ಬೆಂಗಳೂರು: ಧರ್ಮಗಳು ಜವಾಬ್ದಾರಿಗಳನ್ನು ಮರೆತಿವೆ. ಮೂಲಭೂತವಾಗಿ ಮಾನವೀಯ ಮೌಲ್ಯಗಳು ಇತ್ತೀಚಿನ ದಿನಗಳಲ್ಲಿ ಕಣ್ಮರೆಯಾಗುತ್ತಿವೆ. ಪರಸ್ಪರ ಗೌರವಗಳೊಂದಿಗೆ ವಿವಿಧ ಧರ್ಮಗಳ ಜನರು ಒಂದಾದರೆ ಶಾಂತಿಯಿಂದ ಬದುಕಲು ಸಾಧ್ಯವಾಗುತ್ತದೆ. ಆದರೆ, ಇತ್ತೀಚೆಗೆ ಧರ್ಮಗಳಲ್ಲಿ ಸಾಮಾಜಿಕ ಕಳಕಳಿ ಇಲ್ಲವಾಗಿದೆ ಎಂದು ಇಶಾ ಫೌಂಡೇಷನ್ ನ ಸದ್ಗುರು ಜಗ್ಗಿ ವಾಸುದೇವ್ ಅಭಿಪ್ರಾಯಪಟ್ಟರು.
ವಿಶ್ವವಾಣಿ ಕ್ಲಬ್ಹೌಸ್ನ ವಿಶೇಷ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ಜೀವ ಎನ್ನುವುದು ಇದೆ. ಜೀವನ ಎಂಬುದು ನಾವು ಮಾಡುವ ಕೆಲಸ, ಅನುಭವಿಸುವ ಶೈಲಿ. ಜೀವ ಮತ್ತು ಜೀವನ ಬೇರೆ ಬೇರೆ. ಜೀವ ಇದ್ದರೆ ತಾನೇ ಜೀವನ ಎಂದರು. ಆಂಗ್ಲ ಭಾಷೆಯ ಲೈಫ್ ಎಂದರೆ ಜೀವ-ಜೀವನ ಎಂಬುದು. ನಮಗೆ ಮುಖ್ಯ ವಾಗಿ ಜೀವದ ಬಗ್ಗೆ ಕಾಳಜಿ ಇರಬೇಕು. ಜೀವವೆಂಬುವುದು ದೇಹಕ್ಕೆ ಮುಖ್ಯ.
ಜೀವನವೆಂಬುದು ದೈಹಿಕ, ಮನೋವಿeನ, ಮೂಲಸೌಲಭ್ಯಗಳು ಒಳಗೊಂಡಿರುತ್ತದೆ. ನಾವು ನಡೆದು ಹೋಗುವ ಮಣ್ಣು ಆಹಾರವಾಗಿ ಬಂದು ಶರೀರದಲ್ಲಿ ಸೇರಿದೆ ಎಂಬುದು ತಿಳಿಯುತ್ತದೆ. ಶರೀರ ಇಲ್ಲದೆ ಜೀವ ಇರಲು ಅಸಾಧ್ಯ. ಜೀವನ ಪ್ರಕ್ರಿಯೆಯಲ್ಲಿ ಎಲ್ಲವೂ ಅಂದುಕೊಂಡಂತೆ ನಡೆಯಬೇಕೆಂದರೆ ಜೀವ ಮುಖ್ಯ. ಪ್ರಮುಖವಾಗಿ ಜೀವ ಕಾಪಾಡಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು. ಜೀವ ಎನ್ನುವುದು ಕಾಪಾಡದೆ ಜೀವನವನ್ನು ಉನ್ನತ ನೆಲೆಗೆ ಕೊಂಡೊಯ್ಯವ ಪ್ರಯತ್ನ ಮಾಡುತ್ತಿದ್ದಾರೆ. ಸುಖ, ನೆಮ್ಮದಿ ಇಲ್ಲ. ಇದು ಸರಿ ಮಾಡದೆ ಸೌಲಭ್ಯಗಳು ಇದ್ದರೂ ನಾವು ಆನಂದದಿಂದ ಇಲ್ಲ ಎಂದರ್ಥ.
