Sunday, 22nd December 2024

Self Harming: ಪತ್ನಿ ಕಿರುಕುಳಕ್ಕೆ ಬೇಸತ್ತು ಎಂಜಿನಿಯರ್‌ ಆತ್ಮಹತ್ಯೆ; ಟ್ರೆಂಡ್‌ ಆಯ್ತು MenToo ಹ್ಯಾಶ್‌ಟ್ಯಾಗ್‌

Self Harming

ಬೆಂಗಳೂರು: ಪತ್ನಿಯ ಕಿರುಕುಳಕ್ಕೆ ಬೇಸತ್ತು ಬೆಂಗಳೂರಿನಲ್ಲಿ ಸೋಮವಾರ (ಡಿ. 9) ಉತ್ತರ ಪ್ರದೇಶ ಮೂಲದ ಎಂಜಿನಿಯರ್‌ ಅತುಲ್ ಸುಭಾಷ್ (Atul Subhash) ಆತ್ಮಹತ್ಯೆ (Self Harming) ಮಾಡಿಕೊಂಡಿದ್ದಾರೆ. ಸದ್ಯ ಸೋಷಿಯಲ್‌ ಮೀಡಿಯಾದಲ್ಲಿ ಅತುಲ್‌ ಸುಭಾಷ್‌ ಪರ ಮೆನ್‌ಟೂ (#MenToo) ಹ್ಯಾಶ್‌ಟ್ಯಾಗ್‌ ಟ್ರೆಂಡಿಂಗ್‌ನಲ್ಲಿದೆ. ನೇಣಿಗೆ ಶರಣಾಗುವ ಮುನ್ನ ಅವರು 24 ಪುಟಗಳ ಡೆತ್ ನೋಟ್ ಬರೆದಿಟ್ಟಿದ್ದು, ಪತ್ನಿ ಕೊಟ್ಟಿರುವ ಕಿರುಕುಳದ ಬಗ್ಗೆ ಎಲ್ಲ ಮಾಹಿತಿ ನೀಡಿದ್ದಾರೆ.

34 ವರ್ಷದ ಅತುಲ್ ಸುಭಾಷ್ ಬೆಂಗಳೂರಿನ ಮಾರತ್ತಹಳ್ಳಿಯ ತಮ್ಮ ಮನೆಯಲ್ಲಿ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾರೆ. ಸಾಯುವ ಮುನ್ನ ಡೆತ್‌ ನೋಟ್‌ ಬರೆದಿಟ್ಟಿದ್ದಾರೆ. ಜತೆಗೆ 1 ಗಂಟೆಯ ವಿಡಿಯೊ ಮಾಡಿ ತಮ್ಮ ಸಾವಿಗೆ ಪತ್ನಿ ನಿಖಿತಾ ಸಿಂಘಾನಿಯಾ ಕಾರಣ ಎಂದು ತಿಳಿಸಿದ್ದಾರೆ. ಸದ್ಯ ಪೊಲೀಸರು ಈ ಬಗ್ಗೆ ತನಿಖೆ ಕೈಗೆತ್ತಿಕೊಂಡಿದ್ದಾರೆ. ಅತುಲ್ ವಿರುದ್ಧ ಪತ್ನಿ ಉತ್ತರ ಪ್ರದೇಶದಲ್ಲಿ ಠಾಣೆಯಲ್ಲಿ ದೂರು ದಾಖಲಿಸಿದ್ದು, ಇದರಿಂದ ಮಾನಸಿಕವಾಗಿ ನೊಂದಿದ್ದ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಪ್ರಕರಣದ ಹಿನ್ನೆಲೆ

ʼʼಪತ್ನಿ ನನ್ನ ವಿರುದ್ದ ಉತ್ತರ ಪ್ರದೇಶದಲ್ಲಿ 9 ದೂರು ದಾಖಲಿಸಿದ್ದಾರೆ. ಈ ಪೈಕಿ 6 ಕೆಳಹಂತದ ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದ್ದರೆ 3 ಹೈಕೋರ್ಟ್‌ನಲ್ಲಿದೆʼʼ ಎಂದು ಅವರು ವಿಡಿಯೊದಲ್ಲಿ ತಿಳಿಸಿದ್ದಾರೆ. ʼʼ2022ರಲ್ಲಿ ದೂರು ದಾಖಲಿಸಿದ ನಿಖಿತಾ ಸಿಂಘಾನಿಯಾ ಅವರು ಕೊಲೆ, ವರದಕ್ಷಿಣೆ ಕಿರುಕುಳ ಮತ್ತು ಅಸ್ವಾಭಾವಿಕ ಲೈಂಗಿಕತೆಯ ಆರೋಪ ಹೊರೆಸಿದ್ದರು. ತಮ್ಮ ಜತೆಗೆ ತಮ್ಮ ಹೆತ್ತವರು, ಸಹೋದರನ ವಿರುದ್ಧವೂ ದೂರು ನೀಡಿದ್ದರು. ಕೊನೆಗೆ ಈ ಪ್ರಕರಣವನ್ನು ಹಿಂಪಡೆದಿದ್ದರುʼʼ ಎಂದು ಅತುಲ್‌ ವಿವರಿಸಿದ್ದಾರೆ. ಅಲ್ಲದೆ ತಮ್ಮ ಪತ್ನಿ ಪ್ರತೀ ತಿಂಗಳು 2 ಲಕ್ಷ ರೂ. ಜೀವನಾಂಶ ನೀಡಬೇಕೆಂಬ ಬೇಡಿಕೆಯನ್ನೂ ಇಟ್ಟಿದ್ದರುʼʼ ಎಂದು ಅತುಲ್‌ ವಿವರಿಸಿದ್ದಾರೆ.

