Wednesday, 23rd October 2024

Siblings Drown: ಕೆರೆಯಲ್ಲಿ ಮುಳುಗಿ ಅಣ್ಣ-ತಂಗಿ ಸಾವು ಪ್ರಕರಣ; 5 ಲಕ್ಷ ಪರಿಹಾರ ಘೋಷಿಸಿದ ಡಿಸಿಎಂ ಡಿಕೆಶಿ

Siblings Drown

ಬೆಂಗಳೂರು: ಕೆಂಗೇರಿ ಕೆರೆಯಲ್ಲಿ ಮುಳುಗಿ ಅಣ್ಣ-ತಂಗಿ ಸಾವು ಪ್ರಕರಣಕ್ಕೆ (Siblings Drown) ಸಂಬಂಧಿಸಿದಂತೆ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಮೃತ ಬಾಲಕ, ಬಾಲಕಿ ಕುಟಂಬಕ್ಕೆ 5 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ. ಕುಟುಂಬಕ್ಕೆ ಬಿಬಿಎಂಪಿಯಿಂದ 5 ಲಕ್ಷ ಸೇರಿ ಒಟ್ಟು 10 ಲಕ್ಷ ರೂಪಾಯಿ ಪರಿಹಾರ ನೀಡಲಾಗುತ್ತಿದೆ. ಈ ಬಗ್ಗೆ ಶಾಸಕ ಎಸ್‌.ಟಿ. ಸೋಮಶೇಖರ್ ಜತೆ ಮಾತನಾಡಿದ್ದೇನೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್‌ ತಿಳಿಸಿದ್ದಾರೆ.

ಕೆಂಗೇರಿ ಬೆಂಗಳೂರಿನ ಯಶವಂತಪುರ ಕ್ಷೇತ್ರದ ವ್ಯಾಪ್ತಿಗೆ ಸೇರುತ್ತದೆ. ನಾಗಮ್ಮ ಎಂಬುವವರ ಪುತ್ರಿ ಮಹಾಲಕ್ಷ್ಮಿ ಹಾಗೂ ಪುತ್ರ ಜಾನ್ ಸೀನ ಕೆರೆಯಲ್ಲಿ ಇಬ್ಬರು ಮೃತಪಟ್ಟಿದ್ದರು. ನೆನ್ನೆ ಬೆಳಗ್ಗೆ ಆಕಸ್ಮಿಕವಾಗಿ ಮಹಾಲಕ್ಷ್ಮಿ ಕೆರೆಗೆ ಬಿದ್ದಿದ್ದಳು. ಈ ವೇಳೆ ತಂಗಿಯ ರಕ್ಷಣೆಗೆ ಕೆರೆಗೆ ಇಳಿದಿದ್ದ ಅಣ್ಣ ಜಾನ್ ಸೀನ ಕೂಡ ಮೃತಪಟ್ಟಿದ್ದ. ಇದೀಗ ಇಬ್ಬರು ಮಕ್ಕಳನ್ನು ಕಳೆದುಕೊಂಡ ತಾಯಿ ನಾಗಮ್ಮಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಪರಿಹಾರ ಘೋಷಿಸಿದ್ದಾರೆ.

ಈ ಸುದ್ದಿಯನ್ನೂ ಓದಿ | Bengaluru Rain: ರಾಜಧಾನಿಯಲ್ಲಿ ಮತ್ತೆ ಮಳೆಯಾರ್ಭಟ; ಬಿಟಿಎಂ ಲೇಔಟ್‌ನಲ್ಲಿ ಪ್ರವಾಹ ಸ್ಥಿತಿ ನಿರ್ಮಾಣ, ಮುಳುಗಿದ ವಾಹನಗಳು!

