Thursday, 2nd January 2025

Shiggaon By Election: ಶಿಗ್ಗಾಂವಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಯಾಸೀರ್ ಖಾನ್ ಪಠಾಣ್ ಗೆಲುವು ಶತಸಿದ್ಧ; ಲಕ್ಷ್ಮೀ ಹೆಬ್ಬಾಳಕರ್

Shiggaon By Election

ಶಿಗ್ಗಾಂವಿ: ದಿನದಿಂದ ದಿನಕ್ಕೆ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಪರ ಅಲೆ ಬೀಸುತ್ತಿದ್ದು, ಉಪ ಚುನಾವಣೆಯಲ್ಲಿ ಅಭ್ಯರ್ಥಿ ಯಾಸೀರ್ ಖಾನ್ ಪಠಾಣ್ ಗೆಲುವು ಶತಸಿದ್ಧ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ (Lakshmi Hebbalkar) ಭವಿಷ್ಯ ನುಡಿದಿದ್ದಾರೆ. ಶಿಗ್ಗಾಂವಿ ಪಟ್ಟಣದಲ್ಲಿ (Shiggaon By Election) ರೋಡ್ ಶೋನಲ್ಲಿ ಪಾಲ್ಗೊಂಡು ಕಾಂಗ್ರೆಸ್ ಅಭ್ಯರ್ಥಿ ಯಾಸೀರ್ ಖಾನ್ ಪಠಾಣ್ ಪರ ಪ್ರಚಾರ ನಡೆಸಿದ ಅವರು, ಕ್ಷೇತ್ರದಲ್ಲಿ ಈ ಬಾರಿ ಕಾಂಗ್ರೆಸ್ ಗೆಲ್ಲುವುದು ಗ್ಯಾರಂಟಿ ಎಂದು ತಿಳಿಸಿದರು.‌

ಕಾಂಗ್ರೆಸ್ ಸರ್ಕಾರದ ಯೋಜನೆಗಳ ಬಗ್ಗೆ ಬಿಜೆಪಿಯವರು ಹಸಿ ಹಸಿ ಸುಳ್ಳು ಹಬ್ಬಿಸುತ್ತಿದ್ದಾರೆ. ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಜನರ ಬಾಳಲ್ಲಿ ನೆಮ್ಮದಿ ತಂದಿದೆ. ಗ್ಯಾರಂಟಿ ಯೋಜನೆಗಳ ಬಗ್ಗೆ ಬಿಜೆಪಿಯವರು ಸುಳ್ಳು ಹೇಳುತ್ತಿದ್ದರು. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ನಾವು ಘೋಷಿಸಿದ್ದ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದೆವು ಎಂದು ಸಚಿವರು ಬಿಜೆಪಿ‌ ವಿರುದ್ಧ ಟೀಕಾಪ್ರಹಾರ ನಡೆಸಿದರು.

ಈ ಸುದ್ದಿಯನ್ನೂ ಓದಿ | Lakshmi Hebbalkar: ತಹಸೀಲ್ದಾರ್‌ ಕಚೇರಿ ಸಿಬ್ಬಂದಿ ಆತ್ಮಹತ್ಯೆ ಪ್ರಕರಣ; ನಿಷ್ಪಕ್ಷಪಾತ ತನಿಖೆ ಆಗಲಿ ಎಂದ ಹೆಬ್ಬಾಳ್ಕರ್

ಕರ್ನಾಟಕದಲ್ಲಿ ನಮ್ಮ ಗ್ಯಾರಂಟಿ ಯೋಜನೆಗಳನ್ನು ಟೀಕಿಸುವ ಬಿಜೆಪಿಯವರು, ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಪಕ್ಷದ ಪ್ರಣಾಳಿಕೆಯನ್ನು ಕಾಪಿ ಮಾಡಿದೆ ಎಂದು ಹೇಳಿದರು.

ನಮ್ಮ ಅಭ್ಯರ್ಥಿ ಯಾಸೀರ್ ಖಾನ್ ಪಠಾಣ್ ಇನ್ನು ಯುವಕರಿದ್ದು, ಸಾಮಾನ್ಯ ಕುಟುಂಬದ ಯುವಕನಿಗೆ ಶಿಗ್ಗಾವಿ ಜನರು ಒಂದು ಅವಕಾಶ ಮಾಡಿಕೊಡಬೇಕು. ಹಾವೇರಿ ಜಿಲ್ಲೆಯಿಂದ ಐದು ಜನ ಕಾಂಗ್ರೆಸ್ ಶಾಸಕರಿದ್ದು, ಪಠಾಣ್ ಗೆದ್ದರೆ, ಹಾವೇರಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ನೆರವಾಗಲಿದೆ. ನಾನು ಸಾಮಾನ್ಯ ಕಾರ್ಯಕರ್ತೆಯಾಗಿ ಪಠಾಣ್ ಪರ ಕೆಲಸ ಮಾಡುವೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.

ಈ ಸುದ್ದಿಯನ್ನೂ ಓದಿ | PSI Exam: ಪಿಎಸ್‌ಐ ಪರೀಕ್ಷೆ ತಾತ್ಕಾಲಿಕ ಅಂಕಪಟ್ಟಿ ಪ್ರಕಟ; ಪರಿಶೀಲಿಸುವ ಲಿಂಕ್‌ ಇಲ್ಲಿದೆ

ಚನ್ನಮ್ಮ ಸರ್ಕಲ್‌ನಿಂದ ಮಾರ್ಕೆಟ್ ರೋಡ್ ಮೂಲಕ ಹಳೇ ಬಸ್ ನಿಲ್ದಾಣದವರೆಗೆ ರೋಡ್ ಶೋ ನಡೆಸಲಾಯಿತು. ಈ ವೇಳೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಚಿವರಾದ ಶಿವಾನಂದ ಪಾಟೀಲ್, ಮಂಕಾಳ್ ವೈದ್ಯ, ಈಶ್ವರ್ ಖಂಡ್ರೆ, ಶಾಸಕಿ ನಯನ ಮೋಟಮ್ಮ, ನಟ ಸಾಧು ಕೋಕಿಲ, ಮುಖಂಡರಾದ ಅಜಂಪೀರ್ ಖಾದ್ರಿ, ಕಾಂಗ್ರೆಸ್ ಅಭ್ಯರ್ಥಿ ಯಾಸೀರ್ ಖಾನ್ ಪಠಾಣ್ ‌ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.