Sunday, 22nd December 2024

Seat Blocking scam: ಎಂಜಿನಿಯರಿಂಗ್ ಸೀಟು ಬ್ಲಾಕಿಂಗ್‌ ದಂಧೆ; ಬೆಂಗಳೂರಿನ 3 ಪ್ರತಿಷ್ಠಿತ ಕಾಲೇಜುಗಳಿಗೆ ನೋಟಿಸ್!

Seat Blocking scam

ಬೆಂಗಳೂರು: ಎಂಜಿನಿಯರಿಂಗ್ ಸೀಟು ಬ್ಲಾಕಿಂಗ್‌ ದಂಧೆ ಪ್ರಕರಣಕ್ಕೆ (Seat Blocking scam) ಸಂಬಂಧಿಸಿ ವಿಚಾರಣೆಗೆ ಹಾಜರಾಗುವಂತೆ ಬೆಂಗಳೂರಿನ 3 ಪ್ರತಿಷ್ಠಿತ ಕಾಲೇಜುಗಳಿಗೆ ಪೊಲೀಸರು ನೋಟಿಸ್ ನೀಡಿದ್ದಾರೆ. ನಗರದ ನ್ಯೂ ಹಾರಿಜನ್ ಕಾಲೇಜ್ ಆಫ್ ಎಂಜಿನಿಯರಿಂಗ್, ಬಿಎಂಎಸ್ ಎಂಜಿನಿಯರಿಂಗ್ ಕಾಲೇಜು, ಆಕಾಶ್ ಎಂಜಿನಿಯರಿಂಗ್ ಕಾಲೇಜಿನ ಆಡಳಿತ ಮಂಡಳಿ ಮುಖ್ಯಸ್ಥರಿಗೆ ವಿಚಾರಣೆಗೆ ಹಾಜರಾಗುವಂತೆ ಮಲ್ಲೇಶ್ವರಂ ಪೊಲೀಸರು ನೋಟಿಸ್ ನೀಡಿದ್ದಾರೆ.

ವಿದ್ಯಾರ್ಥಿಗಳ ದಾಖಲಾತಿ ಸಮೇತ ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ನೋಟಿಸ್‌ ನೀಡಿದ್ದಾರೆ. ಕೆಇಎ ಸೀಟುಗಳ ಬ್ಲಾಕಿಂಗ್ ಹಗರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ 10 ಮಂದಿ ಆರೋಪಿಗಳನ್ನು ಪೊಲೀಸರು ಇತ್ತೀಚೆಗೆ ಬಂಧಿಸಿದ್ದರು. ಕೆಇಎ ಆಡಳಿತಾಧಿಕಾರಿ ಸಾಲುದ್ದೀನ್ ಜೆ ಗಾಡಿಯಲ್ ನೀಡಿದ ದೂರಿನ ಮೇರೆಗೆ ಕೆಇಎ ನೌಕರ ಅವಿನಾಶ್ ಸೇರಿ 10 ಮಂದಿ ಆರೋಪಿಗಳನ್ನು ಮಲ್ಲೇಶ್ವರಂ ಠಾಣೆ ಪೊಲೀಸರು ಬಂಧಿಸಿದ್ದರು.

ಕೆಇಎ ನೌಕರ ಅವಿನಾಶ್ ಸಹಾಯದಿಂದ ಲಕ್ಷಾಂತರ ರೂ. ಹಣಕ್ಕೆ ಸೀಟುಗಳನ್ನು ಅಕ್ರಮವಾಗಿ ಡೀಲ್ ಮಾಡಿದ್ದ ಆರೋಪ ಕೇಳಿಬಂದಿತ್ತು. ಸೀಟು ತೆಗೆದುಕೊಳ್ಳುವ ಉದ್ದೇಶಹೊಂದಿಲ್ಲದ ಕೆಲವು ಅಭ್ಯರ್ಥಿಗಳನ್ನು ಕಾಲೇಜು ಆಯ್ಕೆ ನಮೂದಿಸಲು ಬಳಸಿಕೊಳ್ಳಲಾಗಿದೆ ಎಂದು ಆರೋಪಿಸಲಾಗಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕೌನ್ಸೆಲಿಂಗ್‌ಗೆ ಹಾಜರಾಗಿ, ಕಾಲೇಜು ಆಯ್ಕೆಯಾಗದೇ ಇರುವವರನ್ನು ಆರೋಪಿಗಳು ಗುರಿಯಾಗಿಸಿಕೊಂಡಿದ್ದರು. ಈ ರೀತಿ ನಾನಾ ಕಾರಣಗಳಿಂದ 2,625 ವಿದ್ಯಾರ್ಥಿಗಳು ಸೀಟ್ ರಿಜೆಕ್ಟ್ ಮಾಡಿದ್ದರು.

