ದಾವಣಗೆರೆ: ಮೂರು ವರ್ಷಗಳ ಹಿಂದೆ ತಮ್ಮ 75ನೇ ಹುಟ್ಟುಹಬ್ಬದ ಹಿನ್ನಲೆ ಸಿಎಂ ಸಿದ್ದರಾಮಯ್ಯ(Siddaramaiah) ಅವರು ದಾವಣಗೆರೆಯಲ್ಲಿ ಅದ್ದೂರಿ ಸಿದ್ದರಾಮೋತ್ಸವ ಮಾಡಿ ಸ್ವಪಕ್ಷ ಮತ್ತು ವಿರೋಧ ಪಕ್ಷದವರ ಎದುರು ಶಕ್ತಿ ಪ್ರದರ್ಶನ ಮಾಡಿದ್ದರು. ಆದರೆ ಇದೀಗ ಮತ್ತೆ ಸಿಎಂ ಸಿದ್ದರಾಮಯ್ಯ ಇಂಥಹದ್ದೇ ಒಂದು ಪ್ರಯತ್ನಕ್ಕೆ ಮುಂದಾದಂತೆ ತೋರುತ್ತಿದೆ. ಇಂದು ದಾವಣಗೆರೆಯಲ್ಲಿ ಆಯೋಜನೆಗೊಂಡಿರುವ ಶೋಷಿತರ ಸಮಾವೇಶದಲ್ಲಿ ಸಿದ್ಧರಾಮಯ್ಯ ಭಾಗಿಯಾಗಲಿದ್ದಾರೆ.
ಮಧ್ಯಾಹ್ನ 1 ಗಂಟೆಗೆ ಹೈಸ್ಕೂಲ್ ಮೈದಾನದಲ್ಲಿ ದಾವಣಗೆರೆ ಕುರುಬ ಸಮಾಜ ಹಾಗೂ ಅಭಿಮಾನಿ ಬಳಗದಿಂದ ಆಯೋಜಿಸಿರುವ 537 ನೇ ದಾಸಶ್ರೇಷ್ಟ ಶ್ರೀ ಕನಕದಾಸರ ಜಯಂತ್ಯೋತ್ಸವ ಸಮಾರಂಭ ಹಾಗೂ ಶೋಷಿತರ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಈ ಮೂಲಕ ಸಿದ್ದರಾಮೋತ್ಸದ ಬಳಿಕ ಸಿಎಂ ಸಿದ್ದರಾಮಯ್ಯ ಮತ್ತೊಮ್ಮೆ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ.
ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯಿಂದ ಇಂದು ಮತ್ತು ನಾಳೆ ರಾಜ್ಯ ಮಟ್ಟದ ಯುವಜನೋತ್ಸವವನ್ನು ಏರ್ಪಡಿಸಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಬೆಳಗ್ಗೆ 11.30ಕ್ಕೆ ಎಂಬಿಎ ಮೈದಾನದಲ್ಲಿನ ಪ್ರಧಾನ ವೇದಿಕೆಯಲ್ಲಿ ಕಾರ್ಯಕ್ರಮ ಉದ್ಘಾಟಿಸುವರು.
ಬೆಳಗ್ಗೆ 11 ಗಂಟೆಗೆ ಹೆಲಿಕ್ಯಾಪ್ಟರ್ ಮೂಲಕ ದಾವಣಗೆರೆ ಬಾಪೂಜಿ ಎಂಬಿಎ ಮೈದಾನಕ್ಕೆ ಆಗಮಿಸುವರು. ನಂತರ ಬೆಳಗ್ಗೆ 11.30 ಕ್ಕೆ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯಿಂದ ಎಂಬಿಎ ಮೈದಾನದಲ್ಲಿ ಆಯೋಜಿಸಿರುವ ರಾಜ್ಯ ಮಟ್ಟದ ಯುವಜನೋತ್ಸವ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.
2022ರಲ್ಲಿ ನಡೆದಿತ್ತು ಅದ್ದೂರಿ ಸಿದ್ದರಾಮೋತ್ಸವ
ಸಿಎಂ ಸಿದ್ದರಾಮಯ್ಯ ಅವರ ಎಪ್ಪತೈದನೇ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ 2022ರಲ್ಲಿ ಬೆಣ್ಣೆ ನಗರಿ ದಾವಣಗೆರೆಯಲ್ಲಿ ಆಯೋಜಿಸಲಾಗಿದ್ದ ಸಿದ್ದರಾಮೋತ್ಸವ ನಿರೀಕ್ಷೆಗೂ ಮೀರಿ ಯಶಸ್ಸು ಕಂಡಿತ್ತು. ದಾವಣಗೆರೆಯಲ್ಲಿ ನಡೆದ ಈ ಕಾರ್ಯಕ್ರಮಕ್ಕೆ ಜನಸಾಗರವೇ ಸೇರಿತ್ತು. ಒಂದು ಅರ್ಥದಲ್ಲಿ ಇದು ಸಿದ್ದಾಮಯ್ಯ ಅವರ ಶಕ್ತಿ ಪ್ರದರ್ಶನವೇ ಆಗಿತ್ತು. ರಾಜಕೀಯದಲ್ಲಿ ಶಕ್ತಿ ಪ್ರದರ್ಶನವು ಮುಖ್ಯ. ಬಲವಂತ ಮಾತ್ರ ರಾಜಕೀಯ ರಂಗದಲ್ಲಿ ಬದುಕುಳಿಯಲು ಸಾಧ್ಯ. ಹೀಗಾಗಿಯೇ ಸಿದ್ದರಾಮಯ್ಯ ಮತ್ತೊಮ್ಮೆ ಈ ಪ್ರಯತ್ನಕ್ಕೆ ಕೈ ಹಾಕಿದ್ದಾರೆ ಎಂಬ ಚರ್ಚೆ ರಾಜಕೀಯ ವಲಯದಲ್ಲಿದೆ.
ಈ ಸುದ್ದಿಯನ್ನೂ ಓದಿ: Gruhalakshmi Scheme: ಗೃಹಲಕ್ಷ್ಮೀ ಯೋಜನೆಯ ಸದುಪಯೋಗ; ಸಿಎಂ ಸಿದ್ದರಾಮಯ್ಯ ಸಂತಸ