Wednesday, 30th October 2024

ಜಿಎಸ್‌ಟಿಯಂತೆಯೇ ಜುಟ್ಟು ಕೊಡೋದ್ಯಾಕೆ?

ಎಪಿಎಂಸಿ ಕಾಯಿದೆ ಜಾರಿಗೆ ಸಿದ್ದರಾಮಯ್ಯ ಆಕ್ರೋಶ ರೈತರನ್ನು ಗುಲಾಮರನ್ನಾಗಿಸುವ ಹುನ್ನಾರವೇಕೆ ಎಂದು ಪ್ರಶ್ನೆ
ವಿಶ್ವವಾಣಿ ಸುದ್ದಿಮನೆ
ಬೆಂಗಳೂರು
ಎಪಿಎಂಸಿ ಕಾಯಿದೆ ರೂಪಿಸುವ ಮೂಲಕ ಕೇಂದ್ರ ಸರಕಾರದ ಹೇರಿಕೆಯನ್ನು ನೀವು ಒಪ್ಪಲು ಮುಂದಾಗಿದ್ದೀರಿ, ಇದು ಮತ್ತೊೊಂದು ಜಿಎಸ್‌ಟಿ ಪರಿಸ್ಥಿತಿ ಆಗಲಿದ್ದು, ನಮ್ಮ ಜುಟ್ಟನ್ನು ಅವರ ಕೈಗೆ ಕೊಡುವುದೇಕೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ನಡೆದ ಎಪಿಎಂಸಿ ತಿದ್ದುಪಡಿ ಕಾಯಿದೆ ಮೇಲಿನ ಚರ್ಚೆ ಸಂದರ್ಭದಲ್ಲಿ ಮಾತನಾಡಿ, ಕಾಯಿದೆ ಜಾರಿಗೊಳಿಸಿ ವರದಿ ನೀಡುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಂದ ಪತ್ರ ಬಂದಿದೆ. ಇದಕ್ಕೆ ನೀವು ತರಾತುರಿಯಲ್ಲಿ ಕಾಯಿದೆ ಜಾರಿಗೊಳಿಸಲು ತೀರ್ಮಾನಿಸಿದ್ದೀರಿ. ಆ ಮೂಲಕ ರೈತರನ್ನು ಗುಲಾಮರನ್ನಾಗಿಸುವ ಕೆಲಸ ಏಕೆ ಎಂದರು.

ಹಿಂದೆ ಜಿಎಸ್‌ಟಿ ಜಾರಿ ಮಾಡಿದಾಗಲೂ ಇದೇ ಪರಿಸ್ಥಿತಿ ಆಗಿತ್ತು. ನಾವು ವ್ಯಾಟ್ ತೆರಿಗೆ ಮೂಲಕ ರಾಜ್ಯದಲ್ಲಿಯೇ ಆದಾಯ ಸಂಗ್ರಹ ಮಾಡುತ್ತಿದ್ದೆವು. ದೇಶಾದ್ಯಂತ ಒಂದೇ ತೆರಿಗೆ ಪದ್ಧತಿ ತರುತ್ತೇವೆ ಎಂದು ಜಿಎಸ್‌ಟಿ ಜಾರಿಗೆ ತಂದರು. ಜತೆಗೆ ಜಿಎಸ್‌ಟಿ ಹಿಂಬಾಕಿಯನ್ನು ಆಯಾ ರಾಜ್ಯಗಳಿಗೆ ವಾಪಸ್ ಕೊಡುತ್ತೇವೆ ಎಂದು ಭರವಸೆ ನೀಡಿದರು. ಆದರೆ, ಈಗ ಆಗಿರುವುದು ಏನು ಎಂದು ಪ್ರಶ್ನಿಸಿದರು.