ನೀವು ಮನೆಯಲ್ಲಿ ನಲ್ಲಿ ಓಪನ್ ಮಾಡಿದರೆ ಕಾವೇರಿ ನೀರು ಬಂತು. ಸುಮಾರು ವರ್ಷಗಳ ಹಿಂದೆ ನಡೆದು ಕೊಂಡು ಹೋಗಿ ಕಾವೇರಿ ನೀರು ತರಬೇಕಿತ್ತು. ಈಗಿನ ಜನ ನಡೆದುಕೊಂಡು ಹೋಗಿ ನೀರು ತರುತ್ತಿಲ್ಲ ಎಂದರು. ದೇಹದ ಅನುಭವ ಮಂಟಪವೆಂದರೆ ಜೀವ. ಜೀವ ಉನ್ನತ ನೆಲೆಗೆ ಬಂದರೆ ಜೀವನ ತಾನಾಗೇ ಸಾಗುತ್ತದೆ. ದೇಹ, ಮನಸ್ಸು ಹಾಗೂ ಭಾವನೆಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸುವುದೇ ಸಂತೋಷಭರಿತ ಜೀವನದ ಕೀಲಿಕೈ. ಮನುಷ್ಯ ಈ ಭೂಮಿಯ ಮೇಲಿನ ಅತ್ಯಂತ ಜಟಿಲ ಹಾಗೂ ಸೂಕ್ಷ್ಮ ಯಂತ್ರ. ಆ ಯಂತ್ರದ ಬಳಕೆದಾರರ ಕೈಪಿಡಿಯನ್ನು ಸರಿಯಾಗಿ ಓದಿಕೊಳ್ಳಬೇಕು. ಅಂದರೆ ಬದುಕಿನ ಆರಂಭದ ಹಂತದಲ್ಲಿಯೇ ನಮ್ಮ ಉದ್ದೇಶಗಳನ್ನು ತಿಳಿದುಕೊಂಡಿರಬೇಕು.
ಕೊನೆಯ ಘಳಿಗೆಯಲ್ಲಿ ಅರಿಯಲು ಹೋದರೆ ಏನೂ ಪ್ರಯೋಜನವಾಗದು ಎಂದು ಹೇಳಿದರು. ಸ್ವಯಂ ಪರಿಕಲ್ಪನೆ ಅಂದರೆ ನಮ್ಮ ಬಗೆಗಿನ ನಮ್ಮ ದೃಷ್ಟಿಕೋನ. ನಾವು ಹೀಗೆಯೇ ಇರಬೇಕು, ಜೀವನದಲ್ಲಿ ಯಶಸ್ಸನ್ನು ಪಡೆಯಬೇಕೆಂಬ ಕನಸು ಎಲ್ಲರಿಗೂ ಇದ್ದೇ ಇರುತ್ತದೆ. ನಮ್ಮನ್ನು ನಾವು ನೋಡಿಕೊಳ್ಳುವ ರೀತಿ, ಸದ್ಯ
ಜೀವನವನ್ನು ಯಾವ ರೀತಿ ಅನುಭವಿಸುತ್ತಿದ್ದೇವೆ, ಹಿಂದೆ ಹೇಗಿದ್ದೆ, ಮುಂದೆ ಹೇಗಿರಬೇಕು ಎಂಬುದೆಲ್ಲವನ್ನು ಪರಿಗಣಿಸಿ ಬದುಕನ್ನು ರೂಪಿಸಿಕೊಳ್ಳುವ ಸ್ವಾತಂತ್ರ್ಯ
ನಮ್ಮ ಕೈಯಲ್ಲೇ ಇದೆ. ಜೀವನವನ್ನು ಸಕಾರಾತ್ಮಕವಾಗಿ, ಆರೋಗ್ಯಕರವಾಗಿ ರೂಢಿಸಿಕೊಂಡರೆ ಅದರ ಫಲಿತಾಂಶ ಕೂಡ ಸಕಾರಾತ್ಮಕವಾಗಿರುತ್ತದೆ. ಹಾಗಂತ ಬದುಕು ಸವಾಲುಗಳಿಂದ ಮುಕ್ತವಾಗಿದ್ದು, ಪ್ರತಿಕೂಲತೆಯಿಂದ ಕೂಡಿರುತ್ತದೆ ಎಂದರ್ಥವಲ್ಲ ಎಂದರು.
