Thursday, 26th December 2024

SM Krishna: ಎಸ್‌.ಎಂ. ಕೃಷ್ಣ ಮದುವೆಯ ಲಗ್ನಪತ್ರಿಕೆ ಹೇಗಿತ್ತು ನೋಡಿ; 58 ವರ್ಷದ ಹಿಂದಿನ ಫೋಟೊ ವೈರಲ್‌

ಬೆಂಗಳೂರು: ಮಾಜಿ ಸಿಎಂ ಎಸ್‌.ಎಂ. ಕೃಷ್ಣ ನಿಧನದ ಬೆನ್ನಲ್ಲಿಯೇ ಅವರ ಬದುಕಿನ ಬಗ್ಗೆ ಎಲ್ಲೂ ಸುದ್ದಿಯಾಗದ ಹಲವು ವಿಚಾರಗಳು ಮುನ್ನೆಲೆಗೆ ಬರುತ್ತಿವೆ. 1966ರಲ್ಲಿ ಎಸ್‌.ಎಂ. ಕೃಷ್ಣ ಅವರು ಪ್ರೇಮಾ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇದೀಗ ಮಾಜಿ ಸಿಎಂ ಅವರ (SM Krishna) ಮದುವೆಯ ಲಗ್ನ ಪತ್ರಿಕೆ ಫೋಟೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ.

58 ವರ್ಷಗಳ ಹಿಂದೆ ಮುದ್ರಣವಾಗಿದ್ದ ಎಸ್‌.ಎಂ. ಕೃಷ್ಣ ಅವರ ಮದುವೆ ಲಗ್ನ ಪತ್ರಿಕೆ ಲಭ್ಯವಾಗಿದೆ. 1996ರ ಏ.29ರಂದು ಶುಕ್ರವಾರ ಬೆಳಗ್ಗೆ 8ರಿಂದ 10 ಗಂಟೆಗೆ ಶಿವಮೊಗ್ಗದ ನ್ಯಾಷನಲ್‌ ಹೈಸ್ಕೂಲ್‌ ಆವರಣದಲ್ಲಿ ನಡೆಯುವ ದಿ.ಎಸ್‌.ಸಿ. ಮಲ್ಲಯ್ಯನವರ ಪುತ್ರ ಎಸ್‌.ಎಂ.ಕೃಷ್ಣ ಮತ್ತು ತೀರ್ಥಹಳ್ಳಿಯ ತಾಲೂಕಿನ ಕುಡುಮಲ್ಲಿಗೆಯ ಕೆ.ಆರ್‌.ಚನ್ನಪ್ಪಗೌಡರ ಪುತ್ರಿ ಪ್ರೇಮಾ ಅವರ ವಿವಾಹಕ್ಕೆ ಸೋಮನಹಳ್ಳಿ ಶ್ರೀ ಎಸ್‌.ಸಿ.ಮಲ್ಲಯ್ಯನವರ ಕುಟುಂಬ ಮತ್ತು ಬಂಧು ವರ್ಗದವರಿಂದ ಆಪ್ತರು, ಸಂಬಂಧಿಕರಿಗೆ ಆಹ್ವಾನ ನೀಡಿರುವುದು ಲಗ್ನಪತ್ರಿಕೆಯಲ್ಲಿದೆ.

ಪ್ರೇಮಾ ಅವರನ್ನು ನೋಡಲು ಹೋದಾಗ ʼನಾನು ಜೈಲಿಗೆ ಹೋಗಬಹುದುʼ ಎಂದಿದ್ರಂತೆ ಕೃಷ್ಣ!

ಬೆಂಗಳೂರು: ಎಸ್‌ಎಂ ಕೃಷ್ಣ (SM Krishna Death) ಅವರದು ಪ್ರೇಮವಿವಾಹ (Love Marriage) ಆಗಿರಲಿಲ್ಲ, ಅವರದು ಅರೇಂಜ್ಡ್‌ ಮ್ಯಾರೇಜ್‌ ಆಗಿತ್ತು. ಪ್ರೇಮಾ (Prema Krishna) ಅವರನ್ನು ಮೊದಲ ಬಾರಿ ನೋಡಲು ಹೋದಾಗ ಕೃಷ್ಣ ಅವರು “ನಾನು ಜೈಲಿಗೂ ಹೋಗುವ ಸಂಭವ ಇದೆ” ಎಂದಿದ್ದರಂತೆ. ಅದು ನಡೆದದ್ದು ಹೀಗೆ:

sm krishna prema

1966ರಲ್ಲಿ ಕೃಷ್ಣ- ಪ್ರೇಮಾ ಮದುವೆ ನಡೆಯಿತು. ಆಗ ಕೃಷ್ಣ ವಿರೋಧ ಪಕ್ಷದಲ್ಲಿದ್ದರು. ಪ್ರೇಮ ಅವರ ಊರು ತೀರ್ಥಹಳ್ಳಿಯ ಬಳಿಯ ಕುಡುಮಲ್ಲಿಗೆ. ಕಡಿದಾಳ್‌ ಮಂಜಪ್ಪ ಅವರ ಹೆಂಡತಿಯ ಅಣ್ಣ, ಪ್ರೇಮಾ ಅವರ ಅಕ್ಕನನ್ನು ಮದುವೆಯಾಗಿದ್ದರು. ಹೀಗೆ ಪ್ರೇಮಾ ಅವರ ಕುಟುಂಬ ಕಡಿದಾಳ್‌ ಮಂಜಪ್ಪನವರ ಕುಟುಂಬದೊಂದಿಗೆ ಸಂಬಂಧ ಹೊಂದಿತ್ತು. ಹೀಗೆ ಎರಡೂ ಕುಟುಂಬಗಳು ಗಂಡು- ಹೆಣ್ಣು ಮೀಟ್‌ ಮಾಡಿಸಲು ನಿರ್ಧರಿಸಿದರು.

ಪ್ರೇಮಾ ಅವರನ್ನು ನೋಡಲು ಕೃಷ್ಣ ಕುಟುಂಬ ಸಮೇತ ಕುಡುಮಲ್ಲಿಗೆಗೆ ಹೋದರು. ಪ್ರೇಮಾ ಅವರು ಅದಕ್ಕೂ ಮೊದಲು ಕೃಷ್ಣ ಅವರನ್ನು ನೋಡಿದ್ದರಂತೆ. ಇಬ್ಬರನ್ನು ಪ್ರತ್ಯೇಕವಾಗಿ ಮಾತನಾಡಲು ಕೂರಿಸಲಾಯಿತು. ಆಗ ಕೃಷ್ಣ, “ನಾನು ರಾಜಕೀಯದಲ್ಲಿದ್ದೇನೆ. ಹೀಗಾಗಿ ನನ್ನನ್ನು ಮದುವೆಯಾದರೆ ನಿನ್ನ ಬದುಕು ಹೂವಿನ ಹಾಸಿಗೆ ಆಗಲಾರದು. ನಾನು ವಿರೋಧ ಪಕ್ಷದಲ್ಲಿದ್ದೇನೆ. ಹೀಗಾಗಿ ಬಂಧನವೂ ಆಗುವ ಸಂಭವ ಇದೆ. ಇದಕ್ಕೆಲ್ಲ ತಯಾರಾಗಿದ್ದರೆ ಮುಂದುವರಿಯಬಹುದು” ಎಂದು ಕೃಷ್ಣ ಹೇಳಿದರಂತೆ.

ಪ್ರೇಮಾ ಅವರು ಇದಕ್ಕೆ ಸಿದ್ಧರಾಗಿದ್ದರಂತೆ. ಪ್ರೇಮಾ “ಓಕೆ” ಎಂದರಂತೆ. ಹೀಗೆ ಇಬ್ಬರಿಗೂ ಒಪ್ಪಿಗೆಯಾಗಿ ಮದುವೆಯೂ ಆಯಿತಂತೆ. “ಪ್ರೇಮಾ ಆರಂಭದಿಂದಲೂ ನನ್ನ ರಾಜಕೀಯ ಬದುಕಿಗೆ ಒತ್ತಾಸೆಯಾಗಿ ನಿಂತಿದ್ದವರು” ಎಂದು ಕೃಷ್ಣ ಒಂದೆಡೆ ನೆನದುಕೊಂಡಿದ್ದಾರೆ.

