ಬೆಂಗಳೂರು: ರಾಜಧಾನಿಯ ಮಳಿಗೆಗಳಲ್ಲಿ ದುಬಾರಿ ಬೆಲೆಯ ರೇಷ್ಮೆ ಸೀರೆಗಳನ್ನು ಕದಿಯುತ್ತಿದ್ದ ನಾಲ್ವರು ಮಹಿಳಾ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಅವರಿಂದ ಬರೋಬ್ಬರಿ 17.5 ಲಕ್ಷ ರೂ. ಮೌಲ್ಯದ 38 ರೇಷ್ಮೆ ಸೀರೆಗಳನ್ನು (Saree Theft) ವಶಕ್ಕೆ ಪಡೆದಿದ್ದಾರೆ. ಈ ಆರೋಪಿಗಳು, ಬಟ್ಟೆ ಅಂಗಡಿಗಳಲ್ಲಿ ಸಿಬ್ಬಂದಿಯ ಗಮನ ಬೇರೆಡೆ ಸೆಳೆದು ತಮ್ಮ ಕೈ ಚಳಕ ತೋರುತ್ತಿದ್ದರು.
ಆಂಧ್ರಪ್ರದೇಶದ ಕೃಷ್ಣ ಜಿಲ್ಲೆಯ ಮೈಲಾವರಂನ ಪೊನ್ನೂರು ಮಲ್ಲಿ(40), ಚೆವುಟೂರುನ ಸಾದುಪಟ್ಟಿ(46), ಕೊಂಡಪಲ್ಲಿಯ ಮೇಧಾ ರಜನಿ(41) ಹಾಗೂ ಗುಂಟೂರಿನ ಉಂಡವಳ್ಳಿಯ ಮಾದುಗನಿ ಜಾನಕಿ(೫೦) ಬಂಧಿತರು. ಈ ಬಗ್ಗೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಅವರು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.
ಜೆ.ಪಿ.ನಗರ ಠಾಣೆ ವ್ಯಾಪ್ತಿಯ ಅಂಗಡಿಗೆ ಆರು ಆರೋಪಿಗಳು ಸೀರೆ ಖರೀದಿ ನೆಪದಲ್ಲಿ ಹೋಗಿದ್ದರು. ಈ ವೇಳೆ ದುಬಾರಿ ಬೆಲೆಯ ರೇಷ್ಮೆ ಸೀರೆ ತೋರಿಸುವಂತೆ ಸಿಬ್ಬಂದಿಗೆ ಸೂಚಿಸಿದ್ದರು. ಸಿಬ್ಬಂದಿ ಗಮನ ಬೇರೆಡೆ ಸೆಳೆದಿದ್ದ ಇಬ್ಬರು ಆರೋಪಿಗಳು 8 ಸೀರೆಗಳನ್ನು, ಸೀರೆಯೊಳಗೆ ಅಡಗಿಸಿಟ್ಟುಕೊಂಡು ಪರಾರಿಯಾಗಿದ್ದರು. ಬಳಿಕ ಅಂಗಡಿಯಲ್ಲಿದ್ದ ನಾಲ್ವರು ಮಹಿಳೆಯರು 10 ಸೀರೆಗಳನ್ನು ಬಚ್ಚಿಟ್ಟುಕೊಂಡು ಅಂಗಡಿಯಿಂದ ಹೊರ ಹೋಗುವಾಗ ಅನುಮಾನಗೊಂಡ ಸಿಬ್ಬಂದಿ ತಡೆದು ಪರಿಶೀಲಿಸಿದಾಗ ಕಳ್ಳತನ ಕೃತ್ಯ ಬಯಲಾಗಿತ್ತು. ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ತೆರಳಿ ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳಿಂದ 17.5 ಲಕ್ಷ ಮೌಲ್ಯದ ಒಟ್ಟು 38 ರೇಷ್ಮೆ ಸೀರೆಗಳನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಗಳು ಇದೇ ರೀತಿ ಜೆ.ಪಿ.ನಗರ ಹಾಗೂ ಜಯನಗರದ ಮಳಿಗೆಗಳಲ್ಲಿ ಕಳ್ಳತನ ಮಾಡಿರುವುದು ವಿಚಾರಣೆ ವೇಳೆ ಬೆಳಕಿಗೆ ಬಂದಿದ್ದು, ಪರಾರಿಯಾದ ಇನ್ನಿಬ್ಬರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ ಎಂದು ಪೊಲೀಸ್ ಆಯುಕ್ತ ಬಿ.ದಯಾನಂದ ತಿಳಿಸಿದ್ದಾರೆ.