ಚಾಮುಂಡಿ ಬೆಟ್ಟದಲ್ಲಿ ಜೀವದ ಅರಿವು
ನಾನು ಸುಮಾರು 25 ವರ್ಷ ವಯಸ್ಸಿನವನಿದ್ದಾಗ ಚಾಮುಂಡಿ ಬೆಟ್ಟದಲ್ಲಿ ಹೋಗಿ ಸುಮ್ಮನೆ ಕುಳಿತೆ. ಕೆಲ ಹೊತ್ತು ಏನೂ ಗೊತ್ತಾಗಿಲ್ಲ. ನಾನು ಅನ್ನೋದು ಜೀವ. ಬೇರೆಯವರು ಬೇರೆ, ನಾನು ಬೇರೆ. ಸ್ವಲ್ಪ ಸಮಯದ ನಂತರ ನಾನು ಎಂಬುದು ಗೊತ್ತಾಯ್ತು. ಎಲ್ಲಿದ್ದೀನಿ ಅಂತಾ ಗೊತ್ತಿಲ್ಲ. ಸರಿಯಾಗಿ ಒಂದು ಸ್ಥಿತಿಗೆ ಬರುವಷ್ಟ ರಲ್ಲಿ ನಾಲ್ಕು ಗಂಟೆ ಆಗಿತ್ತು. ಆಗ ಕಣ್ಣೀರು ಬಂತು.
ಒಂದೊಂದು ಕಣ್ಣೀರಿನ ಹನಿಯಲ್ಲೂ ಆನಂದಮಯ. ಯಾವುದರಲ್ಲೂ ನನಗೆ ನಂಬಿಕೆ ಇರಲಿಲ್ಲ. ನಾನು ಅನುಭವಿಸಿದ್ದರಲ್ಲಿ ಮಾತ್ರ ನಂಬಿಕೆ ಇತ್ತು. ನನಗೆ ಏನು ತಿಳಿಯಿತು ಅಂದರೆ, ಯಾವುದು ಮನಸು ಅಂತಾ ಹೇಳುತ್ತೇವೆಯೋ ಅದು ನಮ್ಮ ಜ್ಞಾಪನ ಸೇರಿ ಮಜಲುಗಳು ಹೊರಹೊಮ್ಮುತ್ತವೆ. ನಾನು ಮತ್ತೆ ಮತ್ತೆ ಪ್ರಯೋಗ ಮಾಡಿದೆ. ಆನಂದ ಎಂಬ ಪ್ರವಾಹ ಹರಿಯಿತು. ಎರಡೂವರೆ ವರ್ಷಗಳಲ್ಲಿ ಆನಂದಮಯ ಜಗತ್ತು ನಿರ್ಮಾಣಕ್ಕೆ ಪ್ರಯಾಣ ಆರಂಭಿಸಿದೆ ಎಂದು ಸದ್ಗುರು ತಮ್ಮ ಜೀವದ ಅರಿವಿನ ಕುರಿತು ಹೇಳಿದರು.
ಕ್ಲಬ್ಹೌಸ್ ಹೌಸ್ ಫುಲ್
ಶುಕ್ರವಾರ ಸಂಜೆ 8 ಗಂಟೆಗೆ ನಡೆದ ವಿಶ್ವವಾಣಿ ಕ್ಲಬ್ಹೌಸ್ ಸಂವಾದದಲ್ಲಿ 72 ದೇಶಗಳಿಂದ ಸುಮಾರು 11,705 ಜನ ಭಾಗವಹಿಸಿದ್ದರು. ಒಂದು ಸಂದರ್ಭ ದಲ್ಲಿ ಕ್ಲಬ್ಹೌಸ್ನ ಗರಿಷ್ಠ ಮಿತಿಯನ್ನು ಮೀರಿದ್ದು, ಅನೇಕರು ಸಂವಾದಕ್ಕೆ ಆಗಮಿಸಲು ಆಗುತ್ತಿರುವ ಅಡಚಣೆ ಬಗ್ಗೆ ದೂರು ಹೇಳಿಕೊಂಡರು.
