Thursday, 12th December 2024

ಸದ್ದಿಲದೇ ಆಗುತ್ತಿದೆ ವರ್ಗಾವಣೆ

ಸಾಮಾನ್ಯ ವರ್ಗಾವಣೆ ಇಲ್ಲದಿದ್ದರೂ, ಇದಕ್ಕೆ ಕೊನೆಯಿಲ್ಲ 

ಕಂದಾಯ, ಗೃಹ ಇಲಾಖೆಯಲ್ಲಿ ಈ ಪ್ರಕ್ರಿಯೆ

ಕೃಷಿ ಇಲಾಖೆಯಲ್ಲೂ ಸಜ್ಜಾಗಿರುವ ಲಿಸ್ಟ್

ವಿಶೇಷ ವರದಿ: ರಂಜಿತ್ ಎಚ್. ಅಶ್ವತ್ಥ ಬೆಂಗಳೂರು

ಒಂದೆಡೆ ಕರೋನಾ ಕಾರಣಕ್ಕೆ ಕಳೆದ ಎರಡು ವರ್ಷದಿಂದ ಸಾಮಾನ್ಯ ವರ್ಗಾವಣೆ ಮಾಡುವುದಕ್ಕೆ ಸರಕಾರ ಬ್ರೇಕ್ ಹಾಕಿದ್ದರೆ, ಇನ್ನೊಂದೆಡೆ ತುರ್ತು ವರ್ಗಾವಣೆಯ ನೆಪದಲ್ಲಿ ಸಾಲು ಸಾಲು ವರ್ಗಾವಣೆಯಾಗುತ್ತಿರುವುದು ವಿವಾದಕ್ಕೆ ಕಾರಣವಾಗಿದೆ.

2020-21, 2021-22ರ ಅವಧಿಯಲ್ಲಿ ವಿವಿಧ ಇಲಾಖೆಯಲ್ಲಿ ಆಗಬೇಕಿದ್ದ ಸಾಮಾನ್ಯ ವರ್ಗಾವಣೆಗೆ ಸರಕಾರ ರೆಡ್ ಸಿಗ್ನಲ್ ನೀಡಿತ್ತು. ಈ ಬಾರಿ ಸಾಮಾನ್ಯ ವರ್ಗಾವಣೆಗೆ ಅವಕಾಶ ನೀಡಬೇಕು ಎಂದು ಮುಖ್ಯಮಂತ್ರಿ ಮೇಲೆ ಹಲವು ಸಚಿವರು ಒತ್ತಡ ಹೇರಿದರೂ, ಅದಕ್ಕೆ ಒಪ್ಪಿಗೆ ನೀಡಿರಲಿಲ್ಲ. ಆದರೆ, ಕಳೆದ ಎರಡು ದಿನದಲ್ಲಿ ಗೃಹ ಇಲಾಖೆ ಹಾಗೂ ಕಂದಾಯ ಇಲಾಖೆಯಲ್ಲಿ ನೂರಕ್ಕೂ ಹೆಚ್ಚು ಅಧಿಕಾರಿಗಳ ವರ್ಗಾವಣೆಯಾಗಿದೆ.

ಅದರಲ್ಲಿಯೂ ಕಂದಾಯ ಇಲಾಖೆಯಲ್ಲಿ ಬಡ್ತಿ ಹಾಗೂ ವರ್ಗಾವಣೆಯ ನೆಪದಲ್ಲಿ ಹೆಚ್ಚು ವರ್ಗಾವಣೆ ಮಾಡಲಾಗಿದೆ. ಇದೇ ರೀತಿ ಎಸ್‌ಐ ಹಂತದ ಹಲವು
ಅಧಿಕಾರಿಗಳನ್ನು ಗೃಹ ಇಲಾಖೆ ವರ್ಗಾವಣೆ ಮಾಡಿದೆ. ತುರ್ತು ಪರಿಸ್ಥಿತಿ ಹೊರತು ಇನ್ಯಾವ ಸಮಯದಲ್ಲಿಯೂ ವರ್ಗಾವಣೆಗೆ ಅವಕಾಶ ನೀಡಿರುವುದು ಭಾರಿ ಚರ್ಚೆಗೆ ಗ್ರಾಸವಾಗಿದೆ.

ಗೃಹ ಹಾಗೂ ಕಂದಾಯ ಇಲಾಖೆಯಿಂದ ಶುರುವಾಗಿರುವ ವರ್ಗಾವಣೆ ಪರ್ವ, ಶೀಘ್ರದಲ್ಲಿಯೇ ಇತರ ಇಲಾಖೆಗಳಿಗೂ ಮುಂದುವರಿಲಿದೆ. ಈಗಾಗಲೇ ಕೃಷಿ ಇಲಾಖೆಯಲ್ಲಿ ವರ್ಗಾವಣೆಗೆ ಸಿದ್ಧತೆ ನಡೆಸಿಕೊಂಡಿದ್ದು, ಸಿಎಂ ಒಪ್ಪಿಗೆ ಪಡೆದು ವರ್ಗಾವಣೆ ಮಾಡುವುದು ಬಹುತೇಕ ಖಚಿತ ಎನ್ನುವ ಮಾತುಗಳು ಕೇಳಿಬಂದಿವೆ.

