Saturday, 4th January 2025

SDM: ಉಜಿರೆ ಎಸ್‌ಡಿಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಉಚಿತ ಡಯಾಲಿಸಿಸ್ ಸೇವೆ ಆರಂಭ

SDM

ಧರ್ಮಸ್ಥಳ: ʼʼಉಜಿರೆಯ ಎಸ್‌ಡಿಎಂ (SDM) ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ 2022ರ ಜನವರಿಯಲ್ಲಿ ಡಯಾಲಿಸಿಸ್ ಸೇವೆ ಆರಂಭವಾಗಿದ್ದು, ಒಟ್ಟು 11 ಡಯಾಲಿಸಿಸ್ ಯಂತ್ರಗಳಿವೆ‌. ಈ ಹವಾನಿಯಂತ್ರಿತ ಕೇಂದ್ರದಲ್ಲಿ ಇದುವರೆಗೂ ಪ್ರತಿದಿನ‌ 30ಕ್ಕೂ ಅಧಿಕ ಡಯಾಲಿಸಿಸ್ ಸೇವೆ ನೀಡಲಾಗಿದೆ. ಆ ಮೂಲಕ ಒಟ್ಟು 10 ಸಾವಿರಕ್ಕೂ ಅಧಿಕ ಡಯಾಲಿಸಿಸ್ ಸೇವೆ ನೀಡಲಾಗಿದೆ. ಬೆಳ್ತಂಗಡಿ ತಾಲೂಕಿನ ಆಸುಪಾಸಿನಲ್ಲಿರುವ ರೋಗಿಗಳಿಗೆ ಈ ಡಯಾಲಿಸಿಸ್ ಸೆಂಟರ್ ವರದಾನವಾಗಿದೆ. ಇದರ ಜತೆಗೆ ಇದೀಗ (ಜ. 1) ಉಚಿತ ಡಯಾಲಿಸಿಸ್ ಸೇವೆ ಪ್ರಾರಂಭಿಸಿರುವುದು ಬಹಳಷ್ಟು ರೋಗಿಗಳಿಗೆ ಅನುಕೂಲವಾಗಲಿದೆʼʼ ಎಂದು ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಎಂ. ಜನಾರ್ದನ್ ಹೇಳಿದರು.

ʼʼಪ್ರತಿ ರೋಗಿಗೆ ಒಂದು ಬಾರಿಯ ಡಯಾಲಿಸಿಸ್‌ಗೆ 1,500 ರೂ. ವೆಚ್ಚವಾಗುತ್ತದೆ. ಒಬ್ಬ ರೋಗಿಗೆ ವಾರಕ್ಕೆ 3ರಿಂದ 4 ಡಯಾಲಿಸಿಸ್ ಅಗತ್ಯವಿರುತ್ತದೆ. ಇದೀಗ ಉಚಿತ ಡಯಾಲಿಸಿಸ್ ಸೇವೆ ಪ್ರಾರಂಭವಾಗಿರುವ ಹಿನ್ನೆಲೆಯಲ್ಲಿ, ಒಬ್ಬ ರೋಗಿಗೆ ತಿಂಗಳಿಗೆ 12 ಸಾವಿರ ರೂ.ಯಿಂದ 24 ಸಾವಿರ ರೂ.ವರೆಗೂ ಉಳಿತಾಯವಾಗುತ್ತದೆ. ಉಚಿತ ಡಯಾಲಿಸಿಸ್ ಯೋಜನೆಯಲ್ಲಿ ಒಬ್ಬ ರೋಗಿ ಮಾಸಿಕ 12 ಡಯಾಲಿಸಿಸ್  ಮಾಡಿಸಿಕೊಳ್ಳಬಹುದುʼʼ ಎಂದು ತಿಳಿಸಿದರು.

ʼʼಇದರ ಜತೆಗೆ ಉಜಿರೆ ಎಸ್‌ಡಿಎಂ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ 2024ನೇ ಸಾಲಿನಲ್ಲಿ 4.98 ಕೋಟಿ ರೂ. ಮೊತ್ತದ ಉಚಿತ ವೈದ್ಯಕೀಯ ಸೇವೆಯನ್ನು ರೋಗಿಗಳಿಗೆ ನೀಡಲಾಗಿದ್ದು, ಗ್ರಾಮೀಣ ಪ್ರದೇಶಗಳಲ್ಲಿ ಪ್ರತಿ ವರ್ಷವೂ 40ಕ್ಕೂ ಅಧಿಕ ಉಚಿತ ವೈದ್ಯಕೀಯ ಶಿಬಿರಗಳನ್ನೂ ಆಯೋಜಿಸಲಾಗಿದೆʼʼ ಎಂದು ವಿವರಿಸಿದರು.

ಎಸ್‌ಡಿಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಫಿಜಿಶಿಯನ್ ಡಾ. ಸಾತ್ವಿಕ್ ಜೈನ್, ಜೆನರಲ್ ಫಿಜಿಶಿಯನ್ ಡಾ. ಬಾಲಕೃಷ್ಣ ಭಟ್, ಮೆಡಿಕಲ್ ಸುಪರಿಡೆಂಟ್ ಡಾ. ದೇವೇಂದ್ರ ಮತ್ತಿತರರು ಉಪಸ್ಥಿತರಿದ್ದರು. ವೈದ್ಯೆ ಅನುಷಾ ನಿರೂಪಿಸಿದರು. ಸಂಪರ್ಕಾಧಿಕಾರಿ ಚಿದಾನಂದ್ ಧನ್ಯವಾದ ಸಮರ್ಪಿಸಿದರು.

ಈ ಸುದ್ದಿಯನ್ನೂ ಓದಿ: Dharmasthala Laksha Deepotsava 2024: ಸರ್ಕಾರ ಮಾಡದ ಕೆಲಸವನ್ನು ಡಾ. ಹೆಗ್ಗಡೆಯವರು ಮಾಡುತ್ತಿದ್ದಾರೆ: ಸಚಿವ ಡಾ.ಜಿ. ಪರಮೇಶ್ವರ್