ಭಾಗವಹಿಸಿದ್ದ ಗಣ್ಯರು: ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಮಾಜಿ ಸಿಎಂ ಎಸ್.ಎಂ.ಕೃಷ್ಣ, ಕ್ಯಾಪ್ಟನ್ ಗೋಪಿನಾಥ್, ಬಿ.ಎಲ್.ಶಂಕರ್, ಷಡಕ್ಷರಿ,
ಗುರುರಾಜ ಕರಜಗಿ, ಸುಮಲತಾ ಮೊದಲಾದ ಹಲವಾರು ಗಣ್ಯರು ಭಾಗವಹಿಸಿದ್ದರು
ಸಾರ್ವಕಾಲಿಕ ದಾಖಲೆ ಕ್ಲಬ್ ಹೌಸ್ ಒಳಗಡೆ ಬರಲಾಗದೆ ಚಡಪಡಿಕೆ: ಸದ್ಗುರು ಅವರ ಸಂವಾದ ಕಾರ್ಯಕ್ರಮ ಸಾರ್ವಕಾಲಿಕ ದಾಖಲೆ ಸೃಷ್ಟಿಸಿತು. ಹಲವು ಪ್ರಥಮಗಳಿಗೆ ಸಾಕ್ಷಿಯಾಯಿತು. ಇಂದಿನ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾಧ್ಯವಾಗದೆ ಹಲವು ಗಣ್ಯರ ಸಹಿತ ನೂರಾರು ಮಂದಿ ಪರದಾಡಿದರು. ಒಂದು
ರೀತಿ ಸಭಾಂಗಣದಲ್ಲಿ ಜಾಗವಿಲ್ಲದೆ ಶ್ರೋತೃಗಳು ಹೊರಗಡೆ ನಿಲ್ಲಬೇಕಾದಂಥ ಅನುಭವವಾಯಿತು.
ಇಂದಿನ ಕಾರ್ಯ ಕ್ರಮದಲ್ಲಿ ಕ್ಲಬ್ಹೌಸ್ನ ಹಿರಿಯ ಅಧಿಕಾರಿಗಳೂ ಪಾಲ್ಗೊಂಡಿದ್ದರು. ಶ್ರೋತೃಗಳ ಮಿತಿ ಮೀರಿದ ಕಾರಣ ಮಧ್ಯಪ್ರವೇಶಿಸಿ ಮಿತಿಯನ್ನು ಹೆಚ್ಚಿಸ ಬೇಕಾಯಿತು. ಒಟ್ಟು 11,758 ಜನರು ಭಾಗವಹಿಸಿದ್ದರು. 72 ದೇಶಗಳಿಗೆ ಸೇರಿದ ಶ್ರೋತೃಗಳೂ ಸದ್ಗುರು ವಾಣಿಗೆ ಕಿವಿಯಾದರು. ಇಷ್ಟಾಗಿಯೂ ಸಾಕಷ್ಟು ಸಂಖ್ಯೆಯ ಜನರಿಗೆ ಕ್ಲಬ್ಹೌಸ್ ಪ್ರವೇಶ ಸಿಗದೆ ಪರದಾಡಿದರು. ಯಾವುದೋ ಕಾರಣದಿಂದ ಹೊರಹೋದ ವರಿಗೆ ಮರುಪ್ರವೇಶ ಸಾಧ್ಯವಾಗಲೇ ಇಲ್ಲ. ಇಷ್ಟು ಪ್ರಮಾಣದ ಜನದಟ್ಟಣೆ ಯಿಂದ ಕ್ರ್ಯಾಶ್ ಆಗುವ ಹಂತ ತಲುಪಿದ್ದೂ ಹೌದು.
ಸದ್ಗುರು ವಿಧಾನಸಭೆ ಅಧ್ಯಕ್ಷರಾದರೆ?
ಸದ್ಗುರುಗಳು ವಿಧಾನಸಭಾ ಅಧ್ಯಕ್ಷರಾದರೆ? ಎಂಬ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಈ ದೇಶದಲ್ಲಿ ಜನಪ್ರತಿನಿಧಿಗಳು ರಾಜಕೀಯ ಸಂಸ್ಕೃತಿ ಕಲಿತುಕೊಳ್ಳಬೇಕಿದೆ. ಜನಪ್ರತಿನಿಽಗಳು ಜನರ ಧ್ವನಿಯಾಗಬೇಕು. ವ್ಯವಸ್ಥೆಯ ಸುಳಿ ಆಗಬಾರದು. ಸಂವಿಧಾನದ ಚೌಕಟ್ಟಿನಲ್ಲಿ ಆಡಳಿತ ನಡೆಸುವ ವಿಚಾರದಲ್ಲಿ ರಾಜ್ಯ ಮೇಲ್ಪಂಕ್ತಿ ಆಗಬೇಕು. ಸಂಸದೀಯ ಮೌಲ್ಯಗಳು ಕುಸಿತವಾಗಿವೆ. ದೇಶದ ಪರಿಸ್ಥಿತಿ ಗಮನದಲ್ಲಿಟ್ಟು ಕೊಂಡು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು. ರಾಜಕೀಯ ಮಾಡುವುದಲ್ಲ. ಪ್ರಜಾಪ್ರಭುತ್ವದಲ್ಲಿ ಎರಡು ಥರ ರಾಜಕೀಯ ಇದೆ.
