Saturday, 23rd November 2024

Solar Eclipse 2024: ನಾಳೆ ಎಷ್ಟು ಹೊತ್ತಿಗೆ ಸೂರ್ಯಗ್ರಹಣ? ಭಾರತದಲ್ಲಿ ಗೋಚರಿಸುವುದೇ?

Solar Eclipse 2024

ಪಿತೃ ಅಮಾವಾಸ್ಯೆಯೊಂದಿಗೆ (Pitru Amavasya) ಈ ವರ್ಷದ ಎರಡನೇ ಮತ್ತು ಅಂತಿಮ ಸೂರ್ಯಗ್ರಹಣ (Solar Eclipse 2024) ಬುಧವಾರ ನಡೆಯಲಿದೆ. ಇದನ್ನು ವಾರ್ಷಿಕ ಸೂರ್ಯಗ್ರಹಣ ಎಂದು ಕರೆಯಲಾಗುತ್ತದೆ. ಸೆಪ್ಟೆಂಬರ್ 18ರಂದು ಚಂದ್ರಗ್ರಹಣ (lunar eclipse) ನಡೆದಿದ್ದು, ಇದೀಗ 15 ದಿನಗಳ ಬಳಿಕ ಸೂರ್ಯಗ್ರಹಣ ಗೋಚರಿಸಲಿದೆ.

ಸೂರ್ಯ ಮತ್ತು ಭೂಮಿಯ ನಡುವೆ ಚಂದ್ರ ಹಾದುಹೋಗುವುದರಿಂದ ಉಂಗುರ ಸೂರ್ಯಗ್ರಹಣ ಉಂಟಾಗಲಿದೆ. ಆದರೆ ಚಂದ್ರನಿಗೆ ಸೂರ್ಯನನ್ನು ಸಂಪೂರ್ಣವಾಗಿ ಆವರಿಸುವುದು ಸಾಧ್ಯವಿಲ್ಲ. ಹೀಗಾಗಿ ಈ ಸೂರ್ಯಗ್ರಹಣವನ್ನು ರಿಂಗ್ ಆಫ್ ಫೈರ್ ಅಥವಾ ಬೆಂಕಿಯ ಉಂಗುರ ಎಂದು ಕರೆಯಲಾಗುತ್ತದೆ.

ಯಾವಾಗ ಸಂಭವಿಸುತ್ತದೆ?

ಭಾರತೀಯ ಕಾಲಮಾನದ ಪ್ರಕಾರ ಸೂರ್ಯಗ್ರಹಣವು ಅಕ್ಟೋಬರ್ 2ರಂದು ಬುಧವಾರ ರಾತ್ರಿ 9.13ಕ್ಕೆ ಪ್ರಾರಂಭವಾಗಿ ಮುಂಜಾನೆ 3.17ಕ್ಕೆ ಕೊನೆಯಾಗುತ್ತದೆ. ರಾತ್ರಿ ವೇಳೆ ನಡೆಯುವುದರಿಂದ ದೇಶದ ಯಾವುದೇ ಭಾಗದಲ್ಲಿ ಇದು ಗೋಚರಿಸುವುದಿಲ್ಲ. ಗ್ರಹಣ ವೀಕ್ಷಣೆ ಸಾಧ್ಯವಿಲ್ಲದೇ ಇರುವುದರಿಂದ ಗ್ರಹಣಕ್ಕೆ ಮುಂಚಿನ ಅಶುಭ ಸಮಯವನ್ನು ಸಹ ನೋಡಬೇಕಿಲ್ಲ.

ಎಲ್ಲಿ ಗೋಚರಿಸುತ್ತದೆ?

ದಕ್ಷಿಣ ಅಮೆರಿಕಾದ ಕೆಲವು ಭಾಗಗಳಲ್ಲಿ ವಿಶೇಷವಾಗಿ ಚಿಲಿ ಮತ್ತು ಅರ್ಜೆಂಟೀನಾದಲ್ಲಿನ ಜನ ವಾರ್ಷಿಕ ಸೂರ್ಯ ಗ್ರಹಣವನ್ನು ಕಾಣಬಹುದು. ಪೆಸಿಫಿಕ್ ಮಹಾಸಾಗರ, ಆರ್ಕ್ಟಿಕ್, ಪೆರು ಮತ್ತು ಫಿಜಿ ಮೊದಲಾದೆಡೆ ಭಾಗಶಃ ಸೂರ್ಯಗ್ರಹಣವನ್ನು ಕಾಣಬಹುದಾಗಿದೆ.