ಗೆಳತಿಯ ಮತಾಂತರಕ್ಕೆ ಯತ್ನಿಸಿದ ಮೆಡಿಕಲ್ ವಿದ್ಯಾರ್ಥಿ ಬಂಧನ
ಉಡುಪಿ: ಇಸ್ಲಾಂ ಧರ್ಮಕ್ಕೆ ಮತಾಂತರ (conversion) ಆಗುವಂತೆ ಸಹಪಾಠಿ, ಗೆಳತಿಗೆ ಒತ್ತಾಯ ಮಾಡುತ್ತಿದ್ದ ಆರೋಪದ ಮೇಲೆ ಆರೋಪಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಮಣಿಪಾಲ ವೈದ್ಯಕೀಯ ವಿಶ್ವವಿದ್ಯಾಲಯದ ವೈದ್ಯಕೀಯ ಸ್ನಾತಕೋತ್ತರ ವಿದ್ಯಾರ್ಥಿ ಮಹಮದ್ ಡ್ಯಾನಿಷ್ ಖಾನ್ ಎಂಬಾತನೇ ಶಂಕಿತ ಲವ್ ಜಿಹಾದ್ (Love Jihad) ಬಂಧಿತ ಆರೋಪಿ.
ಈತ ಹಿಂದೂ ಧರ್ಮ ಹಾಗೂ ಹಿಂದೂ ದೇವರ ಬಗ್ಗೆ ಅವಹೇಳನ ಮಾಡಿದ್ದಲ್ಲದೆ, ಸಹಪಾಠಿಗೆ ಇಸ್ಲಾಂ ಧರ್ಮಕ್ಕೆ ಮತಾಂತರ ಆಗುವಂತೆ ಕಿರುಕುಳ ನೀಡುತ್ತಿದ್ದ ಎಂದು ಆರೋಪಿಸಲಾಗಿದೆ. ತನ್ನ ಜೊತೆ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿಯ ಸ್ನೇಹ ಬೆಳೆಸಿದ್ದ ಮಹಮದ್ ಡ್ಯಾನಿಷ್ ಖಾನ್, ಆಕೆಯೊಂದಿಗೆ ಪ್ರೇಮ ನಿವೇದನೆ ಮಾಡಿಕೊಂಡಿದ್ದಾನೆ. ಇಬ್ಬರೂ ಪರಸ್ಪರ ಪ್ರೇಮಿಸಿದ್ದರು ಎನ್ನಲಾಗಿದೆ.
ಆದರೆ ಇತ್ತೀಚೆಗೆ ಪ್ರೇಯಸಿಯನ್ನು ಇಸ್ಲಾಂ ಧರ್ಮಕ್ಕೆ ಮತಾಂತರ ಆಗುವಂತೆ ಆರೋಪಿ ಒತ್ತಾಯ ಮಾಡುತ್ತಿದ್ದ ಎಂಬ ಆರೋಪವಿದೆ. ಮಾರ್ಚ್ 11ರಂದು ಪ್ರೇಯಸಿಯ ಕೊಠಡಿಗೆ ಹೋಗಿದ್ದ ಆರೋಪಿ, ಆಕೆಯ ಜೊತೆ ಅಸಭ್ಯವಾಗಿ ವರ್ತಿಸಿದ್ದ ಎಂದೂ ಆರೋಪಿಸಲಾಗಿದೆ. ಮಹಮದ್ ಡ್ಯಾನಿಷ್ ಖಾನ್‌ನ ನಿರಂತರ ಕಿರುಕುಳದಿಂದ ಬೇಸತ್ತಿದ್ದ ವಿದ್ಯಾರ್ಥಿನಿ ಆಗಸ್ಟ್ 31ರಂದು ಉಡುಪಿಯ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿ ಕೋರ್ಟ್‌ಗೆ ಹಾಜರುಪಡಿಸಿದ್ದಾರೆ.