ಇವೆಲ್ಲದರ ಸಮನ್ವಯತೆ ಸಾಧಿಸಬೇಕು. ಜನರ ಮನೋಭಾವ ಬದಲಾಯಿಸಬೇಕಿದೆ. ಅವರಿಗೆ ಅನುಕೂಲವಾದ ಮೂಲ ಸೌಲಭ್ಯಗಳನ್ನು ಕಲ್ಪಿಸುವುದು ಜನಪ್ರತಿನಿಧಿಗಳ ಕರ್ತವ್ಯ. ವಿಧಾಸಭೆಯಲ್ಲಿ ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು. ಯಾವುದೇ ಪಕ್ಷ ಆಗಿರಲಿ, ದೇಶದ ಒಳಿತಿಗೆ ಶ್ರಮಿಸುವಂತಾಗಬೇಕು. ಸಂಘರ್ಷಗಳು, ಸಂಘಟನೆಗಳ ಪ್ರತಿಭಟನೆಗಳಿಗೆ ದಾರಿ ಮಾಡಿಕೊಡದೆ, ಅವರಿಗೆ ಕಾನೂನಾತ್ಮಕವಾಗಿ ಸ್ಪಂದಿಸಿ, ಅರಿವು ಮೂಡಿಸುವ ಪ್ರಯತ್ನ ಮಾಡಬೇಕು. ಕಾನೂನುಗಳನ್ನು ಯಾವಾಗಲೂ ಪರಿಪಾಲನೆಮಾಡಬೇಕು ಎಂದು ಸದ್ಗುರು ವಾಸುದೇವ್ ಅವರು ಉತ್ತರಿಸಿದರು.
ಆಯುರ್ವೇದದಿಂದ ದೀರ್ಘಕಾಲದ ಪರಿಹಾರ: ಅಮೆರಿಕದಲ್ಲಿ ವ್ಯಾಕ್ಸಿನ್, ಮಾ ಧರಿಸುತ್ತಾರೆ. ಭಾರತದಲ್ಲಿ ಈ ವ್ಯವಸ್ಥೆ ಸರಿಯಾಗಿ ಪಾಲನೆಯಾಗುತ್ತಿಲ್ಲ. ಕರೋನಾ ವಿರುದ್ಧ ಹೋರಾಡಲು ನಾವೆಲ್ಲರೂ ಕೈ ಜೋಡಿಸಬೇಕು. ಆಯುರ್ವೇದ ಎಂಬುದು ಆರೋಗ್ಯ ವಿಜ್ಞಾನ. ಇದು ವೈದ್ಯಕೀಯ ಅಲ್ಲ. ಇದರಿಂದ
ದೀರ್ಘಕಾಲಿಕ ಪರಿಹಾರ ಕಂಡುಕೊಳ್ಳಬಹುದು. ಕರೋನಾ ಸೋಂಕು ಇರುವುದು ನಿಜ. ಆದರೆ ನಾವು ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕಲ್ಲವೆ? ವಿಜ್ಞಾನ ಹೇಳುವಂತೆ ಸಾಂಕ್ರಾಮಿಕ ರೋಗಗಳು ವೈಜ್ಞಾನಿಕವಾಗಿ ಕಾಡುತ್ತವೆ. ಹಾಗೆಯೆ ಪ್ರಕೃತಿದತ್ತವಾಗಿಯೂ ಹಲವು ರೋಗಗಳು ಕಾಡುತ್ತವೆ ಎಂದು ಕರೋನಾ ಸ್ಥಿತಿಗತಿಗಳ ಬಗ್ಗೆ ಮಾಹಿತಿ ನೀಡಿದರು.
