Friday, 20th September 2024

ನೂತನ ಶಕ್ತಿ ಯೋಜನೆಗೆ ಚಾಲನೆ

ಇಂಡಿ: ರಾಜ್ಯದ ಜನತೆಯ ಆಶೀರ್ವಾದದಿಂದ ರಾಜ್ಯದಲ್ಲಿ ಕಾಂಗ್ರೆಸ್ ನೇತ್ರತ್ವದ ಸರ್ಕಾರ ಅಧಿಕಾರ ವಹಿಸಿಕೊಂಡಿದೆ. ಚುನಾವಣೆ ಸಂದರ್ಭದಲ್ಲಿ ರಾಜ್ಯದ ಜನತೆಯ ಮುಂದೆ ವಾಗ್ದಾನ ಮಾಡಿದಂತೆ ೫ ಗ್ಯಾರಂಟಿ ಯೋಜನೆಗಳು ಜಾರಿಗೊಳಿಸಲು ನಮ್ಮ ಸರ್ಕಾರ ಮುಂದೆ ಹೆಜ್ಜೆ ಇಟ್ಟಿದೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.

ಅವರು ಭಾನುವಾರ ಪಟ್ಟಣದ ಬಸ್ ನಿಲ್ದಾಣದಲ್ಲಿ ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆ ಹಮ್ಮಿಕೊಂಡ ಕರ್ನಾಟಕ ರಾಜ್ಯದ ನೂತನ ಶಕ್ತಿ ಯೋಜನೆಗೆ ಚಾಲನೆ ನೀಡಿ ಮಾತನಾಡಿದರು. ಪ್ರಾಚೀನ ಕಾಲ ದಿಂದಲೂ ಮಹಿಳೆಯರನ್ನು ದೇವರ ಸ್ಥಾನದಲ್ಲಿ ಇರಿಸಿ ಗೌರವಿಸುವ ಸಂಸ್ಕೃತಿ ನಮ್ಮದ್ದು,ನಾರಿ ಶಕ್ತಿಯನ್ನು ಪ್ರೋತ್ಸಾಹಿಸುವ ಸಲುವಾಗಿ ಈ ಯೋಜನೆ ಜಾರಿಗೆ ತರಲಾಗಿದೆ.

ದಿ.ದೇವರಾಜ ಅರಸರ ನಂತರ ತಮ್ಮ ಅನುಭವದ ಮೂಲಕ ಈ ರಾಜ್ಯ ವನ್ನು ಸಮೃದ್ದಿಯ ಶಾಂತಿಯ ನಾಡನ್ನಾಗಿ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಶ್ರಮಿಸುತ್ತಿದ್ದಾರೆ.ಸರ್ಕಾರದ ಮಹತ್ವದ ಯೋಜನೆಯನ್ನು ಇಂದು ಚಾಲನೆ ನೀಡಿ, ಮಹಿಳಾ ಪ್ರಯಾಣಿಕರಿಗೆ ಸರ್ಕಾರದ ಪರವಾಗಿ ಶುಭ ಕೊರಲು ಈ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಮಹಿಳಾ ಶಕ್ತಿಯ ಆಶೀರ್ವಾದ ನಮ್ಮ ಸರ್ಕಾರದ ಮೇಲೆ ಸದಾ ಇರುತ್ತದೆ ಎಂದು ಹೇಳಿದರು.

ಸಾರಿಗೆ ನೌಕರರು ಹಾಗೂ ಕಾರ್ಮಿಕರ ಸಮಸ್ಯೆಗಳನ್ನು ಸರ್ಕಾರದ ಮಟ್ಟದಲ್ಲಿ ಚರ್ಚಿಸಿ,ನೌಕರರು ಹಾಗೂ ಕಾರ್ಮಿಕರಿಗೆ ನ್ಯಾಯ ಒದಗಿಸುವ ಕೆಲಸ ಮಾಡಲಾಗುತ್ತದೆ. ಸಾರಿಗೆ ಸಂಸ್ಥೆಯಲ್ಲಿ ಜನರಿಗೆ ಸೇವೆ ನೀಡಲು ಶ್ರಮಿಸುತ್ತಿರುವ ಸಿಬ್ಬಂದಿಯ ನೋವಿಗೆ ಸ್ಪಂಧಿಸು ವುದು ಸರ್ಕಾರದ ಕರ್ತವ್ಯ. ಸಂಸ್ಥೆಯ ಸಿಬ್ಬಂದಿಗಳಿಗೆ ಸಹಾಯ ಮಾಡುವಂತೆ ಮುಖ್ಯಮಂತ್ರಿ ಹಾಗೂ ಸಚಿವರಲ್ಲಿ ಮನವಿ ಮಾಡಿಕೊಳ್ಳುವುದಾಗಿ ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.