ಕೆನಡಿ ಅವರ ರಾಜಕೀಯ ಆರಾಧ್ಯ ದೈವ

ಜಾನ್ ಎಫ್ ಕೆನಡಿ ಅಮೆರಿಕದ ಅಧ್ಯಕ್ಷರಾಗಿದ್ದಾಗ ಫುಲ್‌ಬ್ರೈಟ್ ವಿದ್ಯಾರ್ಥಿವೇತನವನ್ನು ಪಡೆಯುವ ಮೂಲಕ ಯುಎಸ್‌ನಲ್ಲಿ ಎಲ್‌ಎಲ್‌ಎಂ ಅಧ್ಯಯನ ಮಾಡಿದವರು ಎಸ್‌ಎಂ ಕೃಷ್ಣ. ಕೆನಡಿಯವರನ್ನು ಯಾವಾಗಲೂ ತಮ್ಮ ರಾಜಕೀಯ ಆದರ್ಶವೆಂದು ಕೃಷ್ಣ ಪರಿಗಣಿಸಿದ್ದರು. ಪ್ರಜಾಸತ್ತಾತ್ಮಕ ತತ್ವಗಳು, ಸಮಾನತೆಯ ಆದರ್ಶಗಳೊಂದಿಗೆ ಜನರೊಂದಿಗೆ ಭಾವನಾತ್ಮಕ ಬಂಧವನ್ನು ಬೆಸೆಯುವ ಕೆನಡಿಯವರ ಶೈಲಿಯಿಂದ ಅವರು ವಿಶೇಷವಾಗಿ ಪ್ರಭಾವಿತರಾಗಿದ್ದರು. 1962ರಲ್ಲಿ ಯುಎಸ್ ಅಧ್ಯಕ್ಷೀಯ ಚುನಾವಣೆ ನಡೆದಾಗ, ಅಮೆರಿಕಕ್ಕೆ ತೆರಳಿ ಭಾರತೀಯರು ವಾಸಿಸುವ ಪ್ರದೇಶಗಳಲ್ಲಿ ಕೆನಡಿ ಪರ ಪ್ರಚಾರ ಮಾಡಿದರು. ಅವರು ತಮ್ಮ ಪ್ರಚಾರದ ಬಗ್ಗೆ ತಿಳಿಸಲು ಕೆನಡಿಗೆ ಪತ್ರವನ್ನು ಸಹ ಕಳುಹಿಸಿದ್ದರು. ಕೆನಡಿಯವರು ಕೃಷ್ಣಗೆ ವೈಯಕ್ತಿಕವಾಗಿ ಪ್ರತ್ಯುತ್ತರ ನೀಡಿ ಅಪಾರ ಧನ್ಯವಾದಗಳನ್ನು ಸಲ್ಲಿಸಿದ್ದರು.

ವಿಗ್‌ ಧರಿಸುತ್ತಿದ್ರಾ?

ಕೃಷ್ಣ ಅವರ ಸೊಗಸಾದ ತಲೆಕೂದಲು ವಿಗ್‌ ಎಂಬುದು ಅವರ ಆಪ್ತವಲಯದಲ್ಲಿ ಕೇಳಿಬರುತ್ತಿದ್ದ ಮಾತು. ಆದರೆ ಕೃಷ್ಣ ಎಂದೂ ಅದು ಇಲ್ಲದೆ ಕಾಣಿಸಿಕೊಂಡವರೇ ಅಲ್ಲ. ಹಲವು ದಶಕಗಳ ಕಾಲ ಅವರು ವಿಗ್‌ ಅನ್ನು ಧರಿಸಿಕೊಂಡೇ ಸಾರ್ವಜನಿಕ ಜೀವನವನ್ನು ನಿರ್ವಹಿಸಿದರು. ಈ ಕುರಿತ ರಹಸ್ಯವನ್ನು ಕಾಪಾಡಿಕೊಂಡರು. ವಿಗ್‌ ಅನ್ನು ಕಾಪಾಡಿಕೊಳ್ಳುವುದು ಕಷ್ಟ ಎಂಬ ಕಾರಣಕ್ಕಾಗಿ, ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಹಾರ ಹಾಕಿಸಿಕೊಳ್ಳುವಾಗ ಜಾಗರೂಕರಾಗಿರುತ್ತಿದ್ದರು. ಮೈಸೂರು ಪೇಟ ಹಾಕಿಸಿಕೊಳ್ಳಲು ಸುತರಾಂ ಒಪ್ಪುತ್ತಿರಲಿಲ್ಲ. ಮುಖ್ಯಮಂತ್ರಿಯಾಗಿದ್ದಾಗ, ಅವರ ವಿಗ್‌ ಅನ್ನು ಒಂದು ರೈತ ಸಂಘಟನೆಯವರು ಎಳೆದುಹಾಕಿ ಪ್ರತಿಭಟನೆ ನಡೆಸುವ ಸಾಧ್ಯತೆ ಇದೆ ಎಂದು ಇಂಟಲಿಜೆನ್ಸ್‌ ಮಾಹಿತಿ ನೀಡಲಾಗಿತ್ತು. ಇದಕ್ಕಾಗಿ ಕೃಷ್ಣ ಅವರಿಗೆ ಹೆಚ್ಚುವರಿ ರಕ್ಷಣೆ ನೀಡಲಾಗಿತ್ತು.

ಇದನ್ನೂ ಓದಿ: SM Krishna Death: ಎಸ್‌ಎಂ ಕೃಷ್ಣ ನಿಧನಕ್ಕೆ ರಾಜ್ಯದಲ್ಲಿ 3 ದಿನ ಶೋಕಾಚರಣೆ, ನಾಳೆ ಶಾಲೆ- ಕಾಲೇಜು- ಕಚೇರಿಗಳಿಗೆ ರಜೆ