ಟೀಕೆ ಜೀವನದ ಭಾಗ
ನಾವು ಮಾಡುವ ಕೆಲಸವನ್ನು ಕೆಲವರು ಒಪ್ಪುತ್ತಾರೆ, ಕೆಲವರು ಟೀಕೆ ಮಾಡುವುದು ಸಹಜ. ಇದು ನನ್ನ ಜೀವನದ ಶೈಲಿಯಾಗಿಬಿಟ್ಟಿದೆ. ನಾವು ಮಾಡುವ ಕೆಲಸ ಸಮಾಜದ ಒಳಿತಿಗೆ ಆದರೆ ಯಾವುದೇ ಅಡಚಣೆಗಳಿಗೆ ತಲೆಕೆಡಿಸಿಕೊಳ್ಳಬಾರದು. ಅವರಿಗೆ ಮನವರಿಕೆ ಮಾಡಿಕೊಡಬೇಕು. ಕಾವೇರಿ ಉಳಿವಿಗಾಗಿ ಹೋರಾಟ ದಲ್ಲೂ ಅನೇಕ ಸವಾಲುಗಳು ಎದುರಾದವು. ಸಾಮಾಜಿಕ ಜಾಲತಾಣಗಳಲ್ಲಿ ಬಹಳ ಟೀಕೆಗಳು ಬಂದವು. ಆದರೆ ಇದಕ್ಕೆಲ್ಲ ಉತ್ತರ ನೀಡಲಾಯಿತು. ಆದರೆ ನಾವು ಯಾವುದಕ್ಕೂ ತಲೆ ಕೆಡಿಸಿಕೊಳ್ಳಬಾರದು ಎಂದರು.
ಸಾರ್ವಕಾಲಿಕ ದಾಖಲೆ: ಕ್ಲಬ್ ಹೌಸ್ ಒಳಗಡೆ ಬರಲಾಗದೆ ಚಡಪಡಿಕೆ ಸದ್ಗುರು ಅವರ ಸಂವಾದ ಕಾರ್ಯಕ್ರಮ ಸಾರ್ವಕಾಲಿಕ ದಾಖಲೆ ಸೃಷ್ಟಿಸಿತು. ಹಲವು ಪ್ರಥಮಗಳಿಗೆ ಸಾಕ್ಷಿಯಾಯಿತು. ಇಂದಿನ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾಧ್ಯವಾಗದೆ ಹಲವು ಗಣ್ಯರ ಸಹಿತ ನೂರಾರು ಮಂದಿ ಪರದಾಡಿದರು. ಒಂದು
ರೀತಿ ಸಭಾಂಗಣದಲ್ಲಿ ಜಾಗವಿಲ್ಲದೆ ಶ್ರೋತೃಗಳು ಹೊರಗಡೆ ನಿಲ್ಲಬೇಕಾದಂಥ ಅನುಭವವಾಯಿತು. ಇಂದಿನ ಕಾರ್ಯ ಕ್ರಮದಲ್ಲಿ ಕ್ಲಬ್ಹೌಸ್ನ ಹಿರಿಯ ಅಧಿಕಾರಿಗಳೂ ಪಾಲ್ಗೊಂಡಿದ್ದರು. ಶ್ರೋತೃಗಳ ಮಿತಿ ಮೀರಿದ ಕಾರಣ ಮಧ್ಯಪ್ರವೇಶಿಸಿ ಮಿತಿಯನ್ನು ಹೆಚ್ಚಿಸಬೇಕಾಯಿತು.
ಒಟ್ಟು 11,758 ಜನರು ಭಾಗವಹಿಸಿದ್ದರು. 72 ದೇಶಗಳಿಗೆ ಸೇರಿದ ಶ್ರೋತೃಗಳೂ ಸದ್ಗುರು ವಾಣಿಗೆ ಕಿವಿಯಾದರು. ಇಷ್ಟಾಗಿಯೂ ಸಾಕಷ್ಟು ಸಂಖ್ಯೆಯ ಜನರಿಗೆ ಕ್ಲಬ್ಹೌಸ್ ಪ್ರವೇಶ ಸಿಗದೆ ಪರದಾಡಿದರು. ಯಾವುದೋ ಕಾರಣದಿಂದ ಹೊರಹೋದ ವರಿಗೆ ಮರುಪ್ರವೇಶ ಸಾಧ್ಯವಾಗಲೇ ಇಲ್ಲ. ಇಷ್ಟು ಪ್ರಮಾಣದ
ಜನದಟ್ಟಣೆ ಯಿಂದ ಕ್ರ್ಯಾಶ್ ಆಗುವ ಹಂತ ತಲುಪಿದ್ದೂ ಹೌದು.