ಇಂಡಿ ನಗರದ ಸುತ್ತಮುತ್ತಲಿನ ೧೦ ರಿಂದ ೧೫ ಕಿಮೀ ಅಂತರದ ವರೆಗಿನ ಗ್ರಾಮಗಳ ಸಾರ್ವಜನಿಕರಿಗೆ ಉತ್ತಮ ಸಾರಿಗೆ ವ್ಯವಸ್ಥೆ ಒದಗಿಸಲು ನಗರ ಸಾರಿಗೆ ವ್ಯವಸ್ಥೆ ಜಾರಿಗೆ ತರವುದು ನನ್ನ ಗುರಿಯಾಗಿದ್ದು,ಮುಂಬರುವ ದಿನ ದಲ್ಲಿ ಇಂಡಿ ನಗರಕ್ಕೆ ನಗರ ಸಾರಿಗೆ ಸೇವೆ ಪ್ರಾರಂಭಕ್ಕೆ ಪ್ರಯತ್ನಿಸಲಾಗುತ್ತಿದ್ದು, ಹಳೆ ಬಸ್ ಡಿಪೋವನ್ನು ನಗರ ಸಾರಿಗೆ ನಿಲ್ದಾಣವನ್ನಾಗಿ ಪರಿವರ್ತಿಸಲಾಗುತ್ತದೆ ಎಂದು ಹೇಳಿದರು.

ಸಾರಿಗೆ ಇಲಾಖೆಯ ವಿಜಯಪುರ ವಿಭಾಗೀಯ ತಾಂತ್ರೀಕ ಅಧಿಕಾರಿ ಅಬುಬಕರ ಮದಭಾವಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಎಸಿ ರಾಮಚಂದ್ರ ಗಡಾದೆ, ತಹಶೀಲ್ದಾರ ನಾಗಯ್ಯ ಹಿರೇಮಠ, ಘಟಕ ವ್ಯವಸ್ಥಾಪಕ ವಾಗೇಶ ಭಜಂತ್ರಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಾವೀದ ಮೋಮಿನ, ಶ್ರೀಕಾಂತ ಕುಡಿಗನೂರ, ಧರ್ಮು ವಾಲಿಕಾರ, ಅಯೂಬ ಬಾಗವಾನ, ಜಹಾಂಗೀರ ಸೌದಾಗರ, ಶಬ್ಬಿರ ಖಾಜಿ, ಉಮೇಶ ದೇಗಿನಾಳ, ಸುದೀರ ಕರಕಟ್ಟಿ, ಭೀಮನಗೌಡ ಪಾಟೀಲ, ಲಿಂಬಾಜಿ ರಾಠೋಡ, ಭೀಮಣ್ಣ ಕವಲಗಿ,ಸದಾಶಿವ ಪ್ಯಾಟಿ, ಸುನೀಲ ಹೊನವಾಡ, ಅರವಿಂದ ತರಡಿ,ಜೀತಪ್ಪ ಕಲ್ಯಾಣಿ, ಮಂಜು ಕಾಮ ಗೊಂಡ, ಕಾಶೀನಾಥ ಹೊಸಮನಿ, ಜಟ್ಟೆಪ್ಪ ರವಳಿ, ಪ್ರಶಾಂತ ಕಾಳೆ, ಶೇಖರ ಶಿವಶರಣ, ಅವಿನಾಶ ಬಗಲಿ, ಇಲಿಯಾಸ ಬೊರಾಮಣಿ, ಮಹಿಬೂಬ ಅರಬ,ಪ್ರಭುಗೌಡ ಬಿರಾದಾರ, ಹುಚ್ಚಪ್ಪ ತಳವಾರ ಮೊದಲಾದವರು ಕಾರ್ಯಕ್ರಮದಲ್ಲಿ ಇದ್ದರು.