-ಶೀಲಾ ಸಿ. ಶೆಟ್ಟಿ, ಬೆಂಗಳೂರು
2025ರ ಸಂಕ್ರಾಂತಿ ಶಾಪಿಂಗ್ (Sankranti Shopping 2025) ವಾರಕ್ಕೂ ಮುನ್ನವೇ ಆರಂಭಗೊಂಡಿದೆ. ಹೌದು, ಇದು ಕೇವಲ ಉಡುಗೆ-ತೊಡುಗೆಗಳ ಖರೀದಿಗೆ ಮಾತ್ರ ಸೀಮಿತವಾಗಿಲ್ಲ! ಹಬ್ಬಕ್ಕೆ ಅಗತ್ಯವಿರುವ ಎಳ್ಳು-ಬೆಲ್ಲ, ಸಕ್ಕರೆ ಅಚ್ಚಿನ ಪ್ಯಾಕೆಟ್‌ಗಳು, ಡಿಸೈನರ್ ಬಾಕ್ಸ್‌ಗಳು, ಸಿಂಗಾರಕ್ಕಿಡುವ ಮಣ್ಣಿನ ಕುಡಿಕೆಗಳು ಸೇರಿದಂತೆ ನಾನಾ ಸಾಮಗ್ರಿಗಳ ಶಾಪಿಂಗ್ ಸಂಭ್ರಮದಲ್ಲಿ ಸೇರಿವೆ.
ರೆಡಿಮೇಡ್ ಎಳ್ಳು-ಬೆಲ್ಲದ ಪ್ಯಾಕೆಟ್ಸ್
ಅರ್ಗಾನಿಕ್ ಸೇರಿದಂತೆ ನಾನಾ ಬಗೆಯ ಮಿಕ್ಸ್‌ನ ಎಳ್ಳು-ಬೆಲ್ಲದ ಪಾಕೆಟ್‌ಗಳು ಎಲ್ಲೆಡೆ ಬಿಕರಿಗೊಳ್ಳುತ್ತಿವೆ. ಕನಿಷ್ಟ ಕಾಲು ಕೆ.ಜಿ. ಪಾಕೆಟ್‌ನಿಂದಿಡಿದು 5 ಕೆ.ಜಿಯ ಪ್ಯಾಕಿಂಗ್‌ವರೆಗೂ ದೊರೆಯುತ್ತಿವೆ. ಜೀರಾ, ಪೆಪ್ಪರ್‌ಮೆಂಟ್ ರಹಿತ-ಸಹಿತ, ಅರ್ಗಾನಿಕ್ ಬೆಲ್ಲ ಬಳಸಿದ/ಬಳಸದ ಹೀಗೆ ನಾನಾ ಬಗೆಯ ಎಳ್ಳು-ಬೆಲ್ಲ ಬೇಡಿಕೆ ಹೆಚ್ಚಿಸಿಕೊಂಡಿವೆ ಎನ್ನುತ್ತಾರೆ ಮಾರಾಟಗಾರರಾದ ದೀನಾನಾಥ್.
ಬಗೆಬಗೆಯ ರೆಡಿಮೇಡ್ ಸಕ್ಕರೆ ಅಚ್ಚಿನ ಪ್ಯಾಕೆಟ್ಸ್
ಪ್ರಿಸರ್ವೆಟಿವ್ಸ್ ಬಳಸದ ವೈವಿಧ್ಯಮಯ ಆಕಾರಗಳಲ್ಲಿರುವ ರೆಡಿಮೇಡ್ ಸಕ್ಕರೆ ಅಚ್ಚುಗಳು ಮಾರುಕಟ್ಟೆಗೆ ಬಂದಿವೆ. ಮೊದಲಿನಂತೆ ಗ್ರಾಹಕರು ಕೂಡ ಅಷ್ಟೇ, ಕಲರ್‌ನ ಸಕ್ಕರೆ ಅಚ್ಚು ಬೇಕೆಂದು ಕೇಳುವುದಿಲ್ಲ. ಬದಲಿಗೆ ಪ್ರಿಸೆರ್ವೆಟೀವ್ಸ್ ಬಳಸದವನ್ನೇ ಕೊಳ್ಳುತ್ತಿದ್ದಾರೆ ಎನ್ನುತ್ತಾರೆ ಗಾಂಧಿ ಬಜಾರ್ ಶಾಪ್‌ವೊಂದರ ಮಾರಾಟಗಾರರಾದ ರಾಜನ್. ಇನ್ನು, ಎಳ್ಳು-ಬೆಲ್ಲ ಹಂಚುವ ಪುಟ್ಟ ಪುಟ್ಟ ಡಿಸೈನರ್ ಬಾಕ್ಸ್‌ಗಳು ಕೂಡ ಈ ಬಾರಿ ಮಾರಾಟ ಹೆಚ್ಚಿಸಿಕೊಂಡಿವೆ ಎನ್ನುತ್ತಾರೆ.
ಟ್ರೆಡಿಷನಲ್ ಉಡುಗೆ-ತೊಡುಗೆಗಳು
ಹಬ್ಬದ ಸಂಭ್ರಮಕ್ಕೆ ಸಾಥ್ ನೀಡುವ ಲೆಕ್ಕವಿಲ್ಲದಷ್ಟು ಬಗೆಯ ಹೆಣ್ಣು ಮಕ್ಕಳ ಉಡುಗೆ-ತೊಡುಗೆಗಳು ಈಗಾಗಲೇ ಮಾರುಕಟ್ಟೆಯ ರಂಗನ್ನು ಹೆಚ್ಚಿಸಿವೆ. ಸೀರೆ, ಲಂಗ-ದಾವಣಿಯಿಂದಿಡಿದು ಚಿಣ್ಣರ ಕಲರ್‌ಫುಲ್ ಎಥ್ನಿಕ್ವೇರ್ ಗ್ರಾಹಕರನ್ನು ಸೆಳೆಯುತ್ತಿವೆ.
ಈ ಸುದ್ದಿಯನ್ನೂ ಓದಿ | Balenciaga Bubble Outfit Fashion: ವೈರಲ್ ಆಯ್ತು ಪ್ಯಾಕಿಂಗ್‌ಗೆ ಬಳಸುವ ಬಬಲ್ ವ್ರಾಪ್ ಔಟ್‌ಫಿಟ್!
ಕಲರ್‌ಫುಲ್ ತೋರಣ-ಹೂಗಳು
ಮನೆಯ ಅಲಂಕಾರಕ್ಕೆ ಪೂರಕವಾಗುವಂತಹ ಹಬ್ಬದ ಸಂಭ್ರಮ ಹೆಚ್ಚಿಸುವ ಬಣ್ಣಬಣ್ಣದ ಆರ್ಟಿಫಿಶಿಯಲ್ ತೋರಣ-ಹೂಗಳು ಮಾರುಕಟ್ಟೆಯಲ್ಲಿ ಎಂದಿನಂತೆ ಬೇಡಿಕೆ ಹೆಚ್ಚಿಸಿಕೊಂಡಿವೆ ಎನ್ನುತ್ತಾರೆ ಅಲಂಕಾರಿಕ ಅಂಗಡಿಯೊಂದರ ಮಾಲೀಕರು.
(ಲೇಖಕಿ: ಫ್ಯಾಷನ್ ಪತ್ರಕರ್ತೆ)