ಕೊಟ್ಯಂತರ ರುಪಾಯಿ ಜಿಎಸ್‌ಟಿ ಬಾಕಿಯನ್ನು ಕೇಂದ್ರ ಸರಕಾರ ಉಳಿಸಿಕೊಂಡಿದೆ. ಅದನ್ನು ಕೇಳಲು ರಾಜ್ಯ ಸರಕಾರ ಮತ್ತು ಬಿಜೆಪಿ ಸಂಸದರು ವಿಫಲರಾಗಿದ್ದಾರೆ. ಕೇಂದ್ರ ಸರಕಾರ ಜಿಎಸ್‌ಟಿ ಕೊಡಲು ಸಾಧ್ಯವಿಲ್ಲ. ನೀವೆ ಆರ್‌ಬಿಐನಲ್ಲಿ ಸಾಲ ಪಡೆದುಕೊಳ್ಳಿ ಎಂದು ಸಲಹೆ ನೀಡುತ್ತಾರೆ. ನಮ್ಮ ತೆರಿಗೆ ಹಣವನ್ನು ಕೇಂದ್ರಕ್ಕೆ ಕೊಟ್ಟು ನಾವು ಅವರ ಮುಂದೆ ಭಿಕ್ಷೆ ಬೇಡುವುದು ಎಷ್ಟು ಸರಿ, ನಮ್ಮ ಜುಟ್ಟನ್ನು ಅವರ ಕೈಗೆ ಕೊಡುವ ಕಾನೂನು ತರುವ ತರಾತುರಿ ನಿಮಗೇಕೆ ಎಂದು ಗುಡುಗಿದರು.

ಎಪಿಎಂಸಿಗಳಿಂದ ಸರಕಾರಕ್ಕೆ ಈಗ 600 ಕೋಟಿ ಆದಾಯ ಬರುತ್ತದೆ. ಇದನ್ನು ಖಾಸಗಿ ಅವರು ನಿಮಗೆ ಕೊಡುತ್ತಾರಾ? ನೀವು ಕಾಯಿದೆಯಲ್ಲಿ ಹೇಳಿರುವಂತೆ ಖಾಸಗಿ ಕಂಪನಿಗಳು ಮಾರುಕಟ್ಟೆ ತೆರೆದರೆ ರೈತರಿಗೆ ನೈಜ ಬೆಲೆ ನೀಡುತ್ತಾರಾ? ರೈತರನ್ನು ಖಾಸಗಿ ಕಂಪನಿಗಳು ಗೌರವದಿಂದ ನೋಡಿಕೊಳ್ಳುತ್ತಾರಾ?ಎಪಿಎಂಸಿ ಮೂಲಕವೇ ರೈತರಿಗೆ ಉತ್ತಮ ಬೆಲೆ ಸಿಗುವಂತೆ ಮಾಡುವುದು ಸೇರಿದಂತೆ ಅನೇಕ ಕೆಲಸಗಳನ್ನು ಮಾಡಬಹುದಿತ್ತು. ಅದನ್ನು ಬಿಟ್ಟು ಕೇಂದ್ರದ ತಾಳಕ್ಕೆ ಕುಣಿದು ಕಾಯಿದೆ ಜಾರಿ ಏಕೆ ಎಂದರು.

