Saturday, 11th January 2025

Sira News: ನಗರಸಭೆಯಿಂದ ಜಮೀನು ಒತ್ತುವರಿ; ವಿಷ ಸೇವಿಸಿ ಆತ್ಮಹತ್ಯೆಗೆ ಇಬ್ಬರ ಯತ್ನ

Sira News

ಶಿರಾ: ಯಾವುದೇ ನೋಟಿಸ್ ನೀಡದೆ ನಗರಸಭೆ ಅಧಿಕಾರಿಗಳು ಜಮೀನನ್ನು ವಶಪಡಿಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿ ಸ್ಥಳದಲ್ಲಿಯೇ ಇಬ್ಬರು ವಿಷ ಸೇವಿಸಿ ಆತ್ಮಹತ್ಯೆಗೆ (Self Harming) ಯತ್ನಿಸಿರುವ ಘಟನೆ (Sira News) ನಗರದಲ್ಲಿ ನಡೆದಿದೆ. ಕಲ್ಲುಕೋಟೆ ಗ್ರಾಮದ ಕಾಂತರಾಜು ಹಾಗೂ ಈತನ ಚಿಕ್ಕಮ್ಮ ಮಾಲಮ್ಮ ಆತ್ಮಹತ್ಯೆಗೆ ಯತ್ನಿಸಿದ್ದು, ಅವರನ್ನು ಮೊದಲು ಶಿರಾ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ತುಮಕೂರು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಏನಿದು ಪ್ರಕರಣ?
ಕಲ್ಲುಕೋಟೆ ಸರ್ವೆ ನಂಬರ್ 118ರಲ್ಲಿ ಸುಮಾರು 40 ವರ್ಷಕ್ಕೂ ಕಾಲ ಉಳುಮೆ ಮಾಡಿಕೊಂಡು ಬರುತ್ತಿದ್ದ ರೈತ ಕುಟುಂಬ ಡಿ. 28ರಿಂದ ಜಮೀನಿನಲ್ಲೇ ಪೆಂಡಾಲ್ ಹಾಕಿಕೊಂಡು, ನಮಗೆ ಬೇರೆ ಕಡೆ ಜಮೀನು ನೀಡಿ ಎಂದು ಆಗ್ರಹಿಸಿ ಅಹೋರಾತ್ರಿ ಪ್ರತಿಭಟನೆಗೆ ಮುಂದಾಗಿದ್ದರು. ಜ.11 ರಂದು ನಗರ ಸಭೆ ಅಧ್ಯಕ್ಷ ಜಿಶಾನ್ ಮೊಹಮ್ಮದ್, ಆಯುಕ್ತ ರುದ್ರೇಶ್ ಹಾಗೂ ನಗರ ಸಭೆ ಅಧಿಕಾರಿ ವರ್ಗದವರು ನಿವೇಶನ ವಿಂಗಡಿಸಲು ಪೊಲೀಸ್ ಬಂದೋಬಸ್ತ್‌ನೊಂದಿಗೆ ಸ್ಥಳಕ್ಕೆ ತೆರಳಿ ರೈತರ ಮನ ಓಲೈಕೆಗೆ ಮುಂದಾಗಿದ್ದಾರೆ. ನಮಗೆ ಬೇರೊಂದು ಕಡೆ ಜಮೀನನ್ನು ಮುಂಜೂರು ಮಾಡಿ ನಂತರ ಈ ಸ್ಥಳದಲ್ಲಿ ನಿವೇಶನ ವಿಂಗಡಿಸಿ ಎಂದು ಪಟ್ಟು ಹಿಡಿದ ರೈತರು ಮತ್ತು ಅಧಿಕಾರಿಗಳ ನಡುವೆ ನಡೆದ ಮಾತಿನ ಚಕಮಕಿ ನಡೆದಿದ್ದು ಮನನೊಂದ ಕಾಂತರಾಜು ಹಾಗೂ ಮಾಲಮ್ಮ ವಿಷ ಸೇವಿಸಿ ಆತ್ಮಹತ್ಯೆಗೆ ಮುಂದಾದರು. ತಕ್ಷಣವೇ ಅವರನ್ನು ಪೊಲೀಸ್ ವಾಹನದಲ್ಲಿ ಶಿರಾ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಆಸ್ಪತ್ರೆಗೆ ಎಂಎಲ್‌ಸಿ ಭೇಟಿ
ವಿಷಯ ತಿಳಿದ ವಿಧಾನ ಪರಿಷತ್ ಸದಸ್ಯ ಚಿದಾನಂದ್ ಎಂ.ಗೌಡ ಕೂಡಲೇ ಆಸ್ಪತ್ರೆಗೆ ಭೇಟಿ ನೀಡಿ, ಆರೋಗ್ಯ ವಿಚಾರಿಸಿದರು. ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಕೇವಲ ಒಬ್ಬರೇ ವೈದ್ಯರು ಲಭ್ಯವಿದ್ದು, ಅವರು ಸಹ ಪೋಸ್ಟ್ ಮಾರ್ಟಮ್ ಹೋಗಿದ್ದರ ಕಾರಣ ಕೇವಲ ದಾದಿಯರು ಚಿಕಿತ್ಸೆ ನೀಡುತ್ತಿದ್ದನ್ನು ಕಂಡು ಸಾವು ಬದುಕಿನ ನಡುವೆ ಹೋರಾಡುತ್ತಿರುವವರನ್ನು ಬದುಕಿಸುವುದನ್ನು ಬಿಟ್ಟು ಪೋಸ್ಟ್ ಮಾರ್ಟಂ ಮಾಡಲು ಹೋಗಿದ್ದರ ಬಗ್ಗೆ ಬೇಸರ ವ್ಯಕ್ತಪಡಿಸಿದರು. ಜಿಲ್ಲೆಯಲ್ಲಿ ಎರಡನೇ ಸ್ಥಾನ ಪಡೆದಿರುವ ಶಿರಾ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಕೇವಲ ಒಬ್ಬರೇ ಫಿಜಿಶಿಯನ್ ವೈದ್ಯರಿದ್ದು, ತುರ್ತು ಸಂದರ್ಭದಲ್ಲಿ ಚಿಕಿತ್ಸೆ ನೀಡಲು ತೊಂದರೆಯಾಗುತ್ತಿದೆ. ಈ ಕೂಡಲೇ ಫಿಜಿಶಿಯನ್ ವೈದ್ಯರನ್ನು ನೇಮಕ ಮಾಡಬೇಕು ಎಂದು ಒತ್ತಾಯಿಸಿದರು.