ಚಿಲಿಯ ಹಂಗಾ ರೋವಾ ಮತ್ತು ಅರ್ಜೆಂಟೀನಾದ ಪೋರ್ಟೊ ದೆಸೆಡೊ, ಅಮೆರಿಕದ ಹವಾಯಿಯ ಹೊನೊಲುಲು, ಫಿಜಿಯ ಸುವಾ, ಚಿಲಿಯ ಸ್ಯಾಂಟಿಯಾಗೊ, ಬ್ರೆಜಿಲ್‌ನ ಸಾವೊ ಪಾಲೊ, ಉರುಗ್ವೆಯ ಮಾಂಟೆವಿಡಿಯೊ ಮತ್ತು ಅರ್ಜೆಂಟೈನಾದ ಬ್ಯೂನಸ್ ಐರಿಸ್‌ನಂತಹ ನಗರಗಳಲ್ಲಿ ಭಾಗಶಃ ಸೂರ್ಯಗ್ರಹಣವನ್ನು ಕಣ್ತುಂಬಿಕೊಳ್ಳಬಹುದು.

Solar Eclipse 2024

ವಾರ್ಷಿಕ ಸೂರ್ಯಗ್ರಹಣ ಎಂದರೇನು?

ಈ ಸನ್ನಿವೇಶದಲ್ಲಿ ಚಂದ್ರನಿಗೆ ಸೂರ್ಯನನ್ನು ಸಂಪೂರ್ಣವಾಗಿ ಆವರಿಸಲು ಸಾಧ್ಯವಿಲ್ಲ. ಯಾಕೆಂದರೆ ಚಂದ್ರನು ಭೂಮಿಯಿಂದ ತುಂಬಾ ದೂರದಲ್ಲಿರುವಾಗ ಈ ವಿದ್ಯಮಾನ ಸಂಭವಿಸುತ್ತದೆ. ಚಂದ್ರ ಸೂರ್ಯನ ಮಧ್ಯ ಭಾಗವನ್ನು ಮಾತ್ರ ಆವರಿಸುತ್ತದೆ. ಇದರಿಂದ ಅಂಚುಗಳ ಸುತ್ತಲೂ ಹೊಳೆಯುವ ಉಂಗುರ ಉಂಟು ಮಾಡುತ್ತದೆ. ಇದು “ಬೆಂಕಿಯ ಉಂಗುರ”ದಂತೆ ಗೋಚರಿಸುತ್ತದೆ.

ಬುಧವಾರ ನಡೆಯುವ ಗ್ರಹಣದ ಮಧ್ಯ ಭಾಗದ ಹಂತವು ಸುಮಾರು 7 ನಿಮಿಷಗಳು ಮತ್ತು 25 ಸೆಕೆಂಡುಗಳವರೆಗೆ ಇರುತ್ತದೆ. ಗ್ರಹಣದ ಪ್ರಮಾಣವು ಸುಮಾರು ಶೇ. 93ರಷ್ಟಿರುತ್ತದೆ. ಸೂರ್ಯನ ಹೆಚ್ಚಿನ ಭಾಗವು ಅಸ್ಪಷ್ಟವಾಗಿರುತ್ತದೆ.
ಈ ಗ್ರಹಣ ಭಾರತದಲ್ಲಿ ಎಲ್ಲಿಯೂ ಗೋಚರಿಸುವುದಿಲ್ಲ.

Solar Eclipse 2024: ಅ. 2ರಂದು ಸೂರ್ಯಗ್ರಹಣ; ಈ 5 ರಾಶಿಗಳ ಮೇಲಿದೆ ಗಂಭೀರ ಪರಿಣಾಮ!

ಭಾರತ, ಪಾಕಿಸ್ತಾನ, ಶ್ರೀಲಂಕಾ, ನೇಪಾಳ, ಅಫ್ಘಾನಿಸ್ತಾನ ಮತ್ತು ಯುಎಇ ಸೇರಿದಂತೆ ಏಷ್ಯಾದ ದೇಶಗಳಲ್ಲಿ ಗ್ರಹಣ ಗೋಚರಿಸುವುದಿಲ್ಲ. ಯುರೋಪ್, ಆಫ್ರಿಕಾ, ಉತ್ತರ ಅಮೆರಿಕಾದ ಉತ್ತರ ಭಾಗಗಳು, ಆಸ್ಟ್ರೇಲಿಯಾ ಮತ್ತು ಮಾರಿಷಸ್‌ನಿಂದಲೂ ಈ ಗ್ರಹಣವನ್ನು ವೀಕ್ಷಿಸಲಾಗುವುದಿಲ್ಲ.