Saturday, 4th January 2025

Shiva Rajkumar: ಶಿವಣ್ಣಗೆ ಆಗಿದ್ದೇನು, ಸರ್ಜರಿಯಲ್ಲಿ ತೆಗೆದ ಅಂಗ ಯಾವುದು; ಈಗ ರಿವೀಲ್!‌

Shivarajkumar

ಬೆಂಗಳೂರು: ಕ್ಯಾನ್ಸರ್‌ ಕಾಯಿಲೆಗೆ (Cancer) ಸಂಬಂಧಿಸಿ ಅಮೆರಿಕದಲ್ಲಿ ಸರ್ಜರಿಗೆ ಒಳಗಾದ ನಟ ಶಿವರಾಜ್‌ ಕುಮಾರ್‌ (Shiva Rajkumar) ಹೊಸ ವರ್ಷದ ಮೊದಲ ದಿನ ಸಿಹಿ ಸುದ್ದಿ ನೀಡಿದ್ದಾರೆ. ʼತಾನು ಈಗ ಕ್ಯಾನ್ಸರ್‌ ಫ್ರೀʼ ಎಂದು ಅವರು ಹೇಳಿದ್ದು, ತಮ್ಮ ಮೂತ್ರಕೋಶ (Urinary bladder) ತೆಗೆಯಲಾಗಿದೆ ಎಂಬ ವಿವರವನ್ನು ನೀಡಿದ್ದಾರೆ.

ಹೊಸ ವರ್ಷದಲ್ಲಿ ದುಪ್ಪಟ್ಟು ಉತ್ಸಾಹದೊಂದಿಗೆ ತಾನು ಮರಳಿ ಬರಲಿದ್ದೇನೆ ಎಂದಿರುವ ಅವರು, ಈ ಕುರಿತು ಆಸ್ಪತ್ರೆಯಿಂದಲೇ ಅವರು ವಿಡಿಯೋ ಮಾಡಿ ಸೋಶಿಯಲ್‌ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ. ಅಮೆರಿಕದ ಮಿಯಾಮಿ ಕ್ಯಾನ್ಸರ್‌ ಇನ್‌ಸ್ಟಿಟ್ಯೂಟ್‌ನಲ್ಲಿ ಸರ್ಜರಿಗೆ ಶಿವಣ್ಣ ಒಳಗಾಗಿದ್ದರು. ಇದೀಗ ಪತ್ನಿ ಗೀತಾ ಜೊತೆಗೂಡಿ ವಿಡಿಯೋ ಸಂದೇಶವನ್ನು ಅವರು ಅಭಿಮಾನಿಗಳಿಗಾಗಿ ಕಳಿಸಿಕೊಟ್ಟಿದ್ದಾರೆ. ಸೋಂಕಿಗೊಳಗಾದ ತಮ್ಮ ಮೂತ್ರಕೋಶವನ್ನು ಸರ್ಜರಿ ಮಾಡಿ ತೆಗೆಯಲಾಗಿದೆ ಎಂದು ಅವರು ರಿವೀಲ್‌ ಮಾಡಿದ್ದಾರೆ.

ಕ್ಯಾನ್ಸರ್‌ ಸೋಂಕಿಗೆ ಒಳಗಾದ ಮೂತ್ರಕೋಶವನ್ನು ರಿಮೂವ್‌ ಮಾಡಲಾಗಿದೆ. ಸೋಂಕು ಇತರ ಕಡೆಗೆ ಹರಡದಂತೆ, ಸೋಂಕಿಗೆ ತುತ್ತಾದ ಮೂತ್ರಕೋಶವನ್ನು ತೆಗೆಯುವ ಅಗತ್ಯ ಕಂಡುಬಂದಿತ್ತು. ಕಿಡ್ನಿಗೆ ಯಾವುದೇ ಅಪಾಯ ಆಗಿಲ್ಲ ಎಂದು ಶಿವಣ್ಣ ತಿಳಿಸಿದ್ದಾರೆ. ಮೂತ್ರಕೋಶವು ಮೂತ್ರವನ್ನು ಸಂಗ್ರಹಿಸುವ ಚೀಲವಾಗಿದ್ದು, ಇದರ ಕಾರ್ಯವನ್ನು ನಿರ್ವಹಿಸುವ ಪರ್ಯಾಯ ವ್ಯವಸ್ಥೆಯನ್ನು ಸರ್ಜರಿಯ ಸಂದರ್ಭದಲ್ಲಿ ಅಳವಡಿಸಲಾಗುತ್ತದೆ.