ಸುಮಾರು 80 ವರ್ಷಗಳಿಂದ ಉಳುಮೆ ಮಾಡಿಕೊಂಡು ಬಂದ ರೈತರ ಜಮೀನನ್ನು ಯಾವುದೇ ನೋಟಿಸ್ ನೀಡದೆ ವಶಕ್ಕೆ ಪಡೆಯುವುದು ಸರಿಯೇ, ಅವರಿಗೆ ಯಾವುದೇ ಪರ್ಯಾಯ ವ್ಯವಸ್ಥೆ ಇಲ್ಲದೆ, ಪರಿಹಾರವನ್ನು ಸಹ ನೀಡದೆ ರೈತ ಕುಟುಂಬದ ವಿರುದ್ಧ ದಬ್ಬಾಳಿಕೆ ನಡೆಸುತ್ತಿರುವುದು ಸರಿಯಲ್ಲ. ನಾವು ರೈತರ ಪರವಾಗಿದ್ದೇವೆ ಎಂದು ದೂರವಾಣಿ ಮೂಲಕ ಚಿತ್ರದುರ್ಗ ಸಂಸದ ಗೋವಿಂದ ಕಾರಜೋಳ ಅವರನ್ನು ಸಂಪರ್ಕಿಸಿ ಘಟನೆಯ ಬಗ್ಗೆ ಚರ್ಚಿಸಿ ಮುಂದಿನ ದಿನಗಳಲ್ಲಿ ರೈತರ ಜೊತೆಗೂಡಿ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದರು.
| ಚಿದಾನಂದ ಎಂ ಗೌಡ, ಎಂಎಲ್ಸಿ

ಸುಮಾರು ವರ್ಷಗಳಿಂದ ಉಳುಮೆ ಮಾಡಿಕೊಂಡು ಬರುತ್ತಿದ್ದೇವೆ. ನಗರಸಭೆ ಅಧಿಕಾರಿಗಳು ಏಕ ಏಕಿ ಯಾವುದೇ ನೋಟಿಸ್ ನೀಡದೆ ವಶಕ್ಕೆ ಪಡೆಯುತ್ತಿರುವುದು ಸರಿಯಲ್ಲ. ನಮಗೆ ನ್ಯಾಯ ಸಿಗಬೇಕು ಅಲ್ಲಿಯವರೆಗು ಹೋರಾಟ ಮಾಡುತ್ತೇವೆ.
| ನಾಗರಾಜಪ್ಪ, ಕಾಂತರಾಜು ಅವರ ಮಾವ

ಸದರಿ ಜಮೀನು ನಗರಸಭೆ ವ್ಯಾಪ್ತಿಗೆ ಬರಲಿದ್ದು ನಗರದಿಂದ 5 ಕಿ.ಮೀ ದೂರವಿರುವುದರಿಂದ ಅಲ್ಲಿ ನಿವೇಶನಗಳನ್ನು ಮಾಡಲು ನಗರಸಭೆ ನಿರ್ಧರಿಸಿದ್ದು ಅದರಂತೆ ಅಲ್ಲಿದ್ದ ರೈತರನ್ನು ಮನವೊಲಿಸಿ ಬೇರೆ ಕಡೆ ಜಮೀನು ನೀಡುವುದಾಗಿ ಹೇಳಿದರೂ ರೈತರು ಕೇಳದೆ ಮಧ್ಯವರ್ತಿಗಳ ಮಾತು ನಂಬಿ ವಿಷ ಸೇವಿಸಿದ್ದಾರೆ. ಕಾನೂನುಬದ್ಧವಾಗಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು.
| ಸಚ್ಚಿದಾನಂದ ಕುಚನೂರು, ತಹಸೀಲ್ದಾರ್, ಶಿರಾ

ಈ ಸುದ್ದಿಯನ್ನೂ ಓದಿ | Jai Hanuman Movie: ರಿಷಬ್‌ ಶೆಟ್ಟಿಗೆ ಕಾನೂನು ಸಂಕಷ್ಟ; ‘ಜೈ ಹನುಮಾನ್‌’ ಚಿತ್ರತಂಡದ ವಿರುದ್ಧ ಕೇಸ್‌ ದಾಖಲು

Leave a Reply

Your email address will not be published. Required fields are marked *