Saturday, 2nd November 2024

ಬೆಳೆಗಳ ಸಂರಕ್ಷಣೆಗೆ ಸೌರಯಂತ್ರ

ಕೂಡ್ಲಿಗಿ ರೈತ ನಾಗರಾಜ್ ಗೌಡ್ರರಿಂದ ಹೊಸ ಆವಿಷ್ಕಾರ

ಸ್ವಯಂ ಚಾಲಿತ ಸೌರ ಯಂತ್ರಕ್ಕೆ ಉತ್ತಮ ಸ್ಪಂದನೆ

ಅನಂತ ಪದ್ಮನಾಭ ರಾವ್

ಹೊಸಪೇಟೆ: ಪ್ರಸ್ತುತ ರೈತರು ಬೆಳೆದ ಬೆಳೆಗಳಿಗೆ ಯೋಗ್ಯ ಬೆಲೆ ಇಲ್ಲದೆ ಸಂಕಟ ಎದುರಿಸುವುದು ಒಂದೆಡೆಯಾದರೆ, ಮತ್ತೊಂದು ಕಡೆ ಬೆಳೆದ ಬೆಳೆಗಳನ್ನು ಪ್ರಾಣಿ, ಪಕ್ಷಗಳಿಂದ ಸಂರಕ್ಷಿಸುವುದು ಮತ್ತೊಂದು ಸವಾಲೇ ಸರಿ. ರೈತರ ಬೆಳೆಗಳಿಗೆ ಪ್ರಾಣಿಗಳ ಕಾಟ ತಪ್ಪಿದ್ದಲ್ಲ.

ಇದನ್ನು ತಪ್ಪಿಸಲು ರೈತ ಹರಸಾಹಸ ಪಡುವಂತಹ ಸ್ಥಿತಿ ಇದೆ. ಇದನ್ನರಿತ ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಜಂಗಮ ಸೋವೇನಹಳ್ಳಿಯ ರೈತ ನಾಗರಾಜ ಗೌಡ ಹೊಸ ತಂತ್ರಜ್ಞಾನವನ್ನು ಕಂಡುಕೊಂಡಿದ್ದಾರೆ.

ಏನಿದು ಯಂತ್ರ?: ಹೌದು, ಇವರು ಬೆಳೆಗಳನ್ನು ಪ್ರಾಣಿಗಳಿಂದ ರಕ್ಷಿಸಿ ಕೊಳ್ಳಲು ಸ್ವಯಂ ಸದ್ದು ಮಾಡುವ ಸೌರಯಂತ್ರ ಕಂಡು ಹಿಡಿದಿದ್ದಾರೆ. ಈ ಯಂತ್ರವು ಪ್ರತಿ 10 ನಿಮಿಷಕ್ಕೊಮ್ಮೆ 1 ನಿಮಿಷಗಳವರೆಗೆ ಪ್ರಾಣಿಗಳ ಸದ್ದು ಮಾಡಲಿದೆ. ಇದರ ಜತೆಯಲ್ಲಿ ಎಲ್‌ಇಡಿ ಲೈಟ್ ಅಳವಡಿಸಲಾಗಿದೆ. ಈ ಲೈಟ್ ತಾನಾಗಿಯೇ ಹೊತ್ತಿಕೊಳ್ಳುತ್ತದೆ. ಇದರಿಂದ ಪ್ರಾಣಿ ಹಾಗೂ ಪಕ್ಷಿಗಳು ಹೆದರಿ ಹೊಲಗಳತ್ತ ಸುಳಿಯುವುದಿಲ್ಲ. ಹಗಲು ಹಾಗೂ ರಾತ್ರಿ ಸಮಯದಲ್ಲಿಯೂ ಈ ಯಂತ್ರವನ್ನು ಬಳಕೆ ಮಾಡಬಹುದಾಗಿದೆ. ಒಂದು ಯಂತ್ರವು ಅಂದಾಜು 8 ರಿಂದ 10 ಎಕರೆ ವಿಸ್ತೀರ್ಣ ವ್ಯಾಪ್ತಿಯವರೆಗೆ ಕಾರ್ಯ ನಿರ್ವಹಿಸಲಿದೆ.

