ಕೃತ್ಯ ಎಸಗಿದ್ದಾರೆ. ಇದರಿಂದ ಮಾನಸಿಕ ಯಾತನೆ ಉಂಟಾಗಿದೆ ಎಂದು ಆರೋಪಿಸಿ ರೋಹಿಣಿ ಸಿಂಧೂರಿ 2023ರ ಮಾ. 3ರಂದು ದೂರು ದಾಖಲಿಸಿದ್ದರು.
ಈ ಸುದ್ದಿಯನ್ನೂ ಓದಿ: ಅಖಿಲ ಭಾರತ ಸೇವಾ ನಿಯಮಕ್ಕೆ ಬದ್ಧರಾಗಿರಿ: ರೂಪಾ ಹಾಗೂ ಸಿಂಧೂರಿಗೆ ನೋಟಿಸ್ ನಲ್ಲಿ ಎಚ್ಚರಿಕೆ