ಇದಕ್ಕೆ ಉತ್ತರ ನೀಡಿದ ಸಹಕಾರ ಸಚಿವ ಎಸ್.ಟಿ ಸೋಮಶೇಖರ್, ರಾಜ್ಯದಲ್ಲಿ 162 ಎಪಿಎಂಸಿಗಳಿದ್ದು, ರೈತರು ಬೆಳೆದ ಬೆಳೆಗಳನ್ನು ಎಪಿಎಂಸಿ ಒಳಗಡೆ ಮಾರಾಟ ಮಾಡುವ ಕಾನೂನು ಜಾರಿಯಲ್ಲಿದೆ. ಅದಕ್ಕೆ ತಿದ್ದುಪಡಿ ತಂದು ಎಪಿಎಂಸಿ ಒಳಗಡೆ ಹಾಗೂ ಹೊರಗೆ, ಹೊಲದಲ್ಲಿ ಬೆಳೆ ಮಾರಾಟ ಮಾಡಲು ಅವಕಾಶ ಕಲ್ಪಿಸಲಾಗಿದೆ. ರೈತರು ಬೆಳೆದ ಬೆಳೆ ಅವರ ಹಕ್ಕು. ಅವರು ಎಲ್ಲಿ ಬೇಕಾದರೂ ಮಾರಾಟ ಮಾಡಬಹುದು. ಅಲ್ಲದೆ, ಎಪಿಎಂಸಿ ಹೊರಗಡೆ ಉತ್ಪನ್ನ ಮಾರಾಟ ಮಾಡಿದರೆ ಅವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿ, ದಂಡ ಹಾಕುವ ನಿಯಮ ಕೈ ಬಿಡುತ್ತಿದ್ದೇವೆ. ರೈತ ಮುಖಂಡರು, ಮಾಜಿ ಸಹಕಾರ ಸಚಿವರು, ಇತರ ಮುಖಂಡರ ಜತೆ ಚರ್ಚಿಸಿ, ಈ ತಿದ್ದುಪಡಿ ತರಲಾಗಿದೆ. ರೈತರಿಗೆ ಇದರಿಂದ ಯಾವುದೆ ಅನ್ಯಾಯವಾಗುವುದಿಲ್ಲ ಎಂದು ಸಮರ್ಥನೆ ಮಾಡಿಕೊಂಡರು.

ಕಾಂಗ್ರೆಸ್-ಜೆಡಿಎಸ್ ಸಭಾತ್ಯಾಗ
ವಿಧೇಯಕ ವಿರೋಧಿಸಿ ಕಾಂಗ್ರೆಸ್-ಜೆಡಿಎಸ್ ಸದಸ್ಯರು ಸಭಾತ್ಯಾಗ ಮಾಡಿದರು. ಮಾಜಿ ಸಿಎಂ ಕುಮಾರಸ್ವಾಮಿ ಮಾತನಾಡಿ, ಕೇಂದ್ರ ಸರಕಾರದಿಂದ ರಾಜ್ಯ ಸರಕಾರಗಳ ಅಧಿಕಾರ ಮೊಟಕುಗೊಳಿಸುವ ಪ್ರಯತ್ನ ನಡೆಯುತ್ತಿದೆ. ರಾಜ್ಯ ಸರಕಾರ ಜಿಎಸ್‌ಟಿಗೆ ಒಪ್ಪಿಗೆ ನೀಡುವಾಗಲೆ ಹೇಳಿದ್ದೆ, ಇದು ನಮ್ಮ ಕುತ್ತಿಗೆ ಅವರ ಕೈಗೆ ನೀಡಿ, ಹಗ್ಗನೂ ಕೊಟ್ಟು, ನೇಣು ಹಾಕಿಸಿಕೊಳ್ಳುವಂತಾಗಿದೆ’ಎಂದು. ಅದೇ ರೀತಿ ಈ ವಿಧೇಯಕವು ರೈತರ ಪಾಲಿಗೆ ಕಂಟಕವಾಗಲಿದೆ ಎಂದು ಅವರು ತಿಳಿಸಿದರು. ಈ ಸಂಬಂಧ ಎರಡು ಪಕ್ಷದ ಸದಸ್ಯರು ವಿರೋಧ ವ್ಯಕ್ತಪಡಿಸಿ ಸಭಾತ್ಯಾಗ ಮಾಡಿದರು.

2010ರಲ್ಲಿ ಬಿಹಾರದಲ್ಲಿ ಇದೇ ರೀತಿ ಎಪಿಎಂಸಿಗಳನ್ನು ಮುಕ್ತ ಮಾಡಿದರು. ಆದರೆ,ಇವತ್ತು ರೈತರು ಅಲ್ಲಿ ಸಂಕಷ್ಟಕ್ಕೆ ಸಿಲುಕಿದ್ದಾರೆ.ರೈತರನ್ನು ಕೂಲಿ ಕಾರ್ಮಿಕರನ್ನಾಗಿ ಮಾಡುವ ಪ್ರಯತ್ನ ಈ ವಿಧೇಯಕದಲ್ಲಿದೆ.
– ಶರತ್ ಬಚ್ಚೇಗೌಡ, ಹೊಸಕೋಟೆ ಶಾಸಕ