ಬೆಂಗಳೂರು: ಸುದರ್ಶನ್ ಸುಂದರರಾಜ್ ನಿರ್ಮಾಣದ, ಪ್ರಸಿದ್ಧ್ ನಿರ್ದೇಶನದ ಹಾಗೂ ಜನಪ್ರಿಯ ಧಾರವಾಹಿ “ಕನ್ನಡತಿ” ಮೂಲಕ ಮನೆ ಮಾತಾಗಿರುವ ಕಿರಣ್ ರಾಜ್ ನಾಯಕನಾಗಿ ನಟಿಸಿರುವ “ಶೇರ್” ಚಿತ್ರದ ಟೀಸರ್ ಬಿಡುಗಡೆ ಸಮಾರಂಭ ಇತ್ತೀಚೆಗೆ ನಡೆಯಿತು. ಹಿರಿಯ ರಾಜಕೀಯ ಮುಖಂಡರಾದ ಪಿ.ಜಿ.ಆರ್ ಸಿಂಧ್ಯಾ(PGR Sindhya) ಟೀಸರ್ ರಿಲೀಸ್ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು.(Share Cinema Teaser)
ಚಿತ್ರದ ಟೀಸರ್ ಬಿಡುಗಡೆಯ ನಂತರ ಮಾತನಾಡಿದ ನಿರ್ದೇಶಕ ಪ್ರಸಿದ್ದ್, “ಶೇರ್ ನನ್ನ ನಿರ್ದೇಶನದ ಮೂರನೇ ಸಿನಿಮಾ. ನಾನು ನನ್ನ ಚಿತ್ರಗಳಲ್ಲಿ ಸಂದೇಶ ಕೊಡಲು ಇಷ್ಟ ಪಡುವುದಿಲ್ಲ. ಜನರಿಗೆ ಬೇಕಾಗಿರುವುದು ಮನರಂಜನೆ. ಅದನ್ನು ಕೊಡಲು ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತೇನೆ. ಶೇರ್ ಕೂಡ ಪಕ್ಕಾ ಎಂಟರ್ಟೈನ್ಮೆಂಟ್ ಚಿತ್ರ. ಅನಾಥಾಶ್ರಮವೊಂದರ ಸುತ್ತವೇ ಸಿನಿಮಾದ ಕಥೆಯನ್ನು ಹೆಣೆಯಲಾಗಿದೆ. ಅಲ್ಲೊಬ್ಬ ರಾಜಕಾರಣಿ ಇರುತ್ತಾನೆ. ಅಲ್ಲಿ ಎರಡು ಗುಂಪುಗಳಿರುತ್ತದೆ. ಒಂದು ಗುಂಪಿನವರು ಅನಾಥಾಶ್ರಮವನ್ನೇ ಅಡ್ಡ ಮಾಡಿಕೊಂಡಿರುತ್ತಾರೆ. ಅಲ್ಲೊಂದು ಒಳ್ಳೆಯ ಗುಂಪು ಸಹ ಇರುತ್ತದೆ. ಚಿತ್ರದಲ್ಲಿ ನಾಯಕ-ನಾಯಕಿ ಅನಾಥರ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರೇಕ್ಷಕರಿಗೆ ಈ ಸಿನಿಮಾ ನಿಜಕ್ಕೂ ಇಷ್ಟವಾಗುತ್ತದೆ. ಇಂಥ ಸಿನಿಮಾಗಳನ್ನು ಪ್ರೇಕ್ಷಕರು ಗೆಲ್ಲಿಸುತ್ತಾರೆ ಎಂಬ ನಂಬಿಕೆಯಿದೆ. ಸದ್ಯ ಚಿತ್ರೀಕರಣ ಮುಗಿಸಿ, ಪೋಸ್ಟ್ ಪ್ರೊಡಕ್ಷನ್ ನಲ್ಲಿ ಬ್ಯುಸಿಯಾಗಿರುವ ಈ ಚಿತ್ರವನ್ನು ಆದಷ್ಟು ಬೇಗ ತೆರೆಗೆ ತರುವ ತಯಾರಿ ನಡೆಯುತ್ತಿದೆ ಎಂದರು.
ನಂತರ ಮಾತನಾಡಿದ ಶೇರ್ ಸಿನಿಮಾ ನಿರ್ಮಾಪಕ ಸುದರ್ಶನ್ ಸುಂದರರಾಜ್ ಅವರು “ನಾನು ಮೂಲತಃ ಬೀದರ್ ನವನು. ಅಲ್ಲೇ ವಕೀಲನಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ರಾಜಕೀಯದಲ್ಲೂ ಇದ್ದೀನಿ. ನಿರ್ದೇಶಕರು ಹೇಳಿದ ಕಥೆ ತುಂಬಾ ಇಷ್ಟವಾಯಿತು. ನಿರ್ಮಾಣಕ್ಕೆ ಮುಂದಾದೆ. ನನ್ನ ಮಗ ಕ್ರಿಸ್ ಈ ಚಿತ್ರದಲ್ಲಿ ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾನೆ. ಅವನ ಬೆಳವಣಿಗೆಗೆ ಈ ಸಿನಿಮಾ ಬ್ರೇಕ್ ಆಗುತ್ತದೆ ಎಂಬ ಭರವಸೆ ನನಗಿದೆ” ಎಂದರು.
“ಮೊದಲ ಬಾರಿಗೆ ಖಳನಟನಾಗಿ ಅಭಿನಯಿಸಿದ್ದೇನೆ. ಎಲ್ಲರ ಪ್ರೋತ್ಸಾಹವಿರಲಿ. ನನ್ನ ರೋಲ್ ನಿಮಗೆ ಇಷ್ಟವಾಗುತ್ತದೆ ಎಂದು ಭಾವಿಸಿದ್ದೇನೆ” ಎಂದು ಶೇರ್ ಸಿನಿಮಾದಲ್ಲಿ ವಿಲನ್ ಪಾತ್ರಕ್ಕೆ ಬಣ್ಣ ಹಚ್ಚಿರುವ ನಟ ಕ್ರಿಸ್ ಮಾತನಾಡಿದರು. ಚಿತ್ರದ ನಾಯಕಿ ಸುರೇಖ ಹಾಗೂ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಖಡಕ್ ಲುಕ್‌ನಲ್ಲಿ ಕಾಣಿಸಿಕೊಂಡಿರುವ ತನೀಶಾ ಕುಪ್ಪಂಡ ತಮ್ಮ ಪಾತ್ರದ ಬಗ್ಗೆ ಮಾತನಾಡಿದರು. ಕಿಟ್ಟಿ ಕೌಶಿಕ್ ಛಾಯಾಗ್ರಹಣದ ಬಗ್ಗೆ ಮಾಹಿತಿ ನೀಡಿದರು. ಸಾಕಷ್ಟು ಗಣ್ಯರು ಮತ್ತು ಚಿತ್ರತಂಡದವರು ಚಿತ್ರದ ಟೀಸರ್ ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಈ ಸುದ್ದಿಯನ್ನೂ ಓದಿ:Drugs Case: ಡ್ರಗ್ಸ್ ಕೇಸ್‌ನಲ್ಲಿ ಶಾಸಕಿ ಪುತ್ರ ಅರೆಸ್ಟ್!