ಈ ಎಲ್ಲ ಕಾರಣಗಳಿಂದ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ ಅತುಲ್ ಸುಭಾಷ್ ತಮಗಾದ ಅನ್ಯಾಯದ ಬಗ್ಗೆ ತಿಳಿಸಲು ಡೆತ್‌ ನೋಟ್‌ ಬರೆದಿಟ್ಟು, ವಿಡಿಯೊ ಮಾಡಿದ್ದಾರೆ. ತಾವು ಬರೆದಿದ್ದ ಡೆತ್ ನೋಟ್ ಅನ್ನು ಹಲವರಿಗೆ ಇಮೇಲ್ ಮಾಡಿದ್ದಾರೆ. ತಾವಿರುವ ವ್ಯಾಟ್ಸ್‌ಆ್ಯಪ್‌ ಗ್ರೂಪ್‌ನಲ್ಲಿಯೂ ಈ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ನ್ಯಾಯ ಸಿಗಬೇಕು ಎನ್ನುವ ಫಲಕವನ್ನೂ ನೇತು ಹಾಕಿದ್ದಾರೆ. ಆತ್ಮಹತ್ಯೆಗೆ ಮುನ್ನ ತಮ್ಮ ಡೆತ್ ನೋಟ್, ವಾಹನದ ಕೀಗಳು ಮತ್ತು ತಾವು ಪೂರ್ತಿ ಮಾಡಿರುವ ಮತ್ತು ಬಾಕಿ ಉಳಿಸಿರುವ ಕೆಲಸಗಳನ್ನು ಪಟ್ಟಿಯನ್ನು ಬೀರುವಿನಲ್ಲಿ ಇಟ್ಟಿದ್ದಾರೆ. ಮಗುವಿನ ಪಾಲನೆಯನ್ನು ತಮ್ಮ ಹೆತ್ತವರಿಗೆ ನೀಡಬೇಕೆಂದು ಅತುಲ್ ಸುಭಾಷ್ ವಿನಂತಿಸಿದ್ದಾರೆ. ಜತೆಗೆ ಶವದ ಬಳಿ ಪತ್ನಿ ಅಥವಾ ಅವರ ಕುಟುಂಬವನ್ನು ಬಿಡಬಾರದು ಎಂದು ಬರೆದುಕೊಂಡಿದ್ದಾರೆ.

ಟ್ರೆಂಡ್‌ ಆಯ್ತು ಮೆನ್‌ಟೂ ಹ್ಯಾಶ್‌ಟ್ಯಾಗ್‌

ಸದ್ಯ ಈ ಪ್ರಕರಣ ದೇಶಾದ್ಯಂತ ಸಂಚಲನ ಸೃಷ್ಟಿಸಿದೆ. ಮೆನ್‌ಟೂ ಹ್ಯಾಶ್‌ಟ್ಯಾಗ್‌ ಟ್ರಂಡಿಂಗ್‌ನಲ್ಲಿದೆ. ಈ ದೇಶದಲ್ಲಿ ಪುರುಷರನ್ನು ಕಾಪಾಡಲು ಕಾನೂನುಗಳೇ ಇಲ್ಲ ಎಂದು ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೆಣ್ಣು ಮಕ್ಕಳಿಗೆ ಅನ್ಯಾಯವಾದರೆ ಇಡೀ ಸಮಾಜ ಅದನ್ನು ಖಂಡಿಸುತ್ತದೆ. ಆದರೆ ಗಂಡಸರು ಶೋಷಣೆಗೆ ಒಳಗಾಗಿ ಜೀವ ಕಳೆದುಕೊಂಡರೂ ಅದರ ಬಗ್ಗೆ ಯಾರೂ ಗಮನ ಹರಿಸುವುದಿಲ್ಲ ಎಂದು ಕೆಲವರು ಬೇಸರ ಹೊರ ಹಾಕಿದ್ದಾರೆ.

ಈ ಸುದ್ದಿಯನ್ನೂ ಓದಿ: Physical Abuse: ಮಾನಸಿಕ ಅಸ್ವಸ್ಥ ಕಾಲೇಜು ವಿದ್ಯಾರ್ಥಿನಿಯ ಮೇಲೆ ಸಾಮೂಹಿಕ ಅತ್ಯಾಚಾರ; ಇಬ್ಬರ ಬಂಧನ