ಮನೆಗೆ ಮಳೆ ನೀರು ನುಗ್ಗಿದರೆ 10 ಸಾವಿರ ಪರಿಹಾರ

ಧಾರಾಕಾರ ಮಳೆಯಿಂದ ಜಲಾವೃತವಾಗಿರುವ ಯಲಹಂಕದ ಕೇಂದ್ರೀಯ ವಿಹಾರ ಅಪಾರ್ಟ್‌ಮೆಂಟ್‌, ಥಣಿಸಂದ್ರ, ಸಾಯಿಬಾಬಾ ಲೇಔಟ್ ವ್ಯಾಪ್ತಿಯಲ್ಲಿ ಮಳೆ ಹಾನಿ ಪ್ರದೇಶಗಳಿಗೆ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು ಬುಧವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ವೇಳೆ ಮಾತನಾಡಿದ ಅವರು, ಮನೆಗೆ ನೀರು ನುಗ್ಗಿ ತೊಂದರೆ ಎದುರಿಸುತ್ತಿರುವವರಿಗೆ ತಲಾ 10,000 ಸಾವಿರ ಪರಿಹಾರ, ವಸತಿ ಇಲ್ಲದವರಿಗೆ ವಾಸಿಸಲು ತಾತ್ಕಾಲಿಕ ವಸತಿ ಹಾಗೂ ಊಟದ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಇನ್ನು ನಗರದಾದ್ಯಂತ ಮುಲಾಜಿಲ್ಲದೆ ರಾಜಕಾಲುವೆ ಒತ್ತುವರಿ ತೆರವಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ಧಾರಾಕಾರ ಮಳೆಯಿಂದ ಜಲಾವೃತವಾಗಿರುವ ಯಲಹಂಕದ ಕೇಂದ್ರೀಯ ವಿಹಾರ ವಸತಿ ಸಮುಚ್ಚಯಕ್ಕೆ ಭೇಟಿ ನೀಡಿ, ಮಳೆಯಿಂದ ಆಗಿರುವ ತೊಂದರೆ ಕುರಿತು ಪರಿಶೀಲನೆ ನಡೆಸಿ, ಅಧಿಕಾರಿಗಳಿಗೆ ಹಾಗೂ NDRF ತಂಡಕ್ಕೆ ಅಗತ್ಯ ಸೂಚನೆಗಳನ್ನು ನೀಡಿದ್ದೇನೆ.

ಈ ಸುದ್ದಿಯನ್ನೂ ಓದಿ | Karnataka Rain: ಗುಬ್ಬಿಯಲ್ಲಿ ನಿರಂತರ ಮಳೆಗೆ ಮನೆ ಗೋಡೆ ಕುಸಿದು ಮಹಿಳೆ ಸಾವು; ನಾಳೆಯೂ ರಾಜ್ಯದ ಹಲವೆಡೆ ಭಾರಿ ಮಳೆ!

ಕೇಂದ್ರೀಯ ವಿಹಾರ ವಸತಿ ಸಮುಚ್ಚಯದಲ್ಲಿ ಕೇಂದ್ರ ಸರ್ಕಾರದ ನೌಕರರು ವಾಸಿಸುತ್ತಿದ್ದು, ಯಲಹಂಕದಲ್ಲಿ ಇಷ್ಟು ಪ್ರಮಾಣದ ಮಳೆಯಾಗಿರುವ ಇತಿಹಾಸವಿಲ್ಲ. ಸಮುಚ್ಚಯದಲ್ಲಿನ ಅರ್ಧದಷ್ಟು ಮಳೆಯ ನೀರನ್ನು ಈಗಾಗಲೇ ತೆಗೆಯಲಾಗಿದೆ. ಈ ಸಮುಚ್ಚಯದಲ್ಲಿ ನೀರು ಹಾಗೂ ವಿದ್ಯುತ್ ಸರಬರಾಜು ಇಲ್ಲದೆ ತೊಂದರೆಯಾಗುತ್ತಿದ್ದು, ಇಲ್ಲಿನ ನಿವಾಸಿಗಳನ್ನು ಸ್ಥಳಾಂತರಗೊಳಿಸಿ ಖಾಸಗಿ ಹೋಟೆಲ್‌ಗಳಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಿದ್ದೇವೆ. ಇದಕ್ಕೆ ಬಿಬಿಎಂಪಿ ಹಾಗೂ ಸಂಘ ಸಂಸ್ಥೆಗಳು ಸಹಕಾರ ನೀಡುತ್ತಿದ್ದು, ಮಳೆಯಿಂದ ಆಗುವ ತೊಂದರೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ನಮ್ಮ ಸರ್ಕಾರ ಕ್ರಮಕೈಗೊಳ್ಳಲಿದೆ ಎಂದು ತಿಳಿಸಿದರು.