ಬೆಂಗಳೂರು: ಅನಾರೋಗ್ಯದ ಕಾರಣ ಅಮೆರಿಕದ ಆಸ್ಪತ್ರೆಗೆ ಶಸ್ತ್ರಚಿಕಿತ್ಸೆಗೆ ದಾಖಲಾಗಿದ್ದ ನಟ ಶಿವರಾಜ್ ಕುಮಾರ್ (Shiva Rajkumar) ಅವರಿಗೆ ಶಸ್ತ್ರ ಚಿಕಿತ್ಸೆ (Surgery) ಯಶಸ್ವಿಯಾಗಿದೆ. ಈ ಶಸ್ತ್ರಚಿಕಿತ್ಸೆಯನ್ನು ಡಾ. ಮುರುಗೇಶ ಮನೋಹರನ್ ಅವರ ಮಾರ್ಗದರ್ಶನದಲ್ಲಿ ಯಶಸ್ವಿಯಾಗಿ ನೆರವೇರಿಸಲಾಗಿದ್ದು, ಶಸ್ತ್ರಚಿಕಿತ್ಸೆಯ ವೇಳೆ ಮತ್ತು ಶಸ್ತ್ರಚಿಕಿತ್ಸೆ ನಂತರದ ಆರೈಕೆ ಸಮಯದಲ್ಲಿ ಡಾ. ಶಿವರಾಜ್‌ಕುಮಾರ್ ಅವರ ಆರೋಗ್ಯ ಸ್ಥಿತಿಯು ಸ್ಥಿರವಾಗಿತ್ತು ಎಂದು ಅವರು ವಿಡಿಯೋ ಸಂದೇಶದಲ್ಲಿ ತಿಳಿಸಿದ್ದಾರೆ.
ನಿನ್ನೆ ಸಂಜೆ 6 ಗಂಟೆಗೆ ಆಪರೇಷನ್ ಆರಂಭವಾಗಿ 4-5 ಗಂಟೆಗಳ ಕಾಲ ಆಪರೇಷನ್ ನಡೆದಿದ್ದು ಅದು ಯಶಸ್ವಿಯಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಶಿವರಾಜ್‌ಕುಮಾರ್ ಅವರು ಮಾನಸಿಕವಾಗಿ ಮತ್ತು ದೈಹಿಕವಾಗಿ ಸದೃಢರಾಗಿದ್ದಾರೆ. ಅವರನ್ನು ಐಸಿಯು ವಾರ್ಡ್ ಗೆ ಶಿಫ್ಟ್ ಮಾಡಲಾಗಿದ್ದು, ಆರೋಗ್ಯ ಸ್ಥಿರವಾಗಿದ್ದು ಸುಧಾರಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ತಮಗೆ ಗಂಭೀರ ಕಾಯಿಲೆ ಎಂದು ಗೊತ್ತಾದಲ್ಲಿಂದಲೂ ಶಿವರಾಜ್ ಕುಮಾರ್ ಅದನ್ನು ಧೈರ್ಯವಾಗಿ, ಸಕಾರಾತ್ಮಕವಾಗಿ ತೆಗೆದುಕೊಳ್ಳುತ್ತಾ ಬಂದಿದ್ದರು. ಅದೇ ರೀತಿ ಸರ್ಜರಿಯನ್ನು ಕೂಡ ಪಾಸಿಟಿವ್ ಆಗಿ ತೆಗೆದುಕೊಂಡರು. ಅಮೆರಿಕದಲ್ಲಿ ಶಸ್ತಚಿಕಿತ್ಸೆ ಪೂರ್ಣಗೊಂಡಿದೆ ಎಂದು ಹೇಳಿದ್ದಾರೆ.
ಡಾ. ಶಿವರಾಜ್‌ಕುಮಾರ್ ಅವರ ಅಭಿಮಾನಿಗಳು, ಸಹೋದ್ಯೋಗಿಗಳು, ಶುಭಚಿಂತಕರು ಮತ್ತು ಮಾಧ್ಯಮಗಳಿಗೆ ಈ ಸಂದರ್ಭದಲ್ಲಿ ತೋರಿಸಿದ ನಿರಂತರ ಬೆಂಬಲ, ಪ್ರಾರ್ಥನೆ ಮತ್ತು ಮೆಚ್ಚುಗೆ ಸಂದೇಶಗಳಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ತಿಳಿಸುತ್ತೇವೆ. ನಿಮ್ಮ ಪ್ರೋತ್ಸಾಹವು ಡಾ. ಶಿವರಾಜ್‌ಕುಮಾರ್ ಮತ್ತು ಅವರ ಕುಟುಂಬಕ್ಕೆ ದೊಡ್ಡ ಶಕ್ತಿ ಒದಗಿಸಿದೆ. ಅವರ ಚೇತರಿಕೆ ಕುರಿತು ಮುಂದಿನ ಮಾಹಿತಿಯನ್ನು ಸಮಯಕ್ಕೆ ಸರಿಯಾಗಿ ಹಂಚಿಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಶಿವರಾಜ್ ಕುಮಾರ್ ಯಶಸ್ವಿ ಶಸ್ತ್ರಚಿಕಿತ್ಸೆ ಮಾಹಿತಿ ಹೊರಬೀಳುತ್ತಿದ್ದಂತೆ ಅಭಿಮಾನಿಗಳು ನಿರಾಳರಾಗಿದ್ದಾರೆ. ಇಷ್ಟೇ ಅಲ್ಲ ಶಿವರಾಜ್ ಕುಮಾರ್ ಉತ್ತಮ ಆರೋಗ್ಯಕ್ಕೆ ಪೂಜೆ ಪುನಸ್ಕಾರ ಮುಂದುವರಿದಿದೆ. ಮಂಗಳವಾರ ಶಿವರಾಜ್ ಕುಮಾರ್ ಶಸ್ತ್ರಚಿಕಿತ್ಸೆ ಹಿನ್ನಲೆಯಲ್ಲಿ ಹಲವು ದೇವಸ್ಥಾನಗಳಲ್ಲಿ ಪೂಜೆ ಪುನಸ್ಕಾರ ನಡೆದಿತ್ತು. ಘಾಟಿ ಸುಬ್ರಹ್ಮಣ್ಯ ದೇವಸ್ಥಾನ, ಇತಿಹಾಸ ಪ್ರಸಿದ್ಧ ಕೆಂಗಲ್ ಆಂಜನೇಯಸ್ವಾಮಿ ದೇವಾಲಯ ಸೇರಿದಂತೆ ಹಲವು ದೇವಸ್ಥಾನಗಳಲ್ಲಿ ಅಭಿಮಾನಿಗಳು ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: ಶಿವರಾಜ್ ಕುಮಾರ್ ಚಿತ್ರ ಜೀವನಕ್ಕೆ ಈಗ 37 ವರ್ಷ..