Tuesday, 24th December 2024

SM Krishna: ಮಾಜಿ ಮುಖ್ಯಮಂತ್ರಿ, ಮಾಜಿ ವಿದೇಶಾಂಗ ಮಂತ್ರಿ ಎಸ್‌ ಎಂ ಕೃಷ್ಣ ಇನ್ನಿಲ್ಲ

ಬೆಂಗಳೂರು: ಮಾಜಿ ವಿದೇಶಾಂಗ ಸಚಿವ, ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಸ್​ಎಂ ಕೃಷ್ಣ (SM Krishna) ಬೆಂಗಳೂರಿನ ಸದಾಶಿವನಗರದ ನಿವಾಸದಲ್ಲಿ ಇಂದು (ಡಿಸೆಂಬರ್​ 10) ನಸುಕಿನ ಜಾವ 2:30ರ ಸುಮಾರಿಗೆ ನಿಧನರಾದರು. ಅವರಿಗೆ 92 ವರ್ಷ ವಯಸ್ಸಾಗಿತ್ತು.

ಕರ್ನಾಟಕದ ಹಿರಿಯ ರಾಜಕಾರಣಿಗಳಲ್ಲೊಬ್ಬರು. 1999 ರಿಂದ 2004 ರವರೆಗೆ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳಾಗಿದ್ದರು. ಮಹಾರಾಷ್ಟ್ರ ರಾಜ್ಯದ ಮಾಜಿ ರಾಜ್ಯಪಾಲರಾದ ಇವರು, ಕೇಂದ್ರ ವಿದೇಶಾಂಗ ಸಚಿವರಾಗಿಯೂ ಸಹ ಕಾರ್ಯ ನಿರ್ವಹಿಸಿದ್ದಾರೆ.

ಕರ್ನಾಟಕದ ಅತ್ಯಂತ ಹೆಚ್ಚು ಸುಶಿಕ್ಷಿತ ಮುಖ್ಯಮಂತ್ರಿಗಳಲ್ಲಿ ಕೃಷ್ಣ ಒಬ್ಬರು. ಇವರು ಬಹುಕಾಲ ಕಾಂಗ್ರೆಸ್ ಪಕ್ಷದ ಸದಸ್ಯರಾಗಿದ್ದರು, ಬದಲಾದ ರಾಜಕೀಯ ಸನ್ನಿವೇಶಗಳ ಕಾರಣ ಮಾರ್ಚ್ ೨೦೧೭ ರಂದು ಭಾರತೀಯ ಜನತಾ ಪಕ್ಷದ ಸದಸ್ಯತ್ವವನ್ನು ಪದೆದರು. ಅವರು ೧೯೯೯ ರಿಂದ ೨೦೦೪ ರವರೆಗೆ ಕರ್ನಾಟಕದ ೧೬ ನೇ ಮುಖ್ಯಮಂತ್ರಿಯಾಗಿದ್ದರು ಮತ್ತು ೨೦೦೪ ರಿಂದ ೨೦೦೮ ರವರೆಗೆ ಮಹಾರಾಷ್ಟ್ರದ ೧೯ ನೇ ರಾಜ್ಯಪಾಲರಾಗಿದ್ದರು . ಎಸ್.ಎಂ.ಕೃಷ್ಣ ಅವರು ಡಿಸೆಂಬರ್ ೧೯೮೯ ರಿಂದ ಜನವರಿ ೧೯೯೩ ರವರೆಗೆ ಕರ್ನಾಟಕ ವಿಧಾನಸಭೆಯ ಸ್ಪೀಕರ್ ಆಗಿ ಸೇವೆ ಸಲ್ಲಿಸಿದ್ದರು. ೧೯೭೧ ರಿಂದ ೨೦೧೪ ರವರೆಗೆ ವಿವಿಧ ಸಮಯಗಳಲ್ಲಿ ಲೋಕಸಭೆ ಮತ್ತು ರಾಜ್ಯಸಭೆಯ ಸದಸ್ಯರಾಗಿದ್ದರು. ಇವರಿಗೆ ೨೦೨೩ರ ಸಾಲಿನ ಪದ್ಮವಿಭೂಷಣ ಪ್ರಶಸ್ತಿ ನೀಡಲಾಗಿದೆ.

ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಎಸ್​​ಎಂ ಕೃಷ್ಣರನ್ನು ಮೊದಲು ವೈದೇಹಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಬಳಿಕ ಶ್ವಾಸಕೋಶದ ಸೋಂಕು ಕಾಣಿಸಿಕೊಂಡ ಹಿನ್ನಲೆ ಮಣಿಪಾಲ್ ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗಿತ್ತು. ಡಾ. ಸತ್ಯನಾರಾಯಣ ಮೈಸೂರು, ಡಾ. ಸುನೀಲ್ ಕಾರಂತ್ ನೇತೃತ್ವದ ವೈದ್ಯರ ತಂಡ ಚಿಕಿತ್ಸೆಯನ್ನು ನೀಡಿತ್ತು. ಶ್ವಾಸಕೋಶದ ಸೋಂಕಿನ ಕಾರಣಕ್ಕೆ ಕೃಷ್ಣ ಅವರಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡಿತ್ತು. ಐಸಿಯುಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗಿತ್ತು.