ಕೆಇಎ ನೌಕರ ಅವಿನಾಶ್‌ ಸಹಾಯದಿಂದ ಪಡೆದ ಪಾಸ್‌ವರ್ಡ್‌ನಿಂದ ಸರ್ಕಾರಿ ಸೀಟ್ ಪಡೆದು ಕಾಲೇಜು ಆಯ್ಕೆ ಮಾಡಿಕೊಳ್ಳದ ವಿದ್ಯಾರ್ಥಿಗಳ ಸೀಟ್ ಬ್ಲಾಕ್ ಮಾಡಲಾಗುತ್ತಿತ್ತು. ಆ ಸೀಟ್‌ಗಳನ್ನು ಲಕ್ಷಾಂತರ ರೂ.ಗೆ ಮ್ಯಾನೇಜ್‌ಮೆಂಟ್ ಕೋಟಾದಡಿ ಬೇರೆಯವರಿಗೆ ಡೀಲ್ ಮಾಡುತ್ತಿದ್ದರು. ಇನ್ನು ಆರೋಪಿ ಪ್ರಕಾಶ್, ದೂರು ದಾಖಲಾಗಿದೆ ಎಂದು ಗೊತ್ತಾದ ಕೂಡಲೇ, ತಮ್ಮ ಬಳಿಯಿದ್ದ ಲ್ಯಾಪ್‌ಟಾಪ್‌ಗಳನ್ನು ಕಡೂರಿನ ತನ್ನ ಜಮೀನಿನಲ್ಲಿ ಸುಟ್ಟುಹಾಕಿ ಸಾಕ್ಷಿ ನಾಶ ಮಾಡಿದ್ದ. ಇತ್ತೀಚೆಗೆ ಮಲ್ಲೇಶ್ವರಂ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದರು.

ಹರ್ಷ, ಪ್ರಕಾಶ್, ರವಿಶಂಕರ್, ಪುನೀತ್, ಶಶಿಕುಮಾರ್, ಪುರುಷೋತ್ತಮ್, ಅವಿನಾಶ್ ಸೇರಿ 8 ಮಂದಿಯ ಬಂಧನವಾಗಿತ್ತು. ಈ ಬಗ್ಗೆ ಮಾಹಿತಿ ನೀಡಿದ್ದ ಪೊಲೀಸರು, ತನಿಖೆಯ ಸಂದರ್ಭದಲ್ಲಿ ಮೂರು ಖಾಸಗಿ ಎಂಜಿನಿಯರಿಂಗ್ ಕಾಲೇಜುಗಳ ಆಡಳಿತವನ್ನು ಪ್ರಶ್ನಿಸಲಾಗಿದೆ. ಹಗರಣ ಸಂಬಂಧ ಎಂಟು ಜನರನ್ನು ಬಂಧಿಸಿದ್ದೇವೆ. ಅವರಲ್ಲಿ ಒಬ್ಬರು ಕೆಇಎ ಸಿಬ್ಬಂದಿ ಇದ್ದಾರೆ ಎಂದು ತಿಳಿಸಿದರು.

ಈ ಸುದ್ದಿಯನ್ನೂ ಓದಿ | Viral News: ಕೈದಿಯ ಗುದದ್ವಾರದಲ್ಲಿತ್ತು ಮೊಬೈಲ್ ಫೋನ್; ಎಕ್ಸ್‌ರೇಯಿಂದ ಶಾಕಿಂಗ್ ಸಂಗತಿ ಬಯಲು