***
ಅಲ್ಲಮಪ್ರಭು ಅವರು ಸ್ಥಾಪಿಸಿದ ಅನುಭವ ಮಂಟಪದ ಸ್ವರೂಪವೇ ವಿಶ್ವವಾಣಿ ಕ್ಲಬ್ಹೌಸ್. ಇಲ್ಲಿ ಅನೇಕ ವಿಚಾರಗಳು ಚರ್ಚೆ ಆಗುತ್ತಿರುವುದು ಒಳ್ಳೆಯ
ವಿಷಯ.
-ಸದ್ಗುರು ಜಗ್ಗಿ ವಾಸುದೇವ್, ಇಶಾ ಫೌಂಡೇಶನ್ ಸಂಸ್ಥಾಪಕ
***
ಸದ್ಗುರು ಅವರ ಮಾತುಗಳಲ್ಲಿ ಸೂಜಿಗಲ್ಲಿನಂತೆ ಸೆಳೆಯುವ ಆಕರ್ಷಣೆ ಇದೆ. ಅವರು ನಮ್ಮ ದೇಶದ 50 ಪ್ರಭಾವಶಾಲಿಗಳಲ್ಲಿ ಒಬ್ಬರು. ಜನರಲ್ಲಿ ಒಳ್ಳೆಯ ಅಂಶಗಳನ್ನು ತುಂಬುವ ಮಾಂತ್ರಿಕ, ಮಾತಿನ ಮೋಡಿಗಾರ ಅವರು. ಸಂಸ್ಕೃತಿ, ಯೋಗ, ಜೀವನ ಕುರಿತು ನೀಡುವ ಉಪದೇಶಗಳು ತುಂಬಾ ಪ್ರಯೋಜನ ಕಾರಿ. ಇಡೀ ವಿಶ್ವವೇ ಅವರನ್ನು ಬೆರೆಗುಗಣ್ಣಿನಿಂದ ನೋಡುತ್ತಿದೆ. ಅವರ ಮಾತುಗಳು ಅಸಂಖ್ಯ ಜನರಿಗೆ ಚೇತನ, ದಾರಿದೀಪವಾಗಿವೆ.
– ವಿಶ್ವೇಶ್ವರ ಭಟ್, ವಿಶ್ವವಾಣಿ ಪ್ರಧಾನ ಸಂಪಾದಕರು
ಸದ್ಗುರು ವಾಣಿ
? ಕರ್ಮ ಎಂಬುದು ಕ್ರಿಯೆ. ನೀವು ಮಾಡುವ ಚಿಂತನೆ, ಜೀವನ ಶೈಲಿ ಮೇಲೆ ಆಧಾರಿತವಾದುದು.
? ಆರಾಧಿಸುವ ದೇವತೆಗಳ ಸಂಸ್ಕೃತಿಗಳು ವಿಭಿನ್ನ. ನಮ್ಮಲ್ಲಿಯೇ ದೇವರನ್ನು ಕಾಣಬೇಕು.
? ಕರ್ಮ ಜನ್ಮದಿಂದ ಜನ್ಮಕ್ಕೆ ಸಾಗುತ್ತಾ ಅದರ ಪ್ರತಿ ಕರ್ಮವೂ ಮುಂದಿನ ಜನ್ಮದ ಮೇಲೆ ಪರಿಣಾಮ ಬೀರುತ್ತದೆ.
? ನನಗೆ ಗೊತ್ತಿಲ್ಲ ಎಂದು ತಿಳಿದುಕೊಳ್ಳಲು ಯತ್ನಿಸಿದಾಗ ನಿಮಗೆ ಎಲ್ಲವನ್ನೂ ತಿಳಿದುಕೊಳ್ಳಲು ದಾರಿ ದೊರಕುತ್ತವೆ.
? ಕಲ್ಪನೆಗಳು ಹಾಗೂ ನಂಬಿಕೆಗಳಲ್ಲೇ ಬದುಕುವುದರಲ್ಲಿ ಅರ್ಥವಿಲ್ಲ.
? ಭಂಡತನದಲ್ಲಿ ಬಾಳುತ್ತಾ ದೇವರ ಮನೆಯಲ್ಲಿ ಎಷ್ಟು ದೇವರುಗಳ ಚಿತ್ರಗಳನ್ನು ನೇತು ಹಾಕಿ ಪೂಜಿಸಿದರೇನು ಫಲ.