“ಚಿಕಿತ್ಸೆಗಾಗಿ ಇಲ್ಲಿಗೆ ಹೊರಡುವಾಗ ಭಯವಿತ್ತು. ಆದರೆ ಯಾರೂ ಇನ್ನು ಭಯಪಡುವ ಅಗತ್ಯವಿಲ್ಲ. ಸರ್ಜರಿ ಯಶಸ್ವಿಯಾಗಿ ಆಗಿದ್ದು, ನಾನು ಕ್ಯಾನ್ಸರ್‌ ಮುಕ್ತ ಆಗಿದ್ದೇನೆ. ಶಸ್ತ್ರಚಿಕಿತ್ಸೆ ಮಾಡಿ ಯುರಿನರಿ ಬ್ಲಾಡರ್‌ ತೆಗೆದಿದ್ದಾರೆ. ವೈದ್ಯರು ಒಂದು ತಿಂಗಳು ಪೂರ್ತಿ ವಿಶ್ರಾಂತಿ ಪಡೆಯಿರಿ ಎಂದಿದ್ದಾರೆ. ಅದರ ನಂತರ ಮತ್ತೆ ಎಂದಿನ ಶಿವಣ್ಣ ಮರಳಲಿದ್ದಾನೆ. ದುಪ್ಪಟ್ಟು ಚೈತನ್ಯದೊಂದಿಗೆ ಮರಳಿ ಬರಲಿದ್ದೇನೆ. ಶೂಟಿಂಗ್‌, ಫೈಟು, ಡ್ಯಾನ್ಸು ಎಲ್ಲವೂ ಇರಲಿದೆ” ಎಂದಿದ್ದಾರೆ.

“ಮಿಯಾಮಿ ಕ್ಯಾನ್ಸರ್‌ ಇನ್‌ಸ್ಟಿಟ್ಯೂಟ್‌ನ ವೈದ್ಯರು ಸೇರಿದಂತೆ ತಜ್ಞರು ಧೈರ್ಯ ತುಂಬಿದ್ದಾರೆ. ಪತ್ನಿ ಗೀತಾ, ಮಧು ಸೇರಿದಂತೆ ಹಲವರು ಜೊತೆಗೆ ಬೆಂಬಲವಾಗಿ ನಿಂತಿದ್ದಾರೆ. ಗೀತಾ ಇಲ್ಲದೆ ಶಿವಣ್ಣ ಇಲ್ಲ. ಆಕೆಯ ಬೆಂಬಲ ಮರೆಯಲಾಗೊಲ್ಲ. ಜೊತೆಗೆ ಅಭಿಮಾನಿಗಳಾದ ನೀವೆಲ್ಲರೂ ಜೊತೆಗೆ ನಿಂತಿದ್ದೀರಿ. ನಿಮ್ಮ ಪ್ರೀತಿ ವಿಶ್ವಾಸ ಮರೆಯೊಲ್ಲ. ಲವ್‌ ಯು ಆಲ್. ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು” ಎಂದಿದ್ದಾರೆ.

“ಹೊರಡುವ ಹೊತ್ತಿನಲ್ಲಿ ಭಯ ಹೆಚ್ಚು ಇತ್ತು. ಹೇಗೆ ಮಾಡಿದೆನೋ ಗೊತ್ತಿಲ್ಲ. ಆದರೆ ಭಯ ನೀಗಿಸೋಕೆ ಅಭಿಮಾನಿ ದೇವರಗಳಿದ್ದರು, ಫ್ರೆಂಡ್ಸ್‌ ಸಂಬಂಧಿಕರು ವೈದ್ಯರು ಎಲ್ಲರೂ ಇದ್ದರು. ವೈದ್ಯರಾದ ಶಶಿಧರ್‌, ದಿಲೀಪ್‌, ಗೀತಾ, ಬಿಕೆಶ್ರೀನಿವಾಸ್‌ ಎಲ್ಲರೂ ಚೆನ್ನಾಗಿ ನೋಡಿಕೊಂಡಿದ್ದಾರೆ. 45 ಸಿನಿಮಾದ ಕ್ಲೈಮ್ಯಾಕ್ಸ್‌ ಅನ್ನು ಕೀಮೋಥೆರಪಿಯ ನಡುವೆಯೇ ಮಾಡಿದೆ” ಎಂದು ಅವರು ತಿಳಿಸಿದರು.

“ಸರ್ಜರಿ ನಂತರ ಪೆಥಾಲಜಿ ಸೇರಿದಂತೆ ಎಲ್ಲ ವರದಿಗಳು ಇದೀಗ ಬಂದಿದ್ದು, ಶಿವಣ್ಣ ಕ್ಯಾನ್ಸರ್‌ ಮುಕ್ತರಾಗಿದ್ದಾರೆ. ನಿಮ್ಮೆಲ್ಲರ ಪ್ರಾರ್ಥನೆ, ದೊಡ್ಡವರ ಆಶೀರ್ವಾದ, ಗೆಳೆಯರ ಬೆಂಬಲ ಫಲಿಸಿದೆ. ಇದನ್ನು ಜೀವನದಲ್ಲಿ ಯಾವತ್ತೂ ಮರೆಯುವುದಿಲ್ಲ” ಎಂದು ಗೀತಾ ಶಿವರಾಜ್‌ಕುಮಾರ್‌ ನುಡಿದರು.

ಇದನ್ನೂ ಓದಿ: Shiva Rajkumar: ಸರ್ಜರಿಗಾಗಿ ಅಮೇರಿಕಕ್ಕೆ ಹೊರಟ ಶಿವಣ್ಣ; ಸುದೀಪ್‌ ಸೇರಿ ಹಲವರಿಂದ ಶುಭ ಹಾರೈಕೆ