ಇತರರಿಗೂ ವಿತರಣೆ: ಬೆಳೆಗಳನ್ನು ಸಂರಕ್ಷಿಸಿಕೊಳ್ಳಲು ರಾತ್ರಿ ಸಮಯದಲ್ಲಿ ರೈತರು ನಿದ್ದೆಗೆಟ್ಟು ಬೆಳೆಗೆ ಕಾವಲು ಇರಬೇಕಿತ್ತು. ಆದರೆ ಇದೀಗ ಈ ಯಂತ್ರ ಸಹಾಯಕವಾಗಲಿದೆ. ಹೊಲದಲ್ಲಿ ಈ ಯಂತ್ರ ಅಳವಡಿಸಿದ ಬಳಿಕ ಪ್ರಾಣಿಗಳ ಹಾವಳಿ ಕಡಿಮೆ ಯಾಗಿದೆ. ಈ ಹಿನ್ನೆಲೆಯಲ್ಲಿ ಈ ಸೌರ ಯಂತ್ರಕ್ಕೆ ಉತ್ತಮ ಬೇಡಿಕೆಯೂ ಬಂದಿದೆ. ರಾಜ್ಯದ ರೈತರು ಮಾತ್ರವಲ್ಲ, ಹೊರರಾಜ್ಯದ ರೈತರು ಸಹ ಈ ಯಂತ್ರದ ಮೊರೆ ಹೋಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಾಣಿಗಳ ಕಾಟದಿಂದ ಬೆಳೆಗಳನ್ನು ರಕ್ಷಿಸಲು ಬಯಸಿದ 100ಕ್ಕೂ ಹೆಚ್ಚು ರೈತರಿಗೆ ಯಂತ್ರಗಳನ್ನು ತಯಾರಿಸಿ ನೀಡಿದ್ದಾರೆ. ಒಂದು ಯಂತ್ರಕ್ಕೆ 8ರಿಂದ 9 ಸಾವಿರ ರೂಗಳವರೆಗೆ ತಗುಲ ಲಿದ್ದು ರೈತ ನಾಗರಾಜ್ ಅವರನ್ನು ನೇರವಾಗಿ ಸಂಪರ್ಕಿಸಿ ಯಂತ್ರ ಪಡೆಯಬಹುದು.

***

ನಮ್ಮ ಭಾಗದಲ್ಲಿನ ಹೊಲಗಳಲ್ಲಿ ಮೆಕ್ಕೆಜೋಳ, ಶೇಂಗಾ ಹೆಚ್ಚಾಗಿ ಬೆಳೆಯಲಾಗುತ್ತದೆ. ಕರಡಿ ಸೇರಿದಂತೆ ಇತರ ಪ್ರಾಣಿ, ಪಕ್ಷಿಗಳ ಕಾಟ ಇದದ್ದೇ. ಈ ಹಿನ್ನೆಲೆಯಲ್ಲಿ ಹಲವಾರು ಪ್ರಯೋಗಗಳನ್ನು ಮಾಡಲು ಯತ್ನಿಸಿದಾಗ ತಲೆಯಲ್ಲಿ ಯೋಚನೆ ಬಂದಿದ್ದು
ಸೌರಯಂತ್ರದ್ದು. ಇದರಿಂದ ಸಾಕಷ್ಟು ಅನುಕೂಲವಾಗಿದೆ. ಇದನ್ನು ಹೊರರಾಜ್ಯದ ಕೆಲವು ಕೃಷಿ ವಿಜ್ಞಾನ ಕೇಂದ್ರ ಹಾಗೂ
ಕಾಲೆಜುಗಳಲ್ಲಿ ಪ್ರದರ್ಶನ ಜತೆಗೆ ಮಾಹಿತಿಯನ್ನು ನೀಡಲಾಗಿದೆ. ಅಲ್ಲಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದನ್ನು ನೋಡಿದ ಹಲವು ಆಸಕ್ತ ರೈತರು ಸಿದ್ಧಪಡಿಸಿಕೊಂಡು ತೆಗೆದುಕೊಂಡಿದ್ದಾರೆ.

-ನಾಗರಾಜ್ ಗೌಡ ರೈತ