Friday, 20th December 2024

Siddaganga Mutt: ಸಿದ್ದಗಂಗಾ ಮಠಕ್ಕೆ ನೀಡಿದ್ದ 70 ಲಕ್ಷ ರೂ. ವಿದ್ಯುತ್ ಬಿಲ್ ವಾಪಸ್: ಎಂ.ಬಿ.ಪಾಟೀಲ್‌

Siddaganga Mutt

ತುಮಕೂರು: ಸಿದ್ದಗಂಗಾ ಮಠಕ್ಕೆ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ಕೊಟ್ಟಿದ್ದ 70 ಲಕ್ಷ ರೂ. ವಿದ್ಯುತ್ ಬಿಲ್ ನೋಟಿಸ್ ಅನ್ನು ರಾಜ್ಯ ಸರ್ಕಾರ ವಾಪಸ್ ಪಡೆಯಲು ನಿರ್ಧರಿಸಿದೆ. ಬೆಳಗಾವಿಯಲ್ಲಿ ಗುರುವಾರ ನಡೆದ ವಿಧಾನಮಂಡಲದ ಜಂಟಿ ಅಧಿವೇಶನದಲ್ಲಿ ಮಾತನಾಡಿದ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಅವರು ನೋಟಿಸ್ ಹಿಂಪಡೆಯುವುದಾಗಿ ಸ್ಪಷ್ಟಪಡಿಸಿದರು.

ಸಿದ್ದಗಂಗಾ ಮಠದ ಮೇಲೆ ನಮಗೆ ಅಪಾರ ಗೌರವವಿದೆ. ಏಪ್ರಿಲ್‌ನಲ್ಲಿ ಕೊಟ್ಟ ನೋಟಿಸ್ ಇದಾಗಿದೆ. ಮಠ ನೀರು ಬಳಸಿಕೊಂಡಿಲ್ಲ. ನೀರು ಬಳಸದಿದ್ದರೂ ಮಠಕ್ಕೆ ನೋಟಿಸ್ ನೀಡಿದರೆ ಸಂಬಂಧಪಟ್ಟ ಅಧಿಕಾರಿಯನ್ನು ಅಮಾನತು ಮಾಡುತ್ತೇವೆ, ಮುಂದಿನ ದಿನಗಳಲ್ಲಿ ಮಠಕ್ಕೆ ಉಚಿತವಾಗಿ ನೀರು ಕೊಡುತ್ತೇವೆ. ಕೆಐಎಡಿಬಿಯ ಸಿಇಒ ಮತ್ತು ನಾನು ಈ ಬಗ್ಗೆ ಮಠದ ಸ್ವಾಮೀಜಿಗಳೊಂದಿಗೆ ಮಾತನಾಡುತ್ತೇವೆ. ಕೆಐಎಡಿಬಿ ವ್ಯಾಪ್ತಿಯಲ್ಲಿರುವ ಕೆರೆಯ ನೀರನ್ನು ಬಳಸುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಹೇಳಿದರು.

ಸಿದ್ಧಗಂಗಾ ಮಠಕ್ಕೆ ಜಾರಿಯಾದ ವಿದ್ಯುತ್ ಬಿಲ್ ಕುರಿತು ಬಿಜೆಪಿ ನಾಯಕರು ಸರ್ಕಾರದ ವಿರುದ್ಧ ಕಿಡಿಕಾರಿದ್ದರು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸರ್ಕಾರ ಮಠಕ್ಕೆ ನೋಟಿಸ್ ಜಾರಿ ಮಾಡಿದೆ ಎಂದು ಟೀಕಿಸಿದ್ದರು. ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ಮಾತನಾಡಿ, ವಕ್ಫ್ ಮಂಡಳಿ ಹೆಸರಿನಲ್ಲಿ ಮಠ-ಮಂದಿರಗಳ ಆಸ್ತಿಗಳಿಗೆ ನೋಟಿಸ್ ಕಳುಹಿಸಿದ್ದಾಯ್ತು, ಈಗ ಸರ್ಕಾರಿ ನೀರಾವರಿ ಯೋಜನೆಗೆ ಕೆಐಎಡಿಬಿ ಬಳಸಿದ ಬರೊಬ್ಬರಿ 70 ಲಕ್ಷ ರೂ. ವಿದ್ಯುತ್ ಬಿಲ್‌ನ್ನು ಸಿದ್ದಗಂಗಾ ಮಠ ಭರಿಸುವಂತೆ ಕೆಐಎಡಿಬಿ (KIADB) ಮಠಕ್ಕೆ ಪತ್ರ ಬರೆದಿದೆ. ಹಿಂದೂಗಳ ಮಠ-ಮಾನ್ಯಗಳು, ದೇವಸ್ಥಾನಗಳು ಅಂದರೆ ಕಾಂಗ್ರೆಸ್ ಪಕ್ಷಕ್ಕೆ ಯಾಕಿಷ್ಟು ದ್ವೇಷ? ಎಂದು ಪ್ರಶ್ನಿಸಿದ್ದರು.

ಸದ್ಯ ನಮ್ಮ ಆರ್ಥಿಕ ಪರಿಸ್ಥಿತಿ ಸರಿ ಇಲ್ಲ. ಹಾಗಾಗಿ ನೀರಾವರಿ ಯೋಜನೆಯ ವಿದ್ಯುತ್‌ ಬಿಲ್‌ 70 ಲಕ್ಷ ರೂ. ಪಾವತಿಸಿ ಎಂದು ಸಿದ್ದಗಂಗಾ ಮಠಕ್ಕೆ ಕೆಐಎಡಿಬಿ ಪತ್ರ ಬರೆದಿತ್ತು. ಅಲ್ಲದೆ ಮೌಖಿಕವಾಗಿ ಬಿಲ್‌ ಪಾವತಿಸಿ ಎಂದು ಮಂಡಳಿ ಅಧಿಕಾರಿಗಳು ಮಠಕ್ಕೆ ಸೂಚನೆ ನೀಡಿದ್ದರು. ಮಂಡಳಿಯ ಆರ್ಥಿಕ ಪರಿಸ್ಥಿತಿಯು ಸುಸ್ಥಿತಿಯಲ್ಲಿ ಇಲ್ಲದೇ ಇರುವುದರಿಂದ ನೀರಾವರಿ ಯೋಜನೆಯೊಂದರ ವಿದ್ಯುತ್ ಬಿಲ್‌ ಅನ್ನು ನೀವು ಭರಿಸಲು ಕೋರಲಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿತ್ತು. ಬರೋಬ್ಬರಿ 70.31 ಲಕ್ಷ ರೂ. ವಿದ್ಯುತ್ ಬಿಲ್ ಪಾವತಿಸಬೇಕು ಎಂದು ಇದರಲ್ಲಿ ಹೇಳಲಾಗಿತ್ತು. ಮಠಕ್ಕೆ ನೀಡಿದ ಹಿನ್ನೆಲೆಯಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ನೋಟಿಸ್‌ ವಾಪಸ್‌ ಪಡೆಯುವುದಾಗಿ ಸಚಿವರು ತಿಳಿಸಿದ್ದಾರೆ.

ಈ ಸುದ್ದಿಯನ್ನೂ ಓದಿ | Mohan Bhagwat: ಮಂದಿರ-ಮಸೀದಿ ವಿವಾದಕ್ಕೆ ಕಿಚ್ಚು ಹಚ್ಚಿ ಹಿಂದೂ ನಾಯಕರಾಗಲು ಯತ್ನ; ಮೋಹನ್‌ ಭಾಗವತ್‌ ಅಚ್ಚರಿಯ ಹೇಳಿಕೆ