Monday, 23rd December 2024

SM Krishna Death: ಹುಟ್ಟೂರಿಗೆ ಹೊರಟ ಎಸ್‌ಎಂ ಕೃಷ್ಣ ಪಾರ್ಥಿವ ಶರೀರ, ದಾರಿಯುದ್ದಕ್ಕೂ ಅಂತಿಮ ದರ್ಶನ

sm krishna final

ಬೆಂಗಳೂರು: ನಿನ್ನೆ ನಿಧನರಾದ ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ (SM Krishna Death) ಅವರ ಪಾರ್ಥೀವ ಶರೀರದ ಅಂತಿಮಯಾತ್ರೆ ಮಂಡ್ಯ (Mandya News) ಜಿಲ್ಲೆಯ ಮದ್ದೂರಿನ ಅವರ ಹುಟ್ಟೂರು ಸೋಮನಹಳ್ಳಿಯತ್ತ ಬೆಂಗಳೂರಿನ ಸದಾಶಿವನಗರದಿಂದ ಹೊರಟಿದೆ. ದಾರಿಯುದ್ಧಕ್ಕೂ ಸಾರ್ವಜನಿಕರಿಗೆ ತೆರೆದ ವಾಹನದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.

ಮಧ್ಯಾಹ್ನ 3 ಗಂಟೆಗೆ ಸಕಲ ಸರ್ಕಾರಿ ಗೌರವಗಳೊಂದಿಗೆ ಮದ್ದೂರಿನ ಸೋಮನಹಳ್ಳಿಯಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗುತ್ತದೆ. ಬೆಂಗಳೂರಿನ ಟೌನ್ ಹಾಲ್‌ನಿಂದ ಎಸ್ ಎಂ ಕೃಷ್ಣ ಅವರ ಪಾರ್ಥೀವ ಶರೀರ ಮೈಸೂರು ಬ್ಯಾಂಕ್ ಸರ್ಕಲ್, ಕೆ ಆರ್ ಆರ್ಚ್, ಕೆಂಗೇರಿ ದಾಟಿ ಬಿಡದಿ ಮೂಲಕ ಸಾಗಲಿದೆ. ಬೆಳಗ್ಗೆ 10.30ಕ್ಕೆ ಮದ್ಧೂರು ಪಟ್ಟಣವನ್ನು ತಲುಪಲಿದೆ. ರಾಮನಗರ, ಚನ್ನಪಟ್ಟಣದಲ್ಲೂ ಅಭಿಮಾನಿಗಳು, ಹಿತೈಶಿಗಳಿಗೆ ಮಾಜಿ ಸಿಎಂ ಎಸ್ ಎಂ ಕೃಷ್ಣ ಅವರ ಪಾರ್ಥೀವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.

ಮಾಜಿ ಸಿಎಂ ಎಸ್ ಎಂ ಕೃಷ್ಣ ಅವರ ಪಾರ್ಥೀವ ಶರೀರದ ಅಂತ್ಯ ಸಂಸ್ಕಾರಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ದಕ್ಷಿಣ ವಲಯದ ಐಜಿಪಿ ಡಾ.ಬೋರಲಿಂಗಯ್ಯ ನೇತೃತ್ವದಲ್ಲಿ ಬಂದೋಬಸ್ತ್ ಮಾಡಲಾಗಿದೆ. ಬಂದೋಬಸ್ತ್ ಗಾಗಿ ಅಂತ್ಯಕ್ರಿಯೆ ಸ್ಥಳದಲ್ಲಿ ಮಂಡ್ಯ ಜಿಲ್ಲೆಯ ಪೊಲೀಸರಲ್ಲದೇ ಹೊರ ಜಿಲ್ಲೆಗಳಿಂದಲೂ ಒಂದು ಸಾವಿರಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ. ಇಬ್ಬರು ಎಸ್ ಪಿ, ಮೂವರು ಹೆಚ್ಚುವರಿ ಎಸ್ಪಿ ಹಾಗೂ 10 ಡಿವೈಎಸ್ಪಿಗಳನ್ನು ನಿಯೋಜಿಸಲಾಗಿದೆ.

ಇದಲ್ಲದೇ 70 ಪಿಎಸ್ಐ, 700 ಪೊಲೀಸ್ ಸಿಬ್ಬಂದಿ, 6 ಕೆಎಸ್ ಆರ್ ಪಿ, 6 ಡಿಎಎರ್ ತುಕಡಿಯನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ. ದಕ್ಷಿಣ ವಲಯದ ಐಜಿಪಿ ಡಾ.ಬೋರಲಿಂಗಯ್ಯ ಅವರು ಅಂತ್ಯಕ್ರಿಯೆ ಸ್ಥಳದಲ್ಲೇ ಬೀಡು ಬಿಟ್ಟಿದ್ದಾರೆ.

ಇಂದು ಮದ್ದೂರಲ್ಲಿ ಸ್ವಯಂ ಪ್ರೇರಿತ ಬಂದ್

ಕೃಷ್ಣ ಅವರ ನಿಧನದ ಹಿನ್ನಲೆಯಲ್ಲಿ ಮದ್ದೂರು ಪಟ್ಟಣದಲ್ಲಿ ಇಂದು ಸ್ವಯಂ ಪ್ರೇರಿತ ಬಂದ್ ಗೆ ಕರೆ ನೀಡಲಾಗಿದೆ. ಮದ್ದೂರು ಬಂದ್ ಗೆ ವರ್ತಕರು, ಬೀದಿ ಬದಿಯ ವ್ಯಾಪಾರಿಗಳು, ಬಾರ್ ಅಂಡ್ ರೆಸ್ಟೋರೆಂಟ್ ಮಾಲೀಕರ ಸಂಘದಿಂದ ಬೆಂಬಲ ಸೂಚಿಸಲಾಗಿದೆ. ಒಕ್ಕಲಿಗರ ಸಂಘ, ದಲಿತಪರ ಸಂಘಟನೆಗಳೂ ಇಂದಿನ ಮದ್ದೂರು ಬಂದ್ ಗೆ ಬೆಂಬಲ ಸೂಚಿಸಿವೆ. ಇಂದು ಸೋಮನಹಳ್ಳಿಯಲ್ಲಿ ಮಾಜಿ ಸಿಎಂ ಎಸ್ ಎಂ ಕೃಷ್ಣ ಅವರ ಪಾರ್ಥೀವ ಶರೀರದ ಅಂತ್ಯ ಸಂಸ್ಕಾರವನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ಒಕ್ಕಲಿಗರ ಸಂಪ್ರದಾಯದಂತೆ ನೆರವೇರಿಸಲಾಗುತ್ತಿದೆ.

ಇದನ್ನೂ ಓದಿ: SM Krishna Death: ಎಸ್‌.ಎಂ. ಕೃಷ್ಣ ನಿಧನಕ್ಕೆ ರಾಷ್ಟ್ರೀಯ ಸ್ವಯಂಸೇವಕ ಸಂಘ ಸಂತಾಪ