ಅಧಿಕೃತವಾಗಿ ನಡೆಯಲಿದೆ ಶಿಕ್ಷಕರ ವರ್ಗಾವಣೆ: ಇತರ ಇಲಾಖೆಯಲ್ಲಿ ತುರ್ತು ನೆಪದಲ್ಲಿ ವರ್ಗಾವಣೆ ಆಗುತ್ತಿದ್ದರೆ, ಶಿಕ್ಷಣ ಇಲಾಖೆಯಲ್ಲಿ ಶಿಕ್ಷಕರ ವರ್ಗಾವಣೆ ಯನ್ನು ಮಾಡಲು ಇಲಾಖೆ ಸಿದ್ಧತೆ ನಡೆಸಿಕೊಂಡಿದ್ದು, ಈಗಾಗಲೇ ಅರ್ಜಿ ಆಹ್ವಾನಿಸಿದೆ. 2019-2020ರಲ್ಲಿ ಕಡ್ಡಾಯ ಅಥವಾ ಹೆಚ್ಚುವರಿ ವರ್ಗಾವಣೆಗೊಂಡ ಶಿಕ್ಷಕರಿಗೆ ಮೊದಲ ಆದ್ಯತೆ ನೀಡಲು ಇಲಾಖೆ ನಿರ್ಧರಿಸಿದ್ದು, ಈಗಾಗಲೇ ಸ್ವೀಕೃತಗೊಂಡಿರುವ 75000 ಅರ್ಜಿಗಳಿಗೆ ಸಂಬಂಧಿಸಿದಂತೆ ಕೌನ್ಸೆಲಿಂಗ್ ಪ್ರಕ್ರಿಯೆ ಪ್ರಾರಂಭ ಮಾಡಲಾಗುತ್ತದೆ. ಈ ಶಿಕ್ಷಕರನ್ನು ಹೊರತುಪಡಿಸಿ ಹೆಚ್ಚುವರಿಯಾಗಿ ಅರ್ಹರಾಗುವ ಶಿಕ್ಷಕರಿಗೂ ಎರಡನೇ ಹಂತದ ಅವಕಾಶ ಕಲ್ಪಿಸಲು ನಿರ್ಧರಿಸ ಲಾಗಿದೆ.

ವರ್ಗಾವಣೆಯಿಂದ ಸಮಸ್ಯೆ 
ಗೃಹ ಹಾಗೂ ಕಂದಾಯ ಇಲಾಖೆಯ ಸಿಬ್ಬಂದಿ ಕರೋನಾ ಕೆಲಸದಲ್ಲಿ ನಿರತರಾಗಿದ್ದಾರೆ. ಮೂರನೇ ಹಂತದ ಆತಂಕದಲ್ಲಿ ಭಾರಿ ಪ್ರಮಾಣದಲ್ಲಿ ವರ್ಗಾವಣೆ ಮಾಡುವುದರಿಂದ, ಸ್ಥಳೀಯ ಕೆಲಸಕ್ಕೆ ಸಮಸ್ಯೆಯಾಗುತ್ತದೆ. ಅದರಲ್ಲಿಯೂ ತಹಸೀಲ್ದಾರ್ ಮಟ್ಟದ ಅಧಿಕಾರಿಗಳ ವರ್ಗಾವಣೆ ಒಟ್ಟಾರೆ ಕಾರ್ಯದ ಮೇಲೆ ಹೊರೆ ಬೀಳಲಿದೆ ಎನ್ನುವ ಮಾತುಗಳು ಕೇಳಿಬಂದಿವೆ.

ಸಂಪುಟದಲ್ಲಿಯೂ ಚರ್ಚೆ
ಸಾಮಾನ್ಯ ವರ್ಗಾವಣೆಗೆ ಕಳೆದ ಸಚಿವ ಸಂಪುಟದಲ್ಲಿಯೇ ಹಲವು ಸಚಿವರು ಮುಖ್ಯಮಂತ್ರಿಯನ್ನು ಮನವಿ ಮಾಡಿದ್ದರು. ಆದರೆ, ಕರೋನಾ ಸಮಯದಲ್ಲಿ
ಸಾಮಾನ್ಯ ವರ್ಗಾವಣೆ ಬೇಡ. ಒಂದು ವೇಳೆ ಅತ್ಯವಶ್ಯಕವಿದ್ದರೆ ನೇರವಾಗಿ ನನ್ನ ಬಳಿ ಅರ್ಜಿ ಸಲ್ಲಿಸಿ, ಅವರನ್ನು ವರ್ಗಾವಣೆ ಮಾಡಲಾಗುವುದು ಎಂದು ಹೇಳಿದ್ದರು. ಆದರೀಗ ‘ತುರ್ತು’ ನೆಪದಲ್ಲಿಯೇ ಭಾರಿ ವರ್ಗಾವಣೆಯಾಗುತ್ತಿರುವುದು ವಿವಾದಕ್ಕೆ ಕಾರಣವಾಗಿದೆ.